ಐಸಿಸಿ ಟಿ20 ವಿಶ್ವಕಪ್ ಗೆಲುವಿನ ಬಳಿಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಮಾದರಿಗೆ ಗುಡ್‌ ಬೈ ಹೇಳಿದ್ದರು. ಇದೀಗ ಏಕದಿನ ಕ್ರಿಕೆಟ್ ಹಾಗೂ ಟೆಸ್ಟ್‌ ಕ್ರಿಕೆಟ್ ನಾಯಕತ್ವದ ಬಗ್ಗೆ ಹಲವು ಅನುಮಾನಗಳು ಎದ್ದಿದ್ದವು. ಇದಕ್ಕೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸ್ಪಷ್ಟನೆ ನೀಡಿದ್ದಾರೆ.

ನವದೆಹಲಿ: 2024ರ ಟಿ20 ವಿಶ್ವಕಪ್‌ ಗೆದ್ದಿರುವ ಭಾರತ ತಂಡ ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್‌ ಟ್ರೋಫಿ ಹಾಗೂ ಟೆಸ್ಟ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲೂ ಟ್ರೋಫಿ ಗೆಲ್ಲಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ಟೆಸ್ಟ್‌, ಏಕದಿನಕ್ಕೆ ರೋಹಿತ್‌ ಶರ್ಮಾ ನಾಯಕತ್ವದ ವಿಚಾರದಲ್ಲೂ ಸ್ಪಷ್ಟನೆ ಸಿಕ್ಕಂತಾಗಿದೆ.

ಈ ಬಗ್ಗೆ ವಿಡಿಯೋ ಸಂದೇಶದಲ್ಲಿ ಮಾತನಾಡಿರುವ ಶಾ, ‘ರೋಹಿತ್‌ ಶರ್ಮಾ ನಾಯಕತ್ವದಲ್ಲಿ ನಮಗೆ ತುಂಬಾ ವಿಶ್ವಾಸವಿದೆ. ಟೆಸ್ಟ್‌ ಹಾಗೂ ಚಾಂಪಿಯನ್ಸ್‌ ಟ್ರೋಫಿಯಲ್ಲಿ ನಾವು ಚಾಂಪಿಯನ್‌ ಆಗುತ್ತೇವೆ’ ಎಂದಿದ್ದಾರೆ.

2ನೇ ಟಿ20: ಅಭಿಷೇಕ್‌ ಸೂಪರ್‌ ಸೆಂಚುರಿಗೆ ನಡುಗಿದ ಜಿಂಬಾಬ್ವೆ

‘ಕಳೆದ ವರ್ಷ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್‌, ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಸೋತಿದ್ದೇವೆ. ಏಕದಿನ ವಿಶ್ವಕಪ್‌ ಮೂಲಕ ಹೃದಯ ಗೆದ್ದಿದ್ದರೂ ಕಪ್‌ ಗೆಲ್ಲಲಾಗಲಿಲ್ಲ. ಆದರೆ ಟಿ20 ವಿಶ್ವಕಪ್‌ನಲ್ಲಿ ಕಪ್ ಗೆಲ್ಲುವುದಾಗಿ ರಾಜ್‌ಕೋಟ್‌ನಲ್ಲಿ ಹೇಳಿದ್ದೆ. ಅದರಂತೆ ರೋಹಿತ್‌ ಬಾರ್ಬಡೊಸ್‌ನಲ್ಲಿ ಭಾರತದ ತ್ರಿವರ್ಣ ಧ್ವಜ ನೆಟ್ಟು ಬಂದಿದ್ದಾರೆ’ ಎಂದು ಶಾ ತಿಳಿಸಿದ್ದಾರೆ.

Scroll to load tweet…

2025ರ ಚಾಂಪಿಯನ್ಸ್‌ ಟ್ರೋಫಿ ಆತಿಥ್ಯ ಪಾಕಿಸ್ತಾನ ಬಳಿ ಇದೆ. ಆದರೆ ಭಾರತ ತಂಡ ಪಾಕ್‌ಗೆ ತೆರಳುವ ಬಗ್ಗೆ ಬಿಸಿಸಿಐ ಇನ್ನೂ ಯಾವುದೇ ಮಾಹಿತಿ ನೀಡಿಲ್ಲ. ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್‌ ಫೈನಲ್‌ 2025ರ ಜೂನ್‌ನಲ್ಲಿ ಲಾರ್ಡ್ಸ್‌ನಲ್ಲಿ ನಡೆಯಲಿದೆ.

ವಾಂಖೇಡೆಗಿಂತ ದೊಡ್ಡ ಸ್ಟೇಡಿಯಂ ಮುಂಬೈನಲ್ಲಿ ನಿರ್ಮಿಸಲು ಪ್ಲ್ಯಾನ್‌!

ಮುಂಬೈ: ವಾಂಖೇಡೆಗಿಂತಲೂ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಮುಂಬೈ ಕ್ರಿಕೆಟ್‌ ಸಂಸ್ಥೆ(ಎಂಸಿಎ) ಯೋಜನೆ ರೂಪಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ವಾಂಖೇಡೆ ಕ್ರೀಡಾಂಗಣ ಕೇವಲ 33,000 ಆಸನ ಸಾಮರ್ಥ್ಯ ಹೊಂದಿದೆ. ಹೀಗಾಗಿ ಎಂಸಿಎ 1 ಲಕ್ಷ ಆಸನ ಸಾಮರ್ಥ್ಯವಿರುವ ಮತ್ತೊಂದು ಕ್ರೀಡಾಂಗಣವನ್ನು ವಾಂಖೇಡೆ ಕ್ರೀಡಾಂಗಣದಿಂದ 68 ಕಿ.ಮೀ. ದೂರದ ಥಾಣೆ ಜಿಲ್ಲೆಯ ಅಮಾನೆ ಎಂಬಲ್ಲಿ ನಿರ್ಮಿಸಲು ಚಿಂತನೆ ನಡೆಸುತ್ತಿದೆ.

ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆ: ರೋಹಿತ್ ಶರ್ಮಾ ಭೇಟಿ ಮಾಡಿ ಹೊಸ ಹೆಸರಿಟ್ಟ ವರುಣ್ ಧವನ್..!

ಇದಕ್ಕಾಗಿ 50 ಎಕರೆ ಜಾಗವನ್ನೂ ಗುರುತಿಸಲಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಎಂಸಿಎ ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಅನುಮತಿ ಸಿಕ್ಕ ಬಳಿಕ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಎಂಸಿಎ ಮೂಲಗಳಿಂದ ತಿಳಿದುಬಂದಿದೆ.

ಚಂಡೀಗಢದಲ್ಲಿ ಅರ್ಶ್‌ದೀಪ್‌ ಸಿಂಗ್‌ಗೆ ಅದ್ಧೂರಿ ಸ್ವಾಗತ

ಚಂಡೀಗಢ: ಟಿ20 ವಿಶ್ವಕಪ್‌ ವಿಜೇತ ಭಾರತ ತಂಡದಲ್ಲಿದ್ದ ವೇಗಿ ಅರ್ಶ್‌ದೀಪ್‌ ಸಿಂಗ್‌ ತಮ್ಮ ತವರು ಚಂಡೀಗಢಕ್ಕೆ ಆಗಮಿಸಿದ್ದು, ಈ ವೇಳೆ ಅವರಿಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದರು. ವಿಮಾನ ನಿಲ್ದಾಣದಲ್ಲೇ ಐಪಿಎಲ್‌ನ ಪಂಜಾಬ್‌ ಕಿಂಗ್ಸ್‌ ಫ್ರಾಂಚೈಸಿಯಿಂದ ಅರ್ಶ್‌ದೀಪ್‌ಗೆ ಸನ್ಮಾನ ಮಾಡಲಾಯಿತು. ಬಳಿಕ ಅವರನ್ನು ಕುಟುಂಬಸ್ಥರು, ಅಭಿಮಾನಿಗಳು ಜೀಪ್‌ನಲ್ಲಿ ಮೆರವಣಿಗೆ ನಡೆಸಿದರು.