* ಭಾರತ-ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್‌ ಪಂದ್ಯಕ್ಕೆ ಕ್ಷಣಗಣನೆ* 100ನೇ ಟೆಸ್ಟ್ ಪಂದ್ಯವಾಡಲು ಸಜ್ಜಾದ ಭಾರತ-ವೆಸ್ಟ್ ಇಂಡೀಸ್ ತಂಡ* 75 ವರ್ಷಗಳ ಹಿಂದೆ ಮೊದಲ ಮುಖಾಮುಖಿ 

ಪೋರ್ಟ್‌ ಆಫ್‌ ಸ್ಪೇನ್‌(ಜು.19): ಭಾರತ ಹಾಗೂ ವೆಸ್ಟ್‌ಇಂಡೀಸ್‌ ಹಲವು ದಶಕಗಳಿಂದ ಅನೇಕ ರೋಚಕ ಹಣಾಹಣಿಗಳಲ್ಲಿ ಭಾಗಿಯಾಗಿದ್ದು, ಇದೀಗ 100ನೇ ಟೆಸ್ಟ್‌ ಮುಖಾಮುಖಿಯ ಐತಿಹಾಸಿಕ ಕ್ಷಣವನ್ನು ಎದುರು ನೋಡುತ್ತಿವೆ. ಗುರುವಾರದಿಂದ ಇಲ್ಲಿ ಆರಂಭಗೊಳ್ಳಲಿರುವ 2ನೇ ಟೆಸ್ಟ್‌, ಭಾರತ ಹಾಗೂ ವಿಂಡೀಸ್‌ ನಡುವಿನ 100ನೇ ಟೆಸ್ಟ್ ಪಂದ್ಯವಾಗಲಿದೆ. ಭಾರತ ತಂಡವು ಇಂಗ್ಲೆಂಡ್‌ ವಿರುದ್ಧ 131, ಆಸ್ಟ್ರೇಲಿಯಾ ವಿರುದ್ಧ 107 ಟೆಸ್ಟ್‌ಗಳನ್ನಾಡಿದ್ದು, 3ನೇ ರಾಷ್ಟ್ರದ ವಿರುದ್ಧ 100 ಟೆಸ್ಟ್‌ಗಳನ್ನು ಪೂರೈಸಲಿದೆ.

75 ವರ್ಷಗಳ ಹಿಂದೆ ಮೊದಲ ಮುಖಾಮುಖಿ!

ಭಾರತ ಹಾಗೂ ವಿಂಡೀಸ್‌ ಮೊದಲ ಬಾರಿಗೆ ಟೆಸ್ಟ್‌ ಸರಣಿಯಲ್ಲಿ ಎದುರಾಗಿದ್ದು 1948-49ರಲ್ಲಿ. ವಿಂಡೀಸ್‌ ಭಾರತ ಪ್ರವಾಸ ಕೈಗೊಂಡಿತ್ತು. ಉಭಯ ದೇಶಗಳ ನಡುವಿನ ಮೊದಲ ಟೆಸ್ಟ್‌ಗೆ ದೆಹಲಿ ಆತಿಥ್ಯ ವಹಿಸಿತ್ತು. ಭಾರತ ತಂಡವನ್ನು ಲಾಲಾ ಅಮರ್‌ನಾಥ್‌ ಮುನ್ನಡೆಸಿದರೆ, ವಿಂಡೀಸ್‌ಗೆ ಜಾನ್‌ ಗೊಡ್ಡಾರ್ಡ್‌ ನಾಯಕರಾಗಿದ್ದರು. 5 ಪಂದ್ಯಗಳ ಸರಣಿಯನ್ನು ವಿಂಡೀಸ್‌ 1-0 ಅಂತರದಲ್ಲಿ ಗೆದ್ದಿತ್ತು.

ಭಾರತ ತಂಡ ಮೊದಲ ಬಾರಿಗೆ ವಿಂಡೀಸ್‌ ಪ್ರವಾಸ ಕೈಗೊಂಡಿದ್ದು, 1952-53ರಲ್ಲಿ. 5 ಪಂದ್ಯಗಳ ಸರಣಿಯಲ್ಲಿ ಭಾರತ ತಂಡವನ್ನು ವಿಜಯ್‌ ಹಜಾರೆ ಮುನ್ನಡೆಸಿದರೆ, ಆತಿಥೇಯ ವಿಂಡೀಸ್‌ಗೆ ಜೆಫ್ರಿ ಸ್ಟೂಲ್‌ಮೇಯರ್‌ ನಾಯಕರಾಗಿದ್ದರು. ಸರಣಿ 1-0ಯಲ್ಲಿ ವಿಂಡೀಸ್‌ ಪಾಲಾಗಿತ್ತು.

ಇವರೇ ನೋಡಿ ಅತಿಹೆಚ್ಚು ಟ್ಯಾಕ್ಸ್‌ ಕಟ್ಟುವ ಭಾರತದ ಕ್ರಿಕೆಟಿಗ..! ಆದ್ರೆ ಇವರು ಕೊಹ್ಲಿ, ಸಚಿನ್,ಯುವಿ ಅಲ್ಲವೇ ಅಲ್ಲ..!

1971ರಲ್ಲಿ ಮೊದಲ ಜಯ!

ವಿಂಡೀಸ್‌ ವಿರುದ್ಧ ಭಾರತ ಮೊದಲ ಜಯ ಸಾಧಿಸಿದ್ದು 1971ರಲ್ಲಿ. ಇದಕ್ಕೂ ಮುನ್ನ ವಿಂಡೀಸ್‌ ವಿರುದ್ಧ 23 ಪಂದ್ಯಗಳನ್ನಾಡಿದ್ದ ಭಾರತ 12 ಪಂದ್ಯಗಳನ್ನು ಸೋತರೆ, ಇನ್ನುಳಿದ 11 ಪಂದ್ಯಗಳನ್ನು ಡ್ರಾ ಮಾಡಿಕೊಂಡಿತ್ತು. 1971ರ ಪ್ರವಾಸದ 2ನೇ ಟೆಸ್ಟ್‌ನಲ್ಲಿ ಅಜಿತ್‌ ವಾಡೇಕರ್‌ ನೇತೃತ್ವದ ಭಾರತ 7 ವಿಕೆಟ್‌ ಜಯ ಸಾಧಿಸಿತ್ತು. ವಿಂಡೀಸ್‌ ತಂಡವನ್ನು ಗ್ಯಾರಿ ಸೋಬರ್ಸ್‌ ಮುನ್ನಡೆಸಿದ್ದರು. ಕ್ಲೈವ್‌ ಲಾಯ್ಡ್‌, ರೋಹನ್‌ ಕನಾಯ್ಹ್‌, ರಾಯ್‌ ಫ್ರೆಡ್ರಿಕ್ಸ್‌ರಂತಹ ದಿಗ್ಗಜ ಆಟಗಾರರು ವಿಂಡೀಸ್‌ ತಂಡದಲ್ಲಿದ್ದರು. ಪೋರ್ಟ್‌ ಆಫ್‌ ಸ್ಪೇನ್‌ನಲ್ಲಿ ಭಾರತ ವಿಜಯ ಪತಾಕೆ ಹಾರಿಸಿತ್ತು. ವಿಂಡೀಸ್‌ ವಿರುದ್ಧ ಭಾರತ ತನ್ನ 100ನೇ ಪಂದ್ಯವನ್ನು ಪೋರ್ಟ್‌ ಆಫ್‌ ಸ್ಪೇನ್‌ನಲ್ಲೇ ಆಡಲಿರುವುದು ವಿಶೇಷ.

ಮೈಕ್ ಹೆಸನ್& ಸಂಜಯ್ ಬಂಗಾರ್‌ಗೆ ಗೇಟ್‌ಪಾಸ್? ಯಾರಾಗ್ತಾರೆ RCB ತಂಡದ ಕೋಚ್ & ಮೆಂಟರ್..?

2002ರಿಂದ ವಿಂಡೀಸ್‌ ವಿರುದ್ಧ ಭಾರತ ಸೋತಿಲ್ಲ!

ಭಾರತ ವಿರುದ್ಧ ವಿಂಡೀಸ್‌ ಕೊನೆ ಬಾರಿಗೆ ಟೆಸ್ಟ್‌ ಪಂದ್ಯವನ್ನು ಗೆದ್ದಿದ್ದು 2002ರಲ್ಲಿ. ಭಾರತ ಕೈಗೊಂಡಿದ್ದ ಪ್ರವಾಸದಲ್ಲಿ ನಡೆದಿದ್ದ 5 ಪಂದ್ಯಗಳ ಪೈಕಿ ವಿಂಡೀಸ್‌ 2ರಲ್ಲಿ ಗೆದ್ದರೆ, ಭಾರತ 1 ಪಂದ್ಯ ಜಯಿಸಿತ್ತು. 2-1ರಲ್ಲಿ ವಿಂಡೀಸ್‌ ಸರಣಿ ತನ್ನದಾಗಿಸಿಕೊಂಡಿತ್ತು. ಆ ಬಳಿಕ ಉಭಯ ದೇಶಗಳ ನಡುವೆ 8 ಟೆಸ್ಟ್‌ ಸರಣಿಗಳು ನಡೆದಿದ್ದು, 8ರಲ್ಲೂ ಭಾರತವೇ ಗೆದ್ದಿದೆ. 8 ಸರಣಿಗಳಲ್ಲಿ ಒಟ್ಟು 23 ಪಂದ್ಯಗಳು ನಡೆದಿದ್ದು, ಭಾರತ 14ರಲ್ಲಿ ಗೆಲುವು ಸಾಧಿಸಿ ಇನ್ನುಳಿದ 7 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ.

ಭಾರತ -ವಿಂಡೀಸ್‌ ಟೆಸ್ಟ್‌ ದಾಖಲೆ

ಒಟ್ಟು ಮುಖಾಮುಖಿ: 99

ಭಾರತ: 23

ವಿಂಡೀಸ್‌: 30

ಡ್ರಾ: 46