ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ IND vs WI ಕ್ರಿಕೆಟ್ ಪಂದ್ಯದ ಹಿನ್ನೆಲೆ, ಟ್ರಾಫಿಕ್ ಮತ್ತು ಪಾರ್ಕಿಂಗ್ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ಪಾರ್ಕಿಂಗ್ ಸ್ಥಳಗಳು ಮತ್ತು ಸ್ಟೇಡಿಯಂ ಗೇಟ್‌ಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

IND vs WI ಕ್ರಿಕೆಟ್ ಪಂದ್ಯ: ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ಟ್ರಾಫಿಕ್ ರೂಲ್ಸ್ ಚೇಂಜ್; ಪಾರ್ಕಿಂಗ್ ಎಲ್ಲಿ? ಗೇಟ್ ವಿವರ ಇಲ್ಲಿದೆ.

ಬೆಂಗಳೂರು (ಅ.15): ಬೆಂಗಳೂರಿನಲ್ಲಿ ಕಳೆದೆರಡು ವರ್ಷಗಳ ಹಿಂದೆ ಚಿನ್ನಸ್ವಾಮಿ ಕ್ರಿಡಾಂಗಣದ ಬಳಿ ನಡೆದಿದ್ದ ಆರ್‌ಸಿಬಿ ವಿಜಯೋತ್ಸವದ ವೇಳೆಯ ಕಾಲ್ತುಳಿತದಲ್ಲಿ 11 ಅಭಿಮಾನಿಗಳು ಮೃತಪಟ್ಟಿದ್ದರು. ಇದಾದ ನಂತರ ಮೊದಲ ಬಾರಿಗೆ ಪುರುಷರ ಅಂತಾರಾಷ್ಟ್ರೀಯ ಮೊದಲ 'ಭಾರತ ಮತ್ತು ವೆಸ್ಟ್ ಇಂಡೀಸ್' (IND VS WI) ಅ.17ರ ಶನಿವಾರ ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಕ್ರಿಕೆಟ್ ಪಂದ್ಯ ವೀಕ್ಷಿಸಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಪಂದ್ಯದ ಹಿನ್ನೆಲೆಯಲ್ಲಿ ಕ್ರೀಡಾಂಗಣದ ಸುತ್ತಮುತ್ತ ಭಾರೀ ಜನದಟ್ಟಣೆ ಮತ್ತು ವಾಹನ ದಟ್ಟಣೆ ಉಂಟಾಗುವ ಸಾಧ್ಯತೆ ಇರುವುದರಿಂದ, ಬೆಂಗಳೂರು ಸಂಚಾರ ಪೊಲೀಸರು (Bengaluru Traffic Police) ಟ್ರಾಫಿಕ್ ಮತ್ತು ಪಾರ್ಕಿಂಗ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿದ್ದಾರೆ. ಪಂದ್ಯವನ್ನು ನೋಡಲು ಹೋಗುವ ಮುನ್ನ ವಾಹನ ಸವಾರರು ಹಾಗೂ ಕ್ರಿಕೆಟ್ ಪ್ರೇಮಿಗಳು ಎಲ್ಲಿ ವಾಹನ ಪಾರ್ಕ್ ಮಾಡಬೇಕು, ಯಾವ ಗೇಟ್ ಮೂಲಕ ಪ್ರವೇಶಿಸಬೇಕು ಎಂಬ ಸಂಪೂರ್ಣ ಮಾರ್ಗಸೂಚಿ ಇಲ್ಲಿದೆ.

1. ಈ ರಸ್ತೆಗಳಲ್ಲಿ ವಾಹನಗಳ ನಿಲುಗಡೆ (Parking) ಸಂಪೂರ್ಣ ನಿಷೇಧ:

ಪಂದ್ಯದ ದಿನ ಈ ಕೆಳಗಿನ ರಸ್ತೆಗಳಲ್ಲಿ ವಾಹನ ನಿಲ್ಲಿಸಿದರೆ ದಂಡದ ಜೊತೆಗೆ ವಾಹನವನ್ನು ಟೋ (Tow) ಮಾಡಲಾಗುತ್ತದೆ.

ಕ್ವೀನ್ಸ್ ರಸ್ತೆ: ಬಾಲೇಕ್ಕುಂದ್ರಿ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ ಹಾಗೂ ಕ್ವೀನ್ಸ್ ವೃತ್ತದಿಂದ ಸಿ.ಟಿ.ಓ ಜಂಕ್ಷನ್‌ವರೆಗೆ ಎರಡೂ ಬದಿಯಲ್ಲಿ.

ಎಂ.ಜಿ ರಸ್ತೆ: ಕ್ವೀನ್ಸ್ ವೃತ್ತದಿಂದ ಅನಿಲ್‌ಕುಂಬ್ಳೆ ವೃತ್ತದವರೆಗೆ (ಎರಡೂ ಕಡೆ).

ಕಬ್ಬನ್ ರಸ್ತೆ: ಸಿ.ಟಿ.ಓ. ವೃತ್ತದಿಂದ ಮಣಿಪಾಲ್ ವೃತ್ತದವರೆಗೆ.

ಇತರ ಪ್ರಮುಖ ರಸ್ತೆಗಳು: ಲಿಂಕ್ ರಸ್ತೆ (ಎಂ.ಜಿ ರಸ್ತೆಯಿಂದ ಕ್ವೀನ್ಸ್ ರಸ್ತೆ ವರೆಗೆ), ರಾಜಭವನ ರಸ್ತೆ, ಟಿ.ಚೌಡಯ್ಯ ರಸ್ತೆ, ರೇಸ್ ಕೋರ್ಸ್ ರಸ್ತೆ ಮತ್ತು ಸೆಂಟ್ರಲ್ ಸ್ಕ್ವೇರ್ ರಸ್ತೆ.

ಕಾಮರಾಜ ರಸ್ತೆ: ಕಾವೇರಿ ಎಂಪೋರಿಯಂ ಜಂಕ್ಷನ್‌ನಿಂದ ಡಿಕನ್ಸನ್ ಜಂಕ್ಷನ್ ವರೆಗೆ.

ಸೆಂಟ್ ಮಾರ್ಕ್ಸ್ ರಸ್ತೆ: ಆಶೀರ್ವಾದಂ ಜಂಕ್ಷನ್‌ನಿಂದ ಅನಿಲ್ ಕುಂಬ್ಳೆ ವೃತ್ತದವರೆಗೆ ಹಾಗೂ ಎಸ್.ಬಿ.ಐ ಜಂಕ್ಷನ್‌ನಿಂದ ಕ್ಯಾಶ್ ಫಾರ್ಮಸಿ ಜಂಕ್ಷನ್‌ವರೆಗೆ.

ಕಸ್ತೂರಬಾ ರಸ್ತೆ & ಮ್ಯೂಸಿಯಂ ಕ್ರಾಸ್ ರಸ್ತೆ: ಹಡ್ಡನ್‌ ವೃತ್ತ ದಿಂದ ಕ್ವೀನ್ಸ್‌ವೃತ್ತದವರೆಗೆ ನಿಷೇಧ.

ಕಬ್ಬನ್‌ಪಾರ್ಕ್ ಒಳಗೆ: ಕಿಂಗ್ ರಸ್ತೆ, ಪ್ರೆಸ್ ಕ್ಲಬ್ ಮುಂಭಾಗ, ಬಾಲಭವನ ಮುಂಭಾಗ ಹಾಗೂ ಫೌಂಟೇನ್ ರಸ್ತೆಗಳಲ್ಲಿ ಪಾರ್ಕಿಂಗ್ ಕಡ್ಡಾಯವಾಗಿ ನಿಷೇಧಿಸಲಾಗಿದೆ.

ಲಾವೆಲ್ಲಿ ರಸ್ತೆ & ವಿಠಲ್ ಮಲ್ಯ ರಸ್ತೆ: ಕ್ವೀನ್ಸ್ ವೃತ್ತದಿಂದ ವಿಠಲ್ ಮಲ್ಯ ರಸ್ತೆ ಜಂಕ್ಷನ್‌ವರೆಗೆ. ಸಿದ್ದಲಿಂಗಯ್ಯ ವೃತ್ತದಿಂದ ಸೆಂಟ್ ಮಾರ್ಕ್ಸ್ ರಸ್ತೆ ಹಾಗೂ ಆರ್‌.ಆರ್.ಎಂ.ಆರ್ ವೃತ್ತದವರೆಗೆ.

2. ವಾಹನ ನಿಲುಗಡೆಗೆ (Parking) ಅವಕಾಶವಿರುವ ಸ್ಥಳಗಳು:

  • ಪಂದ್ಯ ವೀಕ್ಷಿಸಲು ಬರುವ ಸಾರ್ವಜನಿಕರು ಈ ಕೆಳಗಿನ ಸ್ಥಳಗಳಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಬಹುದು (ಸಮಯ: ಬೆಳಗ್ಗೆ 11:00 ರಿಂದ ರಾತ್ರಿ 09:00 ಗಂಟೆಯವರೆಗೆ).
  • ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನ.
  • ಯು.ಬಿ.ಸಿಟಿ (UB City) ಪಾರ್ಕಿಂಗ್ ಸ್ಥಳ.
  • ಶಿವಾಜಿನಗರ ಬಸ್ ನಿಲ್ದಾಣದ 1ನೇ ಮಹಡಿ.
  • ಫ್ರೀಡಂ ಪಾರ್ಕ್ ಎಂ.ಎಲ್.ಸಿ.ಪಿ (MLCP) ಪಾರ್ಕಿಂಗ್ ಸ್ಥಳ.
  • ಸೆಂಟ್ ಜೋಸೆಫ್ (ಯುರೋಪಿಯನ್) ಬಾಲಕರ ಶಾಲೆ ಮೈದಾನ (ಮ್ಯೂಸಿಯಂ ರಸ್ತೆ).
  • (ಬಂದೋಬಸ್ತ್‌ಗಾಗಿ ನಿಯೋಜಿಸಿರುವ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳ ವಾಹನಗಳಿಗೆ ಕಬ್ಬನ್‌ಪಾರ್ಕ್ ಒಳಗಿನ ಟೆನ್ನಿಸ್ ಕ್ಲಬ್ ರಸ್ತೆಯಲ್ಲಿ ವ್ಯವಸ್ಥೆ ಮಾಡಲಾಗಿದೆ.)

3. ಕ್ರೀಡಾಂಗಣದ ಪ್ರವೇಶ (Entry) ಮತ್ತು ನಿರ್ಗಮನ (Exit) ಗೇಟ್‌ಗಳ ವಿವರ:

ಟಿಕೆಟ್ ಹೊಂದಿರುವವರು ತಮ್ಮ ಟಿಕೆಟ್‌ನಲ್ಲಿ ನಮೂದಿಸಿರುವ ಗೇಟ್‌ಗಳ ಮೂಲಕವೇ ಪ್ರವೇಶಿಸಬೇಕಾಗುತ್ತದೆ.

ಕಬ್ಬನ್ ರಸ್ತೆ ಕಡೆಯಿಂದ: ಗೇಟ್ ನಂ-1 ರಿಂದ 3 ಮತ್ತು ಗೇಟ್ ನಂ ಇ-18, ಇ-19, ಇ-22 ಹಾಗೂ ಇ-23 ಗೇಟ್‌ಗಳ ಮೂಲಕ ಪ್ರವೇಶಿಸಬಹುದು.

ಲಿಂಕ್ ರಸ್ತೆ (ಅನಿಲ್ ಕುಂಬ್ಳೆ/ಬಿ.ಆರ್.ವಿ ವೃತ್ತ) ಕಡೆಯಿಂದ: ಗೇಟ್ ನಂ ಇ-11 ರಿಂದ ಗೇಟ್ ನಂ ಇ-17 ರವರೆಗೆ ಪ್ರವೇಶಿಸಬಹುದು.

ಕ್ವೀನ್ಸ್ ರಸ್ತೆ ಕಡೆಯಿಂದ: ಗೇಟ್ ನಂ ಇ-07 ಮತ್ತು ಇ-08 ರಲ್ಲಿ ಪ್ರವೇಶಿಸಲು ಅವಕಾಶವಿದೆ. ಗೇಟ್ ನಂ- ಇ-09, ಇ-9ಎ ಗಳಲ್ಲಿ ನಿರ್ಗಮಿಸಲು ಮಾತ್ರ (Exit Only) ಅವಕಾಶ.

ವಿಶೇಷ ಪ್ರವೇಶ: ಕ್ವೀನ್ಸ್ ರಸ್ತೆಯ ಗೇಟ್ ನಂ-210 ರಲ್ಲಿ ಆಟಗಾರರು, ಸಹ ಆಟಗಾರರು, ಬಿಸಿಸಿಐ (BCCI) ಹಾಗೂ ಸ್ಟೇಡಿಯಂ ಅಧಿಕಾರಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

4. ಓಲಾ, ಉಬರ್ ಮತ್ತು ಆಟೋಗಳಿಗೆ ಪಿಕ್-ಅಪ್ ಮತ್ತು ಡ್ರಾಪ್ ಪಾಯಿಂಟ್:

  • ನೀವು ಕ್ಯಾಬ್ ಅಥವಾ ಆಟೋದಲ್ಲಿ ಬರುತ್ತಿದ್ದರೆ, ಕ್ರೀಡಾಂಗಣದ ಬಳಿ ಈ ಸ್ಥಳಗಳಲ್ಲಿ ಇಳಿಯಬಹುದು ಮತ್ತು ಹತ್ತಬಹುದು.
  • ಪಿಕ್ ಅಪ್ ಪಾಯಿಂಟ್ (Pick Up): ಬಿ.ಆರ್.ವಿ ಗ್ರೌಂಡ್ (BRV Ground)
  • ಡ್ರಾಪ್ ಪಾಯಿಂಟ್ (Drop): ಗೇಟ್ ನಂಬರ್ 6 (Gate No 6)

ಕ್ರಿಕೆಟ್ ಅಭಿಮಾನಿಗಳು ಸಂಚಾರ ಪೊಲೀಸರ ನಿಯಮಗಳನ್ನು ಪಾಲಿಸುವ ಮೂಲಕ ಸುಗಮ ಸಂಚಾರಕ್ಕೆ ಸಹಕರಿಸುವಂತೆ ಹಾಗೂ ಪಂದ್ಯವನ್ನು ಆನಂದಿಸುವಂತೆ ಮನವಿ ಮಾಡಲಾಗಿದೆ. ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಸಾಧ್ಯವಾದಷ್ಟು 'ನಮ್ಮ ಮೆಟ್ರೋ' (Namma Metro) ಅಥವಾ ಸಾರ್ವಜನಿಕ ಸಾರಿಗೆಯನ್ನು ಬಳಸುವುದು ಉತ್ತಮ.