ಭಾರತ ಮತ್ತು ವೆಸ್ಟ್‌ಇಂಡೀಸ್ ನಡುವಿನ 5ನೇ ಹಾಗೂ ನಿರ್ಣಾಯಕ ಟಿ20 ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜಾಗಿದೆ. ಸರಣಿ 2-2ರಲ್ಲಿ ಸಮಬಲಗೊಂಡಿದ್ದು, ಮಳೆಯ ಭೀತಿಯ ನಡುವೆಯೂ ಈ ಪಂದ್ಯದಲ್ಲಿ ಗೆದ್ದವರು ಟ್ರೋಫಿ ಮುಡಿಗೇರಿಸಿಕೊಳ್ಳಲಿದ್ದಾರೆ. ಗಾಯಾಳು ಅರ್ಶ್‌ದೀಪ್ ಬದಲಿಗೆ ಭುವನೇಶ್ವರ್ ಕುಮಾರ್ ತಂಡ ಸೇರಿದ್ದು, 24 ವರ್ಷಗಳ ಬಳಿಕ ಸರಣಿ ಗೆಲ್ಲುವ ತವಕದಲ್ಲಿ ವಿಂಡೀಸ್ ಇದೆ.

ಬೆಂಗಳೂರು: ಭಾರತ ಹಾಗೂ ವೆಸ್ಟ್‌ಇಂಡೀಸ್‌ ನಡುವಿನ ಟಿ20 ಸರಣಿಯ ಕ್ಲೈಮ್ಯಾಕ್ಸ್‌ಗೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜಾಗಿದೆ. ಆರಂಭಿಕ 4 ಪಂದ್ಯಗಳ ಬಳಿಕ ಉಭಯ ತಂಡಗಳು 2-2 ಸಮಬಲ ಸಾಧಿಸಿದ್ದು, ಶನಿವಾರದ 5ನೇ ಹಾಗೂ ಕೊನೆ ಪಂದ್ಯದಲ್ಲಿ ಗೆಲ್ಲುವ ತಂಡ ಟ್ರೋಫಿ ತನ್ನದಾಗಿಸಿಕೊಳ್ಳಲಿದೆ. ಆದರೆ ಈ ಪಂದ್ಯಕ್ಕೆ ಮಳೆ ಅವಕಾಶ ನೀಡಲಿದೆಯೇ ಎಂಬ ಕುತೂಹಲ ಈಗ ಎಲ್ಲರಲ್ಲಿದೆ.

ನಗರದಲ್ಲಿ 2 ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಶುಕ್ರವಾರ ನಿಗದಿಯಾಗಿದ್ದ ಅಭ್ಯಾಸ ಶಿಬಿರ ಕೂಡಾ ಮಳೆಯಿಂದಾಗಿ ರದ್ದುಗೊಂಡಿದೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ನಗರದಲ್ಲಿ ಶನಿವಾರವೂ ಮಳೆ ಸುರಿಯಲಿದೆ. ಹೀಗಾದರೆ ಪಂದ್ಯಕ್ಕೆ ಅಡ್ಡಿಪಡಿಸುವ ಸಾಧ್ಯತೆ ಹೆಚ್ಚು.

ರನ್‌ ಮಳೆ?:

ಮಳೆ ಅಡ್ಡಿಪಡಿಸದೆ ಪಂದ್ಯ ಸುಗಮವಾಗಿ ನಡೆದರೆ ರನ್‌ ಹೊಳೆಯೇ ಹರಿಯುವ ನಿರೀಕ್ಷೆಯಿದೆ. ಈ ಬಾರಿ ಭಾರತ-ವಿಂಡೀಸ್‌ ಏಕದಿನ, ಟಿ20 ಸರಣಿಯ ಬಹುತೇಕ ಎಲ್ಲಾ ಪಂದ್ಯಗಳಲ್ಲೂ ಬೃಹತ್‌ ಮೊತ್ತಗಳು ದಾಖಲಾಗಿವೆ. ಹಲವು ದಾಖಲೆಗಳು ನಿರ್ಮಾಣವಾಗಿದೆ. ಅಲ್ಲದೆ, ಚಿನ್ನಸ್ವಾಮಿ ಕ್ರೀಡಾಂಗಣ ಬ್ಯಾಟರ್‌ಗಳ ಸ್ವರ್ಗ ಎಂದೇ ಕರೆಸಿಕೊಳ್ಳುತ್ತಿದ್ದು, ದೊಡ್ಡ ಮೊತ್ತ ದಾಖಲಾಗುವ ನಿರೀಕ್ಷೆಯಿದೆ.

ಭುವನೇಶ್ವರ್‌ ತಂಡಕ್ಕೆ:

4ನೇ ಟಿ20 ಪಂದ್ಯದಲ್ಲಿ ವೇಗಿ ಅರ್ಶ್‌ದೀಪ್‌ ಸಿಂಗ್ ಎಡಗೈ ಗಾಯಕ್ಕೆ ತುತ್ತಾಗಿದ್ದರು. ಅದರಿಂದ ಅವರು ಇನ್ನೂ ಚೇತರಿಸಿಕೊಂಡಿಲ್ಲ. ಹೀಗಾಗಿ 36 ವರ್ಷದ ಅನುಭವಿ ವೇಗಿ, ಆರ್‌ಸಿಬಿ ತಾರೆ ಭುವನೇಶ್ವರ್‌ ಕುಮಾರ್‌ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಅರ್ಶ್‌ದೀಪ್‌ ಫಿಟ್‌ ಆಗದಿದ್ದರೆ ಭುವನೇಶ್ವರ್‌ಗೆ ಆಡುವ 11ರ ಬಳಗದಲ್ಲಿ ಸ್ಥಾನ ಸಿಗಬಹುದು. ಇನ್ನು, ಅನುಭವಿ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ ಕೂಡಾ ತಂಡದಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.

ಬ್ಯಾಟರ್ಸ್‌ಗೆ ಚಾಲೆಂಜ್:ಭಾರತದ ಬ್ಯಾಟಿಂಗ್‌ ವಿಭಾಗದ ಸರಣಿಯುದ್ದಕ್ಕೂ ಅಬ್ಬರಿಸಿದೆ. ಆದರೆ ತಂಡದಲ್ಲಿ ಸಮಸ್ಯೆಗಳೇ ಇಲ್ಲವೆಂದಲ್ಲ. ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್‌ ಸ್ಥಿರ ಪ್ರದರ್ಶನ ನೀಡಬೇಕಿದ್ದು, ಅಭಿಷೇಕ್‌ ಜೊತೆಗೂಡಿ ದೊಡ್ಡ ಜೊತೆಯಾಟ ನಡೆಸಬೇಕಿದೆ. ಮಧ್ಯಮ ಕ್ರಮಾಂಕದಲ್ಲಿ ಇಶಾನ್‌ ಕಿಶನ್‌, ನಾಯಕ ಶ್ರೇಯಸ್‌ ಅಯ್ಯರ್‌ ಹಾಗೂ ನಮನ್‌ಧೀರ್‌ ಪರಿಸ್ಥಿತಿಗೆ ತಕ್ಕಂತೆ ಆಟವಾಡುತ್ತಿಲ್ಲ. ತಿಲಕ್‌ ವರ್ಮಾ, ನಿತೀಶ್‌ ಕುಮಾರ್‌ ಒತ್ತಡ ನಿಭಾಯಿಸಿ ತಂಡವನ್ನು ಗೆಲುವಿನ ದಡ ಸೇರಿಸಬೇಕಾದ ಅಗತ್ಯವಿದೆ.

ವಿಂಡೀಸ್‌ಗೆ ಜಯದ ಗುರಿ:

ಭಾರತಕ್ಕೆ ಹೋಲಿಸಿದರೆ ವಿಂಡೀಸ್‌ ತಂಡ ಈ ಬಾರಿ ಪ್ರವಾಸದಲ್ಲಿ ಹೆಚ್ಚು ಆಕ್ರಮಣಕಾರಿ ಆಟವಾಡುತ್ತಿದೆ. ನಾಯಕ ಶಾಯ್‌ ಹೋಪ್ ಅದ್ಭುತ ಆಟ ಪ್ರದರ್ಶಿಸುತ್ತಿದ್ದು, ತಂಡ ಅವರ ಮೇಲೆ ಮತ್ತೊಂದು ದೊಡ್ಡ ಇನ್ನಿಂಗ್ಸ್‌ ನಿರೀಕ್ಷಿಸುತ್ತಿದೆ. ಹೆಟ್ಮೇಯರ್‌, ರುಥರ್‌ಫೋರ್ಡ್‌, ಪೊವೆಲ್‌, ಶೆಫರ್ಡ್‌ ಕೂಡಾ ಅಬ್ಬರಿಸುತ್ತಿದ್ದಾರೆ. ಬೌಲಿಂಗ್‌ ವಿಭಾಗದಲ್ಲಿ ರಾಸ್ಟನ್‌ ಚೇಸ್‌, ಕೀಮೊ ಪೌಲ್‌ ಭಾರತೀಯ ಬ್ಯಾಟರ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ.

ಪಂದ್ಯ ಆರಂಭ: ಸಂಜೆ 7 ಗಂಟೆಗೆ

ಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಹಾಟ್‌ಸ್ಟಾರ್‌

ಎರಡು ವರ್ಷದ ಬಳಿಕ ಎಂ.ಚಿನ್ನಸ್ವಾಮಿಯಲ್ಲಿ ಅಂ.ರಾ. ಕ್ರಿಕೆಟ್‌ ಪಂದ್ಯ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ 2 ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಪಂದ್ಯದ ಆತಿಥ್ಯಕ್ಕೆ ಸಜ್ಜಾಗಿದೆ. ಕೊನೆ ಬಾರಿ 2024ರ ಅಕ್ಟೋಬರ್‌ನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್‌ ನಡುವೆ ಟೆಸ್ಟ್‌ ಪಂದ್ಯ ನಡೆದಿತ್ತು. ಭಾರತ ಹೀನಾಯವಾಗಿ ಸೋತಿತ್ತು. ಬಳಿಕ 2025ರ ಜೂನ್‌ನಲ್ಲಿ ಕಾಲ್ತುಳಿತ ಸಂಭವಿಸಿದ ನಂತರ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಅಂತಾರಾಷ್ಟ್ರೀಯ ಪಂದ್ಯಗಳ ಆತಿಥ್ಯ ಹಕ್ಕು ಕೈತಪ್ಪಿತ್ತು.

ವಿಂಡೀಸ್‌ಗೆ 24 ವರ್ಷ ಬಳಿಕ ಭಾರತದಲ್ಲಿ ಸರಣಿ ಗೆಲುವಿನ ತವಕ

ವೆಸ್ಟ್‌ಇಂಡೀಸ್‌ ತಂಡ ಇತ್ತೀಚೆಗೆ ಭಾರತ ವಿರುದ್ಧ ಏಕದಿನ ಸರಣಿ ಸೋತಿತ್ತು. ಆದರೆ ಈಗ ಟಿ20 ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿದೆ. ತಂಡ 2002ರ ಬಳಿಕ ಭಾರತದಲ್ಲಿ ಭಾರತದ ವಿರುದ್ಧ ಯಾವುದೇ ಮಾದರಿಯಲ್ಲಿ ಸರಣಿ ಗೆದ್ದಿಲ್ಲ. 2002ರಲ್ಲಿ ನಡೆದಿದ್ದ 7 ಪಂದ್ಯಗಳ ಏಕದಿನ ಸರಣಿಯಲ್ಲಿ 4-3 ಅಂತರದಲ್ಲಿ ವಿಂಡೀಸ್‌ ಗೆದ್ದಿತ್ತು. ಆ ಬಳಿಕ ನಡೆದ ಎಲ್ಲಾ ಸರಣಿಗಳಲ್ಲೂ ಭಾರತವೇ ಗೆದ್ದಿದೆ.

98 ಸಿಕ್ಸರ್‌: ಭಾರತ-ವಿಂಡೀಸ್‌ ನಡುವಿನ ಈ ಬಾರಿ ಟಿ20 ಸರಣಿಯಲ್ಲಿ 2 ತಂಡಗಳಿಂದ ಒಟ್ಟು 98 ಸಿಕ್ಸರ್‌ ದಾಖಲಾಗಿವೆ.