ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 5ನೇ ಹಾಗೂ ಅಂತಿಮ ಟಿ20 ಪಂದ್ಯ ಇಂದು ಅಹಮದಾಬಾದ್‌ನಲ್ಲಿ ನಡೆಯಲಿದೆ. ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿರುವ ಭಾರತ, ಗಾಯಾಳು ಗಿಲ್ ಬದಲಿಗೆ ಸಂಜು ಸ್ಯಾಮ್ಸನ್ ಮತ್ತು ಬುಮ್ರಾ ವಾಪಸಾತಿಯೊಂದಿಗೆ ಪ್ರಮುಖ ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ.

ಅಹಮದಾಬಾದ್‌: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಐದನೇ ಹಾಗೂ ಕೊನೆಯ ಟಿ20 ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದು ಸಂಜೆ 7 ಗಂಟೆಯಿಂದ ಆರಂಭವಾಗಲಿರುವ ಈ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯ ವಹಿಸಿದೆ. 5 ಪಂದ್ಯಗಳ ಸರಣಿಯಲ್ಲಿ ನಾಲ್ಕನೇ ಪಂದ್ಯವು ದಟ್ಟ ಮಂಜಿನಿಂದ ರದ್ದಾಗಿತ್ತು. ಸದ್ಯ ಐದನೇ ಟಿ20 ಪಂದ್ಯಕ್ಕೂ ಮುನ್ನ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ 2-1 ಮುನ್ನಡೆ ಸಾಧಿಸಿದೆ. ಇಂದು ಭಾರತ ಗೆದ್ದರೇ ಸತತ ಆರನೇ ಬಾರಿಗೆ ಟಿ20 ಸರಣಿ ಗೆಲುವಿನ ದಾಖಲೆ ಬರೆಯಲಿದೆ. ಒಂದು ವೇಳೆ ದಕ್ಷಿಣ ಆಫ್ರಿಕಾ ಜಯಿಸಿದರೆ 2-2 ರ ಸಮಬಲದೊಂದಿಗೆ ಈ ಟಿ20 ಸರಣಿ ಕೊನೆಗೊಳ್ಳಲಿದೆ.

ಭಾರತ ತಂಡದಲ್ಲಿ ಎರಡು ಮೇಜರ್ ಚೇಂಜ್?

ಇನ್ನು ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಕೊನೆಯ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಎರಡು ಪ್ರಮುಖ ಬದಲಾವಣೆಗಳೊಂದಿಗೆ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ನಾಲ್ಕನೇ ಟಿ20 ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಉಪನಾಯಕ ಶುಭ್‌ಮನ್ ಗಿಲ್ ಕಾಲಿನ ಗಾಯಕ್ಕೆ ತುತ್ತಾಗಿದ್ದರು. ಈ ಕಾರಣಕ್ಕಾಗಿ ನಾಲ್ಕನೇ ಟಿ20 ಪಂದ್ಯಕ್ಕೆ ಅಲಭ್ಯರಾಗಿದ್ದರು. ಆದರೆ ನಾಲ್ಕನೇ ಪಂದ್ಯ ಮಂಜಿನಿಂದ ರದ್ದಾಗಿತ್ತು. ಇನ್ನು ಐದನೇ ಟಿ20 ಪಂದ್ಯಕ್ಕೆ ಶುಭ್‌ಮನ್ ಗಿಲ್ ಭಾರತ ತಂಡದ ಜತೆ ಅಹಮದಾಬಾದ್‌ಗೆ ಬಂದಿಳಿದಿದ್ದಾರೆ. ಆದರೆ ಅಭ್ಯಾಸ ನಡೆಸಿದ್ದು ಕಂಡು ಬರಲಿಲ್ಲ. ಹೀಗಾಗಿ ಗಿಲ್ ಕೊನೆಯ ಟಿ20 ಪಂದ್ಯ ಆಡೋದು ಅನುಮಾನ ಎನಿಸಿದೆ. ಹೀಗಾದಲ್ಲಿ ಗಿಲ್ ಬದಲಿಗೆ ಸಂಜು ಸ್ಯಾಮ್ಸನ್ ಆರಂಭಿಕನಾಗಿ ಟೀಂ ಇಂಡಿಯಾ ಪರ ಕಣಕ್ಕಿಳಿಯುವುದು ಬಹುತೇಕ ಖಚಿತ ಎನಿಸಿಕೊಂಡಿದೆ. ಗಿಲ್ ಕಳೆದ ಮೂರು ಪಂದ್ಯಗಳಲ್ಲೂ ಆರಂಭಿಕರಾಗಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು.

ನ್ನು, ವೈಯಕ್ತಿಕ ಕಾರಣಗಳಿಂದಾಗಿ 3ನೇ ಪಂದ್ಯಕ್ಕೆ ಗೈರಾಗಿದ್ದ ಜಸ್‌ಪ್ರೀತ್‌ ಬುಮ್ರಾ ಈ ಪಂದ್ಯಕ್ಕೆ ಲಭ್ಯರಿದ್ದಾರೆ. ಹೀಗಾದಲ್ಲಿ ಶಿವಂ ದುಬೆ ಅಥವಾ ವರುಣ್ ಚಕ್ರವರ್ತಿ ಈ ಇಬ್ಬರ ಪೈಕಿ ಒಬ್ಬರಿಗೆ ವಿಶ್ರಾಂತಿ ಸಿಗುವ ಸಾಧ್ಯತೆಯಿದೆ. ಯಾಕಂದರೆ ಅರ್ಶದೀಪ್ ಸಿಂಗ್ ಕಳೆದ ಪಂದ್ಯದಲ್ಲಿ 13 ರನ್ ನೀಡಿ ಎರಡು ವಿಕೆಟ್ ಕಬಳಿಸುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

ದಕ್ಷಿಣ ಆಫ್ರಿಕಾ ಎದುರಿನ 5ನೇ ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಹೀಗಿದೆ:

ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಜಿತೇಶ್ ಶರ್ಮಾ, ಹರ್ಷಿತ್ ರಾಣಾ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್.

ಪಂದ್ಯ ಆರಂಭ: ಸಂಜೆ 7 ಗಂಟೆಗೆ

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌, ಜಿಯೋ ಹಾಟ್‌ಸ್ಟಾರ್.