ಟಿ20 ಸರಣಿಯ ಬಳಿಕ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಐದು ಪಂದ್ಯಗಳ ಏಕದಿನ ಸರಣಿಗೆ ಸಜ್ಜಾಗಿವೆ. ಈ ಸರಣಿಯಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ತಂಡಕ್ಕೆ ಮರಳಲಿದ್ದು, ಶುಭಮನ್ ಗಿಲ್ ಹಾಗೂ ಶ್ರೇಯಸ್ ಅಯ್ಯರ್ ತಂಡವನ್ನು ಮುನ್ನಡೆಸಲಿದ್ದಾರೆ. ನವೆಂಬರ್ 4ರಂದು ಮೊದಲ ಪಂದ್ಯ ನಡೆಯಲಿದೆ.
ಬೆಂಗಳೂರು: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ಸರಣಿಯ ಬಳಿಕ ಇದೀಗ ಎರಡೂ ತಂಡಗಳು ಏಕದಿನ ಕ್ರಿಕೆಟ್ ಸಮರಕ್ಕೆ ಸಜ್ಜಾಗಿವೆ. ಟಿ20 ಸರಣಿಯ ಆರಂಭಿಕ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಭಾರತ, ಸರಣಿಯಲ್ಲಿ ಮುನ್ನಡೆ ಪಡೆದಿತ್ತು. ಆದರೆ ಕೊನೆಯ ಎರಡು ಪಂದ್ಯಗಳಲ್ಲಿ ತಿರುಗೇಟು ನೀಡಿದ ನ್ಯೂಜಿಲೆಂಡ್ ಎರಡೂ ಪಂದ್ಯಗಳನ್ನು ಗೆದ್ದು ಸರಣಿಯನ್ನು 3-2ರಿಂದ ಅಂತ್ಯಗೊಳಿಸಿತು.
ಇದೀಗ ಉಭಯ ತಂಡಗಳ ನಡುವೆ ಐದು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಈ ಸರಣಿಯಲ್ಲಿ ಭಾರತದ ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕಣಕ್ಕಿಳಿಯಲಿರುವುದು ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.
ರೋ-ಕೊ ಮೇಲೆ ಎಲ್ಲರ ಕಣ್ಣು
ಟಿ20 ಸರಣಿ ಮುಕ್ತಾಯಗೊಂಡ ಬಳಿಕ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಏಕದಿನ ಸರಣಿಯತ್ತ ಗಮನ ಹರಿಸಿವೆ. ಭಾರತದ ಪರ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ತಂಡಕ್ಕೆ ಮರಳಲಿದ್ದಾರೆ. ಈ ಇಬ್ಬರು ಹಿರಿಯ ಆಟಗಾರರು ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಕೊನೆಯದಾಗಿ ಭಾರತವನ್ನು ಪ್ರತಿನಿಧಿಸಿದ್ದರು.
ಕೊಹ್ಲಿ, ರೋಹಿತ್ ಸಿದ್ಧತೆ ಹೇಗಿದೆ?
ಐದು ಪಂದ್ಯಗಳ ಏಕದಿನ ಸರಣಿಗೆ ಮುನ್ನ ಭಾರತ ತಂಡದ ಆಟಗಾರರು ಅಭ್ಯಾಸ ಆರಂಭಿಸಿದ್ದಾರೆ. ಮೊದಲ ಪಂದ್ಯಕ್ಕೂ ಮುನ್ನ ನಡೆಯುತ್ತಿರುವ ನೆಟ್ ಅಭ್ಯಾಸದ ವೇಳೆ ವಿರಾಟ್ ಕೊಹ್ಲಿ ತಂಡದ ವೇಗದ ಬೌಲರ್ಗಳನ್ನು ಎದುರಿಸಿ ಕಠಿಣ ಅಭ್ಯಾಸ ನಡೆಸಿದ್ದಾರೆ. ತವರಿನ ಹೊರಗೆ ನ್ಯೂಜಿಲೆಂಡ್ ಬೌಲರ್ಗಳನ್ನು ಎದುರಿಸಲಿರುವ ಕೊಹ್ಲಿ ಮತ್ತು ರೋಹಿತ್ ಅವರ ಪ್ರದರ್ಶನದ ಮೇಲೆ ಅಭಿಮಾನಿಗಳ ಕಣ್ಣಿದೆ.
ಭಾರತ-ನ್ಯೂಜಿಲೆಂಡ್ ಏಕದಿನ ಸರಣಿಯ ಸಂಪೂರ್ಣ ವೇಳಾಪಟ್ಟಿ
ಇನ್ನು ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟಿ20 ಸರಣಿಯು ಭಾರತೀಯ ಕಾಲಮಾನ ಮಧ್ಯಾಹ್ನ 12.30ರಿಂದ ಆರಂಭವಾಗುತ್ತಿತ್ತು. ಇದಕ್ಕೂ ಅರ್ಧ ಗಂಟೆ ಮೊದಲು ಟಾಸ್ ಪ್ರಕ್ರಿಯೆ ನಡೆಯುತ್ತಿತ್ತು. ಆದರೆ ಇದೀಗ ಏಕದಿನ ಸರಣಿಯಲ್ಲಿ ಪಂದ್ಯಗಳ ಆರಂಭದ ಸಮಯ ಬದಲಾಗಿದ್ದು, ಬೆಳಗ್ಗೆ 7.30ಕ್ಕೆ ಪಂದ್ಯ ಆರಂಭವಾಗಲಿದೆ. ಇನ್ನು ಎಲ್ಲಾ 5 ಪಂದ್ಯಗಳ ಟಾಸ್ ಪ್ರಕ್ರಿಯೆ ಬೆಳಗ್ಗೆ 7 ಗಂಟೆಗೆ ನಡೆಯಲಿದೆ.
ಪಂದ್ಯ ದಿನಾಂಕ ಕ್ರೀಡಾಂಗಣ ಆರಂಭದ ಸಮಯ (IST)
ಮೊದಲ ಏಕದಿನ ನವೆಂಬರ್ 4, 2026 ಈಡನ್ ಪಾರ್ಕ್, ಆಕ್ಲೆಂಡ್ ಬೆಳಿಗ್ಗೆ 7:30
ಎರಡನೇ ಏಕದಿನ ನವೆಂಬರ್ 7, 2026 ಸ್ಕೈ ಸ್ಟೇಡಿಯಂ, ವೆಲ್ಲಿಂಗ್ಟನ್ ಬೆಳಿಗ್ಗೆ 7:30
ಮೂರನೇ ಏಕದಿನ ನವೆಂಬರ್ 10, 2026 ಸೆಡ್ಡನ್ ಪಾರ್ಕ್, ಹ್ಯಾಮಿಲ್ಟನ್ ಬೆಳಿಗ್ಗೆ 7:30
ನಾಲ್ಕನೇ ಏಕದಿನ ನವೆಂಬರ್ 13, 2026 ಬೇ ಓವಲ್, ಮೌಂಟ್ ಮೌಂಗನುಯಿ ಬೆಳಿಗ್ಗೆ 7:30
ಐದನೇ ಏಕದಿನ ನವೆಂಬರ್ 15, 2026 ಬೇ ಓವಲ್, ಮೌಂಟ್ ಮೌಂಗನುಯಿ ಬೆಳಿಗ್ಗೆ 7:30
ಮೊದಲ ಏಕದಿನ ಪಂದ್ಯ ಯಾವಾಗ, ಎಲ್ಲಿ?
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯ ನವೆಂಬರ್ 4ರಂದು ನ್ಯೂಜಿಲೆಂಡ್ನ ಆಕ್ಲೆಂಡ್ನಲ್ಲಿರುವ ಈಡನ್ ಪಾರ್ಕ್ನಲ್ಲಿ ನಡೆಯಲಿದೆ. ಪಂದ್ಯ ಭಾರತೀಯ ಕಾಲಮಾನ ಬೆಳಿಗ್ಗೆ 7.30ಕ್ಕೆ ಆರಂಭವಾಗಲಿದೆ.
ಭಾರತಕ್ಕೆ ಇಬ್ಬರು ನಾಯಕರು ಏಕೆ?
ಈ ಪ್ರವಾಸದಲ್ಲಿ ಭಾರತ ತಂಡಕ್ಕೆ ಇಬ್ಬರು ನಾಯಕರು ಜವಾಬ್ದಾರಿ ವಹಿಸಲಿದ್ದಾರೆ. ಮೊದಲ ಮೂರು ಏಕದಿನ ಪಂದ್ಯಗಳಲ್ಲಿ ನಿಯಮಿತ ನಾಯಕ ಶುಭಮನ್ ಗಿಲ್ ತಂಡವನ್ನು ಮುನ್ನಡೆಸಲಿದ್ದಾರೆ. ಕೊನೆಯ ಎರಡು ಪಂದ್ಯಗಳಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವ ವಹಿಸಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತಕ್ಕೆ ನಾಯಕತ್ವ ವಹಿಸಿದ್ದ ಶ್ರೇಯಸ್ ಅಯ್ಯರ್, ಏಕದಿನ ಸರಣಿಯ ಕೊನೆಯ ಎರಡು ಪಂದ್ಯಗಳಲ್ಲೂ ತಂಡವನ್ನು ಮುನ್ನಡೆಸಲಿದ್ದಾರೆ. ಟೆಸ್ಟ್ ಸರಣಿಗೂ ಮುನ್ನ ವಿಶ್ರಾಂತಿ ಪಡೆಯಲು ಶುಭ್ಮನ್ ಗಿಲ್ ಬಯಸಿದ್ದು, ಕೊನೆಯ ಎರಡು ಪಂದ್ಯಗಳಲ್ಲಿ ಶ್ರೇಯಸ್ ಅಯ್ಯರ್ ನಾಯಕನಾಗಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.
ಮೊದಲ ಮೂರು ಏಕದಿನ ಪಂದ್ಯಗಳಿಗೆ ಭಾರತದ ತಂಡ
ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಕೆ.ಎಲ್. ರಾಹುಲ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ನಮನ್ ಧೀರ್, ಅಂಶುಲ್ ಕಾಂಬೋಜ್, ಗುರ್ನೂರ್ ಬ್ರಾರ್, ಋತುರಾಜ್ ಗಾಯಕ್ವಾಡ್, ಅರ್ಷದೀಪ್ ಸಿಂಗ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಮೊಹಮ್ಮದ್ ಸಿರಾಜ್, ಮತ್ತು ಕುಲದೀಪ್ ಯಾದವ್.
ಕೊನೆಯ ಎರಡು ಏಕದಿನ ಪಂದ್ಯಗಳಿಗೆ ಭಾರತದ ತಂಡ
ಶ್ರೇಯಸ್ ಅಯ್ಯರ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ತಿಲಕ್ ವರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್ ಮತ್ತು ಉಪನಾಯಕ), ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ನಮನ್ ಧೀರ್, ಆಕಿಬ್ ನಬಿ, ಗುರ್ನೂರ್ ಬ್ರಾರ್, ಋತುರಾಜ್ ಗಾಯಕ್ವಾಡ್, ಅರ್ಷದೀಪ್ ಸಿಂಗ್, ಕುಮಾರ್ ಕುಶಾಗ್ರ (ವಿಕೆಟ್ ಕೀಪರ್), ಮೊಹಮ್ಮದ್ ಸಿರಾಜ್, ಯಶ್ ಠಾಕೂರ್ ಮತ್ತು ಕುಲದೀಪ್ ಯಾದವ್.
ಮೊದಲ ಮೂರು ಪಂದ್ಯಗಳಿಗೆ ನ್ಯೂಜಿಲೆಂಡ್ ತಂಡ
ಮಿಚೆಲ್ ಸ್ಯಾಂಟ್ನರ್ (ನಾಯಕ), ಮೈಕೆಲ್ ಬ್ರೇಸ್ವೆಲ್, ಮಾರ್ಕ್ ಚಾಪ್ಮನ್, ಡೆವನ್ ಕಾನ್ವೇ, ಜೇಕಬ್ ಡಫಿ, ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ಟಾಮ್ ಲ್ಯಾಥಮ್, ಡ್ಯಾರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ನಾಥನ್ ಸ್ಮಿತ್, ವಿಲ್ ಯಂಗ್ ಮತ್ತು ಬ್ಲೇರ್ ಟಿಕ್ನರ್.
ಕೊನೆಯ ಎರಡು ಪಂದ್ಯಗಳಿಗೆ ನ್ಯೂಜಿಲೆಂಡ್ ತಂಡ
ಮಿಚೆಲ್ ಸ್ಯಾಂಟ್ನರ್ (ನಾಯಕ), ಫಿನ್ ಅಲೆನ್, ಮೈಕೆಲ್ ಬ್ರೇಸ್ವೆಲ್, ಮಾರ್ಕ್ ಚಾಪ್ಮನ್, ಕ್ರಿಸ್ಟಿಯನ್ ಕ್ಲಾರ್ಕ್, ಜೇಕಬ್ ಡಫಿ, ಮ್ಯಾಟ್ ಫಿಶರ್, ಲಾಕಿ ಫರ್ಗ್ಯೂಸನ್, ಮಿಚ್ ಹೇ, ನಿಕ್ ಕೆಲ್ಲಿ, ಟಿಮ್ ಸೀಫರ್ಟ್, ಬ್ಲೇರ್ ಟಿಕ್ನರ್ ಮತ್ತು ವಿಲ್ ಯಂಗ್.
ಯಾವ ಚಾನೆಲ್ನಲ್ಲಿ ನೇರಪ್ರಸಾರ?
ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಏಕದಿನ ಸರಣಿಯ ನೇರ ಪ್ರಸಾರದ ಹಕ್ಕನ್ನು ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ ಪಡೆದುಕೊಂಡಿದ್ದು, ಸೋನಿ ಸ್ಪೋರ್ಟ್ಸ್ ಚಾನೆಲ್ನಲ್ಲಿ ನೇರ ಪ್ರಸಾರವಾಗಲಿದೆ. ಇದರ ಜತೆಗೆ ಸೋನಿ ಲಿವ್ ಫ್ಲಾಟ್ಫಾರ್ಮ್ ಮೂಲಕ ಮೊಬೈಲ್ ಮತ್ತು ಲ್ಯಾಪ್ಟಾಪ್ನಲ್ಲೂ ವೀಕ್ಷಿಸಬಹುದಾಗಿದೆ.






