ಇಂದಿನಿಂದ ಭಾರತ vs ಇಂಗ್ಲೆಂಡ್‌ ಟಿ20 ಕದನ ಆರಂಭ! ಶಮಿ ಮೇಲೆ ಎಲ್ಲರ ಕಣ್ಣು

ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿ ಬುಧವಾರದಿಂದ ಕೋಲ್ಕತಾದಲ್ಲಿ ಆರಂಭವಾಗಲಿದೆ. ವಿಶ್ವಕಪ್ ನಂತರ ಮೊಹಮ್ಮದ್ ಶಮಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳುತ್ತಿದ್ದು, ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಚಾಂಪಿಯನ್ಸ್ ಟ್ರೋಫಿಗೆ ತಂಡದಲ್ಲಿ ಸ್ಥಾನ ಪಡೆಯದ ಸೂರ್ಯ, ಟಿ20 ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಉತ್ತಮ ಪ್ರದರ್ಶನ ನೀಡುವ ಅನಿವಾರ್ಯತೆಯಲ್ಲಿದ್ದಾರೆ.

India vs England T20 Series begins today All eyes on Pacer Shami kvn

ಕೋಲ್ಕತಾ: ದ್ವಿಪಕ್ಷೀಯ ಟಿ20 ಸರಣಿಗೆ ಸದ್ಯಕ್ಕೆ ಅಷ್ಟೊಂದು ಮಹತ್ವವಿಲ್ಲದೆ ಇದ್ದರೂ, ಕೆಲ ಪ್ರಮುಖ ಅಂಶಗಳಿಂದಾಗಿ ಬುಧವಾರದಿಂದ ಆರಂಭಗೊಳ್ಳಲಿರುವ ಭಾರತ ಹಾಗೂ ಇಂಗ್ಲೆಂಡ್‌ ನಡುವಿನ 5 ಪಂದ್ಯಗಳ ಸರಣಿ ಕುತೂಹಲ ಕೆರಳಿಸಿದೆ. ಮೊದಲ ಪಂದ್ಯಕ್ಕೆ ಇಲ್ಲಿನ ಈಡನ್ ಗಾರ್ಡನ್ಸ್‌ ಆತಿಥ್ಯ ವಹಿಸಲಿದ್ದು, ಸೂರ್ಯಕುಮಾರ್‌ ಯಾದವ್‌ ನೇತೃತ್ವದ ಭಾರತ ತಂಡ ಶುಭಾರಂಭದ ನಿರೀಕ್ಷೆಯಲ್ಲಿದೆ.

2023ರ ಏಕದಿನ ವಿಶ್ವಕಪ್‌ ಬಳಿಕ ಮೊಹಮದ್‌ ಶಮಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯವನ್ನಾಡಲಿದ್ದು, ಅವರ ಮೇಲೆ ಎಲ್ಲರ ಕಣ್ಣಿದೆ. ಶಮಿ ಮುಂದಿನ ತಿಂಗಳು ಚಾಂಪಿಯನ್ಸ್ ಟ್ರೋಫಿಯಲ್ಲೂ ಆಡಲಿರುವ ಕಾರಣ, ಅವರ ಫಾರ್ಮ್‌ ಹಾಗೂ ಫಿಟ್ನೆಸ್‌ ಅನ್ನು ಆಯ್ಕೆಗಾರರು ಗಮನಿಸಲಿದ್ದಾರೆ.

ಇನ್ನು, ಚಾಂಪಿಯನ್ಸ್‌ ಟ್ರೋಫಿ ತಂಡದಲ್ಲಿ ಸ್ಥಾನ ಪಡೆಯದ ಸೂರ್ಯ, ಟಿ20 ತಂಡದಲ್ಲಿ ಕಾಯಂ ಆಗಿ ಉಳಿಯಬೇಕಿದ್ದರೆ ಉತ್ತಮ ಆಟ ತೋರಲೇಬೇಕಿದೆ. ಇದೇ ಮೊದಲ ಬಾರಿಗೆ ಆಲ್ರೌಂಡರ್‌ ಅಕ್ಷರ್‌ ಪಟೇಲ್‌ಗೆ ಉಪನಾಯಕತ್ವದ ಜವಾಬ್ದಾರಿ ನೀಡಲಾಗಿದೆ.

ಕೇವಲ ಇಬ್ಬರು ಸ್ಪಿನ್ನರ್ಸ್‌?: ಸಂಜೆ ಬಳಿಕ ಇಬ್ಬನಿ ಬೀಳಲಿರುವ ಕಾರಣ ಸ್ಪಿನ್ನರ್‌ಗಳಿಗೆ ಚೆಂಡಿನ ಮೇಲೆ ನಿಯಂತ್ರಣ ಸಾಧಿಸುವುದು ಕಷ್ಟವಾಗಲಿದೆ. ಹೀಗಾಗಿ, ಇಬ್ಬರು ಸ್ಪಿನ್ನರ್‌ಗಳನ್ನಷ್ಟೇ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚು. ವರುಣ್‌ ಚಕ್ರವರ್ತಿ ಹಾಗೂ ಅಕ್ಷರ್‌ ಪಟೇಲ್‌ಗೆ ಅವಕಾಶ ಸಿಗಲಿದೆ. ಅಭಿಷೇಕ್‌ ಹಾಗೂ ಸ್ಯಾಮ್ಸನ್‌ ಇನ್ನಿಂಗ್ಸ್‌ ಆರಂಭಿಸಲಿದ್ದು, ಸೂರ್ಯ, ತಿಲಕ್‌, ರಿಂಕು, ಹಾರ್ದಿಕ್‌, ನಿತೀಶ್‌, ಶಮಿ ಹಾಗೂ ಅರ್ಶ್‌ದೀಪ್‌ ಆಡುವುದು ಬಹುತೇಕ ಖಚಿತ.

ಮತ್ತೊಂದೆಡೆ ಇಂಗ್ಲೆಂಡ್‌ ಈಗಾಗಲೇ ಆಡುವ ಹನ್ನೊಂದರ ಬಳಗವನ್ನು ಘೋಷಿಸಿದ್ದು, ಆದಿಲ್‌ ರಶೀದ್‌ ತಂಡದಲ್ಲಿರುವ ಏಕೈಕ ತಜ್ಞ ಸ್ಪಿನ್ನರ್‌. ಜೋಸ್‌ ಬಟ್ಲರ್‌ ಬಳಗ ಟಿ20 ತಜ್ಞ ಆಟಗಾರರ ದಂಡನ್ನೇ ಹೊಂದಿದ್ದು, ಭಾರತಕ್ಕೆ ಪ್ರಬಲ ಪೈಪೋಟಿ ನೀಡಲು ಎದುರು ನೋಡುತ್ತಿದೆ.

ಒಟ್ಟು ಮುಖಾಮುಖಿ: 24

ಭಾರತ: 13

ಇಂಗ್ಲೆಂಡ್‌: 11

ಆಟಗಾರರ ಪಟ್ಟಿ

ಭಾರತ (ಸಂಭವನೀಯ): ಅಭಿಷೇಕ್‌, ಸ್ಯಾಮ್ಸನ್‌, ಸೂರ್ಯ(ನಾಯಕ), ತಿಲಕ್‌, ಹಾರ್ದಿಕ್‌, ರಿಂಕು, ನಿತೀಶ್‌, ಅಕ್ಷರ್‌, ಶಮಿ, ವರುಣ್‌, ಅರ್ಶ್‌ದೀಪ್‌.

ಇಂಗ್ಲೆಂಡ್‌ (ಆಡುವ 11): ಸಾಲ್ಟ್‌, ಡಕೆಟ್‌, ಬಟ್ಲರ್‌ (ನಾಯಕ), ಬ್ರೂಕ್‌, ಲಿವಿಂಗ್‌ಸ್ಟನ್‌, ಬೆಥ್‌ಹೆಲ್‌, ಓವರ್‌ಟನ್‌, ಆ್ಯಟ್ಕಿನ್ಸನ್‌, ಆರ್ಚರ್‌, ರಶೀದ್‌, ವುಡ್‌.

ಪಂದ್ಯ ಆರಂಭ: ಸಂಜೆ 7ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಡಿಸ್ನಿ+ ಹಾಟ್‌ಸ್ಟಾರ್‌

2019ರಲ್ಲಿ ತವರಲ್ಲಿ ಕೊನೆ ಬಾರಿಗೆ ಸೋತಿದ್ದ ಭಾರತ

ಭಾರತ ತಂಡ ಕಳೆದ 6 ವರ್ಷದಲ್ಲಿ ತವರಿನಲ್ಲಿ ಟಿ20 ಸರಣಿ ಸೋತಿಲ್ಲ. ಈ ಅವಧಿಯಲ್ಲಿ ಆಡಿರುವ 16 ಸರಣಿಗಳಲ್ಲೂ ಅಜೇಯವಾಗಿ ಉಳಿದಿದೆ. 14 ಸರಣಿಗಳನ್ನು ಗೆದ್ದರೆ, 2 ಸರಣಿಗಳನ್ನು ಡ್ರಾ ಮಾಡಿಕೊಂಡಿದೆ. 2019ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸರಣಿ ಸೋತಿತ್ತು.
 

Latest Videos
Follow Us:
Download App:
  • android
  • ios