ಇಂದಿನಿಂದ ಭಾರತ vs ಬಾಂಗ್ಲಾ ಟಿ20 ಕದನ ಆರಂಭ
ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಇಂದಿನಿಂದ ಆರಂಭವಾಗಲಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಗ್ವಾಲಿಯರ್: ಟೆಸ್ಟ್ ಸರಣಿಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಭಾರತ ತಂಡ ಈಗ ಬಾಂಗ್ಲಾದೇಶ ವಿರುದ್ಧ ಟಿ20 ಕದನಕ್ಕೆ ಸಜ್ಜಾಗಿದೆ. ಉಭಯ ತಂಡಗಳ ನಡುವಿನ 3 ಪಂದ್ಯಗಳ ಸರಣಿಯ ಮೊದಲ ಪಂದ್ಯ ಭಾನುವಾರ ನಡೆಯಲಿದ್ದು, ಗ್ವಾಲಿಯರ್‌ನ ಹೊಸ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.
ಬಾಂಗ್ಲಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಆಡಿದ್ದ ಯಾವುದೇ ಆಟಗಾರ ಭಾರತ ಟಿ20 ತಂಡದಲ್ಲಿಲ್ಲ. ಸೂರ್ಯಕುಮಾರ್ ಯಾದವ್ ತಂಡ ಮುನ್ನಡೆಸಲಿದ್ದು, ಐಪಿಎಲ್ ಸ್ಟಾರ್‌ಗಳು ತಮ್ಮ ಪ್ರತಿಭೆ ಪ್ರದರ್ಶಿಸಲು ಕಾಯುತ್ತಿದ್ದಾರೆ. ಪ್ರಮುಖವಾಗಿ ಎಕ್ಸ್‌ಪ್ರೆಸ್ ವೇಗಿ ಖ್ಯಾತಿಯ ಮಯಾಂಕ್ ಯಾದವ್ ಮೇಲೆ ಭಾರಿ ನಿರೀಕ್ಷೆ ಇಡಲಾಗಿದೆ. ಅವರ ಜೊತೆಗೆ ಮತ್ತೋರ್ವ ಯುವ ವೇಗಿ ಹರ್ಷಿತ್ ರಾಣಾ, ಆಲ್ರೌಂಡರ್ ನಿತೀಶ್ ಕುಮಾರ್ ಕೂಡಾ ಪಾದಾರ್ಪಣೆ ನಿರೀಕ್ಷೆಯಲ್ಲಿದ್ದಾರೆ.
27 ವರ್ಷಗಳ ಬಳಿಕ ಮುಂಬೈ ಮಡಿಲಿಗೆ ಇರಾನಿ ಕಪ್
ಸೂರ್ಯ ಹೊರತುಪಡಿಸಿ ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮನ್ ಸಿಂಗ್ ತಂಡದಲ್ಲಿರುವ ಪ್ರಮುಖ ಆಟಗಾರರು. ಇವರ ನಡುವೆ ಜಿತೇಶ್ ಶರ್ಮಾ, ರಿಯಾನ್ ಪರಾಗ್, ಅಭಿಷೇಕ್ ಶರ್ಮಾ ತಂಡದಲ್ಲಿ ಸ್ಥಾನ ಗಟ್ಟಿಗೊಳಿಸಲು ಕಾಯುತ್ತಿದ್ದಾರೆ.
ಶಕೀಬ್ ಅನುಪಸ್ಥಿತಿ: ಅತ್ತ ಬಾಂಗ್ಲಾದೇಶ ಟೆಸ್ಟ್ ಸರಣಿಯ ಸೋಲಿನ ಕಹಿ ಮರೆತು ಟಿ20ಯಲ್ಲಾದರೂ ಗೆಲ್ಲುವ ವಿಶ್ವಾಸದಲ್ಲಿದೆ. ಇತ್ತೀಚೆಗಷ್ಟೇ ನಿವೃತ್ತಿಯಾಗಿರುವ ಹಿರಿಯ ಆಟಗಾರ ಶಕೀಬ್ ಅಲ್ ಹಸನ್ ಅನುಪಸ್ಥಿತಿ ತಂಡವನ್ನು ಕಾಡಲಿದ್ದು, ಅವರ ಸ್ಥಾನ ತುಂಬಬಲ್ಲ ಆಟಗಾರನಿಗಾಗಿ ಹುಡುಕಾಟದಲ್ಲಿದೆ.
ದುಬೆ ಹೊರಕ್ಕೆ, ತಿಲಕ್ ಸೇರ್ಪಡೆ
ಬೆನ್ನು ನೋವಿಗೆ ತುತ್ತಾಗಿರುವ ಶಿವಂ ದುಬೆ 3 ಪಂದ್ಯಗಳ ಸರಣಿಯಿಂದ ಹೊರಬಿದ್ದಿದ್ದಾರೆ. ಅವರ ಬದಲು ತಿಲಕ್ ವರ್ಮಾ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.
14 ವರ್ಷಗಳ ಬಳಿಕ ಗ್ವಾಲಿಯರಲ್ಲಿ ಪಂದ್ಯ
ಮೊದಲ ಪಂದ್ಯ ಗ್ವಾಲಿಯರ್‌ನ ಮಾಧವ್ ರಾವ್ ಸಿಂಧಿಯಾ ಕ್ರೀಡಾಂಗಣದಲ್ಲಿ ಆಯೋಜನೆಗೊಳ್ಳಲಿದೆ. ಇದು ಈ ಕ್ರೀಡಾಂಗಣದಲ್ಲಿ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯ. ಕೊನೆಯದಾಗಿ ಗ್ವಾಲಿಯರ್‌ನಲ್ಲಿ ಅಂತಾರಾಷ್ಟ್ರೀಯ ಪಂದ್ಯ ನಡೆದಿದ್ದು 14 ವರ್ಷಗಳ ಹಿಂದೆ. 2010ರಲ್ಲಿ ಕ್ಯಾಪ್ಟನ್ ರೂಪ್ ಸಿಂಗ್ ಕ್ರೀಡಾಂಗಣದಲ್ಲಿ ಭಾರತ-ದಕ್ಷಿಣ ಆಫ್ರಿಕಾ ಏಕದಿನ ಪಂದ್ಯ ನಡೆದಿತ್ತು. ಸಚಿನ್ ತೆಂಡುಲ್ಕರ್ ಐತಿಹಾಸಿಕ 200 ರನ್ ಹೊಡೆದಿದ್ದು ಇದೇ ಪಂದ್ಯದಲ್ಲಿ, ಆ ಬಳಿಕ ನಗರದಲ್ಲೇ ಹೊಸ ಕ್ರೀಡಾಂಗಣ ನಿರ್ಮಿಸಲಾಗಿದೆ.
ಸಂಭವನೀಯ ಆಟಗಾರರ ಪಟ್ಟಿ
ಭಾರತ: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್(ನಾಯಕ), ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಟೋಯ್/ವರುಣ್ ಚಕ್ರವರ್ತಿ, ಮಯಾಂಕ್ ಯಾದವ್, ಅರ್ಶ್‌ದೀಪ್ ಸಿಂಗ್, ಹರ್ಷಿತ್ ರಾಣಾ
ಬಾಂಗ್ಲಾದೇಶ: ಲಿಟನ್ ದಾಸ್, ತಂಜೀದ್, ನಜ್ರುಲ್ (ನಾಯಕ), ತೌಹೀದ್, ಮಹ್ಮದುಲ್ಲಾ, ಜಾಕ, ಮೀರಾಜ್, ರಿಶಾದ್, ಮುಸ್ತಾಫಿಜುರ್, ತಸ್ಮಿನ್, ತಂಜೀಮ್.
ಪಂದ್ಯ: ಸಂಜೆ 7.00ಕ್ಕೆ
ನೇರ ಪ್ರಸಾರ: ಸ್ಪೋರ್ಟ್ಸ್ 18, ಜಿಯೋ ಸಿನಿಮಾ