ಇರಾನಿ ಕಪ್ ಟೂರ್ನಿಯಲ್ಲಿ ಅಜಿಂಕ್ಯ ರಹಾನೆ ನೇತೃತ್ವದ ಮುಂಬೈ ಕ್ರಿಕೆಟ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಲಖನೌ: ಹಾಲಿ ರಣಜಿ ಟ್ರೋಫಿ ಚಾಂಪಿಯನ್ ಮುಂಬೈ ತಂಡ ಇರಾನಿ ಕಪ್‌ನಲ್ಲಿ 15ನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. 5ನೇ ದಿನವಾದ ಶನಿವಾರ ಶೇಷ ಭಾರತ ವಿರುದ್ಧ ಪಂದ್ಯ ಡ್ರಾದಲ್ಲಿ ಕೊನೆ ಗೊಂಡಿತು. ಆದರೆ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದಿದ್ದ ಕಾರಣ ಮುಂಬೈ ಚಾಂಪಿಯನ್ ಎಂದು ಘೋಷಿಸಲಾಯಿತು. ಈ ಮೂಲಕ 27 ವರ್ಷ ಬಳಿಕ ಮತ್ತೊಮ್ಮೆ ಇರಾನಿ ಕಪ್ ಮುಡಿಗೇರಿಸಿಕೊಂಡಿತು. ತಂಡ ಕೊನೆ ಬಾರಿ 1997-98ರಲ್ಲಿ ಪ್ರಶಸ್ತಿ ಗೆದ್ದಿತ್ತು.
4ನೇ ದಿನದಂತ್ಯಕ್ಕೆ 6 ವಿಕೆಟ್‌ಗೆ 153 ರನ್ ಗಳಿಸಿದ್ದ ರಹಾನೆ ನಾಯಕತ್ವದ ಮುಂಬೈ ಕೊನೆ ದಿನವಾದ ಶನಿವಾರ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಪಂದ್ಯ ಡ್ರಾಗೊಂಡರೂ ಸಾಕಿದ್ದ ಕಾರಣ ಮುಂಬೈ ನಿಧಾನ ಆಟವಾಡಿತು. 8 ವಿಕೆಟ್‌ಗೆ 329 ರನ್ ಗಳಿಸಿದ್ದಾಗ ಡಿಕ್ಲೇರ್ ಘೋಷಿಸಿದರೂ, 451 ರನ್ ಗುರಿ ಸಿಕ್ಕ ಕಾರಣ ಶೇಷ ಭಾರತ ತಂಡ ಬ್ಯಾಟಿಂಗ್ ಆರಂಭಿಸದೆ ಡ್ರಾಗೆ ತೃಪ್ತಿಪಟ್ಟುಕೊಂಡಿತು.
ಮಹಿಳಾ ಟಿ20 ವಿಶ್ವಕಪ್: ಇಂದು ಭಾರತ Vs ಪಾಕ್ ಡು ಆರ್ ಡೈ ಕದನ; ಗೆದ್ದರಷ್ಟೇ ಸೆಮೀಸ್ ಕನಸು ಜೀವಂತ
ಮುಂಬೈ ತಂಡದ ತನುಶ್ ಕೋಟ್ಯನ್ ಔಟಾಗದೆ 114, ಮೋಹಿತ್ ಔಟಾಗದೆ 51 ರನ್ ಬಾರಿಸಿದರು. ಇದಕ್ಕೂ ಮುನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಮುಂಬೈ 537 ರನ್ ಕಲೆ ಹಾಕಿದ್ದರೆ, ಋತುರಾಜ್ ಗಾಯಕ್ವಾಡ್ ನಾಯಕತ್ವದ ಶೇಷ ಭಾರತ 416 ರನ್‌ಗೆ ಆಲೌಟಾಗಿತ್ತು. ಇದರೊಂದಿಗೆ ಮುಂಬೈ 121 ರನ್ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ದ್ವಿಶತಕ ಬಾರಿಸಿದ್ದ ಮುಂಬೈನ ಸರ್ಫರಾಜ್ ಖಾನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ದೇಸಿ ಕ್ರಿಕೆಟ್‌ನ ಕಿಂಗ್ ಮುಂಬೈ
ಮುಂಬೈ ತಂಡ ದೇಸಿ ಕ್ರಿಕೆಟ್‌ಗೆ ಒಂದರ್ಥದಲ್ಲಿ ರಾಜ ಇದ್ದಂತೆ. ದೇಸಿ ಕ್ರಿಕೆಟ್‌ನಲ್ಲಿ ಒಟ್ಟಾರೆ 62 ಟ್ರೋಫಿ ಗೆದ್ದಿದೆ. ರಣಜಿ ಕ್ರಿಕೆಟ್‌ನಲ್ಲಿ 42 ಬಾರಿ ಚಾಂಪಿಯನ್ ಆಗಿರುವ ತಂಡ, ಇರಾನಿ ಕಪ್‌ನಲ್ಲಿ 15ನೇ ಪ್ರಶಸ್ತಿ ಜಯಿಸಿದೆ. 4 ಬಾರಿ ವಿಜಯ್ ಹಜಾರೆ, 1 ಬಾರಿ ಸೆಯ್ಯದ್ ಮುಸ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಚಾಂಪಿಯನ್ ಎನಿಸಿಕೊಂಡಿದೆ.
ಸ್ಕೋರ್ :
ಮುಂಬೈ 537/10 ಮತ್ತು 329/8 ಡಿ. (ತನುಶ್ ಔಟಾಗದೆ 114, ಮೋಹಿತ್ ಔಟಾಗದೆ 51, ಶರನ್ಸ್ ಜೈನ್ 6-121)
ಶೇಷ ಭಾರತ 416/10 ಪಂದ್ಯಶ್ರೇಷ್ಠ: ಸರ್ಫರಾಜ್ ಖಾನ್.
