"

ಇಂದೋರ್‌[ನ.14]:: ಐತಿ​ಹಾ​ಸಿಕ ಪಿಂಕ್‌ ಬಾಲ್‌ ಟೆಸ್ಟ್‌ಗೆ ಭಾರ​ತೀಯ ಕ್ರಿಕೆ​ಟಿ​ಗರು, ಅಭಿ​ಮಾ​ನಿ​ಗಳು ಕಾಯು​ತ್ತಿ​ದ್ದು, ಪಿಂಕ್‌ ಬಾಲ್‌ ಪಂದ್ಯ​ವನ್ನು ಒಳ​ಗೊಂಡ ಬಾಂಗ್ಲಾ​ದೇಶ ವಿರು​ದ್ಧದ ಸರ​ಣಿ​ಗೆ ಗುರು​ವಾರ ಚಾಲನೆ ಸಿಕ್ಕಿದೆ. ಮೊದಲ ಟೆಸ್ಟ್‌ ಇಲ್ಲಿ ಆರಂಭವಾಗಿದ್ದು, ಸಾಂಪ್ರ​ದಾ​ಯಿಕ ಕೆಂಪು ಚೆಂಡನ್ನು ಬಳಕೆ ಮಾಡ​ಲಾ​ಗು​ತ್ತದೆ. ನ.22ರಿಂದ ಕೋಲ್ಕ​ತಾ​ದಲ್ಲಿ ನಡೆ​ಯ​ಲಿ​ರುವ 2ನೇ ಟೆಸ್ಟ್‌ನಲ್ಲಿ ಪಿಂಕ್‌ ಬಾಲ್‌ ಬಳಕೆಯಾಗ​ಲಿದೆ. ಪಿಂಕ್‌ ಬಾಲ್‌ ಪಂದ್ಯಕ್ಕಾಗಿ ನಿರೀಕ್ಷೆ ಮಾಡು​ತ್ತಿ​ರುವ ವಿರಾಟ್‌ ಕೊಹ್ಲಿ ಪಡೆಗೆ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿ​ಯನ್‌ಶಿಪ್‌ ವ್ಯಾಪ್ತಿಗೆ ಸೇರುವ ಸರ​ಣಿ​ಯನ್ನು ಕ್ಲೀನ್‌ ಸ್ವೀಪ್‌ ಮಾಡುವ ಗುರಿಯೂ ಇದೆ. ಈಗಾ​​ಗಲೇ 240 ಅಂಕ​ಗ​ಳೊಂದಿಗೆ ವಿಶ್ವ ಚಾಂಪಿ​ಯನ್‌ಶಿಪ್‌ ವೇಳಾ​ಪ​ಟ್ಟಿ​ಯಲ್ಲಿ ಅಗ್ರ​ಸ್ಥಾ​ನದಲ್ಲಿ​ರುವ ಭಾರತ, ಈ ಸರ​ಣಿ​ಯನ್ನೂ ತನ್ನ ತೆಕ್ಕೆಗೆ ಹಾಕಿ​ಕೊಂಡು 120 ಅಂಕ​ಗ​ಳನ್ನು ಗಳಿ​ಸುವ ಉತ್ಸಾ​ಹ​ದ​ಲ್ಲಿದೆ.

ಟಿ20 ಸರ​ಣಿ​ಯಲ್ಲಿ ಆರಂಭಿಕ ಹಿನ್ನಡೆ ಅನು​ಭ​ವಿ​ಸಿ​ದರೂ, ಪುಟಿ​ದೆದ್ದ ಭಾರತ ಟ್ರೋಫಿ​ಯನ್ನು ಎತ್ತಿ​ಹಿ​ಡಿ​ದಿತ್ತು. ಟೆಸ್ಟ್‌ ಮಾದ​ರಿ​ಯಲ್ಲಿ ಭಾರತ ಎಲ್ಲ​ರಿ​ಗಿಂತಲೂ ಬಲಿಷ್ಠ. ಸದೃಢ ತಂಡವನ್ನು ಹೊಂದಿ​ರುವ ಭಾರತ ಸುಲಭ ಗೆಲು​ವಿನ ನಿರೀಕ್ಷೆಯಲ್ಲಿದೆ.

ಮೊದಲ ಟೆಸ್ಟ್ ಟಾಸ್ ಗೆದ್ದ ಬಾಂಗ್ಲಾ ಬ್ಯಾಟಿಂಗ್ ಆಯ್ಕೆ; ಟೀಂ ಇಂಡಿಯಾದಲ್ಲಿ ಒಂದು ಬದಲಾವಣೆ

ಭಾರ​ತದ ಅನು​ಭ​ವಿ​ಗಳು ಮುಂದೆ ಬಾಂಗ್ಲಾ ಹುಲಿ​ಗಳು ದುರ್ಬಲರಾಗಿ ಕಾಣು​ತ್ತಿವೆ. ದಕ್ಷಿಣ ಆಫ್ರಿಕಾ ವಿರುದ್ಧ ಸರ​ಣಿ​ಯಲ್ಲಿ ಅಬ್ಬ​ರಿ​ಸಿದ್ದ ಆರಂಭಿ​ಕ​ರಾದ ರೋಹಿತ್‌ ಶರ್ಮಾ, ಮಯಾಂಕ್‌ ಅಗರ್‌ವಾಲ್‌ ಮತ್ತೊಮ್ಮೆ ಮಿಂಚಲು ಸಿದ್ಧ​ರಾ​ಗಿ​ದ್ದಾರೆ. ಇಬ್ಬರೂ ಆಕ​ರ್ಷಕ ಲಯ​ದ​ಲ್ಲಿ​ದ್ದಾರೆ. ಮಧ್ಯಮ ಕ್ರಮಾಂಕ ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದೆ. ಚೇತೇ​ಶ್ವರ್‌ ಪೂಜಾರ, ವಿರಾಟ್‌ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆಯನ್ನು ರನ್‌ ಗಳಿ​ಸ​ದಂತೆ ನಿಯಂತ್ರಿ​ಸು​ವುದು ಬಾಂಗ್ಲಾ ಬೌಲರ್‌ಗಳ ಮುಂದಿ​ರುವ ಅತಿ​ದೊಡ್ಡ ಸವಾಲು. ಸದ್ಯ ವಿಶ್ವದ ಶ್ರೇಷ್ಠ ವಿಕೆಟ್‌ ಕೀಪರ್‌ ಎನಿ​ಸಿ​ಕೊ​ಳ್ಳು​ತ್ತಿ​ರುವ ವೃದ್ಧಿ​ಮಾನ್‌ ಸಾಹ, ಆಲ್ರೌಂಡರ್‌ಗಳಾದ ಆರ್‌.ಅ​ಶ್ವಿನ್‌ ಹಾಗೂ ರವೀಂದ್ರ ಜಡೇಜಾ ಕೆಳ ಕ್ರಮಾಂಕ​ದಲ್ಲಿ ಉಪ​ಯುಕ್ತ ರನ್‌ ಕೊಡುಗೆ ನೀಡ​ಬ​ಲ್ಲರು. ಜತೆಗೆ ಅಶ್ವಿನ್‌ ಹಾಗೂ ಜಡೇಜಾ, ತವ​ರಿನಲ್ಲಿ ಅತ್ಯಂತ ಪರಿ​ಣಾ​ಮ​ಕಾರಿ ಸ್ಪಿನ್ನರ್‌ಗಳೆ​ನಿ​ಸಿದ್ದು, ಕಳೆದ ಕೆಲ ವರ್ಷ​ಗ​ಳಲ್ಲಿ ರಾಶಿ ರಾಶಿ ವಿಕೆಟ್‌ ಕಿತ್ತಿ​ದ್ದಾರೆ. ಬಾಂಗ್ಲಾ ಬ್ಯಾಟ್ಸ್‌ಮನ್‌ಗಳಿಗೆ ಭಾರ​ತದ ಸ್ಪಿನ್‌ ಜೋಡಿ ಕಬ್ಬಿ​ಣದ ಕಡಲೆಯಾಗಿ ಪರಿ​ಣ​ಮಿ​ಸ​ಲಿದೆ.

ಭಾರತ VS ಬಾಂಗ್ಲಾದೇಶ ಮೊದಲ ಟೆಸ್ಟ್; ಇಲ್ಲಿದೆ ಸಂಭವನೀಯ ತಂಡ!

ಜಸ್‌ಪ್ರೀತ್‌ ಬುಮ್ರಾ ಗಾಯ​ದಿಂದ ಚೇತ​ರಿ​ಸಿ​ಕೊಳ್ಳದ ಕಾರ​ಣ ತಂಡ​ದಲ್ಲಿ ಸ್ಥಾನ ಪಡೆ​ದಿಲ್ಲ. ಆದರೆ ದಕ್ಷಿಣ ಆಫ್ರಿಕಾ ವಿರುದ್ಧ ಸರ​ಣಿ​ಯಲ್ಲೂ ಬುಮ್ರಾ ಅನು​ಪ​ಸ್ಥಿತಿ ತಂಡ​ವನ್ನು ದೊಡ್ಡ ಮಟ್ಟ​ದಲ್ಲಿ ಕಾಡಿ​ರ​ಲಿಲ್ಲ. ಇಶಾಂತ್‌ ಶರ್ಮಾ, ಮೊಹ​ಮದ್‌ ಶಮಿ ಹಾಗೂ ಉಮೇಶ್‌ ಯಾದವ್‌, ಎದು​ರಾಳಿ ಬ್ಯಾಟ್ಸ್‌ಮನ್‌ಗಳನ್ನು ಕನ​ಸಿ​ನಲ್ಲೂ ಕಾಡ​ಬಲ್ಲರು.

ಬಾಂಗ್ಲಾಕ್ಕೆ ಅನು​ಭ​ವದ ಕೊರ​ತೆ!

ಪ್ರವಾಸಿ ಬಾಂಗ್ಲಾ​ದೇಶ ಇಬ್ಬರು ಅನು​ಭವಿ ಹಾಗೂ ತಾರಾ ಆಟಗಾ​ರ​ರಾದ ತಮೀಮ್‌ ಇಕ್ಬಾಲ್‌ ಹಾಗೂ ಶಕೀಬ್‌ ಅಲ್‌ ಹಸನ್‌ ಅನು​ಪ​ಸ್ಥಿತಿ ಬಲ​ವಾಗಿ ಕಾಡ​ಲಿದೆ. ಹೊಸ​ದಾಗಿ ನಾಯ​ಕ​ನಾ​ಗಿ​ರುವ ಮೊಮಿ​ನುಲ್‌ ಹಕ್‌ಗೆ ಆಯ್ಕೆ ಗೊಂದಲ ಎದು​ರಾ​ಗ​ಲಿದೆ. ಮುಷ್ಫಿ​ಕುರ್‌ ರಹೀಂ, ಮಹ​ಮ​ದುಲ್ಲಾ ತಂಡದ ಬ್ಯಾಟಿಂಗ್‌ ಬಲ ಎನಿ​ಸಿದ್ದಾರೆ. ಆರಂಭಿ​ಕನ ಸ್ಥಾನಕ್ಕೆ ಯುವ ಆಟ​ಗಾರ ಸೈಫ್‌ ಹಸನ್‌ ಇಲ್ಲವೇ ಇಮ್ರುಲ್‌ ಕಯಾಸ್‌, ವೇಗಿ​ಗ​ಳಾದ ಮುಸ್ತಾ​ಫಿ​ಜುರ್‌ ರಹ​ಮಾನ್‌ ಇಲ್ಲವೇ ಇಬಾ​ದತ್‌ ಹುಸೇನ್‌ ನಡುವೆ ಸ್ಪರ್ಧೆ ಇದೆ. ಇತ್ತೀ​ಚೆ​ಗಷ್ಟೇ ಬಾಂಗ್ಲಾ​ದೇಶ, ಆಫ್ಘಾ​ನಿ​ಸ್ತಾನ ವಿರುದ್ಧ ತನ್ನ ತವ​ರಿ​ನಲ್ಲಿ ಟೆಸ್ಟ್‌ ಪಂದ್ಯ ಸೋತಿತ್ತು ಎನ್ನು​ವು​ದನ್ನು ಮರೆ​ಯು​ವಂತಿಲ್ಲ.

ಬಾಂಗ್ಲಾ​ದೇ​ಶಕ್ಕೆ ಹೋಲಿ​ಸಿ​ದರೆ ಭಾರತ ಎಲ್ಲಾ ಮೂರು ವಿಭಾಗಗಳಲ್ಲಿ ಸಮ​ತೋಲನ ಹೊಂದಿದ್ದು, ಮೂರು​ವರೆ ನಾಲ್ಕು ದಿನ​ಗ​ಳೊ​ಳಗೆ ಪಂದ್ಯ ಮುಕ್ತಾ​ಯ​ಗೊಂಡರೆ ಅಚ್ಚ​ರಿ​ಯಿಲ್ಲ.

ಭಯ ಹುಟ್ಟಿ​ಸುತ್ತೆ ಭಾರ​ತದ ದಾಖ​ಲೆ!

ಭಾರ​ತದ ದಾಖಲೆಯನ್ನು ನೋಡಿದರೆ ಎದು​ರಾ​ಳಿಯ ಎದೆಯಲ್ಲಿ ನಡುಕ ಹುಟ್ಟದೆ ಇರು​ವು​ದಿಲ್ಲ. 2013ರಿಂದ ತವ​ರಿ​ನಲ್ಲಿ ಭಾರ​ತ ತಂಡ 32 ಟೆಸ್ಟ್‌ ಪಂದ್ಯ​ಗ​ಳನ್ನು ಆಡಿದ್ದು 26ರಲ್ಲಿ ಗೆಲುವು ಸಾಧಿ​ಸಿದೆ. 5 ಡ್ರಾ ಹಾಗೂ ಕೇವಲ 1ರಲ್ಲಿ ಸೋಲು ಕಂಡಿದೆ. ಕಳೆದ 5 ಪಂದ್ಯ​ಗ​ಳಲ್ಲಿ ಭಾರತ ಜಯ​ಭೇರಿ ಬಾರಿ​ಸಿದೆ. ಅನು​ಭವ ಹಾಗೂ ಲಯ ಎರಡರಲ್ಲೂ ಭಾರ​ತೀ​ಯರು ಮುಂದಿ​ದ್ದಾರೆ. ಇತಿ​ಹಾಸವೂ ಭಾರ​ತದ ಪರವೇ ಇದೆ.