Asianet Suvarna News Asianet Suvarna News

ಇಂದಿನಿಂದ ಭಾರತ vs ಆಸ್ಟ್ರೇಲಿಯಾ ಟಿ20 ಕದನ..!

2024ರ ಟಿ20 ವಿಶ್ವಕಪ್‌ಗೆ ಇನ್ನು 7 ತಿಂಗಳಷ್ಟೇ ಬಾಕಿ ಇದ್ದು, ವಿಶ್ವಕಪ್‌ಗೂ ಮುನ್ನ ಎರಡೂ ತಂಡಗಳಿಗೆ ಕೇವಲ 11 ಪಂದ್ಯಗಳಷ್ಟೇ ಸಿಗಲಿದೆ. ಹೀಗಾಗಿ ವಿಶ್ವಕಪ್‌ ಸಿದ್ಧತೆಗೆ ಈ ಸರಣಿ ಬಳಕೆಯಾಗಲಿದೆ.

India vs Australia T20 Series begins today kvn
Author
First Published Nov 23, 2023, 9:02 AM IST

ವಿಶಾಖಪಟ್ಟಣಂ(ನ.23): ಅಂತಾರಾಷ್ಟ್ರೀಯ ಕ್ರಿಕೆಟ್‌ನ ವೇಳಾಪಟ್ಟಿ ಎಷ್ಟು ಗೊಂದಲಮಯವಾಗಿರಲಿದೆ ಎನ್ನುವುದಕ್ಕೆ ಈ ಸರಣಿಯೇ ಸಾಕ್ಷಿ. ಏಕದಿನ ವಿಶ್ವಕಪ್‌ ಮುಗಿದ ನಾಲ್ಕೇ ದಿನದಲ್ಲಿ ಫೈನಲ್‌ನಲ್ಲಿ ಎದುರಾಗಿದ್ದ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಟಿ20 ಸರಣಿ ಆರಂಭಗೊಳ್ಳುತ್ತಿದೆ. 5 ಪಂದ್ಯಗಳ ಸರಣಿ ಇದ್ದಾಗಿದ್ದು, ಗುರುವಾರ ಮೊದಲ ಪಂದ್ಯವು ಇಲ್ಲಿನ ಆಂಧ್ರ ಪ್ರದೇಶ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತ ಹಾಗೂ ಆಸ್ಟ್ರೇಲಿಯಾ ಈ ವರ್ಷ ಪದೇ ಪದೇ ಎದುರಾಗುತ್ತಲೇ ಇದ್ದರೂ, ಈ ಸರಣಿ ತನ್ನದೇ ರೀತಿಯಲ್ಲಿ ಮಹತ್ವವನ್ನು ಪಡೆದಿದೆ.

ಈ ಸರಣಿಯನ್ನು ಈಗೇಕೆ ನಡೆಸಲಾಗುತ್ತಿದೆ ಎಂದು ಹಲವರಿಗೆ ಅನಿಸಬಹುದು. ಆದರೆ 2024ರ ಟಿ20 ವಿಶ್ವಕಪ್‌ಗೆ ಇನ್ನು 7 ತಿಂಗಳಷ್ಟೇ ಬಾಕಿ ಇದ್ದು, ವಿಶ್ವಕಪ್‌ಗೂ ಮುನ್ನ ಎರಡೂ ತಂಡಗಳಿಗೆ ಕೇವಲ 11 ಪಂದ್ಯಗಳಷ್ಟೇ ಸಿಗಲಿದೆ. ಹೀಗಾಗಿ ವಿಶ್ವಕಪ್‌ ಸಿದ್ಧತೆಗೆ ಈ ಸರಣಿ ಬಳಕೆಯಾಗಲಿದೆ.

2022ರಲ್ಲಿ ತಾನೇ ಆತಿಥ್ಯ ವಹಿಸಿದ್ದ ಟಿ20 ವಿಶ್ವಕಪ್‌ ಮುಗಿದ ಒಂದು ವಾರದೊಳಗೆ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್‌ ವಿರುದ್ಧ ಏಕದಿನ ಸರಣಿಯನ್ನು ಆಡಿತ್ತು. ಆಗ ಆ ಸರಣಿಗೂ ಯಾವುದೇ ಅರ್ಥವಿಲ್ಲ ಎಂದೇ ವಿಶ್ಲೇಷಿಸಲಾಗಿತ್ತಾದರೂ, ಆಸ್ಟ್ರೇಲಿಯಾದ 2023ರ ಏಕದಿನ ವಿಶ್ವಕಪ್‌ ಗೆಲುವಿನಲ್ಲಿ ಆ ಸರಣಿಯ ಕೊಡುಗೆಯನ್ನು ಮರೆಯುವ ಹಾಗಿಲ್ಲ.

ಕನ್ನಡದಲ್ಲೇ ಮಾತಾಡಿದ ಕಪಿಲ್ ದೇವ್..! ವಿಡಿಯೋ ವೈರಲ್

ಅದೇ ಸರಣಿಯಲ್ಲಿ ಟ್ರ್ಯಾವಿಸ್‌ ಹೆಡ್‌ ಏಕದಿನ ತಂಡದಲ್ಲಿ ಆರಂಭಿಕ ಸ್ಥಾನವನ್ನು ಕಾಯಂಗೊಳಿಸಿಕೊಂಡಿದ್ದರು. ಇನ್ನು ಅದೇ ಸರಣಿಯಲ್ಲಿ ಪ್ಯಾಟ್‌ ಕಮಿನ್ಸ್‌ಗೆ ಮೊದಲ ಬಾರಿಗೆ ಏಕದಿನ ತಂಡ ಮುನ್ನಡೆಸುವ ಅವಕಾಶ ಸಿಕ್ಕಿತ್ತು. ಹೀಗಾಗಿ ಯಾವ ಪಂದ್ಯಗಳನ್ನೂ ಲಘುವಾಗಿ ಕಾಣಲು ಸಾಧ್ಯವಿಲ್ಲ. ಈ ಸರಣಿ ಭಾರತ ತಂಡಕ್ಕೆ ಕೆಲ ಹೊಸ ಆಯ್ಕೆಗಳನ್ನು ಹುಡುಕಿಕೊಡಬಹುದು.

ಹಿರಿಯರಿಗೆಲ್ಲಾ ವಿಶ್ರಾಂತಿ: ವಿಶ್ವಕಪ್‌ ತಂಡದಲ್ಲಿದ್ದ ಬಹುತೇಕ ಆಟಗಾರರಿಗೆ ಸಹಜವಾಗಿಯೇ ಈ ಸರಣಿಗೆ ವಿಶ್ರಾಂತಿ ನೀಡಲಾಗಿದೆ. ವಿಶ್ವಕಪ್‌ ತಂಡದಲ್ಲಿದ್ದ ಸೂರ್ಯಕುಮಾರ್‌ ಯಾದವ್‌ ಈ ಸರಣಿಯಲ್ಲಿ ತಂಡ ಮುನ್ನಡೆಸಲಿದ್ದು, ಕೇವಲ 2 ಪಂದ್ಯಗಳನ್ನಾಡಿದ್ದ ಇಶಾನ್‌ ಕಿಶನ್‌ ಹಾಗೂ ಆಡುವ ಅವಕಾಶ ಪಡೆಯದ ವೇಗಿ ಪ್ರಸಿದ್ಧ್‌ ಕೃಷ್ಣ ಈ ಸರಣಿಗೆ ಆಯ್ಕೆಯಾಗಿರುವ ತಂಡದಲ್ಲಿದ್ದಾರೆ. ಇನ್ನು ಮೊದಲ 3 ಪಂದ್ಯಗಳಿಂದ ಹೊರಗುಳಿಯಲಿರುವ ಶ್ರೇಯಸ್‌ ಅಯ್ಯರ್‌, ಕೊನೆಯ 2 ಪಂದ್ಯಗಳಿಗೆ ತಂಡ ಕೂಡಿಕೊಳ್ಳಲಿದ್ದಾರೆ. ಕೋಚ್‌ ರಾಹುಲ್‌ ದ್ರಾವಿಡ್‌ ಕೂಡ ವಿಶ್ರಾಂತಿ ಬಯಸಿದ್ದು, ವಿವಿಎಸ್‌ ಲಕ್ಷ್ಮಣ್‌ ಈ ಸರಣಿಯಲ್ಲಿ ತಂಡಕ್ಕೆ ಮಾರ್ಗದರ್ಶನ ಮಾಡಲಿದ್ದಾರೆ.

ಐಪಿಎಲ್‌ ಇತಿಹಾಸದ ಅತಿದೊಡ್ಡ 'ಕ್ಯಾಪ್ಟನ್‌' ಟ್ರೇಡಿಂಗ್‌, ಗುಜರಾತ್‌ಗೆ ರೋಹಿತ್‌, ಮುಂಬೈಗೆ ಹಾರ್ದಿಕ್‌ ಪಾಂಡ್ಯ?

ಕಿಶನ್‌ಗೆ ಸುವರ್ಣಾವಕಾಶ: ಮುಂದಿನ ವಿಶ್ವಕಪ್‌ಗೂ ಮುನ್ನ ವಿಕೆಟ್‌ ಕೀಪರ್‌ ಸ್ಥಾನವನ್ನು ಕಾಯಂಗೊಳಿಸಿಕೊಳ್ಳಲು ಇಶಾನ್‌ ಕಿಶನ್‌ಗೆ ಇದು ಸುವರ್ಣಾವಕಾಶ. ಈ ವರ್ಷದ ಮೊದಲ 8 ಟಿ20 ಪಂದ್ಯಗಳಲ್ಲಿ ಕಿಶನ್‌ಗೆ ಕಾಯಂ ಸ್ಥಾನ ಸಿಕ್ಕಿತ್ತು. ಆದರೆ ವೆಸ್ಟ್‌ಇಂಡೀಸ್‌ ಪ್ರವಾಸದಲ್ಲಿ ಸಂಜು ಸ್ಯಾಮ್ಸನ್‌ಗೆ ಸ್ಥಾನ ಬಿಟ್ಟುಕೊಟ್ಟಿದ್ದರು. ಸದ್ಯ ಸ್ಯಾಮ್ಸನ್‌ಗೆ ತಂಡದಲ್ಲಿ ಜಾಗವಿಲ್ಲ. ಹೀಗಾಗಿ ಕಿಶನ್‌ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಲು ಕಾಯುತ್ತಿದ್ದಾರೆ.

ಇನ್ನು ಯಶಸ್ವಿ ಜೈಸ್ವಾಲ್‌ ಹಾಗೂ ಋತುರಾಜ್‌ ಗಾಯಕ್ವಾಡ್‌ ಪೈಕಿ ಕಿಶನ್‌ ಜೊತೆ ಇನ್ನಿಂಗ್ಸ್‌ ಆರಂಭಿಸುವವರು ಯಾರು ಎನ್ನುವ ಕುತೂಹಲವೂ ಇದೆ. ಭಾರತದ ಸಂಭವನೀಯ ಆಟಗಾರರ ಪಟ್ಟಿಯನ್ನು ಊಹಿಸುವುದು ಕಷ್ಟ. ಈ ವರ್ಷ ಹಲವು ಬಾರಿ ತಂಡದ ಸಂಯೋಜನೆ ಬದಲಿಸಿರುವ ಭಾರತ ಯಾರನ್ನು ಯಾವ ಪಾತ್ರಕ್ಕೆ ಕಣಕ್ಕಿಳಿಸಲಿದೆ ಎನ್ನುವು ಕುತೂಹಲ ಅಭಿಮಾನಿಗಳಲ್ಲಿದೆ.

ಇನ್ನು ಆಸ್ಟ್ರೇಲಿಯಾ ತನ್ನ ವಿಶ್ವಕಪ್‌ ವಿಜೇತ ತಂಡದಲ್ಲಿದ್ದ 7 ಆಟಗಾರರನ್ನು ಈ ಸರಣಿಗೆ ಉಳಿಸಿಕೊಂಡಿದೆ. ಡೇವಿಡ್‌ ವಾರ್ನರ್‌ ಸರಣಿಯಿಂದ ಹಿಂದೆ ಸರಿದಿದ್ದು, ಸ್ಟೀವ್‌ ಸ್ಮಿತ್‌ ಆರಂಭಿಕನಾಗಿ ಆಡುವ ನಿರೀಕ್ಷೆ ಇದೆ. ವಿಶ್ವಕಪ್‌ನಲ್ಲಿ ಹೆಚ್ಚಿನ ಅವಕಾಶ ಪಡೆಯದ ಮಾರ್ಕಸ್‌ ಸ್ಟೋಯ್ನಿಸ್‌ ಹಾಗೂ ಶಾನ್ ಅಬ್ಬಾಟ್‌ ಈ ಸರಣಿಯಲ್ಲಿ ಆಡಲಿದ್ದಾರೆ.

ಒಟ್ಟು ಮುಖಾಮುಖಿ: 26

ಭಾರತ: 15

ಆಸ್ಟ್ರೇಲಿಯಾ: 10

ಫಲಿತಾಂಶವಿಲ್ಲ: 01

ಸಂಭವನೀಯ ಆಟಗಾರರ ಪಟ್ಟಿ

ಭಾರತ: ಕಿಶನ್‌, ಯಶಸ್ವಿ, ಸೂರ್ಯಕುಮಾರ್‌(ನಾಯಕ), ತಿಲಕ್‌, ಶಿವಂ ದುಬೆ, ರಿಂಕು ಸಿಂಗ್‌, ಅಕ್ಷರ್‌/ವಾಷಿಂಗ್ಟನ್‌, ಬಿಷ್ಣೋಯ್‌, ಅರ್ಶ್‌ದೀಪ್‌, ಪ್ರಸಿದ್ಧ್‌/ಆವೇಶ್‌, ಮುಕೇಶ್‌.

ಆಸ್ಟ್ರೇಲಿಯಾ: ಸ್ಮಿತ್‌, ಶಾರ್ಟ್‌, ಆ್ಯರೋನ್‌ ಹಾರ್ಡಿ, ಇಂಗ್ಲಿಸ್‌, ಸ್ಟೋಯ್ನಿಸ್‌, ಡೇವಿಡ್‌, ವೇಡ್‌(ನಾಯಕ), ಶಾನ್‌ ಅಬ್ಬಾಟ್‌, ಎಲ್ಲೀಸ್‌, ಬೆಹ್ರೆನ್‌ಡಾರ್ಫ್‌, ತನ್ವೀರ್‌ ಸಂಘ.

ಪಂದ್ಯ ಆರಂಭ: ಸಂಜೆ 7ಕ್ಕೆ
ನೇರ ಪ್ರಸಾರ: ಸ್ಪೋರ್ಟ್ಸ್‌ 18, ಜಿಯೋ ಸಿನಿಮಾ

2023ರಲ್ಲಿ ಭಾರತ-ಆಸೀಸ್ ನಡುವೆ 4ನೇ ಸರಣಿ!

ಈ ವರ್ಷ ಉಭಯ ದೇಶಗಳ ನಡುವೆ ಇದು 4ನೇ ದ್ವಿಪಕ್ಷೀಯ ಸರಣಿ. ಫೆಬ್ರವರಿ-ಮಾರ್ಚ್‌ನಲ್ಲಿ 4 ಪಂದ್ಯಗಳ ಟೆಸ್ಟ್‌ ಸರಣಿ ಆಡಿದ್ದ ಭಾರತ-ಆಸ್ಟ್ರೇಲಿಯಾ ಆ ನಂತರ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಲ್ಗೊಂಡಿದ್ದವು. ಜೂನ್‌ನಲ್ಲಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಎದುರಾಗಿದ್ದ ಈ ತಂಡಗಳು ಏಕದಿನ ವಿಶ್ವಕಪ್‌ಗೆ 2 ವಾರ ಬಾಕಿ ಇದ್ದಾಗ 3 ಪಂದ್ಯಗಳ ಏಕದಿನ ಸರಣಿಯನ್ನು ಆಡಿದ್ದವು. ವಿಶ್ವಕಪ್‌ನ ಆರಂಭಿಕ ಹಾಗೂ ಫೈನಲ್‌ ಪಂದ್ಯದಲ್ಲೂ ಮುಖಾಮುಖಿಯಾಗಿದ್ದವು.

ಸೂರ್ಯ 9ನೇ ನಾಯಕ!

2021ರಿಂದ ಈಚೆಗೆ ಭಾರತವನ್ನು ಟಿ20 ಮಾದರಿಯಲ್ಲಿ ಮುನ್ನಡೆಸಲಿರುವ 9ನೇ ನಾಯಕ ಸೂರ್ಯಕುಮಾರ್‌ ಯಾದವ್‌. ಈ ಅವಧಿಯಲ್ಲಿ ವಿರಾಟ್‌ ಕೊಹ್ಲಿ 10 ಪಂದ್ಯಗಳಲ್ಲಿ ತಂಡ ಮುನ್ನಡೆಸಿದ್ದು, ಧವನ್‌ 3, ರೋಹಿತ್‌ 32, ರಿಷಭ್‌ ಪಂತ್‌ 5, ಹಾರ್ದಿಕ್‌ 16, ರಾಹುಲ್‌ 1, ಬೂಮ್ರಾ 2 ಹಾಗೂ ಋತುರಾಜ್‌ ಗಾಯಕ್ವಾಡ್‌ 3 ಪಂದ್ಯಗಳಲ್ಲಿ ತಂಡದ ನಾಯಕತ್ವ ವಹಿಸಿದ್ದಾರೆ. ಒಟ್ಟಾರೆಯಾಗಿ ಟಿ20ಯಲ್ಲಿ ಭಾರತವನ್ನು ಮುನ್ನಡೆಸಲಿರುವ 13ನೇ ನಾಯಕ ಸೂರ್ಯಕುಮಾರ್‌.
 

Follow Us:
Download App:
  • android
  • ios