ಬ್ರಿಸ್ಬೇನ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಈಗಾಗಲೇ 2-1 ಸರಣಿ ಮುನ್ನಡೆ ಸಾಧಿಸಿರುವ ಭಾರತ, ತಿಲಕ್ ವರ್ಮಾ ಬದಲಿಗೆ ರಿಂಕು ಸಿಂಗ್‌ಗೆ ಅವಕಾಶ ನೀಡಿ ಕಣಕ್ಕಿಳಿದಿದೆ.

ಬ್ರಿಸ್ಬೇನ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಐದನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಮಿಚೆಲ್ ಮಾರ್ಷ್ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. 5 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಈಗಾಗಲೇ 2-1ರ ಮುನ್ನಡೆ ಸಾಧಿಸಿದ್ದು, ಇದೀಗ ಕೊನೆಯ ಪಂದ್ಯವನ್ನು ಗೆದ್ದು ಸರಣಿ ಕೈವಶ ಮಾಡಿಕೊಳ್ಳಲು ಎದುರು ನೋಡುತ್ತಿದೆ. ಇನ್ನೊಂದೆಡೆ ಆಸ್ಟ್ರೇಲಿಯಾ ತಂಡವು ಕೊನೆಯ ಪಂದ್ಯವನ್ನು ಗೆದ್ದು ಸರಣಿ ಸಮಬಲ ಸಾಧಿಸಲು ಎದುರು ನೋಡುತ್ತಿದೆ.

ಭಾರತ ತಂಡದಲ್ಲಿ ಒಂದು ಮಹತ್ವದ ಬದಲಾವಣೆ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಕೊನೆಯ ಟಿ20 ಪಂದ್ಯಕ್ಕೆ ಇಲ್ಲಿನ ಗಾಬಾ ಮೈದಾನ ಆತಿಥ್ಯ ವಹಿಸಿದೆ.ಇನ್ನು ಭಾರತ ತಂಡವು ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿದಿದೆ. ಈ ಸರಣಿಯಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್ ತಿಲಕ್ ವರ್ಮಾ ನೀರಸ ಪ್ರದರ್ಶನ ತೋರಿದ್ದರು. ಆಸ್ಟ್ರೇಲಿಯಾ ಎದುರಿನ ಸರಣಿಯ ಮೂರು ಇನ್ನಿಂಗ್ಸ್‌ಗಳಲ್ಲಿ ತಿಲಕ್ ಕೇವಲ 34 ರನ್ ಗಳಿಸಿದ್ದರು. ಹೀಗಾಗಿ ತಿಲಕ್ ವರ್ಮಾಗೆ ವಿಶ್ರಾಂತಿ ನೀಡಿ ರಿಂಕು ಸಿಂಗ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಲಾಗಿದೆ. ಇನ್ನು ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಇನ್ನೊಂದೆಡೆ ಮಿಚೆಲ್ ಮಾರ್ಷ್ ನೇತೃತ್ವದ ಆಸ್ಟ್ರೇಲಿಯಾ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಕಳೆದ ಪಂದ್ಯದಲ್ಲಿ ಸೋಲಿನ ಹೊರತಾಗಿಯೂ ಆಸ್ಟ್ರೇಲಿಯಾ ತಂಡವು ಕಳೆದ ಪಂದ್ಯದಲ್ಲಿ ಕಣಕ್ಕಿಳಿದ ತಂಡವೇ ಇಂದಿನ ಪಂದ್ಯದಲ್ಲೂ ಕಣಕ್ಕಿಳಿದಿದೆ.

ಉಭಯ ತಂಡಗಳು ಹೀಗಿವೆ ನೋಡಿ:

ಭಾರತ: ಅಭಿಷೇಕ್ ಶರ್ಮಾ, ಶುಭ್‌ಮನ್ ಗಿಲ್, ಸೂರ್ಯಕುಮಾರ್ ಯಾದವ್(ನಾಯಕ), ರಿಂಕು ಸಿಂಗ್, ಜಿತೇಶ್ ಶರ್ಮಾ(ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಿವಂ ದುಬೆ, ಅಕ್ಷರ್ ಪಟೇಲ್, ಅರ್ಶದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ.

ಆಸ್ಟ್ರೇಲಿಯಾ: ಮಿಚೆಲ್ ಮಾರ್ಷ್(ನಾಯಕ), ಮ್ಯಾಥ್ಯೂ ಶಾರ್ಟ್, ಜೋಶ್ ಇಂಗ್ಲಿಶ್(ವಿಕೆಟ್ ಕೀಪರ್), ಟಿಮ್ ಡೇವಿಡ್, ಜೋಶ್ ಫಿಲಿಫ್ಪಿ, ಮಾರ್ಕಸ್ ಸ್ಟೋಯ್ನಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಬೆನ್ ಡೌರಿಸ್, ಕ್ಸೇವಿಯರ್ ಬಾರ್ಟೆಲ್ಟ್, ನೇಥನ್ ಎಲ್ಲಿಸ್, ಆಡಂ ಜಂಪಾ.