ಆಸ್ಟ್ರೇಲಿಯಾ ವಿರುದ್ಧದ ಐದನೇ ಹಾಗೂ ಅಂತಿಮ ಟಿ20 ಪಂದ್ಯಕ್ಕೆ ಭಾರತ ಸಜ್ಜಾಗಿದೆ. ಈಗಾಗಲೇ 2-1 ಮುನ್ನಡೆ ಸಾಧಿಸಿರುವ ಭಾರತ, ಸರಣಿ ಗೆಲ್ಲುವ ತವಕದಲ್ಲಿದ್ದು, ಕಳಪೆ ಫಾರ್ಮ್‌ನಲ್ಲಿರುವ ತಿಲಕ್ ವರ್ಮಾ ಬದಲಿಗೆ ಸಂಜು ಸ್ಯಾಮ್ಸನ್‌ಗೆ ಅವಕಾಶ ಸಿಗುವುದೇ ಎಂಬ ಕುತೂಹಲ ಎಲ್ಲರಲ್ಲಿದೆ.

ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ಧ ಇಂದು ನಡೆಯಲಿರುವ ಐದನೇ ಟಿ20 ಪಂದ್ಯಕ್ಕೆ ಭಾರತ ಸಜ್ಜಾಗಿದೆ. ಐದು ಪಂದ್ಯಗಳ ಸರಣಿಯಲ್ಲಿ ಭಾರತ ಈಗಾಗಲೇ 2-1 ಅಂತರದಿಂದ ಮುಂದಿದೆ. ಇಂದು ಗೆದ್ದರೆ ಭಾರತ ಸರಣಿ ವಶಪಡಿಸಿಕೊಳ್ಳಲಿದೆ. ಮತ್ತೊಂದೆಡೆ, ಆಸ್ಟ್ರೇಲಿಯಾ ಸರಣಿಯನ್ನು ಸಮಬಲಗೊಳಿಸಲು ಪ್ರಯತ್ನಿಸುತ್ತಿದೆ. ಮೊದಲ ಟಿ20 ಮಳೆಯಿಂದಾಗಿ ರದ್ದಾಗಿತ್ತು. ಈಗ ಎಲ್ಲರ ಕಣ್ಣು ಪ್ಲೇಯಿಂಗ್ ಇಲೆವೆನ್ ಮೇಲಿದೆ. ಕೇವಲ ಒಂದು ಪಂದ್ಯ ಬಾಕಿ ಇರುವಾಗ ಸಂಜುಗೆ ಅವಕಾಶ ನೀಡುತ್ತಾರೋ ಅಥವಾ ಗೆದ್ದ ತಂಡವನ್ನೇ ಉಳಿಸಿಕೊಳ್ಳುತ್ತಾರೋ ಕಾದು ನೋಡಬೇಕು. ಮೂರು ಮತ್ತು ನಾಲ್ಕನೇ ಟಿ20ಯಲ್ಲಿ ಸಂಜು ಆಡಿರಲಿಲ್ಲ. ಅವರ ಬದಲು ಜಿತೇಶ್ ಶರ್ಮಾ ವಿಕೆಟ್ ಕೀಪರ್ ಆಗಿದ್ದರು.

ಸಂಜು ಸ್ಯಾಮ್ಸನ್‌ಗೆ ಸಿಗುತ್ತಾ ಲಾಸ್ಟ್ ಚಾನ್ಸ್?

ಗೆದ್ದ ತಂಡವನ್ನೇ ಉಳಿಸಿಕೊಳ್ಳುವ ಕಾರಣ ಸಂಜುಗೆ ಮತ್ತೊಮ್ಮೆ ಅವಕಾಶ ಕೈ ತಪ್ಪಬಹುದು. ಮೂರನೇ ಪಂದ್ಯದ ನಂತರ ಸರಿಯಾದ ಕಾಂಬಿನೇಷನ್‌ನೊಂದಿಗೆ ಕಣಕ್ಕಿಳಿದಿದ್ದೇವೆ ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದರು. ಹಾಗಾಗಿ ದೊಡ್ಡ ಬದಲಾವಣೆ ನಿರೀಕ್ಷಿಸುವಂತಿಲ್ಲ. ಆಗಬಹುದಾದ ಒಂದೇ ಬದಲಾವಣೆ ಎಂದರೆ ಕಳಪೆ ಫಾರ್ಮ್‌ನಲ್ಲಿರುವ ತಿಲಕ್ ವರ್ಮಾ ಅವರನ್ನು ಕೈಬಿಟ್ಟು ಸಂಜುಗೆ ಅವಕಾಶ ನೀಡುವುದು. ಈ ಟಿ20 ಸರಣಿಯಲ್ಲಿ ತಿಲಕ್ ಫಾರ್ಮ್‌ಗೆ ಮರಳಲು ಸಾಧ್ಯವಾಗಿಲ್ಲ. ಮೂರು ಇನ್ನಿಂಗ್ಸ್‌ಗಳಲ್ಲಿ ತಿಲಕ್ ಕೇವಲ 34 ರನ್ ಗಳಿಸಿದ್ದಾರೆ. ಸಂಜು ಬಂದರೂ ಜಿತೇಶ್ ಶರ್ಮಾ ವಿಕೆಟ್ ಕೀಪರ್ ಆಗಿ ಮುಂದುವರಿಯುವ ಸಾಧ್ಯತೆ ಇದೆ.

ಅಭಿಷೇಕ್ ಶರ್ಮಾ ಮತ್ತು ಶುಭಮನ್ ಗಿಲ್ ಆರಂಭಿಕರಾಗಿ ಮುಂದುವರಿಯಲಿದ್ದಾರೆ. ಸೂರ್ಯಕುಮಾರ್ ಯಾದವ್ ಮೂರನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ತಿಲಕ್ ಅಥವಾ ಸಂಜು ಆಡಬಹುದು. ನಂತರ ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್ ಮತ್ತು ಜಿತೇಶ್ ಶರ್ಮಾ ಕ್ರೀಸ್‌ಗೆ ಬರಲಿದ್ದಾರೆ. ಶಿವಂ ದುಬೆ ಆಲ್‌ರೌಂಡರ್ ಆಗಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲಿದ್ದಾರೆ. ಜಸ್ಪ್ರೀತ್ ಬುಮ್ರಾ ಮತ್ತು ಅರ್ಷದೀಪ್ ಸಿಂಗ್ ವೇಗದ ಬೌಲರ್‌ಗಳಾಗಿ ತಂಡದಲ್ಲಿರುತ್ತಾರೆ. ವಾಷಿಂಗ್ಟನ್ ಸುಂದರ್ ಹಾಗೂ ಅಕ್ಷರ್ ಪಟೇಲ್ ಸ್ಪಿನ್ನರ್ ಆಗಿರುತ್ತಾರೆ.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಐದನೇ ಹಾಗೂ ಕೊನೆಯ ಟಿ20 ಪಂದ್ಯವು ಭಾರತೀಯ ಕಾಲಮಾನ ಮಧ್ಯಾಹ್ನ 1.45ಕ್ಕೆ ಆರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ಸ್ ಹಾಗೂ ಜಿಯೋ ಹಾಟ್‌ಸ್ಟಾರ್‌ನಲ್ಲಿ ನಡೆಯಲಿದೆ.

ಐದನೇ ಟಿ20 ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ:

ಶುಭಮನ್ ಗಿಲ್, ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ / ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಜಿತೇಶ್ ಶರ್ಮಾ, ಶಿವಂ ದುಬೆ, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ.