ಏಕದಿನ ಸರಣಿ ಸೋಲಿನ ಬಳಿಕ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧದ 2ನೇ ಟಿ20 ಪಂದ್ಯಕ್ಕೆ ಸಜ್ಜಾಗಿದೆ. ಮೆಲ್ಬರ್ನ್‌ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ, ಮೊದಲ ಪಂದ್ಯದಲ್ಲಿ ಲಯ ಕಂಡುಕೊಂಡ ನಾಯಕ ಸೂರ್ಯಕುಮಾರ್ ಯಾದವ್ ಮೇಲೆ ನಿರೀಕ್ಷೆ ಹೆಚ್ಚಿದ್ದು, ತಂಡವು ಸರಣಿ ಗೆಲ್ಲುವ ಗುರಿ ಹೊಂದಿದೆ.

ಮೆಲ್ಬರ್ನ್: ಏಕದಿನ ಸರಣಿ ಕಳೆದುಕೊಂಡರೂ 5 ಪಂದ್ಯಗಳ ಟಿ20 ಸರಣಿಯನ್ನು ಕೈವಶಪಡಿಸಿಕೊಳ್ಳುವುದರ ಮೇಲೆ ಗಮನ ಇಟ್ಟಿರುವ ಭಾರತ ತಂಡ, ಶುಕ್ರ ವಾರ ಆಸ್ಟ್ರೇಲಿಯಾ ವಿರುದ್ಧ 2ನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಪಂದ್ಯಕ್ಕೆ ವಿಶ್ವದ 2ನೇ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ಮೆಲ್ಬರ್ನ್ ಆತಿಥ್ಯ ವಹಿಸಲಿದೆ.

ಮೊದಲ ಪಂದ್ಯ ಮಳೆಯಿಂದ ರದ್ದು

ಉಭಯ ತಂಡಗಳ ನಡುವೆ ಕ್ಯಾನ್‌ಬೆರಾದಲ್ಲಿ ನಡೆಯಬೇಕಿದ್ದ ಮೊದಲ ಟಿ20 ಪಂದ್ಯ ಮಳೆಗೆ ರದ್ದುಗೊಂಡಿತ್ತು. ಭಾರತ 9.4 ಓವರ್‌ಗಳಲ್ಲಿ 1 ವಿಕೆಟ್ ಗೆ 97 ರನ್ ಗಳಿಸಿದ್ದಾಗ ಪಂದ್ಯಕ್ಕೆ ಮತ್ತೆ ಮಳೆ ಅಡ್ಡಿಯಾಯಿತು. ಭಾರತೀಯ ಕಾಲಮಾನ ಮಧ್ಯಾಹ್ನ 3.20ಕ್ಕೆ ಆರಂಭಗೊಂಡ ಮಳೆ 1 ಗಂಟೆಗಳ ಕಾಲ ಸುರಿಯಿತು. ಆ ಬಳಿಕ ಪಂದ್ಯ ನಡೆಸಲು ಸಾಧ್ಯವಾಗದ ಕಾರಣ ಸಂಜೆ 4.30ರ ವೇಳೆಗೆ ಮಳೆಗೆ ಪಂದ್ಯ ರದ್ದುಗೊಳಿಸಲಾಯಿತು. ಗಿಲ್ 20 ಎಸೆತಗಳಲ್ಲಿ ಔಟಾಗದೆ 37, ಸೂರ್ಯಕುಮಾರ್24 ಎಸೆತಕ್ಕೆ ಔಟಾಗದೆ 39 ರನ್ ಸಿಡಿಸಿದರು.

ಫಾರ್ಮ್‌ಗೆ ಮರಳಿದ ಕ್ಯಾಪ್ಟನ್ ಸೂರ್ಯ

ಆದರೆ ಭಾರತೀಯ ಪಾಳಯದಲ್ಲಿ ನೆಮ್ಮದಿಗೆ ಕಾರಣವಾಗಿದ್ದು ನಾಯಕ ಸೂರ್ಯಕುಮಾರ್. ತೀರಾ ಕಳಪೆ ಪ್ರದರ್ಶನ ನೀಡುತ್ತಿದ್ದ ಸೂರ್ಯಕುಮಾರ್ ಮೊದಲ ಟಿ20 ಪಂದ್ಯದಲ್ಲಿ ಲಯಕ್ಕೆ ಮರಳಿ, ಅಬ್ಬರದ ಆಟವಾಡಿದ್ದರು. ಮೊದಲ ಪಂದ್ಯದಲ್ಲಿ ಭಾರತಕ್ಕೆ ಬೌಲಿಂಗ್‌ಗೆ ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ಈ ಪಂದ್ಯದಲ್ಲಿ ತಂಡದ ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಕಂಡುಬರುವ ಸಾಧ್ಯತೆ ಕಡಿಮೆ.

ವೇಗಿ ಜಸ್ಪ್ರೀತ್ ಬುಮ್ರಾ ಜೊತೆ ಹರ್ಷಿತ್ ರಾಣಾ ವೇಗದ ಬೌಲಿಂಗ್ ಪಡೆಗೆ ನೆರವಾಗಲಿದ್ದು, ಸ್ಪಿನ್ನರ್‌ಗಳಾದ ವರುಣ್ ಚಕ್ರವರ್ತಿ, ಕುಲ್ದೀಪ್ ಯಾದವ್ ಹಾಗೂ ಅಕ್ಷರ್ ಪಟೇಲ್, ಆಸ್ಟ್ರೇಲಿಯಾದ ಬ್ಯಾಟರ್‌ಗಳನ್ನು ಕಟ್ಟಿಹಾಕುವ ವಿಶ್ವಾಸದಲ್ಲಿದ್ದಾರೆ.

ಉಭಯ ತಂಡಗಳ ಸಂಭಾವ್ಯ ಆಟಗಾರರ ಪಟ್ಟಿ ಹೀಗಿದೆ:

ಭಾರತ: ಅಭಿಷೇಕ್ ಶರ್ಮಾ, ಶುಭ್‌ಮನ್ ಗಿಲ್, ಸೂರ್ಯಕುಮಾರ್ ಯಾದವ್(ನಾಯಕ), ತಿಲಕ್ ವರ್ಮಾ, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಶಿವಂ ದುಬೆ, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ.

ಆಸ್ಟ್ರೇಲಿಯಾ: ಟ್ರ್ಯಾವಿಸ್ ಹೆಡ್, ಮಿಚೆಲ್ ಮಾರ್ಷ್(ನಾಯಕ), ಜೋಶ್ ಇಂಗ್ಲಿಶ್(ವಿಕೆಟ್ ಕೀಪರ್), ಮಾರ್ಕಸ್ ಸ್ಟೋನಿಸ್, ಟಿಮ್ ಡೇವಿಡ್, ಮಿಚೆಲ್ ಓವನ್, ಜೋಶ್ ಫಿಲಿಫ್ಪಿ, ನೇಥನ್ ಎಲ್ಲೀಸ್, ಕ್ಸೇವಿಯರ್ ಬಾರ್ಟೆಲ್ಟ್, ಮ್ಯಾಥ್ಯೂ ಕುನ್ಹೇಮನ್, ಜೋಶ್ ಹೇಜಲ್‌ವುಡ್.

ಪಂದ್ಯ ಆರಂಭ: ಮಧ್ಯಾಹ್ನ 1.45ಕ್ಕೆ

ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್