ಇಂಜುರಿ ಬಳಿಕ ಮರಳಿದ ಶ್ರೇಯಸ್ ಅಯ್ಯರ್‌ನ್ನು ತಂಡದಿಂದಲೇ ಕಿಕೌಟ್‌ಗೆ ಯತ್ನಿಸಿದ ನಾಯಿ, ಚೇತರಿಸಿಕೊಂಡು ತಂಡಕ್ಕೆ ಕಮ್ ಬ್ಯಾಕ್ ಮಾಡಿರುವ ಶ್ರೇಯಸ್‌ಗೆ ನಾಯಿಯೊಂದು ತಂಡದಿಂದಲೇ ಕಿಕೌಟ್ ಮಾಡಲು ಪ್ರಯತ್ನಿಸಿದ ಘಟನೆ ನಡೆದಿದೆ.
ವಡೋದರ (ಜ.10) ಟೀಂ ಇಂಡಿಯಾ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಗಂಭೀರ ಗಾಯದಿಂದ ಚೇತರಿಸಿಕೊಂಡು ಈಗಷ್ಟೇ ಕ್ರಿಕೆಟ್‌ಗೆ ಮರಳಿದ್ದಾರೆ. ನ್ಯೂಜಿಲೆಂಡ್ ವಿರುದ್ದದ ಏಕದಿನ ಸರಣಿಗೆ ಆಯ್ಕೆಯಾಗಿದ್ದಾರೆ. ಫಿಟ್ನೆಸ್ ಸಾಬೀತುಪಡಿಸಿ ತಂಡ ಸೇರಿಕೊಳ್ಳಬೇಕಿದೆ. ಸುದೀರ್ಘ ದಿನಗಳಿಂದ ಶ್ರೇಯಸ್ ಅಯ್ಯರ್ ಆಸ್ಪತ್ರೆ ಹಾಗೂ ವಿಶ್ರಾಂತಿ ಮೂಲಕ ಚೇತರಿಸಿಕೊಂಡಿದ್ದಾರೆ.ಇದರ ನಡುವೆ ಅಭಿಮಾನಿಯೊಬ್ಬರ ನಾಯಿ ಶ್ರೇಯಸ್ ಅಯ್ಯರ್‌ಗೆ ತಂಡದಿಂದ ಗೇಟ್ ಪಾಸ್ ನೀಡಲು ಪ್ರಯತ್ನಿಸಿದ ಘಟನೆ ವಡೋದರ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ವಿಮಾನ ನಿಲ್ದಾಣದಲ್ಲಿ ಆಘಾತಗೊಂಡ ಅಯ್ಯರ್
ವಡೋದರ ವಿಮಾನ ನಿಲ್ದಾಣಕ್ಕೆ ಬಂದಿಳಿದ ಶ್ರೇಯಸ್ ಅಯ್ಯರ್ ನಿಲ್ದಾಣದಿಂದ ಹೊರಗೆ ಬರುತ್ತಿದ್ದಂತೆ ಅಭಿಮಾನಿಗಳು ಸೆಲ್ಫಿ, ಆಟೋಗ್ರಾಫ್‌ಗೆ ಮುಗಿ ಬಿದ್ದಿದ್ದಾರೆ. ಸಹಿ ನೀಡಿ ಮುಂದೆ ಸಾಗುತ್ತಿದ್ದಂತೆ ಮಹಿಳಾ ಅಭಿಮಾನಿಯೊಬ್ಬರು ತಮ್ಮ ಸಾಕು ನಾಯಿಯೊಂದಿಗೆ ಆಗಮಿಸಿದ್ದರು. ಶ್ರೇಯಸ್ ಅಯ್ಯರ್ ಮಾತನಾಡಿಸಲು ಕಾಯುತ್ತಿದ್ದರು. ನಾಯಿ ನೋಡಿ ಶ್ರೇಯಸ್ ಅಯ್ಯರ್ ಮುದ್ದು ಮಾಡಲು ಮುಂದಾಗಿದ್ದಾರೆ. ನಾಯಿಯ ತಲೆ ಸವರಲು ಹೋಗಿದ್ದಾರೆ. ಆದರೆ ನಾಯಿ ದಿಢೀರ್‌ನೇ ಶ್ರೇಯಸ್ ಅಯ್ಯರ್ ಮೇಲೆ ದಾಳಿ ಮಾಡಿದೆ. ಶ್ರೇಯಸ್ ಅಯ್ಯರ್ ಬಲೈಗೆ ಕಚ್ಚಲು ಮುಂದಾಗಿದೆ. ಆದರೆ ತಕ್ಷಣವೇ ಕೈಯನ್ನು ಹಿಂದಕ್ಕೆ ಎಳೆದುಕೊಂಡಿದ್ದಾರೆ. ಇದರಿಂದ ಶ್ರೇಯಸ್ ಅಯ್ಯರ್ ಕೈಗೆ ಹೆಚ್ಚಿನ ಗಾಯವಾಗಿಲ್ಲ. ಶ್ರೇಯಸ್ ಅಯ್ಯರ್ ಕೈ ನಾಯಿ ಬಾಯಿ ಒಳಗೆ ಹೋಗಿತ್ತು. ಆದರೆ ತಕ್ಷಣವೇ ಹಿಂದಕ್ಕೆ ತೆಗೆದ ಕಾರಣ ಅಪಾಯದಿಂದ ಪಾರಾಗಿದ್ದಾರೆ.
ನಿಟ್ಟುಸಿರು ಬಿಟ್ಟ ಅಯ್ಯರ್
ಶ್ರೇಯಸ್ ಅಯ್ಯರ್ ಈಗಾಗಲೇ ಇಂಜುರಿ ಕಾರಣದಿಂದ ತಂಡದಿಂದ ದೂರ ಉಳಿದಿದ್ದರು. ಇದೀಗ ನಾಯಿ ಕೂಡ ಗಾಯ ಮಾಡಿ ಅಯ್ಯರ್ ಕ್ರಿಕೆಟ್ ಕರಿಯರ್ ಬಹುತೇಕ ಮುಗಿಸಲು ಪ್ಲಾನ್ ಮಾಡಿತ್ತು. ಅದೃಷ್ಠವಶಾತ್ ಅಯ್ಯರ್ ಎಚ್ಚೆತ್ತುಕೊಂಡ ಕಾರಣ ಗಾಯದಿಂದ ಪಾರಾಗಿದ್ದಾರೆ. ನಾಯಿಯಿಂದ ಕೈ ಬಿಡಿಸಿಕೊಂಡ ಶ್ರೇಯಸ್ ಅಯ್ಯರ್ ಒಂದು ಬಾರಿ ನಿಟ್ಟುಸಿರು ಬಿಟ್ಟಿದ್ದಾರೆ. ಬಳಿಕ ವಿಮಾನ ನಿಲ್ದಾಣದಂದ ಮುಂದೆ ಸಾಗಿದ್ದಾರೆ.
ವಿಜಯ್ ಹಜಾರೆ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಶ್ರೇಯಸ್ ಅಯ್ಯರ್, ನ್ಯೂಜಿಲೆಂಡ್ ವಿರುದ್ದದ ಮೂರು ಪಂದ್ಯದಗಳ ಏಕದಿನ ಸರಣಿಗೆ ಆಯ್ಕೆಯಾಗಿದ್ದಾರೆ. ಜನವರಿ 11ರಿಂದ ಸರಣಿ ಆರಂಭಗೊಳ್ಳುತ್ತಿದೆ.ವಡೋದರದಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದೆ. ಈ ಸರಣಿಗಾಗಿ ಟೀಂ ಇಂಡಿಯಾ ಸೇರಿಕೊಳ್ಳಲು ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಈ ನಾಯಿ ಘಟನೆ ನಡೆದಿದೆ.
ಈ ವಿಡಿಯೋಗ ಹಲವರು ಕಮೆಂಟ್ ಮಾಡಿದ್ದಾರೆ. ನಾಯಿ ಕೂಡ ಶ್ರೇಯಸ್ ಅಯ್ಯರ್ ಫಿಟ್ನೆಸ್ ಟೆಸ್ಟ್ ಮಾಡಲು ಯತ್ನಿಸಿದೆ ಎಂದಿದ್ದಾರೆ. ದೇಹದಲ್ಲಿ ಬಹುತೇಕ ಕಡೆ ಇಂಜುರಿ ಮಾಡಿಕೊಂಡಿರುವ ಶ್ರೇಯಸ್ ಅಯ್ಯರ್‌ಗೆ ನಾಯಿ ಕಡಿತ ಒಂದು ಬಾಕಿ ಇತ್ತು ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಇಂಜುರಿ ಕಾರಣದಿಂದ ಆಸ್ಟ್ರೇಲಿಯಾ ಪ್ರವಾಸದಿಂದಲೂ ಶ್ರೇಯಸ್ ಅಯ್ಯರ್ ದೂರ ಉಳಿಯಬೇಕಾಯಿತು. ಗಂಭೀರ ಗಾಯದಿಂದ ಬಳಲಿದ ಶ್ರೇಯಸ್ ಅಯ್ಯರ್ ಸುದೀರ್ಘ ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದಾರೆ. ಇದೀಗ ನ್ಯೂಜಿಲೆಂಡ್ ವಿರುದ್ದದ ಸರಣಿಯಲ್ಲಿ ಉತ್ತಮ ಪ್ರದರ್ಶನದ ಮೂಕ ಟೀಂ ಇಂಡಿಯಾದಲ್ಲಿ ಸ್ಥಾನ ಖಚಿತಪಡಿಸಿಕೊಳ್ಳುವ ತವಕದಲ್ಲಿದ್ದಾರೆ.


