ಐಸಿಸಿ ಮಹಿಳಾ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಆಟಗಾರ್ತಿಯರು ಕಪ್ಪುಪಟ್ಟಿ ಧರಿಸಿ ಕಣಕ್ಕಿಳಿದಿದ್ದಾರೆ. ನೆಟ್ ಅಭ್ಯಾಸದ ವೇಳೆ ಚೆಂಡು ತಗುಲಿ ಮೃತಪಟ್ಟ 17 ವರ್ಷದ ಆಸ್ಟ್ರೇಲಿಯಾದ ಯುವ ಕ್ರಿಕೆಟಿಗ ಬೆನ್ ಆಸ್ಟಿನ್‌ಗೆ ಸಂತಾಪ ಸೂಚಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.
ನವಿ ಮುಂಬೈ: ಬಹುನಿರೀಕ್ಷಿತ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಸೆಮಿಫೈನಲ್ ಭರ್ಜರಿಯಾಗಿ ಸಾಗುತ್ತಿದ್ದು, ಭಾರತ ಎದುರು ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಆರಂಭಿಸಿದ್ದು ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿದೆ. ಈ ಪಂದ್ಯ ಆರಂಭದಲ್ಲೇ ಉಭಯ ತಂಡಗಳ ಆಟಗಾರ್ತಿಯರು ಬಲಗೈ ತೋಳಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಕಣಕ್ಕಿಳಿದಿದ್ದಾರೆ. ಇದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ. ಇದಕ್ಕೆ ಕಾರಣವಾಗಿದ್ದು 17 ವರ್ಷದ ಯುವ ಕ್ರಿಕೆಟಿಗನ ಸಾವು.
ಅಭ್ಯಾಸದ ವೇಳೆ 17 ವರ್ಷದ ಯುವ ಕ್ರಿಕೆಟಿಗ ಸಾವು
ಇಂದು ಬೆಳಗ್ಗೆ ಆಸ್ಟ್ರೇಲಿಯಾದ 17 ವರ್ಷದ ಯುವ ಕ್ರಿಕೆಟಿಗ ಬೆನ್ ಆಸ್ಟಿನ್, ನೆಟ್ ಸೆಷನ್‌ನಲ್ಲಿ ಅಭ್ಯಾಸ ನಡೆಸುವ ವೇಳೆ ಚೆಂಡು ಅವರ ಕುತ್ತಿಗೆಗೆ ಬಡಿದ ಪರಿಣಾಮ ಕೊನೆಯುಸಿರೆಳೆದಿದ್ದಾರೆ. ಮೆಲ್ಬರ್ನ್‌ನ ಫರ್ನೇಟ್ರೀ ಗಲ್ಲಿ ಕ್ರಿಕೆಟ್ ಕ್ಲಬ್‌ನ ನೆಟ್ ಸೆಷನ್ ವೇಳೆ ಚೆಂಡು ಬಲವಾಗಿ ಆಸ್ಟಿನ್ ಅವರ ಕುತ್ತಿಗೆಗೆ ಅಪ್ಪಳಿಸಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಪರಿಸ್ಥಿತಿ ಗಂಭೀರವಾಗಿದ್ದರಿಂದ, ಅವರನ್ನು ಕೆಲಕಾಲ ವೆಂಟಿಲೇಟರ್‌ನಲ್ಲಿ ಇಡಲಾಗಿತ್ತು. ಇದಾದ ಕೆಲ ಹೊತ್ತಿನಲ್ಲೆ ಆಸ್ಟಿನ್ ಕೊನೆಯುಸಿರೆಳೆದರು ಎಂದು ವೈದ್ಯರು ಖಚಿತಪಡಿಸಿದ್ದಾರೆ. ಮುಂಬರುವ ಟಿ20 ಸರಣಿಗೆ ಆಸ್ಟಿನ್ ಅಭ್ಯಾಸ ನಡೆಸುತ್ತಿದ್ದರು ಎಂದು ವರದಿಯಾಗಿದೆ.
ನೆಟ್ ಸೆಷನ್ ವೇಳೆ ಆಸ್ಟಿನ್ ಹೆಲ್ಮೆಟ್ ಧರಿಸಿದ್ದರು. ಹೀಗಿದ್ದೂ ಚೆಂಡು ಆಸ್ಟಿನ್ ಕತ್ತಿಗೆ ಅಪ್ಪಳಿಸಿದ್ದು ಆತನ ಸಾವು, ಆಸೀಸ್ ಕ್ರಿಕೆಟಿಗ ಫಿಲ್ ಹ್ಯೂಸ್ ಸಾವನ್ನು ನೆನಪಿಸುವಂತೆ ಮಾಡಿದೆ. ಈ ಹಿಂದೆ 2014ರ ನವೆಂಬರ್ 25ರಂದು ಆಸ್ಟ್ರೇಲಿಯಾದ ಕ್ರಿಕೆಟಿಗ ಫಿಲ್ ಹ್ಯೂಸ್, ದೇಶಿ ಕ್ರಿಕೆಟ್ ಟೂರ್ನಿಯಲ್ಲಿ ಬ್ಯಾಟಿಂಗ್ ಮಾಡುವ ವೇಳೆ ವೇಗಿ ಶಾನ್ ಅಬಾಟ್ ಎಸೆದ ಚೆಂಡು ಅವರ ತಲೆಗೆ ಬಡಿದು ಕೋಮಾಕ್ಕೆ ಜಾರಿದ್ದರು. ಆನಂತರ ತುರ್ತು ಚಿಕಿತ್ಸೆಯ ಹೊರತಾಗಿಯೂ ಎರಡು ದಿನಗಳ ಬಳಿಕ ಕೊನೆಯುಸಿರೆಳೆದಿದ್ದರು.
ಇದೀಗ ಬೆನ್ ಆಸ್ಟಿನ್ ಅವರ ನಿಧನಕ್ಕೆ ಸಂತಾಪ ಸೂಚಕವಾಗಿ ಭಾರತ ಹಾಗೂ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರು ಕಪ್ಪು ಪಟ್ಟಿ ತೊಟ್ಟು ವಿಶ್ವಕಪ್ ಸೆಮಿಫೈನಲ್‌ನಲ್ಲಿ ಕಣಕ್ಕಿಳಿದಿದ್ದಾರೆ.
ಬೃಹತ್ ಮೊತ್ತದತ್ತ ಆಸೀಸ್ ದಾಪುಗಾಲು:
ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡವು ಸೆಮಿಫೈನಲ್‌ನಲ್ಲಿ ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿದೆ. ಆರಂಭದಲ್ಲಿ ನಾಯಕಿ ಅಲೀಸಾ ಹೀಲಿ ವಿಕೆಟ್ ಕಳೆದುಕೊಂಡ ಕಾಂಗರೂ ಪಡೆ, ಆ ಬಳಿಕ ದಿಟ್ಟ ಬ್ಯಾಟಿಂಗ್ ನಡೆಸುತ್ತಿದೆ. ಮೊದಲ 23 ಓವರ್ ಅಂತ್ಯದ ವೇಳೆಗೆ ಆಸ್ಟ್ರೇಲಿಯಾ ಒಂದು ವಿಕೆಟ್ ಕಳೆದುಕೊಂಡು 152 ರನ್ ಬಾರಿಸಿದ್ದು, ಬೃಹತ್ ಮೊತ್ತದತ್ತ ಮುನ್ನುಗ್ಗುತ್ತಿದೆ.
