ದಕ್ಷಿಣ ಆಫ್ರಿಕಾ ಎದುರಿನ ಸರಣಿ ಮುಗಿದ ಬೆನ್ನಲ್ಲೇ ಮತ್ತೆರಡು ಸರಣಿಗೆ ಟೀಂ ಇಂಡಿಯಾ ರೆಡಿ'ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಐರ್ಲೆಂಡ್ ಎದುರಿನ ಸೀಮಿತ ಓವರ್‌ಗಳ ಸರಣಿಗೆ ಭಾರತ ಸಜ್ಜುಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೆ ಸಿದ್ದತೆ ಆರಂಭಿಸಿದ ರೋಹಿತ್ ಪಡೆ
ನವದೆಹಲಿ(ಜೂ.21): 15ನೇ ಆವೃತ್ತಿ ಐಪಿಎಲ್ (IPL 2022) ಮುಕ್ತಾಯಗೊಂಡ ಕೂಡಲೇ ದಕ್ಷಿಣ ಆಫ್ರಿಕಾ ಟಿ20 ಸರಣಿ ಆಡಿದ ಟೀಂ ಇಂಡಿಯಾ (Team India) ಈಗ ಎರಡೆರಡು ಸರಣಿಯನ್ನು ಒಟ್ಟಿಗೇ ಆಡಲು ಸಜ್ಜಾಗಿದೆ. ಏಕಕಾಲಕ್ಕೆ ಟೆಸ್ಟ್ ಹಾಗೂ ಸೀಮಿತ ಓವರ್ ಸರಣಿಗಳನ್ನು ಎರಡು ಬೇರೆ ಬೇರೆ ದೇಶಗಳ ವಿರುದ್ಧ ಆಡಿಸುವ ನಿರ್ಧಾರ ಕೈಗೊಂಡಿರುವ ಬಿಸಿಸಿಐ, ಮೊದಲ ಪ್ರಯತ್ನದಲ್ಲೇ ಯಶ ಕಾಣಲು ಎದುರು ನೋಡುತ್ತಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಇಂಗ್ಲೆಂಡ್‌ನಲ್ಲಿ ಟೆಸ್ಟ್, ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಐರ್ಲೆಂಡ್ ವಿರುದ್ಧ ಟಿ20 ಪಂದ್ಯಗಳು ನಡೆಯಲಿವೆ.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ಶಮಿ ಸೇರಿದಂತೆ ಹಿರಿಯ ಆಟಗಾರರನ್ನು ಒಳಗೊಂಡಿರುವ ತಂಡ ಈಗಾಗಲೇ ಇಂಗ್ಲೆಂಡ್‌ಗೆ ತೆರಳಿದ್ದು, ಮರು ನಿಗದಿಯಾಗಿರುವ 5ನೇ ಟೆಸ್ಟ್ ಪಂದ್ಯವನ್ನು ಜುಲೈ 1ರಿಂದ ಆಡಲಿದೆ. ಕಳೆದ ವರ್ಷ ನಡೆದಿದ್ದ ಸರಣಿಯ 4 ಪಂದ್ಯಗಳಲ್ಲಿ ಭಾರತ ಹಾಗೂ ಇಂಗ್ಲೆಂಡ್ 2-2ರಿಂದ ಸಮಬಲ ಸಾಧಿಸಿತ್ತು. ಹೀಗಾಗಿ ಈ ಪಂದ್ಯ ಮಹತ್ವದ್ದೆನಿಸಿದೆ. ಭಾರತದ ಆಟಗಾರರು ಈಗಾಗಲೇ ಅಭ್ಯಾಸ ಆರಂಭಿಸಿದ್ದು, ಪಂದ್ಯಕ್ಕೂ ಮುನ್ನ ಜೂನ್ 24ಕ್ಕೆ ಲೀಸಸ್ಟರ್‌ಶೈರ್ ವಿರುದ್ಧ 4 ದಿನಗಳ ಅಭ್ಯಾಸ ಪಂದ್ಯ ಆಡಲಿದ್ದಾರೆ.
ಇಂಗ್ಲೆಂಡ್‌ಗೆ ತೆರಳಿದ ಪಂತ್, ಶ್ರೇಯಸ್
ದ.ಆಫ್ರಿಕಾ ಟಿ20 ಸರಣಿಯಲ್ಲಿ ತಂಡ ಮುನ್ನಡೆಸಿದ್ದ ರಿಷಬ್ ಪಂತ್, ಬ್ಯಾಟರ್ ಶ್ರೇಯಸ್ ಅಯ್ಯರ್ ಹಾಗೂ ಕೋಚ್ ರಾಹುಲ್ ದ್ರಾವಿಡ್ ಅವರು ಸೋಮವಾರ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಿದರು. ಅವರು ಶೀಘ್ರದಲ್ಲೇ ತಂಡದವನ್ನು ಕೂಡಿಕೊಂಡು, ಅಭ್ಯಾಸ ಆರಂಭಿಸಲಿದ್ದಾರೆ.
ಐರ್ಲೆಂಡ್ ಸರಣಿಗೂ ಮುನ್ನ ಆಟಗಾರರಿಗೆ 3 ದಿನ ವಿಶ್ರಾಂತಿ
ಬೆಂಗಳೂರು: ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿರುವ ಭಾರತೀಯ ಆಟಗಾರರಿಗೆ ಸರಣಿಗೂ ಮುನ್ನ 3 ದಿನಗಳ ಬಿಡುವು ನೀಡಲಾಗಿದ್ದು, ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ತೆರಳಿದ್ದಾರೆ. ದ.ಆಫ್ರಿಕಾ ವಿರುದ್ಧದ ಟಿ20 ಸರಣಿ ಭಾನುವಾರ ಬೆಂಗಳೂರಿನಲ್ಲಿ ಮುಕ್ತಾಯಗೊಂಡಿದೆ. ತಂಡದ ಬಹುತೇಕ ಎಲ್ಲಾ ಆಟಗಾರರು ಐರ್ಲೆಂಡ್ ಸರಣಿಗೂ ಆಯ್ಕೆಯಾಗಿದ್ದು, ಬೆಂಗಳೂರಿನಿಂದಲೇ ನೇರವಾಗಿ ಐರ್ಲೆಂಡ್‌ಗೆ ತೆರಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಐಪಿಎಲ್ ಸೇರಿದಂತೆ ನಿರಂತರ ಕ್ರಿಕೆಟ್‌ನಿಂದ ದಣಿದಿರುವ ಆಟಗಾರರಿಗೆ 3 ದಿನಗಳ ವಿಶ್ರಾಂತಿ ನೀಡಲಾಗಿದೆ.
ಅಭ್ಯಾಸ ಪಂದ್ಯಕ್ಕಾಗಿ ಲೀಸೆಸ್ಟರ್‌ಗೆ ತಲುಪಿದ ಟೀಮ್ ಇಂಡಿಯಾ!
‘ಆಟಗಾರರಿಗೆ ಕುಟುಂಬದ ಜೊತೆ ಕಾಲ ಕಳೆಯಲು ಸಮಯ ಅಗತ್ಯವಿದೆ. ಹೀಗಾಗಿ ವಿಶ್ರಾಂತಿ ನೀಡಿದ್ದೇವೆ. ಜೂ.23ಕ್ಕೆ ಸರಣಿಗೆ ಕೋಚ್ ಆಗಿ ಆಯ್ಕೆಯಾಗಿರುವ ವಿವಿಎಸ್ ಲಕ್ಷ್ಮಣ್ ಹಾಗೂ ಆಟಗಾರರು ಮುಂಬೈನಲ್ಲಿ ಒಂದುಗೂಡಲಿದ್ದಾರೆ. ಬಳಿಕ ಅಲ್ಲಿಂದ ಡಬ್ಲಿನ್‌ಗೆ ತೆರಳುತ್ತಾರೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿದ್ದಾಗಿ ವರದಿಯಾಗಿದೆ. ಸರಣಿಯ 2 ಪಂದ್ಯಗಳು ಡಬ್ಲಿನ್‌ನಲ್ಲಿ ಜೂ.26, 28ಕ್ಕೆ ನಿಗದಿಯಾಗಿವೆ.
