ಶುಭ್‌ಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ 5 ಪಂದ್ಯಗಳ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್‌ಗೆ ಆಗಮಿಸಿದೆ. ಕೊಹ್ಲಿ ಮತ್ತು ಧೋನಿ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿ ಗೆಲ್ಲಲು ವಿಫಲರಾಗಿದ್ದಾರೆ. 2007ರಲ್ಲಿ ದ್ರಾವಿಡ್ ನೇತೃತ್ವದಲ್ಲಿ ಭಾರತ ಕೊನೆಯದಾಗಿ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿ ಗೆದ್ದಿತ್ತು.
ಲಂಡನ್: ಶುಭ್‌ಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ, 5 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲು ಇಂಗ್ಲೆಂಡ್‌ಗೆ ಬಂದಿಳಿದಿದೆ. ಇಂಗ್ಲೆಂಡ್ ಎದುರಿನ ಮಹತ್ವದ 5 ಪಂದ್ಯಗಳ ಟೆಸ್ಟ್ ಸರಣಿಯು ಜೂನ್ 20ರಿಂದ ಆರಂಭವಾಗಲಿದೆ. ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರಣಿಯನ್ನು ಗೆಲ್ಲಲು ವಿರಾಟ್ ಕೊಹ್ಲಿ, ಎಂ ಎಸ್ ಧೋನಿಗೂ ಸಾಧ್ಯವಾಗಿಲ್ಲ ಅಂದರೆ ನೀವೇ ಯೋಚನೆ ಮಾಡಿ ಶುಭ್‌ಮನ್ ಗಿಲ್ ಪಡೆಗೆ ಈ ಪ್ರವಾಸ ಎಷ್ಟು ಕಠಿಣವಾಗಿರಲಿದೆ ಎಂದು. ಇಂಗ್ಲೆಂಡ್ ಟೆಸ್ಟ್ ಸರಣಿಗೂ ಮುನ್ನ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಹೀಗಾಗಿ ಹಿರಿಯ ಅನುಭವಿ ಆಟಗಾರರ ಅನುಪಸ್ಥಿತಿಯಲ್ಲಿ ಗಿಲ್ ಪಡೆ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಎದುರಿಸಲು ಸಜ್ಜಾಗಿದೆ.
ಭಾರತ ಕ್ರಿಕೆಟ್ ತಂಡವು 1971ರಲ್ಲಿ ಇಂಗ್ಲೆಂಡ್ ನೆಲದಲ್ಲಿ ಮೊದಲ ಸಲ ಟೆಸ್ಟ್ ಸರಣಿಯನ್ನು ಜಯಿಸಿತ್ತು. ಆಗ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ 1-0 ಅಂತರದಲ್ಲಿ ಟೆಸ್ಟ್ ಸರಣಿಯನ್ನು ಕೈವಶ ಮಾಡಿಕೊಂಡಿತ್ತು. ಇದೀಗ ಟೀಂ ಇಂಡಿಯಾ, ಇಂಗ್ಲೆಂಡ್ ಪ್ರವಾಸದಲ್ಲಿ ಹೊಸ ಇತಿಹಾಸ ನಿರ್ಮಿಸಲು ಎದುರು ನೋಡುತ್ತಿದೆ. ಇದಕ್ಕೂ ಮೊದಲು ಭಾರತ ಕ್ರಿಕೆಟ್ ತಂಡವು 19 ಬಾರಿ ಟೆಸ್ಟ್ ಸರಣಿಯನ್ನಾಡಲು ಇಂಗ್ಲೆಂಡ್ ಪ್ರವಾಸ ಕೈಗೊಂಡಿದೆ. ಈ ಪೈಕಿ ಕೇವಲ ಮೂರು ಬಾರಿ ಮಾತ್ರ ಟೀಂ ಇಂಡಿಯಾ, ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
2007ರಲ್ಲಿ ಕೊನೆಯ ಬಾರಿಗೆ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದ ಭಾರತ:
2007ರಲ್ಲಿ ರಾಹುಲ್ ದ್ರಾವಿಡ್ ನೇತೃತ್ವದ ಟೀಂ ಇಂಡಿಯಾ, ಇಂಗ್ಲೆಂಡ್ ಪ್ರವಾಸದಲ್ಲಿ ಕೊನೆಯ ಬಾರಿಗೆ ಟೆಸ್ಟ್ ಸರಣಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ರಾಹುಲ್ ದ್ರಾವಿಡ್ ನಾಯಕರಾದ ಬಳಿಕ ಆಡಿದ ಮೊದಲ ಟೆಸ್ಟ್ ಸರಣಿ ಇದಾಗಿತ್ತು. ಆ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ 1-0 ಅಂತರದಲ್ಲಿ ಜಯಿಸಿತ್ತು. ಇದಾದ ಬಳಿಕ ಭಾರತ ತಂಡವು 4 ಬಾರಿ ಟೆಸ್ಟ್ ಸರಣಿಯನ್ನಾಡಲು ಇಂಗ್ಲೆಂಡ್ ಪ್ರವಾಸ ಮಾಡಿದೆ. ಈ ಪೈಕಿ ಮೂರು ಬಾರಿ ಟೆಸ್ಟ್ ಸರಣಿ ಕೈಚೆಲ್ಲಿದೆ. ಒಮ್ಮೆ ಮಾತ್ರ ಟೆಸ್ಟ್ ಸರಣಿ ಡ್ರಾನಲ್ಲಿ ಅಂತ್ಯವಾಗಿದೆ.
2011 ಹಾಗೂ 2014ರಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಟೀಂ ಇಂಡಿಯಾ, ಟೆಸ್ಟ್ ಸರಣಿಯನ್ನಾಡಲು ಇಂಗ್ಲೆಂಡ್ ಪ್ರವಾಸ ಕೈಗೊಂಡಿತ್ತು. 2011ರ ಪ್ರವಾಸದಲ್ಲಿ ಟೀಂ ಇಂಡಿಯಾ 4-0 ಅಂತರದಲ್ಲಿ ಟೆಸ್ಟ್ ಸರಣಿ ಸೋತರೇ, 2014ರಲ್ಲಿ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ 3-1 ಅಂತರದಲ್ಲಿ ಸೋತು ಬರಿಗೈನಲ್ಲಿ ವಾಪಾಸ್ಸಾಗಿತ್ತು.
ಇನ್ನು ಇದಾದ ಬಳಿಕ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ 2018 ಹಾಗೂ 2022ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿತ್ತು. 2018ರ ಇಂಗ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ 4-1 ಅಂತರದಲ್ಲಿ ಟೆಸ್ಟ್ ಸರಣಿ ಸೋತಿತ್ತು. ಇನ್ನು 2022ರ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ 2-2ರಲ್ಲಿ ಡ್ರಾ ಮಾಡಿಕೊಂಡಿತ್ತು.
ಇತಿಹಾಸ ನಿರ್ಮಿಸುತ್ತಾ ಶುಭ್‌ಮನ್ ಗಿಲ್ ಪಡೆ?
ಭಾರತ ಕ್ರಿಕೆಟ್ ತಂಡವು ಕಳೆದ 18 ವರ್ಷಗಳಿಂದ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರಣಿ ಗೆಲುವಿಗಾಗಿ ಪರಿತಪಿಸುತ್ತಿದೆ. ಇದೀಗ ಶುಭ್‌ಮನ್ ಗಿಲ್ ನೇತೃತ್ವದ ಯಂಗಿಸ್ತಾನ್ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸುತ್ತಾ ಎನ್ನುವ ಕುತೂಹಲ ಜೋರಾಗಿದೆ. ಸದ್ಯ ಭಾರತ ಟೆಸ್ಟ್ ತಂಡದಲ್ಲಿ ಅನುಭವಿಗಳಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ರವಿಚಂದ್ರನ್ ಅಶ್ವಿನ್ ನಿವೃತ್ತಿ ಘೋಷಿಸಿದ್ದಾರೆ. ಇನ್ನು ಅಜಿಂಕ್ಯ ರಹಾನೆ ಹಾಗೂ ಚೇತೇಶ್ವರ್ ಪೂಜಾರ ಕೂಡಾ ಭಾರತ ತಂಡಕ್ಕೆ ಆಯ್ಕೆಯಾಗಿಲ್ಲ. ಹೀಗಾಗಿ ನಾಯಕ ಶುಭ್‌ಮನ್ ಗಿಲ್, ರವೀಂದ್ರ ಜಡೇಜಾ, ಕೆ ಎಲ್ ರಾಹುಲ್, ಕರುಣ್ ನಾಯರ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ ಹಾಗೂ ರಿಷಭ್ ಪಂತ್ ಅವರನ್ನೊಳಗೊಂಡ ತಂಡ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ ವೇಳಾಪಟ್ಟಿ
ಜೂನ್ 20-24; ಹೆಡಿಂಗ್ಲೆ ಟೆಸ್ಟ್
ಜುಲೈ 2-6; ಎಡ್ಜ್‌ಬಾಸ್ಟನ್ ಟೆಸ್ಟ್
ಜುಲೈ 10-14; ಲಾರ್ಡ್ಸ್ ಟೆಸ್ಟ್
ಜುಲೈ 23-27; ಓಲ್ಡ್ ಟ್ರಾಫರ್ಡ್ ಟೆಸ್ಟ್
ಜುಲೈ 31ರಿಂದ ಆಗಸ್ಟ್ 04; ದಿ ಓವಲ್
