ಇಂಗ್ಲೆಂಡ್ ತಂಡವು ಭಾರತ ಎದುರಿನ ಟೆಸ್ಟ್ ಸರಣಿಗೆ 14 ಆಟಗಾರರ ತಂಡವನ್ನು ಪ್ರಕಟಿಸಿದೆ. ಜೇಮಿ ಓವರ್‌ಟನ್‌ ಅಚ್ಚರಿಯ ಆಯ್ಕೆಯಾಗಿದ್ದು, ಜೆಕೋಬ್ ಬೆಥೆಲ್ ಅವರ ಸೇರ್ಪಡೆಯೂ ಗಮನ ಸೆಳೆದಿದೆ.

ಲಂಡನ್: ನಾಲ್ಕನೇ ಸೀಸನ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ತಯಾರಿ ನಡೆಸುತ್ತಿರುವ ಇಂಗ್ಲೆಂಡ್ ಕ್ರಿಕೆಟ್ ತಂಡವು ಇದೀಗ ತವರಿನಲ್ಲಿ ನಡೆಯಲಿರುವ ಭಾರತ ಎದುರಿನ ಮಹತ್ವದ ಟೆಸ್ಟ್ ಸರಣಿಗೆ 14 ಆಟಗಾರರನ್ನೊಳಗೊಂಡ ತಂಡ ಪ್ರಕಟಿಸಲಾಗಿದೆ. ಅಚ್ಚರಿಯ ರೀತಿಯಲ್ಲಿ ಜೇಮಿ ಓವರ್‌ಟನ್‌ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಜೆಕೋಬ್ ಬೆಥೆಲ್ ಅವರ ಸೇರ್ಪಡೆ ಇಂಗ್ಲೆಂಡ್ ಅಗ್ರಕ್ರಮಾಂಕದ ಬ್ಯಾಟಿಂಗ್ ತಲೆನೋವು ಹೆಚ್ಚುವಂತೆ ಮಾಡಿದೆ.

31 ವರ್ಷದ ಜೇಮಿ ಓವರ್‌ಟನ್ ಇಂಗ್ಲೆಂಡ್ ಸೀಮಿತ ಓವರ್‌ಗಳ ತಂಡದ ಅತ್ಯಂತ ನಂಬಿಗಸ್ಥ ಆಲ್ರೌಂಡರ್ ಆಗಿ ಗುರುತಿಸಿಕೊಂಡಿದ್ದಾರೆ. 2022ರಲ್ಲಿ ನ್ಯೂಜಿಲೆಂಡ್ ವಿರುದ್ದ ಟೆಸ್ಟ್ ಕ್ರಿಕೆಟ್ ಪಾದಾರ್ಪಣೆ ಮಾಡಿದ್ದ ಓವರ್‌ಟನ್ 2 ವಿಕೆಟ್ ಹಾಗೂ 97 ರನ್ ಬಾರಿಸಿದ್ದಾರೆ. ಇತ್ತೀಚೆಗಷ್ಟೇ ವೆಸ್ಟ್ ಇಂಡೀಸ್ ಎದುರಿನ ಏಕದಿನ ಸರಣಿಯಲ್ಲಿ ಕೈಬೆರಳಿನ ಗಾಯಕ್ಕೆ ತುತ್ತಾಗಿರುವ ಓವರ್‌ಟನ್, ಜೂನ್ 20ರಿಂದ ಹೆಡಿಂಗ್ಲೆಯಲ್ಲಿ ಆರಂಭವಾಗಲಿರುವ ಭಾರತ ಎದುರಿನ ಮೊದಲ ಟೆಸ್ಟ್‌ಗೆ ಸಂಪೂರ್ಣ ಫಿಟ್ ಆಗಿರಲಿದ್ದಾರೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

ಸರ್ರೆ ತಂಡದಲ್ಲಿ ಓವರ್‌ಟನ್ ಸಹಪಾಠಿಯಾಗಿರುವ ಗುಸ್ ಅಟ್ಕಿನ್‌ಸನ್ ಸಂಪೂರ್ಣ ಫಿಟ್ ಆಗಿಲ್ಲ. ಅವರು ಕಳೆದ ತಿಂಗಳು ಜಿಂಬಾಬ್ವೆ ಎದುರಿನ ಟೆಸ್ಟ್ ಸರಣಿಯಲ್ಲಿ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಹೀಗಾಗಿ ಗುಸ್ ಅಟ್ಕಿನ್‌ಸನ್ ಅವರನ್ನು ಇಂಗ್ಲೆಂಡ್ ಮತ್ತು ವೇಲ್ಸ್ ಆಯ್ಕೆ ಸಮಿತಿ ಮೊದಲ ಟೆಸ್ಟ್ ಪಂದ್ಯದಿಂದ ಕೈಬಿಟ್ಟಿದೆ.

Scroll to load tweet…

ಇನ್ನುಳಿದಂತೆ ಅನುಭವಿ ವೇಗಿಗಳಾದ ಕ್ರಿಸ್ ವೋಕ್ಸ್ ಮತ್ತು ಬ್ರೆಡನ್ ಕೇರ್ಸ್‌ ಇಂಗ್ಲೆಂಡ್ ತಂಡ ಕೂಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಇತ್ತೀಚೆಗಷ್ಟೇ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಜೆಕೋಬ್ ಬೆಥೆಲ್ ಕೂಡಾ ಇಂಗ್ಲೆಂಡ್ ತಂಡ ಕೂಡಿಕೊಂಡಿದ್ದಾರೆ. 21 ವರ್ಷದ ಯುವ ಎಡಗೈ ಬ್ಯಾಟರ್ ಬೆಥೆಲ್, ಕಳೆದ ನವೆಂಬರ್-ಡಿಸೆಂವರ್‌ನಲ್ಲಿ ನ್ಯೂಜಿಲೆಂಡ್ ಎದುರಿನ ಪಾದಾರ್ಪಣಾ ಟೆಸ್ಟ್ ಸರಣಿಯಲ್ಲಿ 52ರ ಬ್ಯಾಟಿಂಗ್ ಸರಾಸರಿಯಲ್ಲಿ ಮೂರು ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದರು.

ಜೆಕೋಬ್ ಬೆಥೆಲ್ ಸೇರ್ಪಡೆ, ಇದೀಗ ಉಪನಾಯಕ ಓಲಿ ಪೋಪ್ ಹಾಗೂ ಜಾಕ್ ಕ್ರಾಲಿ ಅವರಲ್ಲಿ ಅಭದ್ರತೆಯ ವಾತವರಣ ಸೃಷ್ಟಿಸಿರುವಂತೆ ಮಾಡಿರುವುದಂತೂ ಸುಳ್ಳಲ್ಲ. ಈ ಜೋಡಿ ಜಿಂಬಾಬ್ವೆ ಎದುರಿನ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದರು.

ಇನ್ನುಳಿದಂತೆ ಬೆನ್ ಸ್ಟೋಕ್ಸ್‌ ಇಂಗ್ಲೆಂಡ್ ತಂಡವನ್ನು ನಾಯಕರಾಗಿ ಮುನ್ನಡೆಸಲಿದ್ದು, ಜೋ ರೂಟ್ ಬೆನ್ ಡಕೆಟ್, ಹ್ಯಾರಿ ಬ್ರೂಕ್ ಅವರಂತಹ ಅನುಭವಿ ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಭಾರತ ಎದುರಿನ ಮೊದಲ ಟೆಸ್ಟ್‌ಗೆ ಇಂಗ್ಲೆಂಡ್ ತಂಡ ಹೀಗಿದೆ:

ಬೆನ್ ಸ್ಟೋಕ್ಸ್(ನಾಯಕ), ಶೋಯೆಬ್ ಬಷೀರ್, ಜೆಕೋಬ್ ಬೆಥೆಲ್, ಹ್ಯಾರಿ ಬ್ರೂಕ್, ಬ್ರೆಡನ್ ಕೇರ್ಸ್‌, ಸ್ಯಾಮ್ ಕುಕ್, ಜಾಕ್ ಕ್ರಾಲಿ, ಬೆನ್ ಡಕೆಟ್, ಜೇಮಿ ಓವರ್‌ಟನ್, ಓಲಿ ಪೋಪ್, ಜೋ ರೂಟ್, ಜೇಮಿ ಸ್ಮಿತ್(ವಿಕೆಟ್ ಕೀಪರ್), ಜೋಶ್ ಟಂಗ್, ಕ್ರಿಸ್ ವೋಕ್ಸ್.

ಇನ್ನು ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೂ ಮುನ್ನ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿರುವುದರಿಂದ ಶುಭ್‌ಮನ್ ಗಿಲ್‌ಗೆ ನಾಯಕತ್ವ ಪಟ್ಟ ಕಟ್ಟಲಾಗಿದೆ. ಇನ್ನು ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರನ್ನು ಉಪನಾಯಕರನ್ನಾಗಿ ನೇಮಿಸಲಾಗಿದೆ.

ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೆ ಭಾರತ ತಂಡ ಹೀಗಿದೆ:

ಶುಭ್‌ಮನ್ ಗಿಲ್(ನಾಯಕ), ರಿಷಭ್ ಪಂತ್(ಉಪನಾಯಕ& ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ಕೆ ಎಲ್ ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಧ್ರುವ್ ಜುರೇಲ್(ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಆಕಾಶ್‌ದೀಪ್ ಸಿಂಗ್, ಅರ್ಶದೀಪ್ ಸಿಂಗ್, ಕುಲ್ದೀಪ್ ಯಾದವ್.