ಬೆನ್ನು ನೋವಿನಿಂದ ಬಳಲುತ್ತಿರುವ ಬುಮ್ರಾ, ಚಾಂಪಿಯನ್ಸ್ ಟ್ರೋಫಿ ಹಾಗೂ ಇಂಗ್ಲೆಂಡ್ ಸರಣಿಯಿಂದ ಹೊರಗುಳಿಯುವ ಸಾಧ್ಯತೆ. ಎನ್‌ಸಿಎಯಲ್ಲಿ ಪುನಶ್ಚೇತನಕ್ಕೆ ಬಿಸಿಸಿಐ ಸೂಚನೆ. ಬುಮ್ರಾ ಫಿಟ್ನೆಸ್ ಸಮಸ್ಯೆ, ಟೆಸ್ಟ್ ನಾಯಕತ್ವದ ಯೋಜನೆಗೆ ಅಡ್ಡಿ. ರೋಹಿತ್ ನಿವೃತ್ತಿ ಹಿನ್ನೆಲೆಯಲ್ಲಿ ಬುಮ್ರಾ ನಾಯಕರಾಗುವ ಸಾಧ್ಯತೆ ಇದ್ದರೂ, ಪದೇ ಪದೇ ಗಾಯದ ಸಮಸ್ಯೆ ಬಿಸಿಸಿಐಗೆ ತಲೆನೋವು ತಂದಿದೆ.

ಸಿಡ್ನಿ: ಭಾರತದ ತಾರಾ ವೇಗಿ ಜಸ್‌ಪ್ರೀತ್‌ ಬುಮ್ರಾ ಬೆನ್ನು ನೋವಿನಿಂದ ಬಳಲುತ್ತಿದ್ದು, ಇಂಗ್ಲೆಂಡ್‌ ಸರಣಿ ಮಾತ್ರವಲ್ಲದೇ ಫೆ.19ರಿಂದ ಆರಂಭಗೊಳ್ಳಲಿರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯಿಂದಲೂ ಹೊರಗುಳಿಯುವ ಸಾಧ್ಯತೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಬುಮ್ರಾ ಟೂರ್ನಿಗೆ ಗೈರಾದರೆ ಭಾರತ ತೀವ್ರ ಹಿನ್ನಡೆ ಅನುಭವಿಸುವುದು ಖಚಿತ.

ಆಸ್ಟ್ರೇಲಿಯಾ ಸರಣಿಯಲ್ಲಿ 32 ವಿಕೆಟ್‌ ಪಡೆದಿದ್ದ ಬುಮ್ರಾ, ಕೊನೆ ಟೆಸ್ಟ್‌ನ ದಿನ ಬೆನ್ನು ನೋವಿನಿಂದಾಗಿ ಮೈದಾನ ತೊರೆದಿದ್ದರು. ಸದ್ಯ ವೈದ್ಯಕೀಯ ತಂಡದಿಂದ ಬಿಸಿಸಿಐ ವರದಿ ತರಿಸಿದ್ದು, ಬುಮ್ರಾರ ಬೆನ್ನಿನಲ್ಲಿ ಊತ ಕಾಣಿಸಿಕೊಂಡಿದೆ. ಹೀಗಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ(ಎನ್‌ಸಿಎ)ಗೆ ತೆರಳಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳುವಂತೆ ಬುಮ್ರಾಗೆ ಬಿಸಿಸಿಐ ಸೂಚಿಸಿದೆ ಎನ್ನಲಾಗಿದೆ.

ಮೂಲಗಳ ಪ್ರಕಾರ ಬುಮ್ರಾ ಮಾರ್ಚ್‌ ಮೊದಲ ವಾರ ಸಂಪೂರ್ಣ ಫಿಟ್‌ ಆಗಲಿದ್ದಾರೆ. ಈ ವೇಳೆಗಾಗಲೇ ಚಾಂಪಿಯನ್ಸ್‌ ಟ್ರೋಫಿ ನಾಕೌಟ್‌ ಹಂತ ತಲುಪಿರುತ್ತದೆ. ಹೀಗಾಗಿ ಬುಮ್ರಾ ಹೆಸರನ್ನು ಸೇರಿಸಿ ತಂಡವನ್ನು ಘೋಷಿಸಬೇಕೇ ಅಥವಾ ಮೀಸಲು ಆಟಗಾರನಾಗಿ ತಂಡಕ್ಕೆ ಸೇರ್ಪಡೆಗೊಳಿಸಬೇಕೇ ಎಂದು ಬಿಸಿಸಿಐ ಗೊಂದಲದಲ್ಲಿದೆ.

ವಿಜಯ್ ಹಜಾರೆ: ಕರುಣ್ ನಾಯರ್ ಮತ್ತೊಂದು ಶತಕ ವಿದರ್ಭ ಸೆಮಿಫೈನಲ್‌ಗೆ ಲಗ್ಗೆ

ಬುಮ್ರಾಗೆ ಟೆಸ್ಟ್‌ ನಾಯಕತ್ವ: ಬಿಸಿಸಿಐ ಪ್ಲ್ಯಾನ್‌ಗೆ ಫಿಟ್ನೆಸ್‌ ಅಡ್ಡಿ

ನವದೆಹಲಿ: ಭಾರತದ ಟೆಸ್ಟ್‌ ನಾಯಕ ರೋಹಿತ್‌ ಶರ್ಮಾ ನಿವೃತ್ತಿ ಅಂಚಿನಲ್ಲಿದ್ದಾರೆ. ಹೀಗಾಗಿ ತಂಡಕ್ಕೆ ಹೊಸ ನಾಯಕನ ಅಗತ್ಯವಿದೆ. ಈ ಹುದ್ದೆಗೆ ಸಮರ್ಥ ಆಯ್ಕೆ ಎಂಬಂತೆ ವೇಗಿ ಜಸ್‌ಪ್ರೀತ್‌ ಬುಮ್ರಾ ಹೆಸರು ಮುಂಚೂಣಿಯಲ್ಲಿದೆ. ಆದರೆ ಫಿಟ್ನೆಸ್‌ ಸಮಸ್ಯೆ ಕಾಯಂ ನಾಯಕತ್ವದ ಹೊಣೆ ನೀಡುವ ಬಿಸಿಸಿಐ ಯೋಜನೆಗೆ ಅಡ್ಡಿಯಾಗುತ್ತಿದೆ ಎಂದು ತಿಳಿದುಬಂದಿದೆ.

ಜೂನ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ 5 ಟೆಸ್ಟ್‌ಗೆ ರೋಹಿತ್‌ ಶರ್ಮಾ ಆಯ್ಕೆಯಾಗುವ ಸಾಧ್ಯತೆಯಿಲ್ಲ ಎನ್ನಲಾಗುತ್ತಿದೆ. ಹೀಗಾದರೆ ಬುಮ್ರಾ ನಾಯಕತ್ವ ವಹಿಸಬಹುದು. ಆದರೆ ಬುಮ್ರಾ ಪದೇ ಪದೇ ಗಾಯಗೊಳ್ಳುತ್ತಿದ್ದಾರೆ. ಹೀಗಾಗಿ ಅವರಿಗೆ ಟೆಸ್ಟ್‌ ತಂಡದ ಕಾಯಂ ನಾಯಕತ್ವ ಸ್ಥಾನ ನೀಡುವುದು ಹೇಗೆ ಎಂಬುದು ಬಿಸಿಸಿಐ ತಲೆಬಿಸಿ.

4ನೇ ಟೆಸ್ಟ್‌ ಬಳಿಕ ನಿವೃತ್ತಿಗೆ ನಿರ್ಧರಿಸಿದ್ದ ರೋಹಿತ್‌ ಶರ್ಮಾ; ಆದ್ರೆ ಈ ಕಾರಣಕ್ಕಾಗಿ ಯು-ಟರ್ನ್ ಹೊಡೆದ ಹಿಟ್‌ಮ್ಯಾನ್?

ಒಂದು ವೇಳೆ ಬುಮ್ರಾಗೆ ನಾಯಕತ್ವ ವಹಿಸಿದರೆ ಉಪನಾಯಕತ್ವಕ್ಕೆ ಸಮರ್ಥ ಆಟಗಾರ ಅಗತ್ಯವಿದೆ. ಇದರಲ್ಲಿ ರಿಷಭ್‌ ಪಂತ್‌ ಹೆಸರು ಮುಂಚೂಣಿಯಲ್ಲಿದೆ. ಒಂದು ವೇಳೆ ಬುಮ್ರಾ ಗೈರಾದರೂ, ಟೆಸ್ಟ್‌ ತಂಡವನ್ನು ಮುನ್ನಡೆಸುವ ಸಾಮರ್ಥ್ಯ ರಿಷಭ್‌ಗೆ ಇದೆ ಎಂಬುದು ಬಿಸಿಸಿಐ ವಿಶ್ವಾಸ. ರಿಷಭ್‌ ಹೊರತಾಗಿ ಯಶಸ್ವಿ ಜೈಸ್ವಾಲ್‌ರನ್ನು ಸಹ ಬಿಸಿಸಿಐ ಉಪನಾಯಕನ ಸ್ಥಾನಕ್ಕೆ ಪರಿಗಣಿಸಬಹುದು ಎಂದು ಹೇಳಲಾಗುತ್ತಿದೆ. ಶನಿವಾರ ನಡೆದ ಪರಾಮರ್ಶೆ ಸಭೆಯಲ್ಲೂ ನಾಯಕತ್ವ ಬಗ್ಗೆ ಚರ್ಚೆ ನಡೆಸಿದೆ ಎಂದು ತಿಳಿದುಬಂದಿದೆ.