2023ರ ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಪಾಕಿಸ್ತಾನ ಆತಿಥ್ಯಪಾಕಿಸ್ತಾನ ಪ್ರವಾಸ ಮಾಡಲು ಟೀಂ ಇಂಡಿಯಾ ಹಿಂದೇಟುಭಾರತ ಪಾಕಿಸ್ತಾನಕ್ಕೆ ಬರಲಿಲ್ಲವೆಂದರೆ ನರಕಕ್ಕೆ ಹೋಗಲಿ ಎಂದ ಮಿಯಾಂದಾದ್
ಇಸ್ಲಾಮಾಬಾದ್(ಫೆ.06): ಬಹುನಿರೀಕ್ಷಿತ 2023ರ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಟೀಂ ಇಂಡಿಯಾ ಪಾಲ್ಗೊಳ್ಳುವುದು ಕೊಂಚ ಅನುಮಾನ ಎನಿಸಿದೆ. ಇದೀಗ ಈ ಕುರಿತಂತೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಜಾವೇದ್ ಮಿಯಾಂದಾದ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, ಭಾರತ ತಂಡವು ಏಷ್ಯಾಕಪ್ ಆಡಲು ಪಾಕಿಸ್ತಾನಕ್ಕೆ ಬರದೇ ಹೋದರೂ ತೊಂದರೆ ಏನಿಲ್ಲ ಎಂದು ಉದ್ದಟತನದ ಹೇಳಿಕೆ ನೀಡಿದ್ದಾರೆ.
ಏಷ್ಯಾಕಪ್ ಟೂರ್ನಿ ಈ ಬಾರಿ 50 ಓವರ್ ಮಾದರಿಯಲ್ಲಿ ನಡೆಯಲಿದ್ದು, ಇದೇ ವರ್ಷ ಸೆಪ್ಟಂಬರ್‌ನಲ್ಲ ಆಯೋಜಿಸಲಾಗುವುದು ಎಂದು ಎಸಿಸಿ ತಿಳಿಸಿತ್ತು. ಇದರ ಆತಿಥ್ಯ ಪಾಕ್ ಬಳಿ ಇದ್ದರೂ ಭದ್ರತಾ ಕಾರಣಗಳಿಂದಾಗಿ ತಮ್ಮ ತಂಡವನ್ನು ಅಲ್ಲಿಗೆ ಕಳುಹಿಸುವುದಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಈಗಾಗಲೇ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ತಟಸ್ಥ ಸ್ಥಳದಲ್ಲಿ ಟೂರ್ನಿ ನಡೆಸಿದರೆ ಮಾತ್ರ ಭಾರತ ಆಡಲಿದೆ ಎಂದೂ ಹೇಳಿತ್ತು. ಈ ನಡುವೆ ಶನಿವಾರ ಇದರ ಬಗ್ಗೆ ಚರ್ಚಿಸಲು ತುರ್ತು ಸಭೆ ನಡೆಸಿದರೂ ಯಾವುದೇ ತೀರ್ಮಾನವಾಗಿಲ್ಲ ಎಂದು ತಿಳಿದುಬಂದಿದೆ.
ಕೆಲವು ಮೂಲಗಳ ಪ್ರಕಾರ, ಮುಂಬರುವ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯು, ಪಾಕಿಸ್ತಾನದಿಂದ ಯುಎಇಗೆ ಸ್ಥಳಾಂತರವಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇನ್ನು ಭಾರತ ತಂಡವು ಪಾಕಿಸ್ತಾನ ಪ್ರವಾಸ ಮಾಡಲು ಹಿಂದೇಟು ಹಾಕುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿರುವ ಜಾವೇದ್ ಮಿಯಾಂದಾದ್, " ನಾನು ಈ ಮೊದಲೂ ಹೇಳಿದ್ದೇನೆ. ಭಾರತ ತಂಡವು ಪಾಕಿಸ್ತಾನ ಬರುವುದಿಲ್ಲ ಎಂದಾದರೇ ನರಕಕ್ಕೆ ಹೋಗಲಿ. ನಮಗೇನೂ ತೊಂದರೆಯಿಲ್ಲ. ಭಾರತವು ಬರುವುದನ್ನು ಐಸಿಸಿ ಖಚಿತಪಡಿಸಬೇಕು. ಒಂದು ವೇಳೆ ಅದು ಐಸಿಸಿಯನ್ನು ನಿಯಂತ್ರಿಸುವುದಾದರೇ, ಅಂತಹ ಆಡಳಿತ ಮಂಡಳಿಯ ಅಗತ್ಯವಾದರೂ ಏನಿದೆ?" ಎಂದು ಪ್ರಶ್ನಿಸಿದ್ದಾರೆ.
ಏಕದಿನ ವಿಶ್ವಕಪ್ ಬಹಿಷ್ಕಾರ: ಭಾರತಕ್ಕೆ ಪಾಕಿಸ್ತಾನ ಬೆದರಿಕೆ..!
"ಪ್ರತಿಯೊಂದು ತಂಡಕ್ಕೂ ಒಂದೇ ರೀತಿಯ ನೀತಿ ನಿಯಮಗಳು ಅನ್ವಯವಾಗಬೇಕು. ಅವರೆಷ್ಟೇ ಬಲಿಷ್ಠವಾಗಿದ್ದರೂ ಸಹಾ, ಅವರು ಇದಕ್ಕೆ ಬದ್ದವಾಗಿರಬೇಕು. ಭಾರತ ಕ್ರಿಕೆಟ್ ನಡೆಸುತ್ತಿಲ್ಲ. ಅದು ತವರಿನಲ್ಲಿ ಬಲಿಷ್ಠ ತಂಡವಾಗಿಯೇ ಇರಬಹುದು, ಹಾಗಂತ ನಮಗಲ್ಲ. ಅದೇ ರೀತಿ ಜಗತ್ತಿಗೂ ಅಲ್ಲ. ಬನ್ನಿ ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡಿ. ನೀವ್ಯಾಕೆ ಇಲ್ಲಿಗೆ ಬರಲು ಹಿಂದೇಟು ಹಾಕುತ್ತೀರ?. ಒಂದು ವೇಳೆ ಭಾರತ ತಂಡವು ಪಾಕಿಸ್ತಾನದಲ್ಲಿ ಸೋತರೆ, ಅಲ್ಲಿನ ಜನರು ಆ ಸೋಲನ್ನು ಸಹಿಸುವುದಿಲ್ಲ" ಎಂದು ಜಾವೇದ್ ಮಿಯಾಂದಾದ್ ಕೆಣಕ್ಕಿದ್ದಾರೆ.
" ಈ ಕುರಿತಂತೆ ಐಸಿಸಿ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಇಂತಹ ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎನ್ನುವುದಾದರೇ ಮತ್ತೆ ಯಾಕೆ ಇರೋದು?. ಇಂತಹವುಗಳಿಗೆಲ್ಲ ಒಂದು ಪೂರ್ಣವಿರಾಮ ಇಡಬೇಕು. ಈ ಘಟನೆಯ ಕುರಿತಂತೆ ಐಸಿಸಿಯು ಕ್ರಮ ಕೈಗೊಳ್ಳಬೇಕು" ಎಂದು ಮಿಯಾಂದಾದ್ ಆಗ್ರಹಿಸಿದ್ದಾರೆ.
ಈ ಮೊದಲು ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಆತಿಥ್ಯ ಪಾಕಿಸ್ತಾನಕ್ಕೇ ಸಿಗಬೇಕು. ಇಲ್ಲದಿದ್ದರೆ ಪಾಕ್ ತಂಡ ಮುಂಬರುವ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಬರುವುದಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಯ ಹಾಲಿ ಅಧ್ಯಕ್ಷ ನಜಂ ಸೇಠಿ ಎಚ್ಚರಿಕೆ ನೀಡಿದ್ದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.
