ವಿರಾಟ್ ಕೊಹ್ಲಿ ಮತ್ತು ರುತುರಾಜ್ ಗಾಯಕ್ವಾಡ್ ಅವರ ಶತಕಗಳ ಹೊರತಾಗಿಯೂ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಸೋಲನುಭವಿಸಿದೆ. ಏಡೆನ್ ಮಾರ್ಕ್‌ರಮ್ ಅವರ ಅಮೋಘ ಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ 4 ವಿಕೆಟ್‌ಗಳ ಜಯ ಸಾಧಿಸಿ, ಮೂರು ಪಂದ್ಯಗಳ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದೆ.

ರಾಯ್‌ಪುರ (ಡಿ.3): ಸೂಪರ್‌ಸ್ಟಾರ್‌ ಬ್ಯಾಟ್ಸ್‌ಮನ್‌ ವಿರಾಟ್‌ ಕೊಹ್ಲಿಯ 53ನೇ ಏಕದಿನ ಶತಕ ಹಾಗೂ ರುತುರಾಜ್‌ ಗಾಯಕ್ವಾಡ್‌ ಸಿಡಿಲಬ್ಬರದ ಶತಕಕ್ಕೆ ಸಾಂಘಿಕ ಬ್ಯಾಟಿಂಗ್‌ ಮೂಲಕ ಉತ್ತರ ನೀಡಿದ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ 2ನೇ ಏಕದಿನ ಪಂದ್ಯದಲ್ಲಿ ಟೀಮ್‌ ಇಂಡಿಯಾವನ್ನು ಮಣಿಸಿದೆ. ಶಹೀದ್‌ ವೀರ್‌ ನಾರಾಯಣ್‌ ಸಿಂಗ್‌ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ 4 ವಿಕೆಟ್‌ಗಳಿಂದ ಭಾರತ ತಂಡವನ್ನು ಸೋಲಿಸುವ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಸಮಬಲ ಸಾಧಿಸಿದೆ. ಇದರಿಂದಾಗಿ ಡಿಸೆಂಬರ್‌ 6ರ ಶನಿವಾರದಂದು ವಿಶಾಖಪಟ್ಟಣದಲ್ಲಿ ನಡೆಯಲಿರುವ ಸರಣಿಯ ಮೂರನೇ ಹಾಗೂ ನಿರ್ಣಾಯಕ ಪಂದ್ಯ ಕುತೂಹಲ ಮೂಡಿಸಿದೆ.

ಬುಧವಾರ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ತಂಡ ಮಧ್ಯಮ ಕ್ರಮಾಂಕದಲ್ಲಿ ವಿರಾಟ್‌ ಕೊಹ್ಲಿ (102 ರನ್‌, 93 ಎಸೆತ, 7 ಬೌಂಡರಿ, 2 ಸಿಕ್ಸರ್‌) ಹಾಗೂ ರುತುರಾಜ್‌ ಗಾಯಕ್ವಾಡ್‌ (105 ರನ್‌, 83 ಎಸೆತ, 12 ಬೌಂಡರಿ, 2 ಸಿಕ್ಸರ್‌) ಬೆನ್ನೇರಿತು. ಇದರಿಂದಾಗಿ ನಿಗದಿತ ಓವರ್‌ಗಳಲ್ಲಿ 5 ವಿಕೆಟ್‌ಗೆ 358 ರನ್‌ಗ ಬೃಹತ್‌ ಮತ್ತ ಪೇರಿಸಿತ್ತು. ಪ್ರತಿಯಾಗಿ ದಕ್ಷಿಣ ಆಫ್ರಿಕಾ ತಂಡ ಆರಂಭಿಕ ಆಟಗಾರ ಏಡೆನ್‌ ಮಾರ್ಕ್‌ರಮ್‌ (110 ರನ್‌, 98 ಎಸೆತ, 10 ಬೌಂಡರಿ, 1 ಸಿಕ್ಸರ್‌) ಶತಕ ಹಾಗೂ ಮ್ಯಾಥ್ಯೂ ಬ್ರೀಟ್ಜ್‌ಕೇ (68 ರನ್‌, 64 ಎಸೆತ, 5 ಬೌಂಡರಿ) ಹಾಗೂ ಡವಾಲ್ಡ್‌ ಬ್ರೇವಿಸ್‌ (54 ರನ್‌, 34 ಎಸೆತ, 1 ಬೌಂಡರಿ, 5 ಸಿಕ್ಸರ್‌) ಅರ್ಧಶತಕಗಳ ನೆರವಿನಿಂದ 49.2 ಓವರ್‌ಗಳಲ್ಲಿ 6 ವಿಕೆಟ್‌ಗೆ 359 ರನ್‌ ಬಾರಿಸಿ ಗೆಲುವು ಕಂಡಿತು.

ಅದ್ಭುತ ಶತಕ ಸಿಡಿಸಿದ ಏಡೆನ್‌ ಮಾರ್ಕ್‌ರಾಮ್‌

ಚೇಸಿಂಗ್‌ನ ಹಾದಿಯಲ್ಲಿ ಎಲ್ಲೂ ದಕ್ಷಿಣ ಆಫ್ರಿಕಾ ಆತಂಕ ತೋರಲಿಲ್ಲ. ತುಂಬಾ ಎಚ್ಚರಿಕೆಯಿಂದ ಭಾರತದ ಬೌಲರ್‌ಗಳನ್ನು ಎದುರಿಸಿತು. ಅದರಲ್ಲೂ ರಾತ್ರಿ ಆಗುತ್ತಿದ್ದಂತೆ ಇಬ್ಬನಿಯ ಪರಿಣಾಮ ಬೌಲರ್‌ಗಳ ಮೇಲೆ ಆಗಿದ್ದರಿಂದ ಅದರ ಲಾಭ ಪಡೆದುಕೊಂಡಿತು. ಇನ್ನು ಬೌಲಿಂಗ್‌ನಲ್ಲೂ ಕೂಡ ಭಾರತ ಬಹಳ ದುರ್ಬಲವಾಗಿ ಕಂಡಿತು. ಬ್ಯಾಟಿಂಗ್‌ನಲ್ಲಿ ಭಾರತದ ಪ್ರದರ್ಶನ ಎಷ್ಟು ಅದ್ಭುತವಾಗಿತ್ತೋ ಬೌಲಿಂಗ್‌ನಲ್ಲಿ ತಂಡದ ನಿವರ್ಹಣೆ ಅಷ್ಟೇ ನೀರಸವಾಗಿತ್ತು. ಕ್ವಿಂಟನ್‌ ಡಿ ಕಾಕ್‌ ವಿಕೆಟ್‌ಅನ್ನು ತಂಡದ ಮೊತ್ತ 26 ರನ್‌ ಆಗಿದ್ದಾಗ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕಾಕ್ಕೆ ಈ ಹಂತದಲ್ಲಿ ಮಾರ್ಕ್‌ರಾಮ್‌ ಆಸರೆಯಾದರು. ನಾಯಕ ಟೆಂಬಾ ಬವುಮಾ (46 ರನ್‌, 48 ಎಸೆತ, 3 ಬೌಂಡರಿ, 1 ಸಿಕ್ಸರ್‌) ಹಾಗೂ ಮ್ಯಾಥ್ಯೂ ಬ್ರೀಟ್ಜ್‌ಕೇ ಜೊತೆ ಉತ್ತಮ ಜೊತೆಯಾಟ ಕಟ್ಟಿದರು.

ಮಾರ್ಕ್‌ರಾಮ್‌ಗೆ ಜೀವದಾನ ನೀಡಿದ್ದ ಜೈಸ್ವಾಲ್‌

ಮಾರ್ಕ್‌ರಾಮ್‌ 53 ರನ್‌ಗಳಿಸಿದ್ದಾಗ ಜೈಸ್ವಾಲ್‌ ಅವರಿಗೆ ಜೀವದಾನ ನೀಡಿದ್ದರು. ಇದರ ಪರಿಣಾಮವಾಗಿ ಆರಂಭಿಕ ಆಟಗಾರ 88 ಎಸೆತಗಳಲ್ಲೇ ಶತಕ ಬಾರಿಸಿದರು. ಮಾರ್ಕ್‌ರಾಮ್‌ ನಿರ್ಗಮನದ ಬಳಿಕ ಬ್ರೀಟ್ಜ್‌ಕೇ ಹಾಗೂ ಬ್ರೇವಿಸ್‌ ಚೇಸಿಂಗ್‌ನ ಉಸ್ತುವಾರಿ ವಹಿಸಿಕೊಂಡರು. ನಾಲ್ಕನೇ ವಿಕೆಟ್‌ಗೆ ಅದ್ಭುತ 92 ರನ್‌ ಜೊತೆಯಾಟವಾಡಿ ತಂಡದ ಗೆಲುವನ್ನು ಬಹುತೇಕ ಖಚಿತಪಡಿಸಿದ್ದರು. ಇಬ್ಬರೂ ಕೂಡ ಅರ್ಧಶತಕ ಬಾರಿಸಿದರೂ, ತಂಡವನ್ನು ಗೆಲುವಿನ ದಡಕ್ಕೆ ಮುಟ್ಟಿಸಲು ಸಾಧ್ಯವಾಗಲಿಲ್ಲ.

ಈ ಹಂತದಲ್ಲಿ ಗೆಲುವಿನ ಮ್ಯಾಜಿಕ್‌ ಕಾಣುವ ಭಾರತದ ಪ್ರಯತ್ನ ಫಲ ಕೊಡಲಿಲ್ಲ. ಟೋನಿ ಡೆ ಜೋರ್ಜಿ 17 ರನ್‌ ಬಾರಿಸಿ ಗಾಯದಿಂದ ನಿವೃತ್ತರಾದರೆ, ಮಾರ್ಕೋ ಜೆನ್ಸೆನ್‌ ಕೇವಲ 2 ರನ್‌ ಬಾರಿಸಿದರು. ಈ ಹಂತದಲ್ಲಿ ಕಾರ್ಬಿನ್‌ ಬಾಶ್‌ (26 ರನ್‌ 15 ಎಸೆತ, 3 ಬೌಂಡರಿ) ಮೊದಲ ಏಕದಿನ ಪಂದ್ಯದಲ್ಲಿ ಮಾಡಿದ ತಪ್ಪುಗಳನ್ನು ಪುನರಾವರ್ತಿಸದೆ ಕೇಶವ್‌ ಮಹಾರಾಜ್‌ ಜೊತೆ ತಂಡವನ್ನು ಇನ್ನೂ 4 ಎಸೆತಗಳು ಬಾಕಿ ಇರುವಂತೆ ಗೆಲುವು ಗಡಿ ಮುಟ್ಟಿಸಿದರು.

ಭಾರತದ ಪರವಾಗಿ ಆರ್ಶ್‌ದೀಪ್‌ ಸಿಂಗ್‌ ಹಾಗೂ ಪ್ರಸಿದ್ಧ ಕೃಷ್ಣ ತಲಾ 2 ವಿಕೆಟ್‌ ಉರುಳಿಸಿದರೆ, ಹರ್ಷಿತ್‌ ರಾಣಾ ಹಾಗೂ ಕುಲದೀಪ್‌ ಯಾದವ್‌ ತಲಾ ಒಂದೊಂದು ವಿಕೆಟ್‌ ಉತುಳಿಸಿದರು.