ರಾಯ್ಪುರದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ, ವಿರಾಟ್ ಕೊಹ್ಲಿ ಮತ್ತು ಋತುರಾಜ್ ಗಾಯಕ್ವಾಡ್ ಅವರ ಭರ್ಜರಿ ಶತಕಗಳ ನೆರವಿನಿಂದ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಬೃಹತ್ ಮೊತ್ತ ಕಲೆಹಾಕಿದೆ. ಟೀಂ ಇಂಡಿಯಾ 50 ಓವರ್‌ಗಳಲ್ಲಿ 5 ವಿಕೆಟ್‌ಗೆ 358 ರನ್ ಗಳಿಸಿ ಹರಿಣಗಳಿಗೆ ಕಠಿಣ ಗುರಿ ನೀಡಿದೆ.

ರಾಯ್ಪುರ: ವಿರಾಟ್ ಕೊಹ್ಲಿ, ಋತುರಾಜ್ ಗಾಯಕ್ವಾಡ್ ಬಾರಿಸಿದ ಆಕರ್ಷಕ ಶತಕ ಹಾಗೂ ನಾಯಕ ಕೆ ಎಲ್ ರಾಹುಲ್ ಬಾರಿಸಿದ ಸಮಯೋಚಿತ ಅರ್ಧಶತಕದ ನೆರವಿನಿಂದ ಎರಡನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು ಭಾರತ ತಂಡವು ಬೃಹತ್ ಮೊತ್ತ ಕಲೆಹಾಕಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ, ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 358 ರನ್ ಬಾರಿಸಿದ್ದು, ಹರಿಣಗಳಿಗೆ ಮತ್ತೊಮ್ಮೆ ಕಠಿಣ ಗುರಿ ನೀಡಿದೆ.

ಬೃಹತ್ ಮೊತ್ತ ಕಲೆಹಾಕುವ ಲೆಕ್ಕಾಚಾರದೊಂದಿಗೆ ಕಣಕ್ಕಿಳಿದ ಟೀಂ ಇಂಡಿಯಾ 40 ರನ್ ಗಳಿಸುವಷ್ಟರಲ್ಲಿ ಮಾಜಿ ನಾಯಕ ರೋಹಿತ್ ಶರ್ಮಾ(14) ವಿಕೆಟ್ ಕಳೆದುಕೊಂಡಿತು. ಇದರ ಬೆನ್ನಲ್ಲೇ ಮತ್ತೋರ್ವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್(22) ಮಾರ್ಕೊ ಯಾನ್ಸನ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಈ ವೇಳೆಗೆ ಭಾರತದ ಸ್ಕೋರ್ 9.4 ಓವರ್‌ನಲ್ಲಿ 2 ವಿಕೆಟ್ ನಷ್ಟಕ್ಕೆ 62 ರನ್‌ ಗಳಾಗಿತ್ತು.

Scroll to load tweet…

ಕೊಹ್ಲಿ-ಋತುರಾಜ್ ಜುಗಲ್ಬಂದಿ:

ಇದಾದ ಬಳಿಕ ಮೂರನೇ ವಿಕೆಟ್‌ಗೆ ಜತೆಯಾದ ವಿರಾಟ್ ಕೊಹ್ಲಿ ಹಾಗೂ ಋತುರಾಜ್ ಗಾಯಕ್ವಾಡ್ ಆಕರ್ಷಕ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಸ್ಪೋಟಕ ಬ್ಯಾಟಿಂಗ್ ನಡೆಸಿದ ಈ ಜೋಡಿ ಕೇವಲ 156 ಎಸೆತಗಳನ್ನು ಎದುರಿಸಿ 195 ರನ್‌ಗಳ ಜತೆಯಾಟವಾಡಿತು. ಇದು ದಕ್ಷಿಣ ಆಫ್ರಿಕಾ ವಿರುದ್ದ ಭಾರತ ತಂಡದ ಪರ ಮೂಡಿಬಂದ ಗರಿಷ್ಠ ರನ್ ಜತೆಯಾಟ ಎನಿಸಿಕೊಂಡಿತು.

ಸ್ಪೋಟಕ ಬ್ಯಾಟಿಂಗ್ ನಡೆಸಿದ ಋತುರಾಜ್ ಗಾಯಕ್ವಾಡ್ ಚೊಚ್ಚಲ ಏಕದಿನ ಶತಕ ಸಿಡಿಸಿ ಸಂಭ್ರಮಿಸಿದರು. ಕೇವಲ 83 ಎಸೆತಗಳನ್ನು ಎದುರಿಸಿದ ಗಾಯಕ್ವಾಡ್ 12 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 105 ರನ್ ಸಿಡಿಸಿ ಯಾನ್ಸನ್‌ಗೆ ವಿಕೆಟ್ ಒಪ್ಪಿಸಿದರು.

ಸತತ ಎರಡನೇ ಏಕದಿನ ಶತಕ ಸಿಡಿಸಿದ ಕೊಹ್ಲಿ

ಇನ್ನು ರಾಂಚಿ ಏಕದಿನ ಪಂದ್ಯದಲ್ಲಿ ಆಕರ್ಷಕ 135 ರನ್ ಸಿಡಿಸಿದ್ದ ವಿರಾಟ್ ಕೊಹ್ಲಿ, ಇದೀಗ ದಕ್ಷಿಣ ಆಫ್ರಿಕಾ ಎದುರಿನ ಎರಡನೇ ಏಕದಿನ ಪಂದ್ಯದಲ್ಲೂ ಶತಕ ಸಿಡಿಸುವ ಮೂಲಕ ಅಬ್ಬರಿಸಿದ್ದಾರೆ. ಕೇವಲ 90 ಎಸೆತಗಳನ್ನು ಎದುರಿಸಿದ ಕೊಹ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ ಏಕದಿನ ಕ್ರಿಕೆಟ್ ವೃತ್ತಿಜೀವನದ 53ನೇ ಶತಕ ಸಿಡಿಸಿ ಸಂಭ್ರಮಿಸಿದರು. ಅಂತಿಮವಾಗಿ ಕೊಹ್ಲಿ 93 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 102 ರನ್ ಸಿಡಿಸಿ ಲುಂಗಿ ಎಂಗಿಡಿಗೆ ವಿಕೆಟ್ ಒಪ್ಪಿಸಿದರು.

ಇನ್ನು ನಾಯಕ ಕೆ ಎಲ್ ರಾಹುಲ್ ಸತತ ಎರಡನೇ ಪಂದ್ಯದಲ್ಲೂ ಆಕರ್ಷಕ ಅರ್ಧಶತಕ ಸಿಡಿಸುವಲ್ಲಿ ಯಶಸ್ವಿಯಾದರು. ರಾಹುಲ್ 43 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 66 ರನ್‌ ಗಳಿಸಿ ಅಜೇಯರಾಗುಳಿದರು. ಮತ್ತೊಂದಯ ತುದಿಯಲ್ಲಿ ಜಡೇಜಾ 24 ರನ್ ಗಳಿಸಿ ಉತ್ತಮ ಸಾಥ್ ನೀಡಿದರು. ಆರನೇ ವಿಕೆಟ್‌ಗೆ ಈ ಜೋಡಿ ಮುರಿಯದ 69 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 350ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

ದಕ್ಷಿಣ ಆಫ್ರಿಕಾ ಪರ ಮಾರ್ಕೊ ಯಾನ್ಸನ್ 2 ವಿಕೆಟ್ ಪಡೆದರೆ, ನಂದ್ರೆ ಬರ್ಗರ್ ಹಾಗೂ ಲುಂಗಿ ಎಂಗಿಡಿ ತಲಾ ಒಂದೊಂದು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.