Fans Hail Amol Muzumdar as Real-Life Kabir Khan After Women's World Cup Triumph ದೇಶೀಯ ಕ್ರಿಕೆಟ್‌ನಲ್ಲಿ ಮಿಂಚಿದರೂ ಭಾರತ ತಂಡದಲ್ಲಿ ಅವಕಾಶ ವಂಚಿತರಾಗಿದ್ದ ಅಮೋಲ್ ಮಜುಂದಾರ್, ಇದೀಗ ಕೋಚ್ ಆಗಿ ಭಾರತ ಮಹಿಳಾ ತಂಡಕ್ಕೆ ಚೊಚ್ಚಲ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದಾರೆ.
ನವದೆಹಲಿ (ನ.3): ಭಾರತ ಮಹಿಳಾ ತಂಡ ಮೊಟ್ಟಮೊದಲ ಬಾರಿಗೆ ಏಕದಿನ ವಿಶ್ವಕಪ್ ಟ್ರೋಫಿ ಜಯಿಸಿದೆ. ಇದರ ಬೆನ್ನಲ್ಲೇ ಸೋಶಿಯಲ್ ಮೀಡಿಯಾ ಮಹಿಳಾ ತಂಡದ ಮುಖ್ಯ ಕೋಚ್ ಅಮೋಲ್ ಮಜುಂದಾರ್‌ಗೆ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ. ಅಮೋಲ್ ಮಜುಂದಾರ್ ರಿಯಲ್ ಲೈಫ್‌ನ ಕಬೀರ್ ಖಾನ್ ಎನ್ನುವ ಹೊಗಳಿಕೆಗಳು ಬರುತ್ತಿವೆ. 2007ರಲ್ಲಿ ರಿಲೀಸ್ ಆಗಿ ಭಾರತದಲ್ಲಿ ಬಹುದೊಡ್ಡ ಯಶಸ್ಸು ಕಂಡ ಸ್ಪೋರ್ಟ್ಸ್ ಸಿನಿಮಾ ಚಕ್ ದೇ ಇಂಡಿಯಾದಲ್ಲಿ ನಟ ಶಾರುಖ್ ಖಾನ್, ಕಬೀರ್ ಖಾನ್ ಪಾತ್ರವನ್ನು ನಿಭಾಯಿಸಿದ್ದರು. ಮಹಿಳಾ ತಂಡಕ್ಕೆ ವಿಶ್ವಕಪ್ ಗೆಲ್ಲಿಸಿಕೊಡುವ ಕೋಚ್ ಪಾತ್ರದಲ್ಲಿ ಅವರು ನಟಿಸಿದ್ದರು.
ಇದಕ್ಕೆ ಕಾರಣ ಮಜುಂದಾರ್ ಅವರ ಕ್ರಿಕೆಟ್ ಜೀವನದ ಪ್ರಯಾಣ. ದೇಶಿಯ ಕ್ರಿಕೆಟ್‌ನ ಸ್ಟಾರ್ ಪ್ಲೇಯರ್ ಆಗಿದ್ದರೂ ಅಮೋಲ್ ಮಜುಂದಾರ್ ಎಂದಿಗೂ ಇಂಡಿಯಾ ಪರವಾಗಿ ಆಡುವ ಅವಕಾಶ ಪಡೆಯಲಿಲ್ಲ. ತಮ್ಮ ದೇಶೀಯ ಕ್ರಿಕೆಟ್ ಜೀವನಲ್ಲಿ 48.13ರ ಸರಾಸರಿಯಲ್ಲಿ ಅಮೋಲ್ ಮಜುಂದಾರ್ 11,167 ರನ್ ಬಾರಿಸಿದ್ದರು. ಇದರಲ್ಲಿ 30 ಶತಕಗಳು ಸೇರಿದ್ದವು. ಒಂದು ಕಾಲದಲ್ಲಿ ಹೊಸ ತೆಂಡುಲ್ಕರ್ ಎಂದೇ ಪ್ರಖ್ಯಾತರಾಗಿದ್ದ ಮುಂಬೈನ ಅಮೋಲ್ ಮಜುಂದಾರ್, ಎರಡು ದಶಕಗಳ ಕಾಲ ರಣಜಿ ಟ್ರೋಫಿಯಲ್ಲಿ ಅಕ್ಷರಶಃ ಆಳಿದ್ದರು. ಆದರೆ, ದುರಂತವೆಂದರೆ ಅವರೆಂದೂ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಅವಕಾಶನ್ನೇ ಪಡೆಯಿಲ್ಲ. ಕೊನೆಗೆ 2014ರಲ್ಲಿ ಅವರು ಕ್ರಿಕೆಟ್‌ನಿಂದ ನಿವೃತ್ತಿಯೂ ಆದರು.
ಶ್ರೇಷ್ಠ ಸಿನಿಮಾ ಆಗುವ ಅದ್ಭುತ ಜೀವನ
ಎಕ್ಸ್ ಯೂಸರ್ @theskindoctor13 ಬರೆದುಕೊಂಡಿದ್ದು, 'ಚಕ್ ದೇ ಇಂಡಿಯಾ ಸಿನಿಮಾದ ಸೀಕ್ವಲ್‌ಗೆ ಇದು ಪರ್ಫೆಕ್ಟ್ ಸ್ಕ್ರಿಪ್ಟ. ಅಮೋಲ್ ಮಜುಂದಾರ್. ದೇಶೀಯ ಕ್ರಿಕೆಟ್‌ನ ಅತ್ಯಂತ ಶ್ರೇಷ್ಠ ಬ್ಯಾಟ್ಸ್‌ಮನ್. ಆದರೆ ಎಂದಿಗೂ ಭಾರತ ತಂಡದ ಪರ ಆಡುವ ಅವಕಾಶವನ್ನೇ ಪಡೆಯಲಿಲ್ಲ. 2023ರಲ್ಲಿ ಭಾರತ ಮಹಿಳಾ ತಂಡದ ಕೋಚ್ ಆದ ಅವರು, ತಂಡಕ್ಕೆ ಮೊಟ್ಟಮೊದಲ ವಿಶ್ವಕಪ್ ಗೆಲ್ಲಿಸಿಕೊಡಲು ಕಾರಣರಾದರು' ಎಂದು ಬರೆದಿದ್ದಾರೆ.

@SumitPurohit ಎನ್ನುವ ಯೂಸರ್, 'ಇದು ಅಮೋಲ್ ಮಜುಂದಾರ್ ಅವರ ಕಥೆ. ಒಂದು ಕಾಲದಲ್ಲಿ ಸಚಿನ್ ಜೊತೆ ಹೋಲಿಸಲಾಗುತ್ತಿದ್ದ ಆಟಗಾರು ಭಾರತದ ಪರ ಎಂದೂ ಆಡುವ ಅವಕಾಶ ಪಡೆಯಲಿಲ್ಲ. ಆದರೆ, ಈಗ ಕೋಚ್ ಆಗಿ ಮಹಿಳಾ ತಂಡದೊಂದಿಗೆ ವಿಶ್ವಕಪ್ ಜಯಿಸಿದ್ದಾರೆ. ಈ ಗೆಲುವಿನ ಪ್ರಯಾಣದಲ್ಲಿ ಪ್ರತಿ ಅಂಶವೂ ಶ್ರೇಷ್ಠ ಸಿನಿಮಾ ಆಗುವ ಕಥೆ ಹೊಂದಿದೆ' ಎಂದು ಬರೆದಿದ್ದಾರೆ.
2023ರಲ್ಲಿ ಮಜುಂದಾರ್ ಕೋಚ್ ಆಗಿ ನೇಮಕವಾಗಿದ್ದಾಗ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್‌ನಲ್ಲಿ ಅಶಾಂತಿ ತುಂಬಿತ್ತು. ಗುಂಪುಗಾರಿಕೆ ಮಿತಿಮೀರಿತ್ತು. ಆದರೆ, ಅಮೋಲ್ ಮಜುಂದಾರ್ ಅವರ ಶಾಂತ ಹಾಗೂ ಕ್ರಮಬದ್ಧ ವಿಧಾನವು ತಂಡದಲ್ಲಿ ವಿಶ್ವಾಸ ಹಾಗೂ ಏಕತೆಯನ್ನು ಮರಳಿ ಸ್ಥಾಪಿಸಿತ್ತು. ಟೂರ್ನಿಯಲ್ಲಿ ಆರಂಭಿಕ ಸೋಲುಗಳ ಬಳಿಕ ಹಾಗೂ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸೋಲು ಕಂಡ ಬಳಿಕ ಅವರು ಮಾಡಿದ್ದ ಸ್ಪೂರ್ತಿದಾಯಕ ಭಾಷಣ ಆಟಗಾರ್ತಿಯರಲ್ಲಿ ಹೊಸ ವಿಶ್ವಾಸ ಮೂಡಿಸಿತ್ತು.
ನಾವು ಆ ಸೋಲುಗಳನ್ನು ಸೋಲುಗಳು ಎನ್ನುವ ರೀತಿಯಲ್ಲಿ ನೋಡಬೇಕಿಲ್ಲ. ಇದು ನಮ್ಮ ಪ್ರಯಾಣದ ಸಣ್ಣ ಅಡೆತಡೆ ಅಂದುಕೊಂಡಿದ್ದವು. ಇವರು ಇಡೀ ಭಾರತ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಭಾರತೀಯ ಕ್ರಿಕೆಟ್‌ಅನ್ನು ಭಾವುಕಗೊಳಿಸಿದ ಕ್ಷಣ ಇದು ಎಂದು ಮಜುಂದಾರ್ ಫೈನಲ್ ಪಂದ್ಯದ ಬಳಿಕ ಹೇಳಿದ್ದರು.
ಅದರಲ್ಲೂ ಪಂದ್ಯ ಗೆದ್ದ ಬಳಿಕ ನಾಯಕಿ ಹರ್ಮಾನ್‌ಪ್ರೀತ್ ಕೌರ್, ಮಜುಂದಾರ್ ಕಾಲಿಗೆ ಬಿದ್ದು ನಮಸ್ಕರಿಸಿದ್ದ ಕ್ಷಣ ಕ್ರಿಕೆಟ್ ಪುಟದಲ್ಲಿ ಚಿರಕಾಲ ಉಳಿಯುವಂಥದ್ದು. ಬಳಿಕ ಆಕೆಯನ್ನು ತಬ್ಬಿಕೊಂಡು ಅಮೋಲ್ ಸಂತೈಸಿದ್ದು ಆಂತರಿಕವಾಗಿ ತಂಡದಲ್ಲಿ ಅವರಿಗೆ ಯಾವ ರೀತಿಯ ಸ್ಥಾನ ಇದೆ ಅನ್ನೋದನ್ನು ತೋರಿಸುವಂತಿತ್ತು.
ಮ್ಯಾಜಿಕಲ್ ಶೆಫಾಲಿ ಹಾಗೂ 1983ಯ ಕ್ಷಣ
ಇದೇ ವೇಳೆ ಮಜುಂದಾರ್ ಶೆಫಾಲಿ ವರ್ಮರನ್ನು ವಿಶೇಷವಾಗಿ ಹೊಗಳಿಸಿದರು. ಗಾಯಗೊಂಡ ಆಟಗಾರ್ತಿಯ ಬದಲಿಯಾಗಿ ತಂಡ ಸೇರಿದ್ದ ಶೆಫಾಲಿ ವರ್ಮ ಫೈನಲ್‌ನಲ್ಲಿ ಸ್ಮರಣೀಯ ಆಟವಾಡಿದರು. 'ಮ್ಯಾಜಿಕಲ್ ಸಂಪೂರ್ಣ ಭರ್ತಿಯಾಗಿದ್ದ ಸ್ಟೇಡಿಯಂನಲ್ಲಿ ಅದ್ಭುತವಾಗಿ ಇನ್ನಿಂಗ್ಸ್ ಆಡಿದರು.ಬಳಿಕ ಚೆಂಡಿನಲ್ಲಿಯೂ ತಮ್ಮ ಸಾಮರ್ಥ್ಯ ತೋರಿದರು' ಎಂದು ಹೇಳಿದ್ದಾರೆ.
1988ರಲ್ಲಿ ಸಚಿನ್ ತೆಂಡುಲ್ಕರ್ ಹಾಗೂ ವಿನೋದ್ ಕಾಂಬ್ಳಿ ಶಾಲಾ ಕ್ರಿಕೆಟ್‌ನಲ್ಲಿ ವಿಶ್ವದಾಖಲೆಯ ಜೊತೆಯಾಟ ಆಡುವ ವೇಳೆ ಎರಡು ದಿನಗಳ ಕಾಲ ಪ್ಯಾಡ್ ಕಟ್ಟಿಕೊಂಡು ತಮ್ಮ ಬ್ಯಾಟಿಂಗ್‌ಗೆ ಕಾಯುತ್ತಿದ್ದ ಅಮೋಲ್ ಮಜುಂದಾರ್, ಈಗ ವಿಶ್ವಕಪ್ ಗೆದ್ದ ಕೋಚ್ ಎನ್ನುವ ಅಪರೂಪದ ದಾಖಲೆ ಸಂಪಾದಿಸಿದ್ದಾರೆ.
