ಸ್ಟೇಡಿಯಂನ ಕಟ್ಟೆಯ ಮೇಲೆ ಕುಳಿತು ಮಗನ ಆಟ ವೀಕ್ಷಿಸಿದ ಟೀಮ್ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್!
ಟೀಮ್ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ವಿಶ್ವಕಪ್ ಮುಗಿದ ಬಳಿಕ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಶುಕ್ರವಾರ ರಾಹುಲ್ ದ್ರಾವಿಡ್ ಮೈಸೂರಿಗೆ ಭೇಟಿ ನೀಡಿ ಮಗ ಸಮಿತ್ ದ್ರಾವಿಡ್‌ನ ಆಟವನ್ನು ವೀಕ್ಷಿಸಿದ್ದಾರೆ.
ಬೆಂಗಳೂರು (ಡಿ.1): ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ತಮ್ಮ ಸರಳ ಸ್ವಭಾವದಿಂದ ಗುರುತಿಸಿಕೊಂಡವರು. ಟೀಮ್ ಇಂಡಿಯಾ ನಾಯಕ, ವಿಶ್ವವೇ ಮೆಚ್ಚುವಂಥ ಕ್ರಿಕೆಟಿಗ ಹಾಗೂ ಪ್ರಸ್ತುತ ಟೀಮ್ ಇಂಡಿಯಾ ಕೋಚ್ ಆಗಿದ್ದರೂ ಯಾವುದೇ ಹಮ್ಮು ಬಿಮ್ಮು ಇಲ್ಲದೆ ಎಲ್ಲರೊಂದಿಗೆ ಸರಳವಾಗಿ ಅವರು ಬೆರೆಯುತ್ತಾರೆ. ಮತದಾನ ಮಾಡುವಾಗ ಎಲ್ಲರಂತೆ ಕ್ಯೂನಲ್ಲಿ ನಿಂತುಕೊಳ್ಳುವ ದ್ರಾವಿಡ್, ತಮ್ಮ ಮಕ್ಕಳ ಪೇರೆಂಟ್ಸ್-ಟೀಚರ್ ಮೀಟಿಂಗ್‌ನಲ್ಲೂ ಖುಷಿ ಖುಷಿಯಾಗಿ ಭಾಗವಹಿಸುತ್ತಾರೆ. ಈ ವೇಳೆ ತಮ್ಮೊಂದಿಗೆ ಸೆಲ್ಫಿ ಕೆಳಿ ಬರುವ ಅಭಿಮಾನಿಗಳೊಂದಿಗೆ ಅಷ್ಟೇ ಶಾಂತ ಸ್ವಭಾವದಿಂದ ದ್ರಾವಿಡ್ ಸ್ಪಂದಿಸುತ್ತಾರೆ. ಇದರ ನಡುವೆ ರಾಹುಲ್ ದ್ರಾವಿಡ್ ಅವರ ಸರಳತೆಯ ಇನ್ನೊಂದು ಫೋಟೋ ಶುಕ್ರವಾರ ಬಹಿರಂಗವಾಗಿದೆ. ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಫೈನಲ್ ಪಂದ್ಯದಲ್ಲಿ ಸೋಲು ಕಂಡ ಬಳಿಕ ರಾಹುಲ್ ದ್ರಾವಿಡ್ ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಕುಟುಂಬದ ಜೊತೆ ಕೆಲ ಸಮಯವನ್ನು ಅವರು ಕಳೆಯುತ್ತಿದ್ದಾರೆ. ಇತ್ತೀಚೆಗೆ ಬಿಸಿಸಿಐ ದ್ರಾವಿಡ್ ಅವರನ್ನೇ ತಂಡದ ಮುಖ್ಯ ಕೋಚ್ ಆಗಿ ಮುಂದುವರಿಸುವುದಾಗಿ ಹೇಳಿಕೊಂಡಿದ್ದರೂ, ದ್ರಾವಿಡ್ ಮಾತ್ರ ತಾವು ಈವರೆಗೂ ಒಪ್ಪಂದಕ್ಕೆ ಸಹಿ ಹಾಕಿಲ್ಲ ಎಂದಿದ್ದಾರೆ.
ಈ ನಡುವೆ ರಾಹುಲ್ ದ್ರಾವಿಡ್ ಮೈಸೂರಿಗೆ ಪ್ರಯಾಣ ಮಾಡಿದ್ದಾರೆ. ಪತ್ನಿ ವಿಜೇತಾ ದ್ರಾವಿಡ್ ಅವರೊಂದಿಗೆ ಮೈಸೂರಿಗೆ ಪ್ರಯಾಣ ಮಾಡಿದ್ದ ದ್ರಾವಿಡ್, ಬೆಳಗ್ಗೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಹಾಜರಿದ್ದರು. ಹಾಗಂತ ಟೀಮ್ ಇಂಡಿಯಾ ಕೋಚ್, ಮಾಜಿ ನಾಯಕ ಬಂದಿದ್ದಾರೆ ಎನ್ನುವ ಹಮ್ಮಿನಲ್ಲಿ ವಿಶೇಷ ವ್ಯವಸ್ಥೆ ಮಾಡುವಂತೆ ಅಲ್ಲಿದ್ದ ಯಾರಿಗೂ ಕೇಳಿಕೊಂಡಿರಲಿಲ್ಲ. ಸೀದಾ ಸ್ಟೇಡಿಯಂಗೆ ಬಂದ ದ್ರಾವಿಡ್, ಅಲ್ಲಿದ್ದ ಕಲ್ಲಿನ ಕಟ್ಟೆಯ ಮೇಲೆ ಪತ್ನಿ ಜೊತೆ ಕುಳಿತುಕೊಂಡು ಪಂದ್ಯ ವೀಕ್ಷಣೆ ಮಾಡಿದ್ದಾರೆ. ಅವರ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ದ್ರಾವಿಡ್ ಅವರ ಸರಳ ಸ್ವಭಾವಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.
ಇನ್ನು ದ್ರಾವಿಡ್ ಸ್ಟೇಡಿಯಂನಲ್ಲಿ ಪಂದ್ಯ ವೀಕ್ಷಿಸಲು ಕಾರಣವೂ ಇತ್ತು. ದ್ರಾವಿಡ್ ಅವರ ಹಿರಿಯ ಪುತ್ರ ಸಮಿತ್ ದ್ರಾವಿಡ್ 19 ವಯೋಮಿತಿ ಕೂಚ್ ಬೆಹರ್ ಟ್ರೋಫಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಕರ್ನಾಟಕ ಹಾಗೂ ಉತ್ತರಾಖಂಡ ನಡುವೆ ಮೈಸೂರಿನಲ್ಲಿ ಪಂದ್ಯ ನಡೆಯುತ್ತಿದ್ದು ಅದನ್ನು ವೀಕ್ಷಿಸುವ ನಿಟ್ಟಿನಲ್ಲಿ ದ್ರಾವಿಡ್ ಆಗಮಿಸಿದ್ದರು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಉತ್ತಾರಖಂಡ್ ಮೊದಲ ದಿನದಾಟದ ಅಂತ್ಯಕ್ಕೆ 9 ವಿಕೆಟ್‌ಗೆ 232 ರನ್ ಪೇರಿಸಿದೆ. ಐದು ಓವರ್ ದಾಳಿ ನಡೆಸಿರುವ ಸಮಿತ್ ದ್ರಾವಿಡ್ 2 ಮೇಡನ್ ಎಸೆದು 11 ರನ್ ನೀಡಿದ್ದಾರೆ.
ಇನ್ನು ದ್ರಾವಿಡ್ ಅವರ ಇನ್ನೊಬ್ಬ ಪುತ್ರ ಅನ್ವಯ್ ದ್ರಾವಿಡ್ 16 ವಯೋಮಿತಿ ವಿಜಯ್ ಮರ್ಚೆಂಟ್ ಟೂರ್ನಿಯಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಆಂಧ್ರಪ್ರದೇಶದ ಮಂಗಳಗಿರಿಯಲ್ಲಿ ಪಂದ್ಯ ನಡೆಯುತ್ತಿದ್ದು ಕರ್ನಾಟಕ ಹಾಗೂ ಉತ್ತರಾಖಂಡ್ ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಗಮನಸೆಳೆದಿರುವ ಅನ್ವಯ್ ದ್ರಾವಿಡ್, 133 ಎಸೆತಗಳಲ್ಲಿ 59 ರನ್ ಬಾರಿಸಿದ್ದಾರೆ. ಅನ್ವಯ್ ದ್ರಾವಿಡ್ ತಂಡದ ನಾಯಕ ಹಾಗೂ ವಿಕೆಟ್ ಕೀಪರ್ ಆಗಿದ್ದಾರೆ.
ರಾಹುಲ್ ದ್ರಾವಿಡ್ ಕೋಚ್ ಅವಧಿ ಅಂತ್ಯಗೊಂಡಿದಕ್ಕೆ ಬೇಸರ ವ್ಯಕ್ತಪಡಿಸಿದ ನಟಿ ಆದಿತಿ ದ್ರಾವಿಡ್!
ಹಿಂದೊಮ್ಮೆ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಆಗಮಿಸಿದ್ದ ರಾಹುಲ್ ದ್ರಾವಿಡ್, ಮುಂದಿರುವ ಜನಜಂಗುಳಿಯನ್ನು ಕಂಡು, ಹಿಂದೆ ಯಾರಿಗೂ ಗೊತ್ತಾಗದಂತೆ ಕುರ್ಚಿಯಲ್ಲಿ ಕುಳಿತಿದ್ದರು. ಸಂಘಟಕರಿಗೆ ಇದು ಗೊತ್ತಾಗಿ ದ್ರಾವಿಡ್ ಅವರಿಗೆ ಮುಂದೆ ಬರುವಂತೆ ಹೇಳಿದಾಗ, ಸ್ವತಃ ದ್ರಾವಿಡ್ ತಾವು ಇಲ್ಲಿಯೇ ಇರುತ್ತೇನೆ ನೀವು ಕಾರ್ಯಕ್ರಮ ಮುಂದುವರಿಸಿ ಎಂದು ಹೇಳಿದ್ದೂ ವೈರಲ್ ಆಗಿತ್ತು.
ಸೀರಿಯಲ್‌ನಲ್ಲಿ ಪ್ರಖ್ಯಾತ ನಟಿ ಆಗಿರುವ ಈಕೆ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಅವರ ರಿಲೇಟಿವ್!