ಶ್ರೇಯಸ್‌ ಅಯ್ಯರ್‌ ನಾಯಕತ್ವದಲ್ಲಿ ಸತತ ಸೋಲು ಕಂಡಿರುವ ಭಾರತ ಟಿ20 ತಂಡವು ಇದೀಗ ಜಿಂಬಾಬ್ವೆ ವಿರುದ್ಧ 3 ಪಂದ್ಯಗಳ ಸರಣಿಗೆ ಸಜ್ಜಾಗಿದೆ. ಯುವ ಆಟಗಾರರ ಪಡೆಯೊಂದಿಗೆ ಕಣಕ್ಕಿಳಿಯಲಿರುವ ಭಾರತಕ್ಕೆ, ತವರಿನ ಲಾಭದೊಂದಿಗೆ ಸಿಕಂದರ್‌ ರಝಾ ನೇತೃತ್ವದ ಜಿಂಬಾಬ್ವೆ ಪ್ರಬಲ ಪೈಪೋಟಿ ನೀಡುವ ವಿಶ್ವಾಸದಲ್ಲಿದೆ.

ಹರಾರೆ: ಶ್ರೇಯಸ್‌ ಅಯ್ಯರ್‌ ಭಾರತ ಟಿ20 ತಂಡದ ನಾಯಕತ್ವ ವಹಿಸಿದ ಬಳಿಕ ತಂಡಕ್ಕೆ ಒಂದೂ ಗೆಲುವು ಲಭಿಸಿಲ್ಲ. ಆಡಿರುವ 7 ಪಂದ್ಯಗಳ ಪೈಕಿ 1 ರದ್ದುಗೊಂಡಿದ್ದು, ಉಳಿದ 6ರಲ್ಲಿ ಪರಾಭವಗೊಂಡಿರುವ ತಂಡಕ್ಕೆ ಈಗ ಜಿಂಬಾಬ್ವೆ ಸವಾಲು ಎದುರಾಗಲಿದೆ. ಉಭಯ ತಂಡಗಳು ಗುರುವಾರದಿಂದ 3 ಪಂದ್ಯಗಳ ಸರಣಿಯಲ್ಲಿ ಮುಖಾಮುಖಿಯಾಗಲಿವೆ.ಹಾಲಿ ಟಿ20 ವಿಶ್ವ ಚಾಂಪಿಯನ್‌ ಭಾರತ ತಂಡಕ್ಕೆ ಈಗ ಶ್ರೇಯಸ್‌ ಸಾರಥಿ. ಆದರೆ ಇತ್ತೀಚೆಗೆ ಐರ್ಲೆಂಡ್‌ ವಿರುದ್ಧ 0-2 ಅಂತರದಲ್ಲಿ ಸೋತಿದ್ದ ತಂಡ, ಬಳಿಕ ಇಂಗ್ಲೆಂಡ್‌ ವಿರುದ್ಧ 0-4 ಅಂತರದಲ್ಲಿ ಅವಮಾನಕಾರಿ ಸೋಲನುಭವಿಸಿದೆ. ಹೀಗಾಗಿ ತಂಡಕ್ಕೆ ಪುಟಿದೇಳುವ ಗುರಿ ಇದೆ. ಜಿಂಬಾಬ್ವೆ ಸರಣಿಯಲ್ಲಿ ತಂಡ ಉತ್ತಮ ಪ್ರದರ್ಶನ ತೋರಿ ಗೆಲ್ಲುವ ನಿರೀಕ್ಷೆ ಇದ್ದರೂ, ಅದಕ್ಕೆ ಸುಧಾರಿತ ಆಟವಾಡುವ ಅಗತ್ಯವಿದೆ.

ಭಾರತದ ಯುವ ಪಡೆಯ ಮೇಲೆ ಎಲ್ಲರ ಕಣ್ಣು

ಯುವ ತಾರೆ, 15 ವರ್ಷದ ವೈಭವ್‌ ಸೂರ್ಯವಂಶಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇನ್ನೂ ಮಿಂಚಿನ ಆಟವಾಡಿಲ್ಲ. ಅವರಿಂದ ಜಿಂಬಾಬ್ವೆ ಸರಣಿಯಲ್ಲಿ ದೊಡ್ಡ ಇನ್ನಿಂಗ್ಸ್‌ ನಿರೀಕ್ಷೆ ಇಡಲಾಗಿದೆ. ಕಳೆದ ಬಾರಿ ಭಾರತ ತಂಡ ಜಿಂಬಾಬ್ವೆ ಪ್ರವಾಸ ಕೈಗೊಂಡಿದ್ದಾಗ ಅಭಿಷೇಕ್‌ ಶರ್ಮಾ ಅಂತಾರಾಷ್ಟ್ರೀಯ ಟಿ20ಯಲ್ಲಿ ತಮ್ಮ ಚೊಚ್ಚಲ ಶತಕ ಬಾರಿಸಿದ್ದರು. ಹೀಗಾಗಿ ಅವರು ಮತ್ತೊಮ್ಮೆ ಅಬ್ಬರಿಸುವ ಕಾತರದಲ್ಲಿದ್ದಾರೆ. ಇಶಾನ್‌ ಕಿಶನ್‌ ಸ್ಥಿರ ಪ್ರದರ್ಶನ ನೀಡಬೇಕಾಗಿದ್ದು, ಶ್ರೇಯಸ್‌ ತಮ್ಮ ಬ್ಯಾಟಿಂಗ್‌ ಜೊತೆ ನಾಯಕತ್ವದಲ್ಲೂ ಯಶಸ್ವಿಯಾಗುವ ಅಗತ್ಯವಿದೆ. ಭಾರತದ ಪರ ಮೊದಲ ಗೆಲುವಿಗೆ ಅವರು ಕಾಯುತ್ತಿದ್ದಾರೆ. ತಿಲಕ್ ವರ್ಮಾ ತಂಡದ ಕಾಯಂ ಸದಸ್ಯರಾಗಿದ್ದರೂ ಮಧ್ಯಮ ಓವರ್‌ಗಳಲ್ಲಿ ಅವರ ನಿಧಾನಗತಿ ಆಟ ತಂಡಕ್ಕೆ ಮುಳುವಾಗುತ್ತಿದೆ. ಹೀಗಾಗಿ ಸ್ಟ್ರೈಕ್‌ರೇಟ್‌ ಹೆಚ್ಚಿಸುವತ್ತ ಗಮನ ಹರಿಸಬೇಕಿದೆ. ರಿಂಕು ಸಿಂಗ್‌ ತಂಡದಲ್ಲಿ ಸ್ಥಾನ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಅಬ್ಬರದ ಆಟವಾಡಬೇಕಿದೆ.

ಶಿವಂ ದುಬೆ, ಹರ್ಷ್‌ ದುಬೆ ಹಾಗೂ ಸೂರ್ಯಾನ್ಶ್‌ ಶೆಡ್ಗೆ ಪೈಕಿ ಯಾರಿಗೆ ತಂಡದಲ್ಲಿ ಸ್ಥಾನ ಸಿಗಲಿದೆ ಎಂಬ ಕುತೂಹಲವಿದೆ. ಬೌಲಿಂಗ್‌ ವಿಭಾಗದಲ್ಲಿ ಯುವ ವೇಗಿಗಳೇ ಇದ್ದು, ಪ್ರಿನ್ಸ್‌ ಯಾದವ್‌, ಮಯಾಂಕ್‌ ಯಾದವ್‌, ಅಶೋಕ್‌ ಶರ್ಮಾ, ಯಶ್‌ ಠಾಕೂರ್‌ ತಮ್ಮ ಆಯ್ಕೆ ಸಮರ್ಥಿಸಿಕೊಳ್ಳುವ ರೀತಿ ಆಟವಾಡಬೇಕಿದೆ.

ಪ್ರಬಲ ಪೈಪೋಟಿ ನಿರೀಕ್ಷೆ:

ಭಾರತಕ್ಕೆ ಈ ಸರಣಿಯಲ್ಲಿ ಪ್ರಬಲ ಪೈಪೋಟಿ ನೀಡುವುದಾಗಿ ಜಿಂಬಾಬ್ವೆ ನಾಯಕ ಸಿಕಂದರ್‌ ರಝಾ ಈಗಾಗಲೇ ಹೇಳಿದ್ದಾರೆ. ತಂಡ ಬಲಿಷ್ಠವಾಗಿದ್ದು, ಗೆಲುವಿನ ವಿಶ್ವಾಸವೂ ಇದೆ. ಹೀಗಾಗಿಯೇ ಏಕಮುಖ ಫಲಿತಾಂಶ ನಿರೀಕ್ಷಿಸಬೇಡಿ ಎಂಬರ್ಥದಲ್ಲಿ ಅವರು ಸಂದೇಶ ನೀಡಿದ್ದಾರೆ. ತಂಡದಲ್ಲಿ ಬ್ರಿಯಾನ್‌ ಬೆನೆಟ್‌, ರ್‍ಯಾನ್‌ ಬರ್ಲ್‌, ಮರುಮುನಿ ಸೇರಿ ಪ್ರಮುಖ ಆಟಗಾರರಿದ್ದು, ತವರಿನ ಕ್ರೀಡಾಂಗಣದ ಲಾಭವೆತ್ತಿ ಭಾರತಕ್ಕೆ ಸವಾಲೊಡ್ಡುವ ನಿರೀಕ್ಷೆಯಲ್ಲಿದೆ.

ಜಿಂಬಾಬ್ವೆ ವಿರುದ್ಧ 3 ಟಿ20 ಪಂದ್ಯ ಸೋತಿದೆ ಭಾರತ: ಭಾರತ-ಜಿಂಬಾಬ್ವೆ ತಂಡಗಳು ಈವರೆಗೂ 14 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ 11, ಜಿಂಬಾಬ್ವೆ 3 ಪಂದ್ಯದಲ್ಲಿ ಗೆದ್ದಿದೆ.