ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್‌ನಲ್ಲಿ, ಭಾರತ ಎ ತಂಡ ಒಮಾನ್ ವಿರುದ್ಧ ಆರು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಹರ್ಷ್ ದುಬೆ ಅವರ ಅಜೇಯ 53 ರನ್‌ಗಳ ನೆರವಿನಿಂದ 136 ರನ್‌ಗಳ ಗುರಿಯನ್ನು ಸುಲಭವಾಗಿ ತಲುಪಿದ ಭಾರತ, ಈ ಗೆಲುವಿನೊಂದಿಗೆ ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ.

ದೋಹಾ: ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್‌ನಲ್ಲಿ ಒಮಾನ್ ವಿರುದ್ಧದ ಪಂದ್ಯದಲ್ಲಿ ಭಾರತ ಎ ತಂಡಕ್ಕೆ ಆರು ವಿಕೆಟ್‌ಗಳ ಭರ್ಜರಿ ಜಯ ಸಿಕ್ಕಿದೆ. ದೋಹಾದಲ್ಲಿ ನಡೆದ ಪಂದ್ಯದಲ್ಲಿ ಒಮಾನ್ ನೀಡಿದ 136 ರನ್‌ಗಳ ಗುರಿಯನ್ನು ಭಾರತ 17.5 ಓವರ್‌ಗಳಲ್ಲಿ ಕೇವಲ ನಾಲ್ಕು ವಿಕೆಟ್ ಕಳೆದುಕೊಂಡು ತಲುಪಿತು. 44 ಎಸೆತಗಳಲ್ಲಿ ಅಜೇಯ 53 ರನ್ ಗಳಿಸಿದ ಹರ್ಷ್ ದುಬೆ ಭಾರತವನ್ನು ಗೆಲುವಿನತ್ತ ಮುನ್ನಡೆಸಿದರು. ನಮನ್ ಧಿರ್ ಅವರ (19 ಎಸೆತಗಳಲ್ಲಿ 30) ಇನ್ನಿಂಗ್ಸ್ ಕೂಡ ನಿರ್ಣಾಯಕವಾಯಿತು. ಈ ಗೆಲುವಿನೊಂದಿಗೆ ಭಾರತ ಸೆಮಿಫೈನಲ್‌ಗೆ ಅರ್ಹತೆ ಪಡೆದಿದೆ. ಭಾರತ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿದೆ. ಪಾಕಿಸ್ತಾನ ಗ್ರೂಪ್ ಹಂತದಲ್ಲಿ ಅಗ್ರಸ್ಥಾನಿಯಾಗಿ ಸೆಮಿಫೈನಲ್ ತಲುಪಿದೆ. ಗ್ರೂಪ್ ಹಂತದಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಕಿರಿಯರ ತಂಡ ಸೋಲು ಅನುಭವಿಸಿತ್ತು.

ಭಾರತ ಎಚ್ಚರಿಕೆಯ ಆರಂಭ

ಭಾರತಕ್ಕೆ ನಿಧಾನಗತಿಯ ಆರಂಭ ಸಿಕ್ಕಿತು. 37 ರನ್‌ಗಳಿಗೆ ಭಾರತ ಪ್ರಿಯಾಂಶ್ ಆರ್ಯ (10) ಮತ್ತು ವೈಭವ್ ಸೂರ್ಯವಂಶಿ (12) ಅವರ ವಿಕೆಟ್‌ಗಳನ್ನು ಕಳೆದುಕೊಂಡಿತು. ನಂತರ ದುಬೆ - ಧಿರ್ ಜೋಡಿ 31 ರನ್‌ಗಳ ಜತೆಯಾಟವಾಡಿತು. ಒಂಬತ್ತನೇ ಓವರ್‌ನಲ್ಲಿ ಭಾರತ ನಮನ್ ಧಿರ್ ವಿಕೆಟ್ ಕಳೆದುಕೊಂಡಿತು. ಆದರೆ, ದುಬೆ - ನೆಹಾಲ್ ವಧೇರಾ (24 ಎಸೆತಗಳಲ್ಲಿ 23) ಜೊತೆಯಾಟ ಭಾರತಕ್ಕೆ ಆಸರೆಯಾಯಿತು. ಇಬ್ಬರೂ 66 ರನ್‌ಗಳ ಜತೆಯಾಟವಾಡಿದರು. ವಧೇರಾ ಔಟಾದರೂ, ನಾಯಕ ಜಿತೇಶ್ ಶರ್ಮಾ ಜೊತೆಗೂಡಿ ದುಬೆ ಭಾರತವನ್ನು ಗೆಲುವಿನತ್ತ ಕೊಂಡೊಯ್ದರು.

ಇದಕ್ಕೂ ಮೊದಲು ತಲಾ ಎರಡು ವಿಕೆಟ್ ಪಡೆದ ಗುರ್ಜಪ್ನೀತ್ ಸಿಂಗ್ ಮತ್ತು ಸುಯಶ್ ಶರ್ಮಾ ಒಮಾನ್ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕಿದರು. 54 ರನ್ ಗಳಿಸಿದ ವಸೀಮ್ ಅಲಿ ಒಮಾನ್ ಪರ ಟಾಪ್ ಸ್ಕೋರರ್ ಆದರು. ಹಮ್ಮದ್ ಮಿರ್ಜಾ 32 ರನ್ ಗಳಿಸಿದರು. ನಾರಾಯಣ್ ಸೈಶಿವ್ (16) ಮತ್ತು ಕರಣ್ ಸೋನಾವಾಲ (12) ಎರಡಂಕಿ ದಾಟಿದ ಇತರ ಆಟಗಾರರು. ವಿಜಯಕುಮಾರ್ ವೈಶಾಖ್, ಹರ್ಷ್ ದುಬೆ ಮತ್ತು ಧಿರ್ ತಲಾ ಒಂದು ವಿಕೆಟ್ ಪಡೆದರು.

ಸೆಮಿಫೈನಲ್‌ಗೆ ವೇದಿಕೆ ಸಜ್ಜು

ಇದೀಗ ಭಾರತ ತಂಡವು ನವೆಂಬರ್ 21ರಂದು ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ 'ಎ' ಗುಂಪಿನ ಅಗ್ರಸ್ಥಾನಿಯೊಂದಿಗೆ ಸೆಣಸಾಡಲಿದೆ. ಸದ್ಯ 'ಎ' ಗುಂಪಿನಲ್ಲಿ ಬಾಂಗ್ಲಾದೇಶ ತಂಡವು ಆಡಿದ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಅಗ್ರಸ್ಥಾನದಲ್ಲಿ ಭದ್ರವಾಗಿದೆ. ಬಹುತೇಕ ಭಾರತ ಹಾಗೂ ಬಾಂಗ್ಲಾದೇಶ ತಂಡಗಳೇ ಮೊದಲ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗುವ ಸಾಧ್ಯತೆಯಿದೆ.