Asianet Suvarna News Asianet Suvarna News

Ind vs SA ಬೆಂಗಳೂರಿನಲ್ಲಿಂದು ಭಾರತ-ದಕ್ಷಿಣ ಆಫ್ರಿಕಾ ಟಿ20 ಫೈನಲ್‌ ಫೈಟ್

* ಭಾರತ-ದಕ್ಷಿಣ ಆಫ್ರಿಕಾ ಕೊನೆಯ ಟಿ20 ಪಂದ್ಯಕ್ಕೆ ಕ್ಷಣಗಣನೆ
* ಸರಣಿಯಲ್ಲಿ 2-2ರ ಸಮಬಲ ಸಾಧಿಸಿರುವ ಉಭಯ ತಂಡಗಳು
* ಇಂದು ನಡೆಯಲಿರುವ ಹೈವೋಲ್ಟೇಜ್ ಪಂದ್ಯಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ

Ind vs SA Team India take on South Africa in 5th and decider T20I Match in Bengaluru kvn
Author
Bengaluru, First Published Jun 19, 2022, 10:00 AM IST | Last Updated Jun 19, 2022, 10:00 AM IST

ಬೆಂಗಳೂರು(ಜೂ.19): ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ಚೊಚ್ಚಲ ಟಿ20 ಸರಣಿ ಗೆಲ್ಲುವ ನಿರೀಕ್ಷೆಯಲ್ಲಿರುವ ಟೀಂ ಇಂಡಿಯಾ (Team India), ಪ್ರವಾಸಿ ತಂಡದ ವಿರುದ್ಧ ಭಾನುವಾರ 5ನೇ ಹಾಗೂ ಕೊನೆ ಟಿ20 ಪಂದ್ಯವನ್ನು ಆಡಲಿದೆ. ಸರಣಿಯಲ್ಲಿ ಉಭಯ ತಂಡಗಳು 2-2ರಿಂದ ಸಮಬಲಗೊಳಿಸಿದ್ದು, ಹೀಗಾಗಿ ಈ ಪಂದ್ಯ ವರ್ಚುವಲ್‌ ಫೈನಲ್‌ ಎನಿಸಿಕೊಂಡಿದೆ. ವಾರಾಂತ್ಯದ ಹೈವೋಲ್ಟೇಜ್‌ ಪಂದ್ಯಕ್ಕೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣ (M Chinnaswamy Stadium) ಆತಿಥ್ಯ ವಹಿಸಲಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಆರಂಭಿಕ ಎರಡು ಪಂದ್ಯಗಳಲ್ಲಿ ಭಾರತ ಸೋಲನುಭವಿಸಿತ್ತು. ಆದರೆ ಕಳೆದೆರಡು ಪಂದ್ಯಗಳಲ್ಲಿ ಗೆಲುವಿನ ಲಯಕ್ಕೆ ಮರಳಿರುವ ರಿಷಭ್ ಪಂತ್‌ (Rishabh Pant) ನೇತೃತ್ವದ ಭಾರತ ಹ್ಯಾಟ್ರಿಕ್‌ ಗೆಲುವಿನೊಂದಿಗೆ ಸರಣಿ ಕೈವಶಪಡಿಸಿಕೊಳ್ಳಲು ಎದುರು ನೋಡುತ್ತಿದೆ. ಈ ಪಂದ್ಯ ಗೆದ್ದರೆ ಭಾರತ, ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ನೆಲದಲ್ಲಿ ಮೊದಲ ಟಿ20 ಸರಣಿ ಗೆದ್ದಂತಾಗುತ್ತುದೆ. ಇದಕ್ಕೂ ಮೊದಲು 2015-16ರಲ್ಲಿ ನಡೆದಿದ್ದ 3 ಪಂದ್ಯಗಳ ಸರಣಿಯಲ್ಲಿ ದ.ಆಫ್ರಿಕಾ 2-0 ಅಂತರದಲ್ಲಿ ಗೆದ್ದಿದ್ದರೆ, 2019-20ರ ಸರಣಿ 1-1ರಿಂದ ಸಮಬಲಗೊಂಡಿತ್ತು.

ಯುವ ಕ್ರಿಕೆಟಿಗರೊಂದಿಗೆ ಸರಣಿ ಆಡುತ್ತಿರುವ ಟೀಂ ಇಂಡಿಯಾ ಮೊದಲೆರಡು ಪಂದ್ಯಗಳನ್ನು ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ವೈಫಲ್ಯದಿಂದ ಕಳೆದುಕೊಂಡಿತ್ತು. ಆದರೆ ಕಳೆದೆರಡು ಪಂದ್ಯಗಳಲ್ಲಿ ತಂಡ ಸಂಘಟಿತ ಪ್ರದರ್ಶನ ತೋರುತ್ತಿದ್ದು, ಅದೇ ಆಟ ಮುಂದುವರಿಸುವ ನಿರೀಕ್ಷೆಯಲ್ಲಿದೆ. ಇಶಾನ್‌ ಕಿಶಾನ್‌ (Ishan Kishan), ಋುತುರಾಜ್‌ ಗಾಯಕ್ವಾಡ್‌, ಶ್ರೇಯಸ್‌ ಅಯ್ಯರ್‌ (Shreyas Iyer) ಲಯ ಮುಂದುವರಿಸಲು ಎದುರು ನೋಡುತ್ತಿದ್ದು, ಪಂತ್‌ ನಾಯಕತ್ವ ಒತ್ತಡದಿಂದ ಹೊರಬಂದು ಸ್ಫೋಟಕ ಆಟದ ನಿರೀಕ್ಷೆಯಲ್ಲಿದ್ದಾರೆ. ಹಾರ್ದಿಕ್‌ ಪಾಂಡ್ಯ (Hardik Pandya), ದಿನೇಶ್‌ ಕಾರ್ತಿಕ್‌ (Dinesh Karthik) ಅಬ್ಬರಿಸಿದರೆ ದ.ಆಫ್ರಿಕಾಕ್ಕೆ ಉಳಿಗಾಲವಿಲ್ಲ. ಇವರಿಬ್ಬರ ಅಬ್ಬರದ ಪ್ರದರ್ಶನಕ್ಕೆ ಕಡಿವಾಣ ಹಾಕುವುದೇ ದ.ಆಫ್ರಿಕಾ ಬೌಲರ್‌ಗಳಿಗೆ ಸವಾಲಾಗಿ ಪರಿಣಮಿಸಿದೆ. ಇನ್ನು, ಬೌಲಿಂಗ್‌ನಲ್ಲಿ ಭುವನೇಶ್ವರ್‌ ಕುಮಾರ್, ಹರ್ಷಲ್‌ ಪಟೇಲ್, ಆವೇಶ್‌ ಖಾನ್ ತಮ್ಮ ಹೊಣೆ ಸೂಕ್ತವಾಗಿ ನಿಭಾಯಿಸುತ್ತಿದ್ದು, ಸ್ಪಿನ್ನರ್‌ಗಳಾದ ಚಹಲ್‌, ಅಕ್ಷರ್‌ ಮತ್ತೊಮ್ಮೆ ಮೋಡಿ ಮಾಡಲು ಕಾಯುತ್ತಿದ್ದಾರೆ.

ಮತ್ತೊಂದೆಡೆ ದಕ್ಷಿಣ ಆಫ್ರಿಕಾಕ್ಕೆ ಬ್ಯಾಟಿಂಗ್‌ ಪಡೆಯೇ ತಲೆನೋವಾಗಿ ಪರಿಣಮಿಸಿದ್ದು, ಡೇವಿಡ್ ಮಿಲ್ಲರ್‌, ವ್ಯಾನ್ ಡರ್ ಡುಸೆನ್‌, ಹೆನ್ರಿಚ್ ಕ್ಲಾಸೆನ್‌ರನ್ನೇ ಹೆಚ್ಚಾಗಿ ನೆಚ್ಚಿಕೊಂಡಿದೆ. ಗಾಯಗೊಂಡಿರುವ ತೆಂಬ ಬವುಮಾ (Temba Bavuma) ಈ ಪಂದ್ಯದಲ್ಲಿ ಆಡುವ ಬಗ್ಗೆ ಖಚಿತತೆ ಇಲ್ಲ. ಇನ್ನು ಕ್ವಿಂಟನ್ ಡಿ ಕಾಕ್‌, ರೀಜಾ ಹೆಂಡ್ರಿಕ್ಸ್‌ ಮೇಲೆ ದೊಡ್ಡ ಇನ್ನಿಂಗ್ಸ್‌ ಕಟ್ಟುವ ಜವಾಬ್ದಾರಿಯಿದೆ.

ಭಾರತ-ದಕ್ಷಿಣ ಆಫ್ರಿಕಾ ಟಿ20, ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಚಾರ ಮಾರ್ಗ ಬದಲಾವಣೆ!

ಪಿಚ್‌ ರಿಪೋರ್ಚ್‌

ಚಿನ್ನಸ್ವಾಮಿ ಕ್ರೀಡಾಂಗಣ ಬ್ಯಾಟಿಂಗ್‌ ಸ್ನೇಹಿ ಪಿಚ್‌ ಆಗಿದ್ದು, ಇಲ್ಲಿ ನಡೆದ 7 ಟಿ20 ಪಂದ್ಯಗಳಲ್ಲಿ 5ರಲ್ಲಿ ರನ್‌ ಬೆನ್ನತ್ತಿದ ತಂಡ ಗೆಲುವು ಸಾಧಿಸಿದೆ. ಸಣ್ಣ ಬೌಂಡರಿಗಳಿರುವ ಕಾರಣ ರನ್‌ ಹೊಳೆಯೇ ಹರಿಯುವ ನಿರೀಕ್ಷೆ ಇದೆ. ಟಾಸ್‌ ಗೆಲ್ಲುವ ತಂಡ ಮೊದಲು ಫೀಲ್ಡಿಂಗ್‌ ಆಯ್ದುಕೊಳ್ಳಬಹುದು. ನಗರದಲ್ಲಿ ಕೆಲ ದಿನಗಳಿಂದ ಮಳೆಯಾಗುತ್ತಿದ್ದು, ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ಇಶಾನ್‌, ಋುತುರಾಜ್‌, ಶ್ರೇಯಸ್‌ ಅಯ್ಯರ್‌, ರಿಷಬ್‌ ಪಂತ್‌(ನಾಯಕ), ಕಾರ್ತಿಕ್‌, ಹಾರ್ದಿಕ್‌, ಅಕ್ಷರ್‌, ಭುವನೇಶ್ವರ್‌, ಹರ್ಷಲ್‌, ಆವೇಶ್‌, ಚಹಲ್‌

ದ.ಅಫ್ರಿಕಾ: ಬವುಮಾ(ನಾಯಕ), ಹೆಂಡ್ರಿಕ್ಸ್‌, ಡಿ ಕಾಕ್‌, ಡುಸೆನ್‌, ಕ್ಲಾಸೆನ್‌, ಪ್ರಿಟೋರಿಯಸ್‌, ಮಿಲ್ಲರ್‌, ಯಾನ್ಸೆನ್‌, ಮಹಾರಾಜ್‌, ಶಮ್ಸಿ, ರಬಾಡ, ನೋಕಿಯಾ.

ಪಂದ್ಯ ಆರಂಭ: ಸಂಜೆ 7ಕ್ಕೆ

ಸ್ಥಳ: ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು

ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌

Latest Videos
Follow Us:
Download App:
  • android
  • ios