ಏಷ್ಯಾಕಪ್ ಟೂರ್ನಿಯ ಅತ್ಯಂತ ರೋಚಕ, ಹೈವೋಲ್ಟೇಜ್ ಪಂದ್ಯ ಆರಂಭಗೊಂಡಿದೆ. ದುಬೈ ಕ್ರೀಡಾಂಗಣದಲ್ಲಿ ಅಭಿಮಾನಿಗಳು ಕಿಕ್ಕಿರಿದು ತುಂಬಿದ್ದಾರೆ. ಈ ರೋಚಕ ಹೋರಾಟದಲ್ಲಿ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.
ದುಬೈ(ಆ.28): ಕ್ರೀಡಾಂಗಣ ಸಂಪೂರ್ಣ ಭರ್ತಿಯಾಗಿದೆ. ಎಲ್ಲಾ ಮನೆಗಳ ಟಿವಿ ಮುಂದೆ ಜನ ಕೂತಿದ್ದಾರೆ. ಅಭಿಮಾನಿಗಳಲ್ಲಿ ಭಾರಿ ಲೆಕ್ಕಾಚಾರ, ಅತ್ತ ಗೆಲುವಿಗಾಗಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ರಣತಂತ್ರ. ಇದು ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ಚಿತ್ರಣ. ಈ ಮಹತ್ವದ ಹಾಗೂ ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ರಿಷಬ್ ಪಂತ್ ಬದಲು ದಿನೇಶ್ ಕಾರ್ತಿಕ್ ಆಯ್ಕೆ ಮಾಡಲಾಗಿದೆ. ಇನ್ನು ಭುವನೇಶ್ವರ್ ಕುಮಾರ್ ಜೊತೆ ಅವೇಶ್ ಖಾನ್ ಕೂಡ ವೇಗದ ಸಾರಥ್ಯ ವಹಿಸಿಕೊಂಡಿದ್ದಾರೆ.
ಟೀಂ ಇಂಡಿಯಾ ಪ್ಲೇಯಿಂಗ್ 11
ರೋಹಿತ್ ಶರ್ಮಾ(ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ದಿನೇಶ್ ಕಾರ್ತಿಕ್, ಭುವನೇಶ್ವರ್ ಕುಮಾರ್, ಆವೇಶ್ ಖಾನ್, ಅರ್ಶದೀಪ್ ಸಿಂಗ್, ಯಜುವೇಂದ್ರ ಚಹಾಲ್
ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆಯಲು ರೋಹಿತ್ ಶರ್ಮಾಗೆ ಬೇಕಿದೆ ಕೇವಲ 10 ರನ್..!
ಪಾಕಿಸ್ತಾನ ಪ್ಲೇಯಿಂಗ್ 11
ಬಾಬರ್ ಅಜಮ್(ನಾಯಕ), ಮೊಹಮ್ಮದ್ ರಿಜ್ವಾನ್, ಫಕರ್ ಜಮಾನ್, ಇಫ್ತಿಕಾರ್ ಅಹಮ್ಮದ್, ಖುಶ್ದಿಲ್ ಶಾ, ಆಸಿಫ್ ಆಲಿ, ಶದಬ್ ಖಾನ್, ಮೊಹಮ್ಮದ್ ನವಾಜ್, ನಸೀಮ್ ಶಾ, ಹ್ಯಾರಿಸ್ ರೌಫ್, ಶೆಹನ್ವಾಜ್ ದಹನಿ
ಕಳೆದ ಒಂದು ವರ್ಷದಲ್ಲಿ ಭಾರತ ಟಿ20 ತಂಡದ ಸ್ವರೂಪ ಬದಲಾಗಿದೆ. ಹೊಸ ಆಟಗಾರರು ತಂಡ ಸೇರಿಕೊಂಡಿದ್ದಾರೆ. ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ ಸೇರಿದಂತೆ ಯುವ ಆಟಗಾರರನ್ನೊಳಗೊಂಡ ಟೀಂ ಇಂಡಿಯಾ ಅತ್ಯಂತ ಬಲಿಷ್ಠವಾಗಿದೆ. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಇದೇ ಪಾಕಿಸ್ತಾನ ವಿರುದ್ದದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮುಗ್ಗರಿಸಿತ್ತು. ಇದು ಪಾಕಿಸ್ತಾನ ಆತ್ಮವಿಶ್ವಾಸ ಹೆಚ್ಚಿಸಿದ್ದರೆ, ಇತ್ತ ಬಾರತ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ.
ಭಾರತದ ಮಧ್ಯಮ ಕ್ರಮಾಂಕದಲ್ಲೂ ಕೆಲ ಬದಲಾವಣೆಗಳಾಗಿದೆ. ದಿನೇಶ್ ಕಾರ್ತಿಕ್ ಗೇಮ್ ಫಿನೀಶರ್ ಆಗಿ ಬಡ್ತಿ ಪಡೆದಿದ್ದಾರೆ. ಇಷ್ಟೇ ಅಲ್ಲ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಹೊಸ ಹಾಗೂ ಅನುಭವಿ ಬೌಲಿಂಗ್ ಮಿಶ್ರಮ ಟೀಂ ಇಂಡಿಯಾಗೆ ನೆರವಾಗಲಿದೆ. ಇತ್ತ ಪಾಕಿಸ್ತಾನ ತಂಡಕ್ಕೆ ಶಹೀನ್ ಆಪ್ರಿದಿ ಅನುಪಸ್ಥಿತಿ ಕಾಡಲಿದೆ. ನಾಯಕ ಬಾಬರ್ ಅಜಮ್ ಹೊರತುಪಡಿಸಿದರೆ ಇತರರಿಂದ ಸ್ಥಿರ ಬ್ಯಾಟಿಂಗ್ ಪ್ರದರ್ಶನ ಮೂಡಿಬರುತ್ತಿಲ್ಲ. ಇದು ತಲೆನೋವಾಗಿದೆ. ಮೊಹಮ್ಮದ್ ವಾಸಿಮ್ ಅಲಭ್ಯತೆ ಕೂಡ ಪಾಕ್ ತಂಡಕ್ಕೆ ತೀವ್ರ ಹಿನ್ನಡೆ ತಂದಿದೆ. ಆದರೆ ಹಸನ್ ಆಲಿ ತಂಡ ಸೇರಿಕೊಂಡಿದ್ದಾರೆ.
ಇಂಡೋ ಪಾಕ್ ಪಂದ್ಯ ವೀಕ್ಷಿಸಿದರೆ 5 ಸಾವಿರ ರೂ ದಂಡ, ಶ್ರೀನಗರದ ಕಾಲೇಜು ಆಡಳಿತ ಮಂಡಳಿ ಆದೇಶ!
2021ರ ಟಿ20 ವಿಶ್ವಕಪ್ ಟೂರ್ನಿ ಬಳಿಕ ಟೀಂ ಇಂಡಿಯಾ 16 ಪಂದ್ಯಗಳನ್ನು ಆಡಿದೆ. ಇದರಲ್ಲಿ 12 ಗೆಲುವು ಸಾಧಿಸಿದ್ದರೆ, 3 ಪಂದ್ಯಗಳನ್ನು ಸೋತಿದೆ. ಏಷ್ಯಾಕಪ್ ಟೂರ್ನಿಯಲ್ಲಿ 2010ರ ಬಳಿಕ ಪಾಕಿಸ್ತಾನ ವಿರುದ್ಧದ 6 ಪಂದ್ಯಗಳಲ್ಲಿ 5 ಗೆಲುವು ಸಾಧಿಸಿದೆ. ಇನ್ನು ಒಟ್ಟು ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ದ 8 ಗೆಲುವು 5 ಸೋಲು ಕಂಡಿದೆ.
