* ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ವೇಳೆ ರಾಸ್ ಟೇಲರ್ ಮೇಲೆ ಜನಾಂಗೀಯ ನಿಂದನೆ* ಇಬ್ಬರು ಪ್ರೇಕ್ಷಕರನ್ನು ಹೊರದಬ್ಬಿದ ಭದ್ರತಾ ಸಿಬ್ಬಂದಿ* ಕ್ರಿಕೆಟ್‌ನಲ್ಲಿ ಅನುಚಿತ ವರ್ತನೆ ಸಹಿಸುವುದಿಲ್ಲವೆಂದ ಐಸಿಸಿ
ಸೌಥಾಂಪ್ಟನ್(ಜೂ.24): ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ 5ನೇ ದಿನವಾದ ಮಂಗಳವಾರ ನ್ಯೂಜಿಲೆಂಡ್‌ನ ಹಿರಿಯ ಬ್ಯಾಟ್ಸ್‌ಮನ್ ರಾಸ್ ಟೇಲರ್ ವಿರುದ್ಧ ಜನಾಂಗೀಯ ನಿಂದನೆ ನಡೆಸಿದ ಆರೋಪದ ಮೇಲೆ ಇಬ್ಬರು ಪ್ರೇಕ್ಷಕರನ್ನು ರೋಸ್ ಬೌಲ್ ಕ್ರೀಡಾಂಗಣದಿಂದ ಹೊರಹಾಕಿದ ಪ್ರಸಂಗ ನಡೆದಿದೆ.
ಟೇಲರ್ ವಿರುದ್ಧ ಅವಾಚ್ಯ ಶಬ್ಧಗಳನ್ನು ಬಳಕೆ ಮಾಡುತ್ತಿರುವುದನ್ನು ನ್ಯೂಜಿಲೆಂಡ್‌ನಲ್ಲಿದ್ದ ಅಭಿಮಾನಿಗಳು ಟೀವಿಯಲ್ಲಿ ಕೇಳಿಸಿಕೊಂಡು, ಐಸಿಸಿಗೆ ಟ್ವೀಟ್ ಮೂಲಕ ದೂರು ನೀಡಿದ್ದರು. ಐಸಿಸಿ, ಕ್ರೀಡಾಂಗಣದಲ್ಲಿದ್ದ ಭದ್ರತಾ ಸಿಬ್ಬಂದಿಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ ಬಳಿಕ ನಿಂದಿಸಿದ್ದ ಪ್ರೇಕ್ಷಕರು ಯಾರು ಎನ್ನುವುದನ್ನು ಪತ್ತೆ ಹೆಚ್ಚಿ ಅವರನ್ನು ಕ್ರೀಡಾಂಗಣದಿಂದ ಹೊರಹಾಕಲಾಯಿತು.
ಟೆಸ್ಟ್ ಚಾಂಪಿಯನ್ ಪಟ್ಟವೇರಿದ ನ್ಯೂಜಿಲೆಂಡ್, ಕಣ್ಣಲ್ಲಿ ಆನಂದಭಾಷ್ಪ
ಮೈದಾನದಲ್ಲಿದ್ದ ನ್ಯೂಜಿಲೆಂಡ್ ಆಟಗಾರರನ್ನು ಸ್ಟೇಡಿಯಂನಲ್ಲಿದ್ದ ಇಬ್ಬರು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎನ್ನುವ ವಿಚಾರ ಗಮನಕ್ಕೆ ಬಂದಿತು. ತಕ್ಷಣವೇ ನಮ್ಮ ಭದ್ರತಾ ಸಿಬ್ಬಂದಿ ಆ ಇಬ್ಬರು ಕಿಡಿಗೇಡಿಗಳನ್ನು ಪತ್ತೆಹಚ್ಚಿ ಮೈದಾನದಿಂದ ಹೊರದಬ್ಬಲಾಯಿತು. ಕ್ರಿಕೆಟ್‌ನಲ್ಲಿ ನಾವು ಯಾವುದೇ ಅಸಭ್ಯ ವರ್ತನೆಯನ್ನು ಸಹಿಸಿಕೊಳ್ಳುವುದಿಲ್ಲ ಎಂದು ಐಸಿಸಿ ವಕ್ತಾರರೊಬ್ಬರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
