ನ್ಯೂಜಿಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭಾರತವು ಡಕ್ವರ್ತ್ ಲೂಯಿಸ್ ನಿಯಮದನ್ವಯ 4 ರನ್ಗಳ ರೋಚಕ ಗೆಲುವು ಸಾಧಿಸಿದೆ. ಗುರ್ನೂರ್ ಬ್ರಾರ್ ಅವರ 4 ವಿಕೆಟ್ಗಳ ಸ್ಮರಣೀಯ ಬೌಲಿಂಗ್ ಪ್ರದರ್ಶನ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.
ವೆಲ್ಲಿಂಗ್ಟನ್: ಮಳೆ ಬಾಧಿತ 2ನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಡಕ್ವರ್ತ್ ಲೂಯಿಸ್ ನಿಯಮದನ್ವಯ 4 ರನ್ ಗೆಲುವು ಸಾಧಿಸಿದ ಭಾರತ, 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಪಡೆಯಿತು. ಮಳೆಯಿಂದಾಗಿ ತಲಾ 47 ಓವರ್ಗೆ ಸೀಮಿತಗೊಂಡಿದ್ದ ಪಂದ್ಯದಲ್ಲಿ ನ್ಯೂಜಿಲೆಂಡ್ 41 ಓವರಲ್ಲಿ 134 ರನ್ಗೆ ಆಲೌಟ್ ಆಯಿತು.
ಈ ಪಂದ್ಯದಲ್ಲಿ ಗುರ್ನೂರ್ ಬ್ರಾರ್ ಸ್ಮರಣೀಯ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ನ್ಯೂಜಿಲೆಂಡ್ ನೆಲದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್ ದಾಖಲಿಸಿದ ಎರಡನೇ ಅತ್ಯುತ್ತಮ ದಾಖಲೆ ಇದಾಗಿದೆ. ವೆಲ್ಲಿಂಗ್ಟನ್ ನಲ್ಲಿ ನಡೆದ ಪಂದ್ಯದಲ್ಲಿ 4 ವಿಕೆಟ್ ಪಡೆದುಕೊಂಡು 30 ರನ್ ಗಳಿಸಿದರು. ಇದರೊಂದಿಗೆ ಟೀಂ ಇಂಡಿಯಾ ಸ್ಟಾರ್ ವೇಗಿ ಜಾವಗಲ್ ಶ್ರೀನಾಥ್ ನೇತೃತ್ವದ ಎಲೈಟ್ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
2003ರಲ್ಲಿ ನ್ಯೂಜಿಲೆಂಡ್ ಪ್ರವಾಸ ಮಾಡಿದ್ದ ಟೀಂ ಇಂಡಿಯಾ ತಂಡದಲ್ಲಿದ್ದ ಶ್ರೀನಾಥ್ ಅವರು ಏಕದಿನ ಪಂದ್ಯದಲ್ಲಿ 4 ವಿಕೆಟ್ ಪಡೆದುಕೊಂಡು ಕೇವಲ 23 ರನ್ ಬಿಟ್ಟುಕೊಟ್ಟಿದ್ದರು. ನ್ಯೂಜಿಲೆಂಡ್ ನೆಲದಲ್ಲಿ ಭಾರತೀಯ ಬೌಲರ್ ಮಾಡಿದ ಅತ್ಯುತ್ತಮ ದಾಖಲೆಯಾಗಿದೆ. ಈ ಪಟ್ಟಿಯಲ್ಲಿ ಸದ್ಯ ಗುರ್ನೂರ್ 2ನೇ ಸ್ಥಾನ ಪಡೆದುಕೊಂಡಿದ್ದಾರೆ.
29 ವರ್ಷದ ಗುರ್ನೂರ್, ತಮ್ಮ ಸ್ಪೀಡ್ ಹಾಗೂ ಬೌನ್ಸ್ ಎಸೆತಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಈ ಸಾಧನೆ ಮಾಡಿದ್ದು, ನ್ಯೂಜಿಲೆಂಡ್ ತಂಡದ ಪ್ರಮುಖ ಬ್ಯಾಟರ್ಗಳ ವಿಕೆಟ್ಗಳನ್ನು ಕಬಳಿಸಿದ್ದರು. ಇನ್ನು, ಭಾರತದ ನಾಲ್ವರು ವೇಗಿಗಳ ಎದುರು ರನ್ ಗಳಿಸಲು ಕಿವೀಸ್ ಬ್ಯಾಟರ್ಗಳು ಕಷ್ಟಪಟ್ಟರು. ಪಿಚ್ ಹೇಗೆ ವರ್ತಿಸುತ್ತಿದೆ ಎನ್ನುವ ಅರಿವಾಗುವ ಹೊತ್ತಿಗೆ ನ್ಯೂಜಿಲೆಂಡ್ 23 ರನ್ಗೆ 3 ವಿಕೆಟ್ ಕಳೆದುಕೊಂಡಿತ್ತು. ಪಂದ್ಯದಲ್ಲಿ ಏಕೈಕ ಅರ್ಧಶತಕ ದಾಖಲಿಸಿದ ಡ್ಯಾರಿಲ್ ಮಿಚೆಲ್ 55 ರನ್ ಗಳಿಸಿ, ತಂಡ 100 ರನ್ ದಾಟಲು ನೆರವಾದರು.
ವೆಲ್ಲಿಂಗ್ಟನ್ನ ಬ್ಯಾಟರ್ ಸ್ನೇಹಿ ಪಿಚ್ ಟ್ರ್ಯಾಂಪೋಲಿನ್ನಂತೆ ವರ್ತಿಸುತ್ತಿತ್ತು. ಅಸಾಧಾರಣ ಹಾಗೂ ಅನಿರೀಕ್ಷಿತ ಬೌನ್ಸ್ ಬ್ಯಾಟರ್ಗಳನ್ನು ಕಾಡಿತು. ಇದರ ಲಾಭವೆತ್ತಿದ ಭಾರತೀಯರು, ಕಿವೀಸ್ ಇನ್ನಿಂಗ್ಸ್ನಲ್ಲಿ ಬರೋಬ್ಬರಿ 176 ಡಾಟ್ಬಾಲ್ ಇರುವಂತೆ ನೋಡಿಕೊಂಡರು.
ಬೌಂಡರಿಗೆ ಒತ್ತು ನೀಡಿದ ಭಾರತ
135 ರನ್ ಗುರಿ ಬೆನ್ನತ್ತುವುದು ಭಾರತೀಯರಿಗೆ ಸುಲಭದ ಕೆಲಸವೇನೂ ಆಗಿರಲಿಲ್ಲ. ಕಿವೀಸ್ ತಂಡದಲ್ಲೂ ನಾಲ್ವರು ವೇಗಿಗಳಿದ್ದರೂ, ಹೋರಾಡಲು ಹೆಚ್ಚು ರನ್ ಇರಲಿಲ್ಲ. ಅಲ್ಲದೇ, ಭಾರತೀಯರು ಬಹಳ ಎಚ್ಚರಿಕೆಯಿಂದ ಆಡಿ ಕೆಟ್ಟ ಎಸೆತಗಳನ್ನು ಬೌಂಡರಿ, ಸಿಕ್ಸರ್ಗಟ್ಟುತ್ತಾ ರನ್ ಪೇರಿಸಿದರು. ಭಾರತ ಗಳಿಸಿದ 113 ರನ್ ಪೈಕಿ 78 ರನ್ಗಳು ಬೌಂಡರಿ, ಸಿಕ್ಸರ್ಗಳಿಂದಲೇ ಬಂದವು.
ತಂಡ 26 ಓವರ್ನಲ್ಲಿ 7 ವಿಕೆಟ್ಗೆ 113 ರನ್ ಗಳಿಸಿದ್ದಾಗ ಮಳೆಯಿಂದಾಗಿ ಆಟ ಸ್ಥಗಿತಗೊಂಡಿತು. ಈ ಹಂತದಲ್ಲಿ ತಂಡ ಡಕ್ವರ್ತ್ ಲೂಯಿಸ್ ಲೆಕ್ಕಾಚಾರದ ಪ್ರಕಾರ 4 ರನ್ ಮುಂದಿದ್ದ ಕಾರಣ, ಗೆಲುವು ಭಾರತಕ್ಕೆ ಒಲಿಯಿತು. ಮಂಗಳವಾರ (ನ.10) ಹ್ಯಾಮಿಲ್ಟನ್ನಲ್ಲಿ 3ನೇ ಏಕದಿನ ನಡೆಯಲಿದೆ.
ಸ್ಕೋರ್
ನ್ಯೂಜಿಲೆಂಡ್ 41 ಓವರಲ್ಲಿ 134/10 (ಮಿಚೆಲ್ 55, ಸ್ಯಾಂಟ್ನರ್ 31, ಬ್ರಾರ್ 4-30, ಅಕ್ಷರ್ 2-28, ಅನ್ಶುಲ್ 2-25, ನಬಿ 2-31), ಭಾರತ 26 ಓವರಲ್ಲಿ 113/7 (ಶ್ರೇಯಸ್ 30, ರಾಹುಲ್ 26*, ಜೇಮಿಸನ್ 3-35, ಡಫಿ 3-35)














