ವೆಲ್ಲಿಂಗ್ಟನ್‌(ಜ.31): 5 ಪಂದ್ಯಗಳ ಟಿ20 ಸರಣಿಯಲ್ಲಿ 3-0 ಅಜೇಯ ಮುನ್ನಡೆ ಪಡೆದಿದ್ದರೂ, ಟೀಂ ಇಂಡಿಯಾದ ಆಟದಲ್ಲಿ ಯಾವುದೇ ಬದಲಾವಣೆ ಆಗುವ ಸಾಧ್ಯತೆ ಇಲ್ಲ. ಏಕೆಂದರೆ ಇದು ವಿಶ್ವಕಪ್‌ ವರ್ಷವಾಗಿದ್ದು, ಸರಣಿ ಕ್ಲೀನ್‌ ಸ್ವೀಪ್‌ ಮಾಡುವ ಮೂಲಕ ಆತ್ಮವಿಶ್ವಾಸ ವೃದ್ಧಿಸಿಕೊಳ್ಳುವುದು ವಿರಾಟ್‌ ಕೊಹ್ಲಿ ಪಡೆಯ ಉದ್ದೇಶವಾಗಿದೆ. ಇಲ್ಲಿ ಶುಕ್ರವಾರ ನ್ಯೂಜಿಲೆಂಡ್‌ ವಿರುದ್ಧ 4ನೇ ಟಿ20 ಪಂದ್ಯ ನಡೆಯಲಿದ್ದು, ಭಾರತ ಮತ್ತೊಂದು ಗೆಲುವಿನ ಮೇಲೆ ಕಣ್ಣಿಟ್ಟಿದೆ.

3ನೇ ಟಿ20ಯಲ್ಲಿ ಸೂಪರ್‌ ಓವರ್‌ನಲ್ಲಿ ಜಯಿಸಿ ಸರಣಿ ವಶಪಡಿಸಿಕೊಂಡಿದ್ದ ಭಾರತ, ನ್ಯೂಜಿಲೆಂಡ್‌ ನೆಲದಲ್ಲಿ ಚೊಚ್ಚಲ ಸರಣಿ ಗೆಲುವಿನ ಸಂಭ್ರಮ ಆಚರಿಸಿತು. ಗುರುವಾರ ಎರಡೂ ತಂಡಗಳು ಹ್ಯಾಮಿಲ್ಟನ್‌ನಿಂದ ವೆಲಿಂಗ್ಟನ್‌ಗೆ ಪ್ರಯಾಣ ಬೆಳೆಸಿದವು. ಶುಕ್ರವಾರ ಇಲ್ಲಿ ಪಂದ್ಯ ಮುಗಿದ ಬಳಿಕ ಭಾನುವಾರ ನಡೆಯಲಿರುವ 5ನೇ ಹಾಗೂ ಅಂತಿಮ ಪಂದ್ಯಕ್ಕೆ ಮೌಂಟ್‌ ಮಾಂಗನ್ಯುಯಿಗೆ ತೆರಳಲಿವೆ.

4ನೇ ಟಿ20: ಸರಣಿ ಗೆದ್ದ ಭಾರತ ತಂಡದಲ್ಲಿ ಬದಲಾವಣೆ; ಇಲ್ಲಿದೆ ಸಂಭಾವ್ಯ XI

ಬೆಂಚ್‌ ಕಾಯುತ್ತಿರುವ ಆಟಗಾರರಿಗೆ ಕೊನೆ 2 ಪಂದ್ಯಗಳಲ್ಲಿ ಆಡುವ ಅವಕಾಶ ನೀಡಲಿದ್ದೇವೆ ಎಂದು ವಿರಾಟ್‌ ಕೊಹ್ಲಿ, ಬುಧವಾರ ಗೆಲುವಿನ ಬಳಿಕ ಹೇಳಿದ್ದರು. ಈ ಪಂದ್ಯದಲ್ಲಿ ಭಾರತ ತಂಡದಲ್ಲಿ ಕೆಲ ಬದಲಾವಣೆಗಳು ಆಗಬಹುದು. ಆಲ್ರೌಂಡರ್‌ ಶಿವಂ ದುಬೆ ಬದಲಿಗೆ ವಾಷಿಂಗ್ಟನ್‌ ಸುಂದರ್‌, ವೇಗಿ ಶಾರ್ದೂಲ್‌ ಠಾಕೂರ್‌ ಬದಲಿಗೆ ನವ್‌ದೀಪ್‌ ಸೈನಿ, ಸ್ಪಿನ್ನರ್‌ ಯಜುವೇಂದ್ರ ಚಹಲ್‌ ಬದಲಿಗೆ ಕುಲ್ದೀಪ್‌ ಯಾದವ್‌ ಕಣಕ್ಕಿಳಿಯಬಹುದು. ಸಂಜು ಸ್ಯಾಮ್ಸನ್‌ ಹಾಗೂ ರಿಷಭ್‌ ಪಂತ್‌ ಸಹ ಅವಕಾಶಕ್ಕಾಗಿ ಕಾಯುತ್ತಿದ್ದು, ರೋಹಿತ್‌ ಶರ್ಮಾ ಇಲ್ಲವೇ ಕೆ.ಎಲ್‌.ರಾಹುಲ್‌ಗೆ ವಿಶ್ರಾಂತಿ ನೀಡಿದರೆ ಈ ಇಬ್ಬರಲ್ಲಿ ಒಬ್ಬರಿಗೆ ಅವಕಾಶ ಸಿಗಲಿದೆ.

ಭಾರತ ಎದುರಿನ ಏಕದಿನ ಸರಣಿಗೆ ನ್ಯೂಜಿಲೆಂಡ್ ತಂಡ ಪ್ರಕಟ

ನ್ಯೂಜಿಲೆಂಡ್‌ ತಂಡದಲ್ಲೂ ಕೆಲ ಬದಲಾವಣೆಗಳ ನಿರೀಕ್ಷೆ ಇದೆ. ಡಿ ಗ್ರಾಂಡ್‌ಹೋಮ್‌ ತಂಡದಿಂದ ಹೊರಬಿದ್ದಿದ್ದು ಅವರ ಬದಲಿಗೆ ಟಾಮ್‌ ಬ್ರೂಸ್‌ ಸೇರ್ಪಡೆಗೊಂಡಿದ್ದಾರೆ. ನಾಯಕ ಕೇನ್‌ ವಿಲಿಯಮ್ಸನ್‌ ಆರಂಭಿಕನಾಗಿ ಆಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ಪಿಚ್‌ ರಿಪೋರ್ಟ್‌

ಇಲ್ಲಿನ ವೆಸ್ಟ್‌ಪ್ಯಾಕ್‌ ಕ್ರೀಡಾಂಗಣದಲ್ಲಿ ನಡೆದ ಕಳೆದ 5 ಪಂದ್ಯಗಳಲ್ಲಿ 4ರಲ್ಲಿ ಮೊದಲು ಬ್ಯಾಟ್‌ ಮಾಡಿದ ತಂಡ ಗೆದ್ದಿದೆ. ಮೊದಲ ಇನ್ನಿಂಗ್ಸ್‌ನ ಸರಾಸರಿ ಮೊತ್ತ 178 ರನ್‌. ಇಲ್ಲಿ ವೇಗಿಗಳು ಹೆಚ್ಚು ವಿಕೆಟ್‌ ಕಬಳಿಸಿದ್ದರೂ, ಸ್ಪಿನ್ನರ್‌ಗಳು ಉತ್ತಮ ಎಕಾನಮಿ ರೇಟ್‌ ಹೊಂದಿದ್ದಾರೆ. ಟಾಸ್‌ ಪ್ರಮುಖ ಪಾತ್ರ ವಹಿಸಲಿದೆ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌ ಶರ್ಮಾ, ಕೆ.ಎಲ್‌.ರಾಹುಲ್‌, ವಿರಾಟ್‌ ಕೊಹ್ಲಿ(ನಾಯಕ), ಶ್ರೇಯಸ್‌ ಅಯ್ಯರ್‌, ಮನೀಶ್‌ ಪಾಂಡೆ, ದುಬೆ/ವಾಷಿಂಗ್ಟನ್‌, ರವೀಂದ್ರ ಜಡೇಜಾ, ಶಾರ್ದೂಲ್‌/ಸೈನಿ, ಮೊಹಮದ್‌ ಶಮಿ, ಚಹಲ್‌/ಕುಲ್ದೀಪ್‌, ಜಸ್‌ಪ್ರೀತ್‌ ಬುಮ್ರಾ.

ನ್ಯೂಜಿಲೆಂಡ್‌: ಮಾರ್ಟಿನ್‌ ಗಪ್ಟಿಲ್‌, ಕಾಲಿನ್‌ ಮನ್ರೊ, ಕೇನ್‌ ವಿಲಿಯಮ್ಸನ್‌ (ನಾಯಕ), ರಾಸ್‌ ಟೇಲರ್‌, ಡರೆಲ್‌ ಮಿಚೆಲ್‌, ಟಿಮ್‌ ಸೀಫರ್ಟ್‌, ಮಿಚೆಲ್‌ ಸ್ಯಾಂಟ್ನರ್‌, ಸ್ಕಾಟ್‌ ಕುಗ್ಗಿಲಿಯನ್‌, ಟಿಮ್‌ ಸೌಥಿ, ಇಶ್‌ ಸೋಧಿ, ಹ್ಯಾಮಿಶ್‌ ಬೆನ್ನೆಟ್‌.

ಪಂದ್ಯ ಆರಂಭ: ಮಧ್ಯಾಹ್ನ 12.30, 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1