ಆಸ್ಟ್ರೇಲಿಯಾ ಎದುರು ಮೂರು ಏಕದಿನ ಪಂದ್ಯದಲ್ಲೂ ಶೂನ್ಯ ಸುತ್ತಿದ ಸೂರ್ಯಕುಮಾರ್ ಯಾದವ್ಸೂರ್ಯಕುಮಾರ್ ಯಾದವ್ ಫೇಲ್ಯೂರ್ ಬಗ್ಗೆ ತುಟಿಬಿಚ್ಚಿದ ನಾಯಕ ರೋಹಿತ್ ಶರ್ಮಾಹೇಗೆ ಪ್ರತಿಕ್ರಿಯಿಸಬೇಕು ಎಂದೇ ಅರ್ಥವಾಗುತ್ತಿಲ್ಲವೆಂದ ಟೀಂ ಇಂಡಿಯಾ ನಾಯಕ
ಚೆನ್ನೈ(ಮಾ.23): ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಪ್ರತಿಭಾನ್ವಿತ ಬ್ಯಾಟರ್ ಸೂರ್ಯಕುಮಾರ್ ಯಾದವ್, ಏಕದಿನ ಕ್ರಿಕೆಟ್‌ನಲ್ಲಿ ರನ್ ಬರ ಅನುಭವಿಸುತ್ತಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ನಂ.1 ಬ್ಯಾಟರ್ ಎನಿಸಿಕೊಂಡಿರುವ ಸೂರ್ಯಕುಮಾರ್ ಯಾದವ್, ಇದೀಗ ಅದೇ ಲಯವನ್ನು ಏಕದಿನ ಕ್ರಿಕೆಟ್‌ನಲ್ಲಿ ಮಾಡಲು ವಿಫಲವಾಗಿದ್ದಾರೆ. ಆಸ್ಟ್ರೇಲಿಯಾ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸುವ ಮೂಲಕ ದಯನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಸೂರ್ಯಕುಮಾರ್ ಯಾದವ್, ಇದುವರೆಗೂ 23 ಪಂದ್ಯಗಳನ್ನಾಡಿ ಕೇವಲ 24.05ರ ಬ್ಯಾಟಿಂಗ್ ಸರಾಸರಿಯಲ್ಲಿ 433 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ.
ಶ್ರೇಯಸ್ ಅಯ್ಯರ್, ಗಾಯಗೊಂಡು ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿಯಿಂದ ಹೊರಬಿದ್ದಿದ್ದರು. ಹೀಗಾಗಿ ಏಕದಿನ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಸೂರ್ಯಕುಮಾರ್ ಯಾದವ್‌ಗೆ ಸುವರ್ಣಾವಕಾಶ ಬಂದೊದಗಿತ್ತು. ಆದರೆ ಸೂರ್ಯಕುಮಾರ್ ಯಾದವ್, ಮೂರು ಪಂದ್ಯಗಳಲ್ಲೂ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಗೋಲ್ಡನ್ ಡಕ್ ಆದ ಮೊದಲ ಭಾರತೀಯ ಬ್ಯಾಟರ್ ಎನ್ನುವ ಕುಖ್ಯಾತಿಗೂ ಸೂರ್ಯಕುಮಾರ್ ಯಾದವ್ ಪಾತ್ರರಾದರು.
ಸೂರ್ಯಕುಮಾರ್ ಯಾದವ್, ಆಸ್ಟ್ರೇಲಿಯಾ ಎದುರಿನ ಮೊದಲೆರಡು ಏಕದಿನ ಪಂದ್ಯಗಳಲ್ಲಿ ಮಿಚೆಲ್ ಸ್ಟಾರ್ಕ್ ಬೌಲಿಂಗ್‌ನಲ್ಲಿ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದ್ದರು. ಇನ್ನು ಮೂರನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ 7ನೇ ಕ್ರಮಾಂಕದಲ್ಲಿ ಹಿಂಬಡ್ತಿ ಪಡೆದು ಕ್ರೀಸ್‌ಗಿಳಿದ ಸೂರ್ಯಕುಮಾರ್ ಯಾದವ್, ಆಸ್ಟನ್ ಏಗರ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರುವ ಮೂಲಕ ನಿರಾಸೆ ಅನುಭವಿಸಿದರು.
ಈ ಮೂರು ಒನ್‌ಡೇ ಮ್ಯಾಚ್ ಮರೆತುಬಿಡಿ, ಐಪಿಎಲ್ ಕಡೆ ಗಮನಕೊಡಿ: ಸೂರ್ಯನಿಗೆ ಗವಾಸ್ಕರ್ ಹೀಗಂದಿದ್ದೇಕೆ?
ಇದೀಗ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ವೈಫಲ್ಯದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ತಾವು ಸೂರ್ಯ ಬೆನ್ನಿಗೆ ನಿಲ್ಲುವುದಾಗಿ ತಿಳಿಸಿದ್ದಾರೆ. " ಈ ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಕೇವಲ ಮೂರು ಎಸೆತಗಳನ್ನಷ್ಟೇ ಎದುರಿಸಿದ್ದಾರೆ. ಇನ್ನು ಹೇಗೆ ನೋಡಬೇಕು ಎಂದು ನನಗೂ ಅರ್ಥವಾಗುತ್ತಿಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಸೂರ್ಯಕುಮಾರ್ ಯಾದವ್ ಅವರು ಮೂರು ಒಳ್ಳೆಯ ಎಸೆತಗಳಿಗೆ ವಿಕೆಟ್ ಒಪ್ಪಿಸಿದ್ದಾರೆ. ಇಂದು ಔಟ್ ಆದ ಬಾಲ್ ಅಷ್ಟೇನೂ ಒಳ್ಳೆಯ ಎಸೆತವಾಗಿರಲಿಲ್ಲ. ಅವರು ಸ್ಪಿನ್ನರ್‌ಗಳೆದುರು ಚೆನ್ನಾಗಿಯೇ ಆಡುತ್ತಾರೆ. ನಾವದನ್ನು ಕಳೆದ ಕೆಲ ವರ್ಷಗಳಿಂದ ನೋಡುತ್ತಲೇ ಬಂದಿದ್ದೇವೆ. ಹೀಗಾಗಿ ನಾವು ಅವರಿಗೆ ಕೊನೆಯ 15-20 ಓವರ್‌ಗಳಿದ್ದಾಗ ಬ್ಯಾಟಿಂಗ್ ಮಾಡಲು ಕಣಕ್ಕಿಳಿಸಿದೆವು. ಆದರೆ ಅವರು ಈ ಸರಣಿಯಲ್ಲಿ ಕೇವಲ ಮೂರು ಪಂದ್ಯಗಳನ್ನಾಡಿದ್ದು ನಿಜಕ್ಕೂ ದುರಾದೃಷ್ಟಕರ. ಒಮ್ಮೊಮ್ಮೆ ಹೀಗಾಗೋದು ಸಹಜ. ಆದರೆ ಸೂರ್ಯಕುಮಾರ್ ಯಾದವ್ ಅವರ ಬಳಿಕ ಪ್ರತಿಭೆ ಹಾಗೂ ಸಾಮರ್ಥ್ಯವಿದೆ. ಈಗವರು ಕಠಿಣ ದಿನಗಳನ್ನು ಎದುರಿಸುತ್ತಿದ್ದಾರೆ" ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಇನ್ನು ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಮುಕ್ತಾಯದ ಬಳಿಕ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ವಿಶ್ಲೇಷಣೆ ಮಾಡಿರುವ ಸುನಿಲ್ ಗವಾಸ್ಕರ್, ಆಸ್ಟ್ರೇಲಿಯಾ ಎದುರಿನ ಈ ಮೂರು ಪಂದ್ಯಗಳ ಸರಣಿಯನ್ನು ಮರೆತುಬಿಡಿ, ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಒಳ್ಳೆಯ ರನ್ ಗಳಿಸುವ ಮೂಲಕ, ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ಫಾರ್ಮ್‌ಗೆ ಮರಳಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ ಎಂದು ಹೇಳಿದ್ದಾರೆ.
ಇನ್ನು ಮುಂಬರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಸೂರ್ಯಕುಮಾರ್ ಯಾದವ್, ಭಾರತ ಏಕದಿನ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುತ್ತಾರೋ ಅಥವಾ ಇಲ್ಲವೇ ಎನ್ನುವುದು ಅವರು ಐಪಿಎಲ್‌ನಲ್ಲಿ ಯಾವ ರೀತಿ ಪ್ರದರ್ಶನ ತೋರಲಿದ್ದಾರೆ ಎನ್ನುವುದರ ಮೇಲೆ ನಿರ್ಧರಿತವಾಗಲಿದೆ ಎಂದು ಹೇಳಿದ್ದಾರೆ.
