Asianet Suvarna News Asianet Suvarna News

ಈ ಮೂರು ಒನ್‌ಡೇ ಮ್ಯಾಚ್ ಮರೆತುಬಿಡಿ, ಐಪಿಎಲ್‌ ಕಡೆ ಗಮನಕೊಡಿ: ಸೂರ್ಯನಿಗೆ ಗವಾಸ್ಕರ್ ಹೀಗಂದಿದ್ದೇಕೆ?

ಆಸ್ಟ್ರೇಲಿಯಾ ಎದುರು ಮೂರು ಪಂದ್ಯಗಳಲ್ಲಿ ಗೋಲ್ಡನ್ ಡಕ್ ಆದ ಸೂರ್ಯಕುಮಾರ್ ಯಾದವ್
ಮೂರು ಪಂದ್ಯಗಳಲ್ಲೂ ಮೊದಲ ಎಸೆತದಲ್ಲೇ ವಿಕೆಟ್‌ ಒಪ್ಪಿಸಿದ ಸೂರ್ಯಕುಮಾರ್
ಇದೀಗ ಮುಂಬರುವ ಐಪಿಎಲ್‌ಗೆ ಸಜ್ಜಾಗುತ್ತಿರುವ ಸೂರ್ಯ

Forget the 3 ODIs focus on scoring runs in IPL 2023 Sunil Gavaskar on Suryakumar Yadav kvn
Author
First Published Mar 23, 2023, 11:21 AM IST

ಚೆನ್ನೈ(ಮಾ.23): ಆಸ್ಟ್ರೇಲಿಯಾ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಸೂರ್ಯಕುಮಾರ್ ಯಾದವ್, ಶೂನ್ಯ ಸುತ್ತುವ ಮೂಲಕ ದಯನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದಾರೆ. ಇದೀಗ ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್, ಸೂರ್ಯಕುಮಾರ್ ಯಾದವ್ ಅವರಿಗೆ ಕಿವಿಮಾತು ಹೇಳಿದ್ದು, ಆಸ್ಟ್ರೇಲಿಯಾ ಎದುರಿನ ಈ ಮೂರು ಪಂದ್ಯಗಳ ಸರಣಿಯನ್ನು ಮರೆತುಬಿಡಿ, ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಒಳ್ಳೆಯ ರನ್‌ ಗಳಿಸುವ ಮೂಲಕ, ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ಫಾರ್ಮ್‌ಗೆ ಮರಳಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ ಎಂದು ಹೇಳಿದ್ದಾರೆ.

ಸೂರ್ಯಕುಮಾರ್ ಯಾದವ್, ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿಯಲ್ಲಿ ಮೂರು ಪಂದ್ಯಗಳಲ್ಲಿ ಗೋಲ್ಡನ್ ಡಕ್ ಆಗಿದ್ದು ನಿಜಕ್ಕೂ ದುರಾದೃಷ್ಟವೇ ಸರಿ. ಅತ್ಯುತ್ತಮ ಬ್ಯಾಟರ್‌ಗಳು ಕೂಡಾ ಒಮ್ಮೊಮ್ಮೆ ಈ ರೀತಿ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಾರೆ ಎಂದು ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಶ್ರೇಯಸ್ ಅಯ್ಯರ್, ಗಾಯಗೊಂಡು ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿಯಿಂದ ಹೊರಬಿದ್ದಿದ್ದರು. ಹೀಗಾಗಿ ಏಕದಿನ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಸೂರ್ಯಕುಮಾರ್ ಯಾದವ್‌ಗೆ ಸುವರ್ಣಾವಕಾಶ ಬಂದೊದಗಿತ್ತು. ಆದರೆ ಸೂರ್ಯಕುಮಾರ್ ಯಾದವ್, ಮೂರು ಪಂದ್ಯಗಳಲ್ಲೂ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಗೋಲ್ಡನ್ ಡಕ್ ಆದ ಮೊದಲ ಭಾರತೀಯ ಬ್ಯಾಟರ್ ಎನ್ನುವ ಕುಖ್ಯಾತಿಗೂ ಸೂರ್ಯಕುಮಾರ್ ಯಾದವ್ ಪಾತ್ರರಾದರು.

Ind vs Aus 'ಹ್ಯಾಟ್ರಿಕ್ ಶೂನ್ಯ ಸಂಪಾದಕ': ಸೂರ್ಯಕುಮಾರ್ ಯಾದವ್ ಕಾಲೆಳೆದ ನೆಟ್ಟಿಗರು..!

ಸೂರ್ಯಕುಮಾರ್ ಯಾದವ್‌, ಆಸ್ಟ್ರೇಲಿಯಾ ಎದುರಿನ ಮೊದಲೆರಡು ಏಕದಿನ ಪಂದ್ಯಗಳಲ್ಲಿ ಮಿಚೆಲ್ ಸ್ಟಾರ್ಕ್ ಬೌಲಿಂಗ್‌ನಲ್ಲಿ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದ್ದರು. ಇನ್ನು ಮೂರನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ 7ನೇ ಕ್ರಮಾಂಕದಲ್ಲಿ ಹಿಂಬಡ್ತಿ ಪಡೆದು ಕ್ರೀಸ್‌ಗಿಳಿದ ಸೂರ್ಯಕುಮಾರ್ ಯಾದವ್, ಆಸ್ಟನ್ ಏಗರ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರುವ ಮೂಲಕ ನಿರಾಸೆ ಅನುಭವಿಸಿದರು.

ಮೂರನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ವಿಕೆಟ್ ಪತನದ ಬಳಿಕ ಮಹತ್ವದ ಘಟ್ಟದಲ್ಲಿ ಕ್ರೀಸ್‌ಗಿಳಿದ ಸೂರ್ಯಕುಮಾರ್ ಯಾದವ್, ಜವಾಬ್ದಾರಿಯುತ ಪ್ರದರ್ಶನವನ್ನು ತೋರಬೇಕಿತ್ತು. ಆದರೆ ಸೂರ್ಯಕುಮಾರ್ ಯಾದವ್, ತಾವೆದುರಿಸಿದ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿ ಪೆವಿಲಿಯನ್ ಪೆರೇಡ್‌ ನಡೆಸಿದರು. 

ಇದೀಗ ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಪ್ರತಿಕ್ರಿಯಿಸಿರುವ ಸುನಿಲ್ ಗವಾಸ್ಕರ್, " ಹೌದು, ಸೂರ್ಯಕುಮಾರ್ ಯಾದವ್ ಮೂರೂ ಪಂದ್ಯಗಳಲ್ಲೂ ಮೊದಲ ಎಸೆತದಲ್ಲೇ ಔಟ್ ಆಗಿದ್ದಾರೆ. ಎಲ್ಲಿ ಅವರು ತಪ್ಪು ಮಾಡಿದರು ಎಂದು ಹೇಳುವುದು ಕಷ್ಟ. ಮೊದಲೆರಡು ಏಕದಿನ ಪಂದ್ಯಗಳಲ್ಲಿ ಮಿಚೆಲ್ ಸ್ಟಾರ್ಕ್ ಎಸೆದ ಒಳ್ಳೆಯ ಚೆಂಡಿಗೆ ಸೂರ್ಯಕುಮಾರ್ ಯಾದವ್ ವಿಕೆಟ್ ಒಪ್ಪಿಸಿದರು. ಅವರು ಮೊದಲ ಚೆಂಡನ್ನು ಎದುರಿಸುವಾಗ ಕೊಂಚ ಆತಂಕಕ್ಕೆ ಒಳಗಾಗಿದ್ದರು ಎನಿಸುತ್ತದೆ" ಎಂದು ಸ್ಟಾರ್ ಸ್ಪೋರ್ಟ್ಸ್‌ ವಾಹಿನಿಯಲ್ಲಿ ಪಂದ್ಯದ ವಿಶ್ಲೇಷಣೆ ವೇಳೆ ಅಭಿಪ್ರಾಯಪಟ್ಟಿದ್ದಾರೆ. 

ಸೂರ್ಯಕುಮಾರ್ ಯಾದವ್, ಭಾರತ ಏಕದಿನ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುತ್ತಾರೋ ಅಥವಾ ಇಲ್ಲವೇ ಎನ್ನುವುದು ಅವರು ಐಪಿಎಲ್‌ನಲ್ಲಿ ಯಾವ ರೀತಿ ಪ್ರದರ್ಶನ ತೋರಲಿದ್ದಾರೆ ಎನ್ನುವುದರ ಮೇಲೆ ನಿರ್ಧರಿತವಾಗಲಿದೆ ಎಂದು ಹೇಳಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಅದ್ಭುತ ಲಯ ಹೊಂದಿರುವ ಸೂರ್ಯಕುಮಾರ್ ಯಾದವ್, ಏಕದಿನ ಕ್ರಿಕೆಟ್‌ನಲ್ಲಿ 23 ಏಕದಿನ ಪಂದ್ಯಗಳನ್ನಾಡಿ ಕೇವಲ 24ರ ಸರಾಸರಿಯಲ್ಲಿ 433 ರನ್‌ ಬಾರಿಸಿದ್ದಾರೆ.

"ನನ್ನ ಪ್ರಕಾರ, ಐಪಿಎಲ್‌ನಲ್ಲಿ ಯಾವ ರೀತಿ ಆಡುತ್ತಾರೆ ಎನ್ನುವುದರ ಮೇಲೆ ಅವರ ಸ್ಥಾನ ಏಕದಿನ ತಂಡದಲ್ಲಿ ನಿರ್ಧಾರವಾಗಲಿದೆ. ಐಪಿಎಲ್ ಮುಗಿದ ಬಳಿಕ ಟೀಂ ಇಂಡಿಯಾ, ವೆಸ್ಟ್‌ ಇಂಡೀಸ್ ಸೇರಿದಂತೆ ಕೆಲವು ಸರಣಿಗಳನ್ನಾಡಲಿದೆ. ಆ ಎಲ್ಲಾ ಸರಣಿಗಳಲ್ಲಿ ಯಾವ ರೀತಿ ಆಡುತ್ತಾರೆ ಎನ್ನುವುದನ್ನು ಆಧರಿಸಿ ಅವರು ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುವುದು ನಿರ್ಧಾರವಾಗಲಿದೆ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.

16ನೇ ಆವೃತ್ತಿಯ ಐಪಿಎಲ್‌ ಟೂರ್ನಿಯು ಮಾರ್ಚ್‌ 31ರಿಂದ ಆರಂಭವಾಗಲಿದ್ದು, ಸೂರ್ಯಕುಮಾರ್ ಯಾದವ್, ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.

Follow Us:
Download App:
  • android
  • ios