ಅಡಿಲೇಡ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ, ಮ್ಯಾಥ್ಯೂ ಶಾರ್ಟ್ ಮತ್ತು ಕೂಪರ್ ಕಾನೊಲಿ ಅವರ ಅರ್ಧಶತಕಗಳ ಬಲದಿಂದ ಆಸ್ಟ್ರೇಲಿಯಾ ತಂಡವು ಭಾರತದ ವಿರುದ್ಧ 2 ವಿಕೆಟ್‌ಗಳ ಜಯ ಸಾಧಿಸಿತು. ಈ ಗೆಲುವಿನೊಂದಿಗೆ, ಆಸ್ಟ್ರೇಲಿಯಾ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ 2-0 ಸರಣಿಯನ್ನು ತನ್ನದಾಗಿಸಿಕೊಂಡಿದೆ.
ಅಡಿಲೇಡ್: ಮ್ಯಾಥ್ಯೂ ಶಾರ್ಟ್ ಹಾಗೂ ಕೂಪರ್ ಕಾನೊಲಿ ಬಾರಿಸಿದ ಆಕರ್ಷಕ ಅರ್ಧಶತಕಗಳ ನೆರವಿನಿಂದ ಭಾರತ ಎದುರಿನ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು 2 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಮಿಚೆಲ್ ಮಾರ್ಷ್ ನೇತೃತ್ವದ ಆಸ್ಟ್ರೇಲಿಯಾ ತಂಡವು 2-0 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿದೆ.
ಇಲ್ಲಿನ ಅಡಿಲೇಡ್ ಓವಲ್ ಮೈದಾನದಲ್ಲಿ ಗೆಲ್ಲಲು 265 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು ಆರಂಭದಲ್ಲೇ ನಾಯಕ ಮಿಚೆಲ್ ಮಾರ್ಷ್(11) ವಿಕೆಟ್ ಕಳೆದುಕೊಂಡಿತು. ಇನ್ನು ಮತ್ತೋರ್ವ ಆರಂಭಿಕ ಬ್ಯಾಟರ್ ಟ್ರ್ಯಾವಿಸ್ ಹೆಡ್ 28 ರನ್ ಬಾರಿಸಿ ಹರ್ಷಿತ್ ರಾಣಾಗೆ ವಿಕೆಟ್ ಒಪ್ಪಿಸಿದರು.
ಆಸೀಸ್ ಗೆಲುವಿನ ರುವಾರಿ ಮ್ಯಾಥ್ಯೂ ಶಾರ್ಟ್, ಕಾನೂಲಿ
ಇದಾದ ಬಳಿಕ ಮೂರನೇ ವಿಕೆಟ್‌ಗೆ ಮ್ಯಾಥ್ಯೂ ಶಾರ್ಟ್ ಹಾಗೂ ಮ್ಯಾಟ್ ರೆನ್‌ಶೋ 55 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಅಕ್ಷರ್ ಪಟೇಲ್ ಯಶಸ್ವಿಯಾದರು. ರೆನ್‌ಶೋ 30 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ತಮಗೆ ಸಿಕ್ಕ ಎರಡು ಜೀವದಾನಗಳನ್ನು ಎರಡೂ ಕೈಗಳಿಂದ ಬಾಚಿಕೊಂಡ ಮ್ಯಥ್ಯೂ ಶಾರ್ಟ್ 78 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ ಎರಡು ಸಿಕ್ಸರ್ ಸಹಿತ ಆಕರ್ಷಕ 74 ರನ್ ಸಿಡಿಸಿದರು.
ಇನ್ನು ಕೊನೆಯಲ್ಲಿ ಅತ್ಯಂತ ಜವಾಬ್ದಾರಿಯುತ ಆಟವಾಡಿದ ಕೂಪರ್ ಕಾನೊಲಿ ಕೇವಲ 53 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಅಜೇಯ 61 ರನ್ ಸಿಡಿಸುವ ಮೂಲಕ ಇನ್ನೂ 22 ಎಸೆತ ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸಿದರು.
ಭಾರತ ಪರ ಹರ್ಷಿತ್ ರಾಣಾ, ಅರ್ಶದೀಪ್ ಸಿಂಗ್ ಹಾಗೂ ವಾಷಿಂಗ್ಟನ್ ಸುಂದರ್ ತಲಾ ಎರಡು ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್, ಅಕ್ಷರ್ ಪಟೇಲ್ ತಲಾ ಒಂದೊಂದು ವಿಕೆಟ್ ಪಡೆದರು.
ಸ್ಪರ್ಧಾತ್ಮಕ ಮೊತ್ತ ಕಲೆಹಾಕಿದ ಭಾರತ
ಇನ್ನು ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಲಿಳಿದ ಟೀಂ ಇಂಡಿಯಾ ಆರಂಭಿಕ ಆಘಾತ ಅನುಭವಿಸಿತು. 17 ರನ್ ಗಳಿಸುವಷ್ಟರಲ್ಲಿ ಭಾರತ ಗಿಲ್ ಹಾಗೂ ಕೊಹ್ಲಿ ವಿಕೆಟ್ ಕಳೆದುಕೊಂಡಿತು. ಆದರೆ ರೋಹಿತ್ ಶರ್ಮಾ(73) ಹಾಗೂ ಶ್ರೇಯಸ್ ಅಯ್ಯರ್(61) ಅರ್ಧಶತಕಗಳ ನೆರವಿನಿಂದ 9 ವಿಕೆಟ್ ಕಳೆದುಕೊಂಡು 264 ರನ್ ಕಲೆಹಾಕಿತು. ಆಸೀಸ್ ಪರ ಆಡಂ ಜಂಪಾ 4 ವಿಕೆಟ್ ಕಬಳಿಸಿ ಮಿಂಚಿದರು.
