ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ, ಸೌರವ್ ಗಂಗೂಲಿಯನ್ನು ಹಿಂದಿಕ್ಕಿ ಭಾರತದ ಪರ ಅತಿ ಹೆಚ್ಚು ಏಕದಿನ ರನ್ ಗಳಿಸಿದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ. ಇದರೊಂದಿಗೆ, ಏಕದಿನದಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆರಂಭಿಕ ಆಟಗಾರ ಎಂಬ ಗಂಗೂಲಿಯ ದಾಖಲೆಯನ್ನು ಮುರಿದಿದ್ದಾರೆ.
ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ 73 ರನ್ ಗಳಿಸುವ ಮೂಲಕ ರೋಹಿತ್ ಶರ್ಮಾ, ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ. ಇದೀಗ ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಸೌರವ್ ಗಂಗೂಲಿಯನ್ನು ಹಿಂದಿಕ್ಕಿ ರೋಹಿತ್ ಶರ್ಮಾ ಮೂರನೇ ಸ್ಥಾನಕ್ಕೇರಿದ್ದಾರೆ. ಏಕದಿನದಲ್ಲಿ 11,221 ರನ್ ಗಳಿಸಿದ್ದ ಗಂಗೂಲಿಯನ್ನು ನಾಲ್ಕನೇ ಸ್ಥಾನಕ್ಕೆ ತಳ್ಳಿ, ರೋಹಿತ್ ಭಾರತೀಯ ಆಟಗಾರರ ಪೈಕಿ ಮೂರನೇ ಸ್ಥಾನಕ್ಕೇರಿದ್ದಾರೆ. ಗಂಗೂಲಿ 308 ಪಂದ್ಯಗಳ 297 ಇನ್ನಿಂಗ್ಸ್‌ಗಳಿಂದ 11,221 ರನ್ ಗಳಿಸಿದ್ದರೆ, ರೋಹಿತ್ ಕೇವಲ 275 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ಸೌರವ್ ಗಂಗೂಲಿ ದಾಖಲೆ ಮುರಿದ ರೋಹಿತ್ ಶರ್ಮಾ
ಏಕದಿನ ರನ್ ಬೇಟೆಯಲ್ಲಿ ಗಂಗೂಲಿಯನ್ನು ಹಿಂದಿಕ್ಕಲು ಅಡಿಲೇಡ್‌ನಲ್ಲಿ ರೋಹಿತ್‌ಗೆ 46 ರನ್‌ಗಳ ಅಗತ್ಯವಿತ್ತು. 21ನೇ ಓವರ್‌ನ ಐದನೇ ಎಸೆತದಲ್ಲಿ ಆಡಂ ಜಂಪಾಗೆ ಬೌಂಡರಿ ಬಾರಿಸುವ ಮೂಲಕ ರೋಹಿತ್, ಕ್ರಿಕೆಟ್ ಲೆಜೆಂಡ್ ಸೌರವ್ ಗಂಗೂಲಿಯನ್ನು ಹಿಂದಿಕ್ಕಿದರು. ಭಾರತ ಪರ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ (463 ಪಂದ್ಯಗಳಲ್ಲಿ 18,426 ರನ್) ಮತ್ತು ವಿರಾಟ್ ಕೊಹ್ಲಿ (304 ಪಂದ್ಯಗಳಲ್ಲಿ 14,181 ರನ್) ಮಾತ್ರ ರೋಹಿತ್‌ಗಿಂತ ಮುಂದಿದ್ದಾರೆ.
ಭಾರತದ ಪರ ಆರಂಭಿಕನಾಗಿ ಗರಿಷ್ಠ ರನ್ ಸರದಾರ ಹಿಟ್‌ಮ್ಯಾನ್
ರನ್ ಬೇಟೆಯಲ್ಲಿ ಗಂಗೂಲಿಯನ್ನು ಹಿಂದಿಕ್ಕುವುದರ ಜೊತೆಗೆ, ಏಕದಿನದಲ್ಲಿ ಆರಂಭಿಕ ಆಟಗಾರನಾಗಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆಯನ್ನು ರೋಹಿತ್ ಶರ್ಮಾ ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾದರು. ಈ ಮೊದಲು ಆ ದಾಖಲೆ ಕೂಡಾ ಗಂಗೂಲಿ ಹೆಸರಿನಲ್ಲಿತ್ತು. ಏಕದಿನ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಪರ ಆರಂಭಿಕರಾಗಿ 9,146 ರನ್ ಗಳಿಸಿದ್ದ ಗಂಗೂಲಿಯನ್ನು ರೋಹಿತ್ ಹಿಂದಿಕ್ಕಿದ್ದಾರೆ. ಅಡಿಲೇಡ್‌ನಲ್ಲಿ ಈ ಸಾಧನೆ ಮಾಡಲು ರೋಹಿತ್‌ಗೆ ಕೇವಲ ಒಂದು ರನ್ ಬೇಕಿತ್ತು. ಮೊದಲ ಓವರ್‌ನಲ್ಲೇ ಸಿಂಗಲ್ ತೆಗೆದು ರೋಹಿತ್, ಗಂಗೂಲಿಯನ್ನು ಹಿಂದಿಕ್ಕಿದರು.
ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆರಂಭಿಕರಾಗಿ ಅತಿ ಹೆಚ್ಚು ರನ್ ಗಳಿಸಿದ ಐದನೇ ಆಟಗಾರ ರೋಹಿತ್. ಸಚಿನ್ ತೆಂಡೂಲ್ಕರ್ (15,310), ಸನತ್ ಜಯಸೂರ್ಯ (12,740), ಕ್ರಿಸ್ ಗೇಲ್ (10,179), ಮತ್ತು ಆಡಮ್ ಗಿಲ್‌ಕ್ರಿಸ್ಟ್ (9,200) ರೋಹಿತ್‌ಗಿಂತ ಮುಂದಿದ್ದಾರೆ. ಇಂದು 73 ರನ್ ಗಳಿಸುವ ಮೂಲಕ, ಆಸ್ಟ್ರೇಲಿಯಾದಲ್ಲಿ ಭಾರತದ ಪರ 1000 ರನ್ ಪೂರೈಸಿದ ಮೊದಲ ಆಟಗಾರ ಎಂಬ ದಾಖಲೆಯನ್ನು ರೋಹಿತ್ ತಮ್ಮದಾಗಿಸಿಕೊಂಡರು. ಆಸ್ಟ್ರೇಲಿಯಾದಲ್ಲಿ 21 ಏಕದಿನ ಪಂದ್ಯಗಳಲ್ಲಿ ರೋಹಿತ್ 1047 ರನ್ ಗಳಿಸಿದ್ದಾರೆ. 20 ಪಂದ್ಯಗಳಲ್ಲಿ 802 ರನ್ ಗಳಿಸಿರುವ ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ. 25 ಪಂದ್ಯಗಳಲ್ಲಿ 740 ರನ್ ಗಳಿಸಿದ ಸಚಿನ್ ಮೂರನೇ ಸ್ಥಾನದಲ್ಲಿದ್ದರೆ, 21 ಪಂದ್ಯಗಳಲ್ಲಿ 684 ರನ್ ಗಳಿಸಿದ ಧೋನಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
