ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಸತತ ಎರಡನೇ ಬಾರಿಗೆ ಶೂನ್ಯಕ್ಕೆ ಔಟಾದ ವಿರಾಟ್ ಕೊಹ್ಲಿ, ತಮ್ಮ ನೆಚ್ಚಿನ ಅಡಿಲೇಡ್ ಮೈದಾನದಲ್ಲಿ ನಿರಾಸೆ ಮೂಡಿಸಿದ್ದಾರೆ. ಪೆವಿಲಿಯನ್‌ಗೆ ಮರಳುವಾಗ ಅಭಿಮಾನಿಗಳಿಗೆ ಗುಡ್ ಬೈ ಹೇಳುವಂತೆ ಸನ್ನೆ ಮಾಡಿದ್ದು ಚರ್ಚೆಯನ್ನು ಹುಟ್ಟುಹಾಕಿದೆ.
ಅಡಿಲೇಡ್: ಭಾರತದ ಕ್ರಿಕೆಟ್ ದಂತಕಥೆ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ವೃತ್ತಿ ಬದುಕು ಮುಗಿಯಿತಾ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ. ಬರೋಬ್ಬರಿ ಏಳು ತಿಂಗಳ ಬಳಿಕ ಅಂತಾರಾಷ್ಟ್ರೀಯ ಪಂದ್ಯವನ್ನಾಡುತ್ತಿರುವ ವಿರಾಟ್ ಕೊಹ್ಲಿ ಸತತ ಎರಡನೇ ಪಂದ್ಯದಲ್ಲೂ ಶೂನ್ಯ ಸುತ್ತುವ ಮೂಲಕ ನಿರಾಸೆ ಅನುಭವಿಸಿದ್ದಾರೆ. ಅದರಲ್ಲೂ ಆಸೀಸ್‌ನ ನೆಚ್ಚಿನ ಮೈದಾನದಲ್ಲೇ ಕೊಹ್ಲಿ ಖಾತೆ ತೆರೆಯಲು ವಿಫಲವಾಗಿದ್ದು, ಆ ಬಳಿಕ ಕೊಹ್ಲಿ ಅಭಿಮಾನಿಗಳಿಗೆ ಗುಡ್ ಬೈ ಹೇಳುವ ಕ್ಷಣದ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಅಡಿಲೇಡ್ ಕೊಹ್ಲಿಯ ನೆಚ್ಚಿನ ಮೈದಾನ:
ಅಂದಹಾಗೆ ವಿರಾಟ್ ಕೊಹ್ಲಿ ಈ ಪಂದ್ಯಕ್ಕೂ ಮುನ್ನ ಅಡಿಲೇಡ್ ಕ್ರೀಡಾಂಗಣದಲ್ಲಿ ಉತ್ತಮ ದಾಖಲೆ ಹೊಂದಿದ್ದರು. ಈ ಕ್ರೀಡಾಂಗಣದಲ್ಲಿ 17 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಕೊಹ್ಲಿ 65ರ ಸರಾಸರಿಯಲ್ಲಿ 975 ರನ್ ಗಳಿಸಿದ್ದರು. ಇನ್ನು 25 ರನ್ ಗಳಿಸಿದರೆ ಅಡಿಲೇಡಲ್ಲಿ ಸಾವಿರ ರನ್ ಗಳಿಸಿದ ಮೊದಲ ವಿದೇಶಿ ಆಟಗಾರ ಎನಿಸಿಕೊಳ್ಳುವ ಅಪರೂಪದ ಅವಕಾಶ ಇತ್ತು.. ಇನ್ನು, ಅಡಿಲೇಡ್‌ನಲ್ಲಿ ಕೊಹ್ಲಿ 5 ಅಂತಾರಾಷ್ಟ್ರೀಯ ಶತಕ ಬಾರಿಸಿದ್ದಾರೆ. ಏಕದಿನದಲ್ಲಿ 2, ಟೆಸ್ಟ್‌ನಲ್ಲಿ 3 ಸೆಂಚುರಿ ಸಿಡಿಸಿದ್ದಾರೆ. ಆದರೆ ಅಡಿಲೇಡ್‌ನಲ್ಲಿ ಬಹುತೇಕ ಕೊಹ್ಲಿ ಆಡುತ್ತಿರುವ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಇದಾಗಿತ್ತು. ಈ ಪಂದ್ಯದಲ್ಲಿ ಮ್ಯಾಜಿಕ್ ಮಾಡಲು ಕೊಹ್ಲಿ ವಿಫಲರಾಗಿದ್ದಾರೆ.
ಅಡಿಲೇಡ್‌ನಲ್ಲಿ ಕೊಹ್ಲಿ ಕೊನೆಯ ಆಟ?
ವಿರಾಟ್ ಕೊಹ್ಲಿ ಈಗಾಗಲೇ ಟೆಸ್ಟ್ ಹಾಗೂ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದು, ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಟೀಂ ಇಂಡಿಯಾ ಪ್ರತಿನಿಧಿಸುತ್ತಿದ್ದಾರೆ. ಬಹುತೇಕ ಆಸ್ಟ್ರೇಲಿಯಾದ ಅಡಿಲೇಡ್ ಮೈದಾನದಲ್ಲಿ ಕೊಹ್ಲಿ ಆಡಿದ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಇದಾಗುವ ಸಾಧ್ಯತೆಯಿದೆ. ವಿಕೆಟ್ ಒಪ್ಪಿಸಿ ಮೈದಾನಕ್ಕೆ ವಾಪಾಸ್ಸಾಗುವ ವೇಳೆ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಗುಡ್ ಬೈ ಹೇಳುವ ರೀತಿಯ ಸನ್ನೆ ಮಾಡುತ್ತಿರುವುದು ಸೋಷಿಯಲ್ ಮೀಡಿಯಾದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ. ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ನಿವೃತ್ತಿಯ ದಿನಕ್ಕೆ ಕಾಲ ಸನ್ನಿಹಿತವಾಗಿದೆ ಎನ್ನುವಂತ ಚರ್ಚೆ ಅರಂಭವಾಗಿದೆ.
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯವು ಮಾರ್ಚ್‌ನಲ್ಲಿ ನಡೆದಿತ್ತು. ಇದಾದ ಬಳಿಕ ಕೊಹ್ಲಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯವನ್ನಾಡಿರಲಿಲ್ಲ. ಆಸ್ಟ್ರೇಲಿಯಾ ಎದುರಿನ ಸರಣಿಯಲ್ಲಿ ಕೊಹ್ಲಿ ಭರ್ಜರಿಯಾಗಿ ಕಮ್‌ಬ್ಯಾಜ್ ಮಾಡಬಹುದು ಎನ್ನುವ ನಿರೀಕ್ಷೆ ಹುಸಿಯಾಗಿದೆ. ಪರ್ತ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಎಂಟು ಎಸೆತಗಳನ್ನು ಎದುರಿಸಿದ ಕೊಹ್ಲಿ ಡ್ರೈವ್ ಮಾಡುವ ಯತ್ನದಲ್ಲಿ ಮಿಚೆಲ್ ಸ್ಟಾರ್ಕ್‌ಗೆ ವಿಕೆಟ್ ಒಪ್ಪಿಸಿದ್ದರು. ಇನ್ನು ಇದೀಗ ಅಡಿಲೇಡ್‌ನಲ್ಲಿ ಕೇವಲ 4 ಎಸೆತಗಳನ್ನು ಎದುರಿಸಿ ಖಾತೆ ತೆರೆಯುವ ಮುನ್ನವೇ ಪೆವಿಲಿಯನ್ ಹಾದಿ ಹಿಡಿದರು.
