ಆರ್​ಬಿಸಿ ತಂಡ ಫೈನಲ್ ಪ್ರವೇಶಿಸುತ್ತಿದ್ದಂತೆಯೇ ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ಸಂಭ್ರಮಾಚರಿಸಿದರೆ, ಮಹಿಳೆಯೊಬ್ಬಳು ತನ್ನ ದಾಂಪತ್ಯವನ್ನೇ ಪಣಕ್ಕಿಟ್ಟಿದ್ದಾಳೆ. ಏನಿದು ವಿಷ್ಯ?

ಕಳೆದ 9 ವರ್ಷಗಳಿಂದ ಆರ್​ಸಿಬಿ ಅಭಿಮಾನಿಗಳು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದ ಘಳಿಗೆ ಕೊನೆಗೂ ಬಂದೇ ಬಿಟ್ಟಿದೆ. ನಿನ್ನೆ ಮೊಹಾಲಿಯಲ್ಲಿ ನಡೆದ ಐಪಿಎಲ್ 2025 ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ XI ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ವಿಕೆಟ್ ಗಳ ಅಂತರದ ಭರ್ಜರಿ ಜಯ ಗಳಿಸಿದ್ದು, ಫೈನಲ್ಸ್ ಪ್ರವೇಶಿಸಿದೆ. ಇಷ್ಟಾದ ಮೇಲೆ ಅಭಿಮಾನಿಗಳನ್ನು ಕೇಳಬೇಕಾ? ಸಂತಸದಲ್ಲಿ ಕುಣಿದಾಡುತ್ತಾ, ಜಿಗಿಯುತ್ತಲಿದ್ದಾರೆ. ಅಂತಿಮ ಪಂದ್ಯದಲ್ಲಿಯೂ ಕಪ್​ ನಮ್ದೇ ಎನ್ನೋದು ಅಭಿಮಾನಿಗಳಿಗೆ ಪಕ್ಕಾ ಆಗಿದೆ. ಇದಾಗಲೇ ತಮ್ಮದೇ ಆದ ರೀತಿಯಲ್ಲಿ ಅಭಿಮಾನಿಗಳು ಸಂಭ್ರಮಾರಣೆ ಮಾಡುತ್ತಿರುವ ಬೆನ್ನಲ್ಲೇ ಮಹಿಳೆಯೊಬ್ಬಳ ಪೋಸ್ಟರ್​ ಒಂದು ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಕೋಲಾಹಲವನ್ನೇ ಸೃಷ್ಟಿಸಿದೆ.

ಅದರಲ್ಲಿ ಆಕೆ, ಆರ್​ಸಿಬಿ ಫೈನಲ್​ನಲ್ಲಿ ಗೆದ್ದು ಕಪ್​ ತರದೇ ಹೋದರೆ ತಾವು ಪತಿಗೆ ಡಿವೋರ್ಸ್​ ನೀಡುವುದಾಗಿ ಹೇಳಿಕೊಂಡಿದ್ದಾರೆ! ಇದರ ಅರ್ಥ RCB ಗೆಲ್ಲಿಸ್ತೀರೋ, ನಾನು ಡಿವೋರ್ಸ್​ ಕೊಡಲೊ ಎಂದು ಮಹಿಳೆ ಸಾರಿದ್ದಾರೆ. ಇವರು ಯಾರು ಎನ್ನುವ ಬಗ್ಗೆ ತಿಳಿದಿಲ್ಲ. ಆದರೆ ಈ ಪೋಸ್ಟರ್​ ಮೂಲಕ ರಾತ್ರೋರಾತ್ರಿ ಫೇಮಸ್​ ಆಗಿದ್ದಾರೆ. ಪ್ರಚಾರಕ್ಕಾಗಿ ಏನೇನೋ ಮಾಡುವವರು ಇದ್ದಾರೆ. ಜೀವವನ್ನೇ ಲೆಕ್ಕಿಸದೇ ರೀಲ್ಸ್​ ಮಾಡುವವರೂ ಇದ್ದಾರೆ. ಆದರೆ ಹೀಗೆ ಆರ್​ಸಿಬಿಗೂ ತಮ್ಮ ದಾಂಪತ್ಯಕ್ಕೂ ಸಂಬಂಧ ಕಲ್ಪಿಸಿ ಈ ಮಹಿಳೆ ಹೀಗೆ ಬರೆದುಕೊಂಡಿರುವ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈಕೆಯ ತಮಾಷೆ ಚೆನ್ನಾಗಿದೆ ಎಂದು ಕೆಲವರು ಹೇಳಿದರೆ, ಇಂಥ ಪತ್ನಿ ಇರುವ ಬದಲು ಆಕೆಯ ಗಂಡ ಡಿವೋರ್ಸ್​ ಕೊಡುವುದೇ ಮೇಲು ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ. ಪ್ರಚಾರಕ್ಕಾಗಿ ಇಂಥ ಹುಚ್ಚು ಮಾಡಬಾರದು ಎಂದೇ ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅದೇ ಇನ್ನೊಂದೆಡೆ, ಆರ್‌ಸಿಬಿ ಅಭಿಮಾನಿಯೊಬ್ಬ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾನೆ. ಆರ್‌ಸಿಬಿ ಜೂನ್ 3ರಂದು ಫೈನಲ್ ಪಂದ್ಯದಲ್ಲಿ ಗೆದ್ದು ಟ್ರೋಫಿ ಕೈವಶ ಮಾಡಿದರೆ ಆ ದಿನವನ್ನು ಸಾರ್ವತ್ರಿಕ ರಜೆ ಎಂದು ಘೋಷಿಸಲು ಪತ್ರ ಬರೆದಿದ್ದಾನೆ.ಆರ್‌ಸಿಬಿ ಅಭಿಮಾನಿ ಶಿವನಂದ ಮಲ್ಲನ್ನವರ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ. ಗೋಗಾಕ್ ಮೂಲದ ಶಿವನಾಂದ ಆರ್‌ಸಿಬಿ ಫೈನಲ್ ಪ್ರವೇಶಿಸಿದ ಬೆನ್ನಲ್ಲೇ ಪತ್ರ ಬರೆದಿದ್ದಾರೆ. ಈ ಪತ್ರ ಇದೀಗ ವೈರಲ್ ಆಗಿದೆ.ರಾಜ್ಯದ ಪ್ರತಿ ಜಿಲ್ಲೆಯ ವತಿಯಿಂದ ಆರ್‌ಸಿಬಿ ಪರವಾಗಿ ಪತ್ರ ಬರೆದಿರುವುದಾಗಿ ಶಿವಾನಂದ ಹೇಳಿದ್ದಾರೆ. ಪ್ರಮುಖವಾಗಿ ಈ ಅಭಿಮಾನಿ, ಜೂನ್ 3ರ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಗೆದ್ದರೆ, ಸಾರ್ವತ್ರಿಕ ರಜೆ ಘೋಷಿಸಬೇಕು ಎಂದು ಮನವಿ ಮಾಡಿದ್ದಾನೆ. ಈ ದಿನವನ್ನು ಕರ್ನಾಟಕ ರಾಜ್ಯ ಆರ್‌ಸಿಬಿ ಫ್ಯಾನ್ಸ್ ಹಬ್ಬ ಎಂದು ನಾಮಕರಣ ಮಾಡಬೇಕು ಎಂದು ಆಗ್ರಹಿಸಿದ್ದಾನೆ.

ಮುಂಬರುವ ಐಪಿಎಲ್ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಗೆದ್ದರೆ ಆ ದಿನವನ್ನು ಕರ್ನಾಟ ರಾಜ್ಯ ಆರ್‌ಸಿಬಿ ಫ್ಯಾನ್ಸ್ ಹಬ್ಬ ಎಂದು ಘೋಷಿಸಬೇಕು. ಜೊತೆಗೆ ಈ ದಿನವನ್ನು ಸರ್ಕಾರಿ ರಜೆ ಎಂದು ಘೋಷಿಸಲು ಅಭಿಮಾನಿ, ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಮಾಡಿದ್ದಾನೆ. ಅಭಿಮಾನಿಗಳ ಬಹು ದಿನಗಳ ಬೇಡಿಕೆಯನ್ನು ಆರ್‌ಸಿಬಿ ಈಡೇರಿಸಿದರೆ ಸರ್ಕಾರಿ ರಜೆ ಘೋಷಿಸಲು ಪತ್ರದಲ್ಲಿ ಮನವಿ ಮಾಡಲಾಗಿದೆ. ಕರ್ನಾಟಕ ರಾಜ್ಯೋತ್ಸವವನ್ನು ಪ್ರತಿ ಜಿಲ್ಲೆಯಲ್ಲಿ ಯಾವ ರೀತಿ ಆಚರಿಸಲಾಗುತ್ತದೋ, ಅದೇ ರೀತಿ ಆರ್‌ಸಿಬಿ ಫ್ಯಾನ್ಸ್ ಹಬ್ಬ ಆಚರಿಸಲು ಸರ್ಕಾರ ಅನುವು ಮಾಡಿಕೊಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.