ಟಿ20 ವಿಶ್ವಕಪ್ ಬಹಿಷ್ಕರಿಸುವ ಪೊಳ್ಳು ಬೆದರಿಕೆ ಹಾಕಿದ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಖಡಕ್ ಎಚ್ಚರಿಕೆ ನೀಡಿದೆ. ಒಂದು ವೇಳೆ ಟೂರ್ನಿಯಲ್ಲಿ ಆಡದಿದ್ದರೆ, ದ್ವಿಪಕ್ಷೀಯ ಸರಣಿ, ಪಿಎಸ್‌ಎಲ್ ಮತ್ತು ಏಷ್ಯಾಕಪ್‌ನಿಂದಲೂ ಹೊರಹಾಕುವುದಾಗಿ ಎಚ್ಚರಿಸಿದೆ.
ನವದೆಹಲಿ: ಬಾಂಗ್ಲಾದೇಶವನ್ನು ಟಿ20 ವಿಶ್ವಕಪ್‌ನಿಂದ ಹೊರಹಾಕಿದ್ದಕ್ಕೆ ಫೆ.7ರಿಂದ ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಟೂರ್ನಿಯಲ್ಲಿ ನಾವೂ ಆಡಲ್ಲ ಎಂದು ಪೊಳ್ಳು ಬೆದರಿಕೆ ಹಾಕಿದ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಖಡಕ್ ಎಚ್ಚರಿಕೆ ನೀಡಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಟಿ20 ವಿಶ್ವಕಪ್ ಬಹಿಷ್ಕರಿಸಿದರೆ ಪಾಕ್‌ನ ಕ್ರಿಕೆಟ್ ಭವಿಷ್ಯವೇ ಖತಂಗೊಳಿಸುತ್ತೇವೆ ಎಂದು ಐಸಿಸಿ ಎಚ್ಚರಿಸಿದೆ ಎನ್ನಲಾಗಿದೆ. ವರದಿಯ ಪ್ರಕಾರ, ಪಾಕ್ ಏನಾದರೂ ವಿಶ್ವಕಪ್‌ನಲ್ಲಿ ಆಡಲು ಬಾರದಿದ್ದರೆ ಆ ತಂಡಕ್ಕೆ ಯಾವುದೇ ದ್ವಿಪಕ್ಷೀಯ ಸರಣಿಯಲ್ಲಿ ಆಡಲು ಬಿಡುವುದಿಲ್ಲ. ಐಪಿಎಲ್ ಮಾದರಿಯ ಪಿಎಸ್‌ಎಲ್ ಟಿ20 ಟೂರ್ನಿಯಲ್ಲಿ ಆಡಲು ವಿದೇಶಿ ಆಟಗಾರರಿಗೆ ನಿರಾಕ್ಷೇಪಣ ಪತ್ರ (ಎನ್‌ಒಸಿ) ಕೊಡದಂತೆ ಆಯಾ ರಾಷ್ಟ್ರೀಯ ಕ್ರಿಕೆಟ್ ಮಂಡಳಿಗಳಿಗೆ ಸೂಚಿಸಲಾಗುತ್ತದೆ. ಇನ್ನು, ಏಷ್ಯಾಕಪ್‌ನಿಂದಲೂ ನಿಮ್ಮನ್ನು ಹೊರಹಾಕುತ್ತೇವೆ ಎಂದು ಐಸಿಸಿ ಎಚ್ಚರಿಸಿದೆ ಎಂದು ತಿಳಿದುಬಂದಿದೆ. ಹೀಗೇನಾದರೂ ಆದರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಪಾಕಿಸ್ತಾನ ತಂಡವೇ ಕಣ್ಮರೆಯಾಗಲಿದೆ.
ಐಸಿಸಿ ಎಚ್ಚರಿಕೆಗೆ ಹೆದರಿದ ಪಾಕ್: ಟಿ20 ವಿಶ್ವಕಪ್‌ಗೆ ತಂಡ ಪ್ರಕಟ!
ಐಸಿಸಿ ನೀಡಿದ ಖಡಕ್ ಎಚ್ಚರಿಕೆಯಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಹೆದರಿದಂತೆ ಕಾಣುತ್ತಿದೆ. ಭಾನುವಾರ ಇದ್ದಕ್ಕಿದ್ದಂತೆ 15 ಸದಸ್ಯರ ತಂಡವನ್ನು ಪಿಸಿಬಿ ಪ್ರಕಟಿಸಿತು. ಸಲ್ಮಾನ್ ಆಘಾ ತಂಡವನ್ನು ಮುನ್ನಡೆಸಲಿದ್ದಾರೆ. ತಂಡ ಪ್ರಕಟಗೊಳಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ, ‘ವಿಶ್ವಕಪ್‌ಗೆ ಸಮಯ ಹತ್ತಿರವಾಗುತ್ತಿದೆ ಎನ್ನುವ ಕಾರಣಕ್ಕೆ ತಂಡ ಅಯ್ಕೆ ಮಾಡಿದ್ದಾರೆ. ಆದರೆ ವಿಶ್ವಕಪ್‌ನಲ್ಲಿ ಆಡಬೇಕೋ ಬೇಡವೋ ಎನ್ನುವುದನ್ನು ನಮ್ಮ ಸರ್ಕಾರ ನಿರ್ಧರಿಸಲಿದೆ. ಸರ್ಕಾರ ಹೇಳಿದಂತೆ ಕೇಳುತ್ತೇವೆ’ ಎಂದರು.
ಟಿ20 ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ತಂಡ ಹೀಗಿದೆ:
ಸಲ್ಮಾನ್ ಅಲಿ ಆಘಾ (ನಾಯಕ), ಬಾಬರ್ ಅಜಂ, ಶಾಹೀನ್ ಶಾ ಆಫ್ರಿದಿ, ಫಖರ್ ಜಮಾನ್, ಶಾದಾಬ್ ಖಾನ್, ನಸೀಮ್ ಶಾ, ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಖವಾಜಾ ಮೊಹಮ್ಮದ್ ನಫಯ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಮೊಹಮ್ಮದ್ ಸಲ್ಮಾನ್ ಮಿರ್ಜಾ, ಸಾಹಿಬ್‌ಜಾದಾ ಫರ್ಹಾನ್, ಸೈಮ್ ಅಯೂಬ್, ಉಸ್ಮಾನ್ ಖಾನ್, ಉಸ್ಮಾನ್ ತಾರಿಖ್.
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ವೇಳಾಪಟ್ಟಿ ಹೀಗಿದೆ:
ಫೆಬ್ರವರಿ 07: ಪಾಕಿಸ್ತಾನ-ನೆದರ್‌ಲೆಂಡ್ಸ್
ಫೆಬ್ರವರಿ 10: ಪಾಕಿಸ್ತಾನ - ಯುಎಸ್‌ಎ
ಫೆಬ್ರವರಿ 15: ಪಾಕಿಸ್ತಾನ- ಭಾರತ
ಫೆಬ್ರವರಿ 18: ಪಾಕಿಸ್ತಾನ- ನಮೀಬಿಯಾ
ಪಾಕಿಸ್ತಾನ ತನ್ನ ಪಾಲಿನ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದ ಕೊಲಂಬೋದಲ್ಲಿ ಆಡಲಿದೆ. ಭಾರತ-ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಮ್ಯಾಚ್ ಫೆಬ್ರವರಿ 15ರಂದು ನಡೆಯಲಿದೆ.


