ಭಾರತದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಬಹಿಷ್ಕರಿಸಲು ಬಾಂಗ್ಲಾದೇಶ ತೀರ್ಮಾನಿಸಿದೆ. ಮುಸ್ತಾಫಿಜುರ್ ರಹಮಾನ್ ಅವರ ಐಪಿಎಲ್ ವಿವಾದದ ಹಿನ್ನೆಲೆಯಲ್ಲಿ ಭದ್ರತೆಯ ಕಾರಣ ನೀಡಿ, ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಮಾಡಿದ ಮನವಿಯನ್ನು ಐಸಿಸಿ ತಿರಸ್ಕರಿಸಿದೆ.

ಢಾಕಾ: ಮುಂಬರುವ ಫೆಬ್ರವರಿ 07ರಿಂದ ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಬಾಂಗ್ಲಾದೇಶ ಬಾಯ್ಕಾಟ್ ಮಾಡುವ ತೀರ್ಮಾನವನ್ನು ಘೋಷಿಸಿದೆ. ಪ್ರತಿಷ್ಠಿತ ಟಿ20 ವಿಶ್ವಕಪ್ ಟೂರ್ನಿಯನ್ನಾಡಲು ಭಾರತಕ್ಕೆ ಪ್ರಯಾಣ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದ ಬಾಂಗ್ಲಾದೇಶ, ಐಸಿಸಿ ಡೆಡ್‌ಲೈನ್‌ಗೂ ಬಗ್ಗದೇ ಟೂರ್ನಿಯನ್ನು ಬಾಯ್ಕಾಟ್ ಮಾಡಿದೆ.

ಬಾಂಗ್ಲಾದೇಶ ತಂಡವು ಟಿ20 ವಿಶ್ವಕಪ್ ಟೂರ್ನಿಯನ್ನಾಡಲು ಭಾರತ ಪ್ರವಾಸ ಮಾಡುವುದಿಲ್ಲ ಎಂದು ಬಾಂಗ್ಲಾದೇಶ ಸರ್ಕಾರವು ಅಧಿಕೃತವಾಗಿ ಘೋಷಿಸಿದೆ. 'ನಾವು ಐಸಿಸಿ ಜತೆ ಸತತವಾಗಿ ಮಾತಾಡುತ್ತಿದ್ದೇವೆ. ನಾವು ಐಸಿಸಿ ಟಿ20 ವಿಶ್ವಕಪ್ ಆಡಲು ರೆಡಿಯಿದ್ದೇವೆ. ಆದರೆ ಭಾರತದಲ್ಲಿ ಆಡೊಲ್ಲವಷ್ಟೇ. ಇದರ ಬಗ್ಗೆ ನಮ್ಮ ಹೋರಾಟ ಮುಂದುವರೆಯಲಿದೆ. ಐಸಿಸಿ ಬೋರ್ಡ್ ಮೀಟಿಂಗ್‌ನಲ್ಲಿ ಕೆಲವೊಂದು ಶಾಕಿಂಗ್ ತೀರ್ಮಾನಗಳನ್ನು ತೆಗೆದುಕೊಳ್ಳಲಾಯಿತು. ಮುಸ್ತಾಫಿಜುರ್ ರಹಮಾನ್ ಅವರನ್ನು ಐಪಿಎಲ್‌ನಿಂದ ಹೊರಹಾಕಿದ್ದು ಪ್ರತ್ಯೇಕ ವಿಷಯವಲ್ಲ. ಭಾರತ ಏಕಾಂಗಿಯಾಗಿ ತೆಗೆದುಕೊಂಡ ತೀರ್ಮಾನವದು ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಅಮಿನುಲ್ ಇಸ್ಲಾಂ ಬುಲ್‌ಬುಲ್‌ ಹೇಳಿದ್ದಾರೆ.

Scroll to load tweet…

ನಮ್ಮ ಪಂದ್ಯಗಳನ್ನು ಭಾರತದಿಂದ ಬೇರೆಡೆಗೆ ಶಿಫ್ಟ್ ಮಾಡಿ ಎನ್ನುವ ಬೇಡಿಕೆಯನ್ನು ಐಸಿಸಿ ತಿರಸ್ಕರಿಸಿದೆ. ವಿಶ್ವ ಕ್ರಿಕೆಟ್‌ನಲ್ಲಿ ಏನೇನಾಗುತ್ತಿದೆ ಎನ್ನುವುದರ ಅರಿವು ನಮಗೂ ಇದೆ. ಕ್ರಿಕೆಟ್ ಜನಪ್ರಿಯತೆ ಕುಗ್ಗುತ್ತಿದೆ. ಅವರು 200 ಮಿಲಿಯನ್ ಮಂದಿಯನ್ನು ಬಂಧಿಸಿದ್ದಾರೆ. ಕ್ರಿಕೆಟ್ ಒಲಿಂಪಿಕ್ಸ್‌ಗೆ ಹೋಗುತ್ತಿದೆ. ಆದರೆ ನಮ್ಮಂತಹ ದೇಶ ಅಲ್ಲಿಗೆ ಹೋಗದಿದ್ದರೇ ಅದು ಐಸಿಸಿ ವೈಫಲ್ಯ ಎಂದು ಅಮಿನುಲ್ ಇಸ್ಲಾಂ ಹೇಳಿದ್ದಾರೆ.

ಈ ತೀರ್ಮಾನ ಪ್ರಕಟಿಸುವ ಮುನ್ನ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಬಾಂಗ್ಲಾದೇಶದ ಹಂಗಾಮಿ ಕ್ರೀಡಾ ಸಲಹೆಗಾರರ ಜತೆ ಜಂಟಿ ಮಾತುಕತೆ ನಡೆಸಿ ಅಂತಿಮ ಘೋಷಣೆಯನ್ನು ಮಾಧ್ಯಮಗಳ ಮೂಲಕ ಮಾಡಲಾಯಿತು.

ಬಾಂಗ್ಲಾದೇಶ ವಿವಾದದ ಬಗ್ಗೆ:

ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪಾಲಾಗಿದ್ದ ಮುಸ್ತಾಫಿಜುರ್ ರಹಮಾನ್ ಅವರನ್ನು ಭದ್ರತೆಯ ಕಾರಣದಿಂದ ತಂಡದಿಂದ ಕೈಬಿಡಿ ಎಂದು ಬಿಸಿಸಿಐ ಸೂಚಿಸಿತ್ತು. ಅದರಂತೆ ಕೆಕೆಆರ್ ಫ್ರಾಂಚೈಸಿಯು ಮುಸ್ತಾಫಿಜುರ್ ಅವರನ್ನು ರಿಲೀಸ್ ಮಾಡಿತ್ತು. ಇದಾದ ಬಳಿಕ ಇದನ್ನೇ ಪ್ರತಿಷ್ಠೆಯಾಗಿ ತೆಗೆದುಕೊಂಡ ಬಾಂಗ್ಲಾದೇಶ, ಭದ್ರತೆಯ ನೆಪವೊಡ್ಡಿ ಟಿ20 ವಿಶ್ವಕಪ್ ಆಡಲು ನಾವು ಭಾರತಕ್ಕೆ ಬರುವುದಿಲ್ಲ ಎಂದು ಪಟ್ಟು ಹಿಡಿಯಿತು. ಐಸಿಸಿ ಹಾಗೂ ಬಾಂಗ್ಲಾದೇಶ ನಡುವೆ ಹಲವು ಸುತ್ತಿನ ಮಾತುಕತೆ ನಡೆದರೂ ಫಲಪ್ರದವಾಗಲಿಲ್ಲ.

ಇನ್ನು ಬಾಂಗ್ಲಾದೇಶ ತಂಡವು ಭಾರತದ ಹೊರಗೆ ಅಂದರೆ ಶ್ರೀಲಂಕಾದಲ್ಲಿ ತಮ್ಮ ಪಾಲಿನ ಪಂದ್ಯಗಳನ್ನು ಆಯೋಜಿಸಲು ಐಸಿಸಿಗೆ ಮನವಿ ಮಾಡಿತು. ಆದರೆ ಕೊನೆಯ ಕ್ಷಣದಲ್ಲಿ ಟಿ20 ವೇಳಾಪಟ್ಟಿಯನ್ನು ಬದಲಿಸಲು ಸಾಧ್ಯವಿಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ಐಸಿಸಿ ರವಾನಿಸಿತು. ಅಂದಹಾಗೆ ಈ ಬಾರಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಭಾರತ ಹಾಗೂ ಶ್ರೀಲಂಕಾ ಜಂಟಿಯಾಗಿ ಆಯೋಜಿಸಿವೆ. ಪಾಕಿಸ್ತಾನ ತನ್ನ ಪಾಲಿನ ಪಂದ್ಯಗಳನ್ನು ಶ್ರೀಲಂಕಾದಲ್ಲಿಯೇ ಆಡಲಿದೆ.

ಕೊನೆಯ ಸಮಯದಲ್ಲಿ ಐಸಿಸಿಗೆ ಪತ್ರ ಬರೆದು ಬಾಂಗ್ಲಾದೇಶಕ್ಕೆ ಬೆಂಬಲ ಸೂಚಿಸಿದ ಪಾಕಿಸ್ತಾನ:

ಇನ್ನು ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನಾಡಲು ಭಾರತಕ್ಕೆ ಪ್ರಯಾಣ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿರುವ ಬಾಂಗ್ಲಾದೇಶದ ನಿರ್ಧಾರವನ್ನು ಬೆಂಬಲಿಸಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಐಸಿಸಿಗೆ ಪತ್ರ ಬರೆದಿದೆ. ಪಾಕಿಸ್ತಾನದ ಪರಿಸ್ಥಿತಿ ಹೇಗಾಗಿದೆ ಎಂದರೆ ಕೋಟೆ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತಾಗಿದೆ.

ಸ್ಕಾಟ್ಲೆಂಡ್‌ಗೆ ಚಾನ್ಸ್?

ಬಾಂಗ್ಲಾದೇಶ ತನ್ನ ನಿಲುವನ್ನು ತಿಳಿಸಲು ಜನವರಿ 21ರವರೆಗೆ ಐಸಿಸಿ ಡೆಡ್ ಲೈನ್ ನೀಡಿತ್ತು. ಇದಾದ ಬಳಿಕ ಒಂದು ದಿನ ಅಂದರೆ ಇವತ್ತಿನವರೆಗೆ ವಿಸ್ತರಿಸಿತ್ತು. ಇದೀಗ ಬಾಂಗ್ಲಾದೇಶ ಮೊಂಡು ಹಟ ಮುಂದುವರೆಸಿದ್ದರಿಂದ ಬಾಂಗ್ಲಾದೇಶ ಬದಲಿಗೆ ಇದೀಗ ಸ್ಕಾಟ್ಲೆಂಡ್ ತಂಡಕ್ಕೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗುವ ಸಾಧ್ಯತೆಯಿದೆ.

ಇನ್ನು ಐಸಿಸಿ ಟೂರ್ನಿಯನ್ನು ಬಾಯ್ಕಾಟ್ ಮಾಡಿರುವುದರಿಂದ ಬಾಂಗ್ಲಾದೇಶ ಕ್ರಿಕೆಟ್‌ಗೆ ಐಸಿಸಿಯಿಂದ ದೊಡ್ಡ ಪ್ರಮಾಣದ ನಷ್ಟ ಉಂಟಾಗಲಿದೆ. ಬಾಂಗ್ಲಾದೇಶದ ಈ ಮೊಂಡು ವಾದದ ಬಗ್ಗೆ ನೀವೇನಂತೀರಾ ಕಮೆಂಟ್ ಮಾಡಿ.