ದುಬೈ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತವು ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಸೋಲಿಸಿ ಸೆಮಿಫೈನಲ್‌ಗೆ ಪ್ರವೇಶಿಸಿದೆ. ಶ್ರೇಯಸ್ ಅಯ್ಯರ್ ಮತ್ತು ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ನೆರವಿನಿಂದ ಭಾರತ ಗೆಲುವು ಸಾಧಿಸಿತು. ರೋಹಿತ್ ಶರ್ಮಾ ನೇತೃತ್ವದ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಪಂದ್ಯದಲ್ಲಿ ಶಮಿ ದುಬಾರಿ ಓವರ್ ಮತ್ತು ಕುಲ್ದೀಪ್, ಪಾಂಡ್ಯ 200 ವಿಕೆಟ್ ದಾಖಲೆ ನಿರ್ಮಿಸಿದರು.

ದುಬೈ: ಭಾರತ ಹಾಗೂ ಪಾಕಿಸ್ತಾನ ನಡುವಿನ ಚಾಂಪಿಯನ್ಸ್ ಟ್ರೋಫಿ ಕಾದಾಟದಲ್ಲಿ ಟೀಂ ಇಂಡಿಯಾ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಸೆಮಿಫೈನಲ್‌ಗೆ ಅಧಿಕೃತವಾಗಿ ಲಗ್ಗೆಯಿಟ್ಟಿದೆ. ಮೊದಲು ಬೌಲಿಂಗ್‌ನಲ್ಲಿ ಸಂಘಟಿತ ಪ್ರದರ್ಶನ ತೋರಿದ ಟೀಂ ಇಂಡಿಯಾ, ಆ ಬಳಿಕ ಶ್ರೇಯಸ್ ಅಯ್ಯರ್ ಹಾಗೂ ವಿರಾಟ್ ಕೊಹ್ಲಿ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಸುಲಭ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ.

'ಎ' ಗುಂಪಿನಲ್ಲಿ ಆಡಿದ ಎರಡು ಪಂದ್ಯಗಳನ್ನು ಗೆದ್ದ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಇನ್ನೊಂದೆಡೆ ಸತತ ಎರಡು ಸೋಲು ಅನುಭವಿಸಿರುವ ಹಾಲಿ ಚಾಂಪಿಯನ್ ಪಾಕಿಸ್ತಾನ ಅಂಕಪಟ್ಟಿಯಲ್ಲಿ ಮತ್ತೊಮ್ಮೆ ಕೊನೆಯ ಸ್ಥಾನದಲ್ಲಿಯೇ ಉಳಿದಿದೆ. ಇನ್ನು ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಈ ಹೈವೋಲ್ಟೇಜ್ ಪಂದ್ಯವು ಹಲವು ಅಪರೂಪದ ದಾಖಲೆಗಳಿಗೆ ಸಾಕ್ಷಿಯಾಯಿತು.

ಇದನ್ನೂ ಓದಿ: ಇಂದು ಬಾಂಗ್ಲಾದೇಶ ವಿರುದ್ಧ ಕಿವೀಸ್ ಗೆದ್ದರೆ ಪಾಕ್ ಮನೆಗೆ!

ಟಾಸ್‌ ಸೋಲಿನಲ್ಲಿ ಭಾರತ ವಿಶ್ವದಾಖಲೆ

ಭಾರತ ತಂಡ ಪಾಕಿಸ್ತಾನ ವಿರುದ್ಧ ಪಂದ್ಯದ ಆರಂಭಕ್ಕೂ ಮುನ್ನವೇ ಅನಗತ್ಯ ವಿಶ್ವ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆದುಕೊಂಡಿದೆ. ಸತತ 12 ಏಕದಿನ ಪಂದ್ಯಗಳಲ್ಲಿ ಟಾಸ್‌ ಸೋತ ವಿಶ್ವದ ಮೊದಲ ತಂಡ ಎನಿಸಿಕೊಂಡಿದೆ. 2023ರ ಏಕದಿನ ವಿಶ್ವಕಪ್‌ ಫೈನಲ್‌ನಿಂದ ಭಾನುವಾರದ ಪಾಕ್‌ ಪಂದ್ಯದ ವರೆಗೆ ಭಾರತದ ನಾಯಕರು ಟಾಸ್‌ ಗೆದ್ದಿಲ್ಲ. ಈ ಮೊದಲು ನೆದರ್‌ಲೆಂಡ್ಸ್‌ ತಂಡ ಮಾರ್ಚ್‌ 2011ರಿಂದ ಆಗಸ್ಟ್‌ 2013ರ ವರೆಗೆ ಸತತ 11 ಟಾಸ್‌ ಸೋತಿತ್ತು ದಾಖಲೆಯಾಗಿತ್ತು.

ಒಂದೇ ಓವರ್‌ನಲ್ಲಿ 5 ವೈಡ್‌ ಎಸೆದ ಶಮಿ!

ಭಾರತದ ಪ್ರಮುಖ ವೇಗಿ ಮೊಹಮದ್‌ ಶಮಿ ಪಂದ್ಯದ ಮೊದಲ ಓವರ್‌ನಲ್ಲೇ 5 ವೈಡ್ ಎಸೆದರು. ಏಕದಿನ ಕ್ರಿಕೆಟ್‌ನಲ್ಲಿ ಓವರ್‌ವೊಂದರಲ್ಲಿ ಅತಿ ಹೆಚ್ಚು ವೈಡ್ ಎಸೆದ ಆಟಗಾರ ಎಂಬ ಕುಖ್ಯಾತಿ ಗಳಿಸಿದ್ದಾರೆ. ಈ ಹಿಂದೆ ಜಹೀರ್‌ ಖಾನ್‌(4 ಬಾರಿ), ಬಾಲಾಜಿ, ಆರ್‌ಪಿ ಸಿಂಗ್‌(2 ಬಾರಿ), ಇರ್ಫಾನ್‌ ಪಠಾಣ್‌ ತಲಾ 4 ವೈಡ್‌ ಎಸೆದಿದ್ದರು.

ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಹುರಿದುಂಬಿಸಿದ ಸುಂದರಿ ಯಾರು? ದುಬೈನಲ್ಲಿ ಕಾಣಿಸಿಕೊಂಡ ಚೆಲುವೆ!

11 ಎಸೆತ

ಮೊದಲ ಓವರ್‌ನಲ್ಲಿ ಶಮಿ 11 ಎಸೆತ ಎಸೆದರು. ಇದು ಚಾಂಪಿಯನ್ಸ್‌ ಟ್ರೋಫಿಯಲ್ಲಿ ಭಾರತೀಯನ ಅತಿ ದೀರ್ಘ ಓವರ್‌. 2017ರಲ್ಲಿ ಬೂಮ್ರಾ ಓವರ್‌ನಲ್ಲಿ 9 ಚೆಂಡು ಎಸೆದಿದ್ದರು.

ಅಂ.ರಾ. ಕ್ರಿಕೆಟ್‌ನಲ್ಲಿ ಕುಲ್ದೀಪ್‌ 300, ಪಾಂಡ್ಯ 200 ವಿಕೆಟ್‌ ದಾಖಲೆ

ಭಾರತದ ತಾರಾ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 200 ವಿಕೆಟ್‌ ಪೂರ್ಣಗೊಳಿಸಿದ್ದಾರೆ. ಎಡಗೈ ಸ್ಪಿನ್ನರ್‌ ಆಗಿರುವ ಕುಲ್ದೀಪ್‌ ಏಕದಿನದಲ್ಲಿ 176, ಟೆಸ್ಟ್‌ನಲ್ಲಿ 56, ಅಂ.ರಾ. ಟಿ20ಯಲ್ಲಿ 69 ವಿಕೆಟ್ ಪಡೆದಿದ್ದಾರೆ. ಇದೇ ವೇಳೆ ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 200 ವಿಕೆಟ್‌ ಪೂರ್ಣಗೊಳಿಸಿದ್ದಾರೆ. ಅವರು ಅಂ.ರಾ. ಟಿ20ಯಲ್ಲಿ 94, ಟೆಸ್ಟ್‌ನಲ್ಲಿ 17 ಹಾಗೂ ಏಕದಿನದಲ್ಲಿ 89 ವಿಕೆಟ್‌ ಕಬಳಿಸಿದ್ದಾರೆ.