ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದು, ಸೋತ ತಂಡ ಸೆಮಿಫೈನಲ್ ರೇಸ್‌ನಿಂದ ಹೊರಬೀಳಲಿದೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯ ಮಳೆಯಿಂದ ರದ್ದಾಗಿದ್ದು, ಎರಡೂ ತಂಡಗಳು ತಲಾ ಒಂದು ಅಂಕವನ್ನು ಹಂಚಿಕೊಂಡಿವೆ. ಆಸ್ಟ್ರೇಲಿಯಾದ ಕೊನೆಯ 8 ಪಂದ್ಯಗಳಲ್ಲಿ 4 ಪಂದ್ಯಗಳು ಮಳೆಯಿಂದ ರದ್ದಾಗಿವೆ.
ಲಾಹೋರ್: ಈ ಬಾರಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಬುಧವಾರದ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ಅಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಪಂದ್ಯ ವರ್ಚುವಲ್ ನಾಕೌಟ್ ಎನಿಸಿಕೊಂಡಿದ್ದು, ಸೋತ ತಂಡ ಸೆಮಿಫೈನಲ್ ರೇಸ್‌ನಿಂದಲೇ ಹೊರಬೀಳಲಿದೆ.
'ಬಿ' ಗುಂಪಿನಲ್ಲಿ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಆಡಿರುವ 2 ಪಂದ್ಯಗಳಲ್ಲಿ ತಲಾ 3 ಅಂಕಗಳನ್ನು ಹೊಂದಿವೆ. ಎರಡೂ ತಂಡಗಳಿಗೆ ಇನ್ನೊಂದು ಪಂದ್ಯ ಬಾಕಿಯಿವೆ. ಎರಡೂ ತಂಡಗಳು ಗೆದ್ದರೆ ಅಂಕಗಳು ತಲಾ 5ಕ್ಕೇರಲಿವೆ.
ಮತ್ತೊಂದೆಡೆ ಇಂಗ್ಲೆಂಡ್, ಅಫ್ಘಾನಿಸ್ತಾನ ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಸೋಲನುಭಿಸಿದ್ದವು. ಹೀಗಾಗಿ ಎರಡು ತಂಡಗಳಿಗೂ ಬುಧವಾರದ ಮುಖಾಮುಖಿಯಲ್ಲಿ ಗೆಲುವು ಅನಿವಾರ್ಯ. ಗೆಲ್ಲುವ ತಂಡದ ಅಂಕ 2 ಆಗಲಿದ್ದು, ಕೊನೆ ಪಂದ್ಯದಲ್ಲೂ ಗೆದ್ದರೆ ಆ ತಂಡಕ್ಕೆ ಸೆಮಿಫೈನಲ್‌ಗೇರಬಹುದು. ಒಂದು ಒಂದು ವೇಳೆ ಬುಧವಾರ ಸೋತರೆ ತಂಡ ಅಧಿಕೃತವಾಗಿ ಹೊರಬೀಳಲಿದೆ.
ಇದನ್ನೂ ಓದಿ: ಇಂಗ್ಲೆಂಡ್ ಸರಣಿಗಾಗಿ ಐಪಿಎಲ್‌ನಲ್ಲೇ ಭಾರತ ರೆಡ್ ಬಾಲ್ ಅಭ್ಯಾಸ!
ಇಂಗ್ಲೆಂಡ್ ಆರಂಭಿಕ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರೂ, ಕಳಪೆ ಬೌಲಿಂಗ್‌ನಿಂದಾಗಿ ಸೋತಿತ್ತು. ಹೀಗಾಗಿ ಬೌಲರ್‌ಗಳು ಆಫ್ಘನ್ ವಿರುದ್ಧ ಸುಧಾರಿತ ಪ್ರದರ್ಶನ ನೀಡಬೇಕಿದೆ. ಅತ್ತ ಆಫ್ಘನ್ ತಂಡಕ್ಕೆ ದ.ಆಫ್ರಿಕಾ ವಿರುದ್ಧ ಯಾವುದೇ ಮ್ಯಾಜಿಕ್ ಮಾಡಲು ಸಾಧ್ಯವಾಗಿರಲಿಲ್ಲ, ಇಂಗ್ಲೆಂಡ್ ವಿರುದ್ಧವಾದರೂ ಉತ್ತಮ ಆಟವಾಡಿ ಗೆಲ್ಲುವ ತವಕದಲ್ಲಿದೆ.
ಪಂದ್ಯ ಆರಂಭ: ಮಧ್ಯಾಹ್ನ 2.30ಕ್ಕೆ
ಆಸೀಸ್ vs ದ.ಆಫ್ರಿಕಾ ಪಂದ್ಯ ರದ್ದು; ಉಭಯ ತಂಡಗಳಿಗೆ ಒಂದಂಕ
ರಾವಲ್ಪಿಂಡಿ: ಮಾಜಿ ಚಾಂಪಿಯನ್‌ಗಳಾದ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಹುತಿಯಾಗಿದೆ. ಮಳೆಗೆ ರಾವಲ್ಪಿಂಡಿ ಕ್ರೀಡಾಂಗಣದಲ್ಲಿ ನಿಗದಿಯಾಗಿದ್ದ ಪಂದ್ಯಕ್ಕೆ ಧಾರಾಕಾರ ಮಳೆ ಅಡ್ಡಿಪಡಿಸಿತು. ಹೀಗಾಗಿ ಪಂದ್ಯ ಟಾಸ್ ಕೂಡಾ ಕಾಣದೆ ರದ್ದುಗೊಂಡಿತು. ಪಂದ್ಯ ಮಧ್ಯಾಹ್ನ 2.30ಕ್ಕೆ ಆರಂಭ ಗೊಳ್ಳಬೇಕಿತ್ತು. ಆದರೆ ಪಂದ್ಯ ಆರಂಭಕ್ಕೂ ಮುನ್ನವೇ ಧಾರಾಕಾರ ಮಳೆ ಸುರಿಯುತ್ತಿತ್ತು. ಹೀಗಾಗಿ ಹಲವು ಗಂಟೆಗಳ ಕಾಲ ಪಂದ್ಯ ನಡೆಸಲಾಗಲಿಲ್ಲ. ಕನಿಷ್ಠ 20 ಓವರ್ ಆಟ ಆರಂಭಿಸಲು ಸಂಜೆ 7.32ರವರೆಗೆ ಗಡುವು ಇತ್ತು. ಆದರೆ ಮಳೆ ನಿಲ್ಲುವ ಮುನ್ಸೂಚನೆ ಕಂಡುಬರದ ಕಾರಣ ಸಂಜೆ 5.45ರ ವೇಳೆಗೆ ಪಂದ್ಯವನ್ನು ರೆಫ್ರಿಗಳು ರದ್ದುಗೊಳಿಸಲು ನಿರ್ಧರಿಸಿದರು.
ತಲಾ ಒಂದಂಕ: ಪಂದ್ಯ ರದ್ದುಗೊಂಡ ಕಾರಣ ಇತ್ತಂಡಗಳಿಗೆ ತಲಾ ಒಂದು ಹಂತ ನೀಡಲಾಯಿತು. ದಕ್ಷಿಣ ಆಫ್ರಿಕಾ ಆರಂಭಿಕ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಗೆದ್ದಿದ್ದರೆ, ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ವಿರುದ್ದ ಜಯಭೇರಿ ಬಾರಿಸಿತ್ತು. ಹೀಗಾಗಿ ಇತ್ತಂಡಗಳೂ ಸದ್ಯ ತಲಾ 3 ಅಂಕಗಳನ್ನು ಹೊಂದಿವೆ. ನೆಟ್ ರನ್‌ರೇಟ್ ಆಧಾರದಲ್ಲಿ ದ.ಆಫ್ರಿಕಾ ಬಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ 2ನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾಕ್ಕೆ ಫೆ.28ಕ್ಕೆ ಅಫ್ಘಾನಿಸ್ತಾನ, ದ.ಆಫ್ರಿಕಾಕ್ಕೆ ಮಾ.1ಕ್ಕೆ ಇಂಗ್ಲೆಂಡ್ ಸವಾಲು ಎದುರಾಗಲಿದೆ. ಆಸೀಸ್ ಹಾಗೂ ದಕ್ಷಿಣ ಆಫ್ರಿಕಾಕ್ಕೆ ಸೆಮಿಫೈನಲ್ ಪ್ರವೇಶಿಸಬೇಕಿದ್ದರೆ ಕೊನೆ ಪಂದ್ಯದಲ್ಲಿಗೆಲ್ಲಲೇಬೇಕಿದೆ.
ಇದನ್ನೂ ಓದಿ: ಭಾರತ ಎದುರು ಪಾಕ್ ಆಟಗಾರರ 'ಹುಮ್ಮಸ್ಸು' ಪ್ರಶ್ನಿಸಿದ ಜಾವೇದ್ ಮಿಯಾಂದಾದ್!
ಆಸೀಸ್‌ನ ಕೊನೆ 8ರಲ್ಲಿ4 ಪಂದ್ಯ ಮಳೆಗೆ ಬಲಿ!
ಚಾಂಪಿ ಯನ್ಸ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಮತ್ತೆ ಮತ್ತೆ ಅದೃಷ್ಟ ಕೈಕೊಡುತ್ತಿದೆ. ತಂಡ ಟೂರ್ನಿಯಲ್ಲಿ ಆಡಿದ ಕೊನೆ 8 ಪಂದ್ಯಗಳ ಪೈಕಿ 4 ಪಂದ್ಯಗಳು ಮಳೆಗೆ ರದ್ದಾಗಿವೆ. ಈ ಮೊದಲು 2013ರಲ್ಲಿ ನ್ಯೂಜಿಲೆಂಡ್, ಬಳಿಕ 2017ರಲ್ಲಿ ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್ ವಿರುದ್ಧದ ಪಂದ್ಯಗಳು ರದ್ದಾಗಿದ್ದವು.
