ಜೂನ್-ಜುಲೈನಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗಾಗಿ, ಆಟಗಾರರು ಐಪಿಎಲ್ ಸಂದರ್ಭದಲ್ಲಿ ಕೆಂಪು ಚೆಂಡಿನಲ್ಲಿ ಅಭ್ಯಾಸ ನಡೆಸಲು ಬಿಸಿಸಿಐ ಸೂಚಿಸಲಿದೆ. ಟೆಸ್ಟ್ ಸರಣಿಗೆ ಇದು ನೆರವಾಗಲಿದೆ. ಇದರ ಜೊತೆಗೆ, ಎಂ.ಎಸ್.ಧೋನಿ 2025ರ ಐಪಿಎಲ್ ಸಿದ್ಧತೆಗಾಗಿ ತಮ್ಮ ಬ್ಯಾಟ್‌ನ ತೂಕವನ್ನು 10-20 ಗ್ರಾಂ ಇಳಿಸಿದ್ದಾರೆ. ಅವರು ಚೆನ್ನೈ ತಂಡದ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.

ನವದೆಹಲಿ: ಜೂನ್‌-ಜುಲೈನಲ್ಲಿ ನಡೆಯಲಿರುವ ಇಂಗ್ಲೆಂಡ್‌ ವಿರುದ್ಧ ಮಹತ್ವದ ಟೆಸ್ಟ್‌ ಸರಣಿಗೆ ಭಾರತ ತಂಡದ ಆಟಗಾರರು ಸಿದ್ಧವಾಗಿರಬೇಕೆಂಬ ನಿಟ್ಟನಲ್ಲಿ ಬಿಸಿಸಿಐ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಐಪಿಎಲ್‌ ಸಂದರ್ಭದಲ್ಲಿ ರೆಡ್‌ ಬಾಲ್‌ನಲ್ಲಿ ಅಭ್ಯಾಸ ನಡೆಸಲು ಆಟಗಾರರಿಗೆ ಬಿಸಿಸಿಐ ಸೂಚಿಸಲಿದೆ ಎಂದು ವರದಿಯಾಗಿದೆ.

ಟಿ20 ಆಗಿರುವುದರಿಂದ ಐಪಿಎಲ್‌ನಲ್ಲಿ ಬಿಳಿ ಬಣ್ಣದ ಚೆಂಡು ಬಳಸಲಾಗುತ್ತದೆ. ಆದರೆ ಟೆಸ್ಟ್‌ಗೆ ಬಳಸುವುದು ಕೆಂಪು ಬಣ್ಣದ ಚೆಂಡು. ಹೀಗಾಗಿ ಐಪಿಎಲ್‌ ಸಂದರ್ಭದಲ್ಲೇ ಕೆಂಪು ಚೆಂಡಿನಲ್ಲಿ ಆಟಗಾರರು ಅಭ್ಯಾಸ ನಡೆಸಿದರೆ, ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಸರಣಿಗೆ ನೆರವಾಗಲಿದೆ ಎಂಬುದು ಬಿಸಿಸಿಐ ಯೋಜನೆ. ಹೀಗಾಗಿ ಕೆಲ ಪ್ರಮುಖ ಆಟಗಾರರಿಗೆ ಕೆಂಪು ಬಣ್ಣದ ಚೆಂಡಿನಲ್ಲಿ ಅಭ್ಯಾಸ ನಡೆಸಲು ಸೂಚಿಸಲಿದೆ ಎಂದು ಗೊತ್ತಾಗಿದೆ. ಐಪಿಎಲ್‌ ಮಾ.24ಕ್ಕೆ ಆರಂಭಗೊಂಡು ಮೇ 25ಕ್ಕೆ ಕೊನೆಗೊಳ್ಳಲಿದೆ. ಜೂನ್‌ 20ಕ್ಕೆ ಇಂಗ್ಲೆಂಡ್‌ ಸರಣಿ ಶುರುವಾಗಲಿದೆ.

ಐಪಿಎಲ್‌ ಬ್ಯಾಟ್‌ನ ತೂಕ 20 ಗ್ರಾಂ ಇಳಿಸಿದ ಧೋನಿ

ಚೆನ್ನೈ: 2025ರ ಐಪಿಎಲ್‌ಗೆ ಚೆನ್ನೈ ಸೂಪರ್‌ ಕಿಂಗ್ಸ್‌ ಮಾಜಿ ನಾಯಕ ಎಂ.ಎಸ್‌.ಧೋನಿ ಸಿದ್ಧತೆ ಆರಂಭಿಸಿದ್ದಾರೆ. ಆದರೆ ಅವರು ತಮ್ಮ ಬ್ಯಾಟ್‌ನ ತೂಕವನ್ನು ಇಳಿಸಿದ್ದಾರೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ. ಸಾಮಾನ್ಯವಾಗಿ ಧೋನಿ 1250-1300 ಗ್ರಾಂ ತೂಕ ಬ್ಯಾಟ್‌ ಬಳಸುತ್ತಿದ್ದರು. ಆದರೆ ಈ ಬಾರಿ ಕನಿಷ್ಠ 10ರಿಂದ 20 ಗ್ರಾಂ ತೂಕ ಇಳಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಅವರು ಶೀಘ್ರದಲ್ಲೇ ಚೆನ್ನೈ ತಂಡದ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಐಪಿಎಲ್‌ ಮಾ.24ಕ್ಕೆ ಆರಂಭಗೊಳ್ಳಲಿದೆ.