Asianet Suvarna News Asianet Suvarna News

ಐಸಿಸಿ ಚಾಂಪಿಯನ್ಸ್‌ ಟ್ರೋಫಿ ತಾತ್ಕಾಲಿಕ ವೇಳಾಪಟ್ಟಿ ಫೈನಲ್: ಭಾರತ vs ಪಾಕ್‌ ಪಂದ್ಯದ ಡೇಟ್ ಫಿಕ್ಸ್!

2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ಆತಿಥ್ಯ ವಹಿಸಿದೆ. ಭಾರತ ಇನ್ನೂ ಪಾಕಿಸ್ತಾನ ತೆರಳುವ ವಿಚಾರ ಇನ್ನೂ ಖಚಿತವಾಗಿಲ್ಲವಾದರೂ, ಈಗಾಗಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ICC Champions Trophy Draft PCB schedules India vs Pakistan match for March 1 in Lahore kvn
Author
First Published Jul 4, 2024, 9:52 AM IST

ಲಾಹೋರ್‌: 2025ರ ಚಾಂಪಿಯನ್ಸ್‌ ಟ್ರೋಫಿಯ ತಾತ್ಕಾಲಿಕ ವೇಳಾಪಟ್ಟಿಯನ್ನು ಟೂರ್ನಿಯ ಆತಿಥ್ಯ ಹಕ್ಕು ಹೊಂದಿರುವ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ) ಸಿದ್ಧಪಡಿಸಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌(ಐಸಿಸಿ)ಗೆ ಸಲ್ಲಿಸಿದ್ದು, ಭಾರತ ಹಾಗೂ ಪಾಕಿಸ್ತಾನ ನಡುವಿನ ಬಹುನಿರೀಕ್ಷಿತ ಪಂದ್ಯ ಮಾ.1ರಂದು ನಿಗದಿಯಾಗಿದೆ.

ತಾತ್ಕಾಲಿಕ ವೇಳಾಪಟ್ಟಿ ಪ್ರಕಾರ ಟೂರ್ನಿ ಫೆ.19ರಿಂದ ಮಾ.9ರ ವರೆಗೆ ನಡೆಯಲಿದೆ. ಲಾಹೋರ್‌, ಕರಾಚಿ ಹಾಗೂ ರಾವಲ್ಪಿಂಡಿ ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆ. ಭಾರತ ಎಲ್ಲಾ ಪಂದ್ಯಗಳು ಲಾಹೋರ್‌ನಲ್ಲೇ ನಡೆಸಲು ಪಿಸಿಬಿ ನಿರ್ಧರಿಸಿದೆ. ಭಾರತ ತಂಡ ಪಾಕಿಸ್ತಾನ, ಬಾಂಗ್ಲಾದೇಶ, ನ್ಯೂಜಿಲೆಂಡ್‌ ಜತೆ ‘ಎ’ ಗುಂಪಿನಲ್ಲಿದ್ದು, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌, ಅಫ್ಘಾನಿಸ್ತಾನ ‘ಬಿ’ ಗುಂಪಿನಲ್ಲಿವೆ.

ಟಿ20 ಚಾಂಪಿಯನ್ ಭಾರತಕ್ಕೆ ಮುಂಬೈನಲ್ಲಿಂದು ಅದ್ಧೂರಿ ಸ್ವಾಗತ..!

ಇನ್ನೂ ನಿರ್ಧಾರ ಪ್ರಕಟಿಸದ ಬಿಸಿಸಿಐ

ಭಾರತ ತಂಡ ಪಾಕಿಸ್ತಾನಕ್ಕೆ ತೆರಳುವ ಬಗ್ಗೆ ಬಿಸಿಸಿಐ ಇನ್ನೂ ಮಾಹಿತಿ ನೀಡಿಲ್ಲ. ಕೇಂದ್ರ ಸರ್ಕಾರದ ಜೊತೆ ಬಿಸಿಸಿಐ ಅಧಿಕಾರಿಗಳು ಚರ್ಚೆ ನಡೆಸಿ ಶೀಘ್ರದಲ್ಲೇ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ.

ಭಾರತ ತಂಡಕ್ಕೆ ಪಾಕ್‌ಗೆ ತೆರಳಲು ಅನುಮತಿ ಸಿಗುವ ಸಾಧ್ಯತೆ ಕಡಿಮೆ. ಒಂದು ವೇಳೆ ಅನುಮತಿ ಸಿಗದಿದ್ದರೆ ಟೂರ್ನಿಗೆ ಭಾರತ ಗೈರಾಗಲಿದೆ ಅಥವಾ ಟೂರ್ನಿ ಬೇರೆಡೆಗೆ ಸ್ಥಳಾಂತರಿಸಬೇಕಾದ/ ಹೈಬ್ರಿಡ್‌ ಮಾದರಿಯಲ್ಲಿ ನಡೆಸಬೇಕಾದ ಅನಿವಾರ್ಯತೆಗೆ ಪಿಸಿಬಿ, ಐಸಿಸಿ ಸಿಲುಕಲಿದೆ.

ಜಿಂಬಾಬ್ವೆಗೆ ತೆರಳಿದ ಯುವ ಟೀಂ ಇಂಡಿಯಾ

ಮುಂಬೈ: ಹಂಗಾಮಿ ಕೋಚ್‌ ವಿವಿಎಸ್‌ ಲಕ್ಷ್ಮಣ್‌ರ ನೇತೃತ್ವದಲ್ಲಿ ಯುವ ಭಾರತ ತಂಡ 5 ಪಂದ್ಯಗಳ ಟಿ20 ಸರಣಿಯನ್ನಾಡಲು ಮಂಗಳವಾರ ಜಿಂಬಾಬ್ವೆಗೆ ತೆರಳಿತು. ಜು.6ರಿಂದ ಹರಾರೆಯಲ್ಲಿ ಸರಣಿ ನಡೆಯಲಿದೆ. ಶುಭ್‌ಮನ್‌ ಗಿಲ್‌ ನಾಯಕತ್ವದ ತಂಡದಲ್ಲಿ ಯುವ ಪ್ರತಿಭೆಗಳಾದ ಅಭಿಷೇಕ್‌ ಶರ್ಮಾ, ರಿಯಾನ್‌ ಪರಾಗ್‌ ಸೇರಿ ಐಪಿಎಲ್‌ನಲ್ಲಿ ಮಿಂಚಿದ ಹಲವು ಆಟಗಾರರಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಮೀಸಲು ಆಟಗಾರನಾಗಿದ್ದ ಗಿಲ್‌, ಅಮೆರಿಕದಿಂದ ನೇರವಾಗಿ ಹರಾರೆಗೆ ಆಗಮಿಸಲಿದ್ದಾರೆ.

'ನಿಮ್ಮ ಒಳ್ಳೆಯ ಮಾತುಗಳಿಗೆ ಧನ್ಯವಾದಗಳು': ಪ್ರಧಾನಿ ಮೋದಿಗೆ ಕೊಹ್ಲಿ ಥ್ಯಾಂಕ್ಸ್

ಮೊದಲೆರಡು ಟಿ20ಗೆ ಜಿತೇಶ್‌, ಸಾಯಿ, ರಾಣಾ

ನವದೆಹಲಿ: ಭಾರತ ತಂಡ ಬಾರ್ಬಡೋಸ್‌ನಿಂದ ಹೊರಡುವುದು ವಿಳಂಬವಾದ ಕಾರಣ, ತಂಡದಲ್ಲಿದ್ದ ಯಶಸ್ವಿ ಜೈಸ್ವಾಲ್‌, ಶಿವಂ ದುಬೆ, ಸಂಜು ಸ್ಯಾಮ್ಸನ್‌ಗೆ ಮೊದಲೆರಡು ಪಂದ್ಯಗಳಿಗೆ ವಿಶ್ರಾಂತಿ ನೀಡಲಾಗಿದೆ. ಇವರ ಬದಲಿಗೆ ಸಾಯಿ ಸುದರ್ಶನ್‌, ಜಿತೇಶ್‌ ಶರ್ಮಾ, ಹರ್ಷಿತ್‌ ರಾಣಾ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್‌ ಆಡುತ್ತಿದ್ದ ಸುದರ್ಶನ್‌ಗೆ ತಕ್ಷಣ ಹೊರಟು ಹರಾರೆ ತಲುಪುವಂತೆ ಬಿಸಿಸಿಐ ಸೂಚಿಸಿದೆ.

ನಿವೃತ್ತಿ ಸುದ್ದಿ ಅಲ್ಲಗಳೆದ ದ.ಆಫ್ರಿಕಾದ ಮಿಲ್ಲರ್‌

ಬ್ರಿಡ್ಜ್‌ಟೌನ್‌: ಟಿ20 ವಿಶ್ವಕಪ್‌ ಫೈನಲ್‌ ಸೋಲಿನ ಬೆನ್ನಲ್ಲೇ ಅಂತಾರಾಷ್ಟ್ರೀಯ ಟಿ20ಗೆ ದಕ್ಷಿಣ ಆಫ್ರಿಕಾದ ಡೇವಿಡ್‌ ಮಿಲ್ಲರ್‌ ನಿವೃತ್ತಿ ಘೋಷಿಸಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಆದರೆ, ಇದು ನಿಜವಲ್ಲ ಎಂದು ಸ್ವತಃ ಮಿಲ್ಲರ್‌ ಸ್ಪಷ್ಟಪಡಿಸಿದ್ದಾರೆ. ಇನ್‌ಸ್ಟಾಗ್ರಾಂ ಪೋಸ್ಟ್‌ ಮೂಲಕ ಸ್ಪಷ್ಟನೆ ನೀಡಿರುವ ಮಿಲ್ಲರ್‌, ‘ನಾನು ನಿವೃತ್ತಿಯಾಗುತ್ತಿದ್ದೇನೆ ಎನ್ನುವ ಸುದ್ದಿ ಸುಳ್ಳು. ದ.ಆಫ್ರಿಕಾ ಪರ ಟಿ20 ಕ್ರಿಕೆಟ್‌ನಲ್ಲಿ ನಾನು ಮುಂದುವರಿಯಲಿದ್ದೇನೆ’ ಎಂದಿದ್ದಾರೆ. ಕಳೆದ ವಾರ ಭಾರತ ವಿರುದ್ಧ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಸೋಲುಂಡಿತ್ತು.

Latest Videos
Follow Us:
Download App:
  • android
  • ios