ಭಾರತ ತಂಡವು ಟಿ20 ವಿಶ್ವಕಪ್ ಜಯಿಸಿದ ಬಳಿಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ, ಫೋನ್ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದರು. ಇದಕ್ಕೆ ಪ್ರತಿಯಾಗಿ ವಿರಾಟ್ ಕೊಹ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ.
ನವದೆಹಲಿ: ಟಿ20 ವಿಶ್ವಕಪ್ ಗೆದ್ದ ಬಳಿಕ ತಮಗೆ ಅಭಿನಂದನೆ ಸಲ್ಲಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಾರಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದು, ನಿಮ್ಮ ಒಳ್ಳೆಯ ಮಾತುಗಳಿಗೆ ಧನ್ಯವಾದಗಳು ಎಂದಿದ್ದಾರೆ.
ಎಕ್ಸ್ ಖಾತೆಯಲ್ಲಿ ಪ್ರಧಾನಿ ಮೋದಿ ಅವರು ಮಾಡಿದ್ದ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ಕೊಹ್ಲಿ, ‘ಪ್ರೀತಿಯ ನರೇಂದ್ರ ಮೋದಿ ಸರ್, ನಿಮ್ಮ ಒಳ್ಳೆಯ, ಬೆಂಬಲದ ಹಾಗೂ ಪ್ರೋತ್ಸಾಹದ ಮಾತುಗಳಿಗೆ ಧನ್ಯವಾದಗಳು. ವಿಶ್ವಕಪ್ ಗೆದ್ದ ಭಾರತ ತಂಡದ ಭಾಗವಾಗಿರುವುದು ಗೌರವ. ವಿಶ್ವಕಪ್ ಭಾರತೀಯರಲ್ಲಿ ಸಂಭ್ರಮಕ್ಕೆ ಕಾರಣವಾಗಿದ್ದಕ್ಕೆ ಹೆಮ್ಮೆಯಾಗುತ್ತಿದೆ’ ಎಂದಿದ್ದಾರೆ. ವಿಶ್ವಕಪ್ ಗೆದ್ದ ಬಳಿಕ ಮೋದಿ ಅವರು ಕೊಹ್ಲಿಗೆ ಕರೆ ಮಾಡಿ ಮಾತನಾಡಿದ್ದರು.
ಎಲ್ಲಾ ಟ್ರೋಫಿ ಗೆದ್ದಾಗಿದೆ, ಟೆಸ್ಟ್ ಚಾಂಪಿಯನ್‌ಶಿಪ್ ಕೂಡಾ ಗೆಲ್ಲಿ
ಬ್ರಿಡ್ಜ್‌ಟೌನ್: ಎಲ್ಲಾ ಮೂರು ಮಾದರಿಯ ಐಸಿಸಿ ಟ್ರೋಫಿ ಗೆದ್ದಿದ್ದೀರಿ. ಇನ್ನು ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್ ಮಾತ್ರ ಬಾಕಿಯಿದೆ. ಅದನ್ನು ಕೂಡಾ ಗೆಲ್ಲಿ ಎಂದು ಭಾರತ ತಂಡದ ನಿರ್ಗಮಿತ ಕೋಚ್ ರಾಹುಲ್ ದ್ರಾವಿಡ್ ಅವರು ವಿರಾಟ್ ಕೊಹ್ಲಿಗೆ ಹೇಳಿದ್ದಾರೆ.
ಫೈನಲ್ ಬಳಿಕ ಡ್ರೆಸ್ಸಿಂಗ್ ಕೋಣೆಯಲ್ಲಿ ಮಾತನಾಡುತ್ತಿದ್ದಾಗ ಕೊಹ್ಲಿಗೆ ದ್ರಾವಿಡ್ ಅವರು. ‘ಎಲ್ಲಾ ಮೂರು ಬಿಳಿ ಟಿಕ್ ಮಾಡಿಯಾಗಿದೆ. ಇನ್ನು ಒಂದು ಕೆಂಪು ಟಿಕ್ ಬಾಕಿಯಿದೆ. ಅದನ್ನೂ ಮಾಡಿ ಬಿಡಿ’ ಎಂದಿದ್ದಾರೆ. ಕೊಹ್ಲಿ 2024ರ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್, 2013ರ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡದಲ್ಲಿದ್ದರು. ಆದರೆ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 2 ಬಾರಿ(2021, 2023) ಫೈನಲ್ ಪ್ರವೇಶಿಸಿದರೂ ಭಾರತ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.
ಟೀಂ ಇಂಡಿಯಾಕ್ಕೆ ಶೀಘ್ರವೇ ಹೊಸ ಕೋಚ್, ಟಿ20 ನಾಯಕ ನೇಮಕ: ಜಯ್ ಶಾ
ಬಾರ್ಬಡೊಸ್‌ನಲ್ಲಿ ಚಂಡಮಾರುತಕ್ಕೆ ಸಿಲುಕಿದ ಟೀಂ ಇಂಡಿಯಾ ಆಟಗಾರರು!
ಬಾರ್ಬಡೊಸ್: ಟಿ20 ವಿಶ್ವಕಪ್ ವಿಜೇತ ಭಾರತ ತಂಡ ಚಂಡಮಾರುತದಿಂದಾಗಿ ಬಾರ್ಬಡೊಸ್‌ನಲ್ಲೇ ಬಾಕಿಯಾಗಿದ್ದು, ತವರಿಗೆ ಮರಳುವುದು ವಿಳಂಬವಾಗಿದೆ. ಬಾರ್ಬಡೊಸ್‌ನಲ್ಲಿ ಶನಿವಾರ ಫೈನಲ್ ಪಂದ್ಯ ನಡೆದಿದ್ದು, ಅಂದೇ ರಾತ್ರಿ ತಂಡದ ಆಟಗಾರರು ಭಾರತಕ್ಕೆ ಮರಳಬೇಕಿತ್ತು. ಆದರೆ ಬಾರ್ಬಡೊಸ್‌ನಲ್ಲಿ ಭಾರೀ ಬಿರುಗಾಳಿ ಜೊತೆ ಮಳೆ ನಿರಂತರವಾಗಿ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಸಂಚಾರ ಸೇರಿದಂತೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ವಿಮಾನ ಹಾರಾಟ ಕೂಡಾ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಭಾರತೀಯ ಆಟಗಾರರು ಹೋಟೆಲ್‌ನಲ್ಲೇ ಉಳಿದುಕೊಂಡಿದ್ದಾರೆ. ಜಯ್ ಶಾ ಸೇರಿದಂತೆ ಬಿಸಿಸಿಐ ಅಧಿಕಾರಿಗಳು ಕೂಡಾ ಬಾರ್ಬಡೊಸ್‌ನಲ್ಲೇ ಬಾಕಿಯಾಗಿದ್ದಾರೆ. ವಾತಾವರಣ ಸಹಜ ಸ್ಥಿತಿಗೆ ಬಂದ ಕೂಡಲೇ ಖಾಸಗಿ ವಿಮಾನದ ಮೂಲಕ ಆಟಗಾರರನ್ನು ಭಾರತಕ್ಕೆ ಕರೆತರಲು ಬಿಸಿಸಿಐ ನಿರ್ಧರಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
'ಟಿ20ಗೆ ವಿದಾಯ ಹೇಳುವ ಮನಸ್ಸಿರಲಿಲ್ಲ, ಆದ್ರೆ...': ವಿಶ್ವಕಪ್ ಗೆದ್ದ ಬೆನ್ನಲ್ಲೇ ರೋಹಿತ್ ಶರ್ಮಾ ಸ್ಪೋಟಕ ಹೇಳಿಕೆ..!
ಭಾರತ ತಂಡಕ್ಕೆ ಪಾರ್ಲಿಮೆಂಟ್‌ನಲ್ಲಿ ಅಭಿನಂದನೆ
ನವದೆಹಲಿ: ಟಿ20 ವಿಶ್ವಕಪ್ ವಿಜೇತ ಭಾರತ ತಂಡಕ್ಕೆ ಸೋಮವಾರ ಸಂಸತ್‌ನ ಉಭಯ ಸದನಗಳಲ್ಲಿ ಅಭಿನಂದನೆ ಸಲ್ಲಿಸಲಾಯಿತು. ಲೋಕಸಭೆಯಲ್ಲಿ ಮಾತನಾಡಿದ ಸ್ಪೀಕರ್ ಓಂ ಬಿರ್ಲಾ, ‘ದೇಶದ ಯುವಕರು ಮತ್ತು ಕ್ರೀಡಾಪಟುಗಳು ಈ ಗೆಲುವಿನಿಂದ ಸ್ಫೂರ್ತಿ ಪಡೆಯಲಿದ್ದಾರೆ. ವಿಶ್ವಕಪ್ ಗೆದ್ದ ಟೀಂ ಇಂಡಿಯಾ ಆಟಗಾರರಿಗೆ ಅಭಿನಂದನೆಗಳು’ ಎಂದರು.
ಇದೇ ವೇಳೆ ರಾಜ್ಯಸಭೆಯಲ್ಲಿ ಸ್ಪೀಕರ್ ಜಗ್‌ದೀಪ್ ಧನ್‌ಕರ್ ಕೂಡಾ ಭಾರತೀಯ ಆಟಗಾರರ ಸಾಧನೆಗೆ ಶ್ಲಾಘನೆ ವ್ಯಕ್ತಪಡಿಸಿದರು. ‘ಇಂತಹ ಐತಿಹಾಸಿಕ ಸಾಧನೆ ದೇಶದ ಪ್ರತಿಯೊಬ್ಬ ನಾಗರಿಕನಿಗೂ ದೊಡ್ಡ ಕನಸು ಕಾಣಲು, ಬದ್ಧತೆಯಿಂದ ಕೆಲಸ ಮಾಡಲು ಮತ್ತು ಶ್ರೇಷ್ಠವಾದುದನ್ನು ಸಾಧಿಸಲು ಪ್ರೇರೇಪಿಸುತ್ತದೆ’ ಎಂದು ಹೇಳಿದರು. ಜೊತೆಗೆ ದಕ್ಷಿಣ ಆಫ್ರಿಕಾ ಆಟಗಾರರ ಹೋರಾಟದ ಮನೋಭಾವವನ್ನೂ ಕೊಂಡಾಡಿದರು.
