ಭಾರತ ತಂಡದಿಂದ ಕರುಣ್ ನಾಯರ್ ಕೈಬಿಟ್ಟಿದ್ದೇಕೆ? ಕೊನೆಗೂ ಮೌನ ಮುರಿದ ಅಜಿತ್ ಅಗರ್‌ಕರ್!
ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ 15 ಸದಸ್ಯರ ಭಾರತ ತಂಡ ಪ್ರಕಟವಾಗಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ತಂಡವನ್ನು ಆಯ್ಕೆ ಮಾಡಲಾಗಿದ್ದು, ಅತ್ಯುತ್ತಮ ಫಾರ್ಮ್‌ನಲ್ಲಿರುವ ಕರುಣ್ ನಾಯರ್‌ಗೆ ಸ್ಥಾನ ಸಿಕ್ಕಿಲ್ಲ.

ಮುಂಬೈ: ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ 15 ಆಟಗಾರರನ್ನೊಳಗೊಂಡ ಭಾರತ ಕ್ರಿಕೆಟ್ ತಂಡ ಪ್ರಕಟವಾಗಿದೆ. ಫೆಬ್ರವರಿ 19ರಿಂದ ಮಿನಿ ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನದಲ್ಲಿ ಚಾಲನೆ ಸಿಗಲಿದೆ. ಈ ಟೂರ್ನಿಯು ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದ್ದು, ಭಾರತ ಕ್ರಿಕೆಟ್ ತಂಡವು ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ತನ್ನ ಪಾಲಿನ ಪಂದ್ಯಗಳನ್ನು ಆಡಲಿದೆ. 8 ತಂಡಗಳು ಪಾಲ್ಗೊಳ್ಳಲಿರುವ ಹೈವೋಲ್ಟೇಜ್ ಸರಣಿಗೆ ಇಂದು ಭಾರತ ತಂಡ ಪ್ರಕಟವಾಗಿದೆ. ಅಜಿತ್ ಅಗರ್‌ಕರ್ ನೇತೃತ್ವದ ಆಯ್ಕೆ ಸಮಿತಿಯು ಸಾಕಷ್ಟು ಅಳೆದು ತೂಗಿ ಭಾರತ ತಂಡವನ್ನು ಆಯ್ಕೆ ಮಾಡಿದ್ದು, ರೋಹಿತ್ ಶರ್ಮಾ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ತವರಿನಲ್ಲೇ ನಡೆಯಲಿರುವ ಇಂಗ್ಲೆಂಡ್ ಎದುರಿನ ಮೂರು ಪಂದ್ಯಗಳ ಸರಣಿಗೂ ಭಾರತ ತಂಡವನ್ನು ಪ್ರಕಟಿಸಲಾಯಿತು. ಆದರೆ ದೇಶಿ ಕ್ರಿಕೆಟ್‌ನಲ್ಲಿ ಅಸಾಧಾರಣ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಾ ಬಂದಿರುವ ಕರುಣ್ ನಾಯರ್ ಟೀಂ ಇಂಡಿಯಾಗೆ ಎಂಟ್ರಿ ಕೊಡಲಿದ್ದಾರೆ ಎನ್ನುವಂತಹ ಮಾತುಗಳು ಕೇಳಿಬಂದಿದ್ದವು. ಯಾಕೆಂದರೆ 2025ನೇ ಸಾಲಿನ ವಿಜಯ್ ಹಜಾರೆ ಏಕದಿನ ಟೂರ್ನಿಯಲ್ಲಿ ಕರುಣ್ ನಾಯರ್ ನಾಯಕನಾಗಿ ವಿದರ್ಭ ತಂಡವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಫೈನಲ್ ಪಂದ್ಯಕ್ಕೂ ಮುನ್ನ ಕರುಣ್ ನಾಯರ್, 7 ಪಂದ್ಯಗಳನ್ನಾಡಿ 5 ಶತಕ ಹಾಗೂ ಒಂದು ಅರ್ಧಶತಕ ಸಹಿತ ಬರೋಬ್ಬರಿ 752 ರನ್ ಸಿಡಿಸಿದ್ದಾರೆ. 33 ವರ್ಷದ ಕರುಣ್ ನಾಯರ್ ಆಟವನ್ನು ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡುಲ್ಕರ್, ಹರ್ಭಜನ್ ಸಿಂಗ್ ಸೇರಿದಂತೆ ಹಲವು ಮಂದಿ ಕೊಂಡಾಡಿದ್ದರು. ಹೀಗಿದ್ದೂ ಇಂಗ್ಲೆಂಡ್ ಎದುರಿನ ಏಕದಿನ ಸರಣಿ ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಕರುಣ್ ನಾಯರ್ ವಿಫಲವಾಗಿದ್ದಾರೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಬಲಿಷ್ಠ ಭಾರತ ಕ್ರಿಕೆಟ್ ತಂಡ ಪ್ರಕಟ! ಕನ್ನಡಿಗನಿಗೆ ನಿರಾಸೆ
ಕರುಣ್ ನಾಯರ್‌ಗೆ ಯಾಕಿಲ್ಲ ಸ್ಥಾನ?
ಇನ್ನು ಭಾರತ ತಂಡದ ಘೋಷಣೆ ವೇಳೆ ಪತ್ರಕರ್ತರು ಕರುಣ್ ನಾಯರ್‌ಗೆ ಯಾಕೆ ತಂಡದಲ್ಲಿ ಸ್ಥಾನ ನೀಡಿಲ್ಲ ಎಂದು ಆಯ್ಕೆ ಸಮಿತಿ ಮುಖ್ಯಸ್ಥರಾದ ಅಜಿತ್ ಅಗರ್‌ಕರ್ ಅವರನ್ನು ಪ್ರಶ್ನಿಸಿದರು. ಆಗ ಪ್ರತಿಕ್ರಿಯಿಸಿದ ಅಗರ್‌ಕರ್, 'ಕರುಣ್ ನಾಯರ್ ಅತ್ಯುತ್ತಮವಾಗಿ ಆಡುತ್ತಿದ್ದಾರೆ. 750+ ಸರಾಸರಿಯಲ್ಲಿ ರನ್ ಕಳಿಸುವುದು ಸಾಮಾನ್ಯ ಸಾಧನೆಯಲ್ಲ. ಆದರೆ 15ರ ಬಳಗದೊಳಗೆ ಎಲ್ಲರಿಗೂ ಸ್ಥಾನ ನೀಡಲು ಸಾಧ್ಯವಿಲ್ಲವಲ್ಲ' ಎಂದು ಹೇಳಿದ್ದಾರೆ.
ಸೊಕ್ಕು ಮಾಡಿದ ಸಂಜು ಸ್ಯಾಮ್ಸನ್‌ಗೆ ಬಿಗ್ ಶಾಕ್? ತನಿಖೆಗೆ ಮುಂದಾದ ಬಿಸಿಸಿಐ!
ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ಕ್ರಿಕೆಟ್ ತಂಡ ಹೀಗಿದೆ:
ರೋಹಿತ್ ಶರ್ಮಾ(ನಾಯಕ), ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಆರ್ಶದೀಪ್ ಸಿಂಗ್, ಯಶಸ್ವಿ ಜೈಸ್ವಾಲ್, ರಿಷಭ್ ಪಂತ್, ರವೀಂದ್ರ ಜಡೇಜಾ.