ಚಾಂಪಿಯನ್ಸ್ ಟ್ರೋಫಿಯಿಂದ ಪಾಕಿಸ್ತಾನ ಹೊರಬಿದ್ದಿದ್ದಕ್ಕೆ ಮಾಜಿ ಆಟಗಾರರು ಟೀಕಿಸಿದ್ದಕ್ಕೆ ಯೋಗರಾಜ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ. ವಾಸಿಂ ಅಕ್ರಂ ಮತ್ತು ಅಖ್ತರ್ ಟೀಕಿಸುವ ಬದಲು ತಂಡವನ್ನು ಕಟ್ಟಲಿ ಎಂದಿದ್ದಾರೆ. ತಾನು ಕೋಚ್ ಆಗಿ ಒಂದು ವರ್ಷದಲ್ಲಿ ವಿಶ್ವಕಪ್ ಗೆಲ್ಲುವ ತಂಡವನ್ನು ಕಟ್ಟಬಲ್ಲೆ ಎಂದು ಹೇಳಿದ್ದಾರೆ. ಕಾಮೆಂಟರಿ ಮಾಡುವುದು ಸುಲಭ, ತಂಡವನ್ನು ಬೆಳೆಸುವುದು ಕಷ್ಟ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ನವದೆಹಲಿ: ಚಾಂಪಿಯನ್ಸ್ ಟ್ರೋಫಿಯಿಂದ ಹೊರಬಿದ್ದ ಪಾಕಿಸ್ತಾನ ತಂಡದ ಬಗ್ಗೆ ಟೀಕೆ ವ್ಯಕ್ತಪಡಿಸುತ್ತಿರುವ ಪಾಕ್‌ನ ಮಾಜಿ ಕ್ರಿಕೆಟಿಗರ ವಿರುದ್ಧ ಭಾರತದ ಮಾಜಿ ಕ್ರಿಕೆಟಿಗ, ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಕಿಡಿಕಾರಿದ್ದಾರೆ.
ಈ ಬಗ್ಗೆ ಮಾಧ್ಯಮವೊಂದರ ಜೊತೆ ಮಾತನಾಡಿರುವ ಅವರು, ‘ವಾಸಿಂ ಅಕ್ರಂ, ಅಖ್ತರ್ ಪಾಕ್ ತಂಡದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಆದರೆ ಅವರು ಕಾಮೆಂಟ್ರಿ ಮೂಲಕ ದುಡ್ಡು ಮಾಡುತ್ತಿದ್ದಾರೆ. ಅದರ ಬದಲು ಪಾಕ್‌ಗೆ ತೆರಳಿ ಉತ್ತಮ ತಂಡ ಕಟ್ಟಲಿ. ನಾನು ಪಾಕಿಸ್ತಾನ ತಂಡಕ್ಕೆ ಕೋಚ್ ಆಗಲು ಸಿದ್ಧನಿದ್ದೇನೆ ಮತ್ತು ಕೇವಲ ಒಂದೇ ವರ್ಷದಲ್ಲಿ ಉತ್ತಮ ತಂಡ ಕಟ್ಟಿ, ವಿಶ್ವಕಪ್ ಗೆಲ್ಲುವಂತೆ ಮಾಡುತ್ತೇನೆ. ಜನ ಅದನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ’ ಎಂದಿದ್ದಾರೆ.
ಇದನ್ನೂ ಓದಿ: ಪಾಕ್ ತಂಡಕ್ಕೆ ಧೋನಿ ನಾಯಕನಾದರೂ ಸಾಧ್ಯವಿಲ್ಲ: ಸನಾ ಮೀರ್ ಕಿಡಿ
ವಾಸಿಂ ಅಕ್ರಂ ಅವರಂತಹ ದೊಡ್ಡ ಆಟಗಾರರು ಪಾಕಿಸ್ತಾನ ತಂಡದ ಬಗ್ಗೆ ಅಸಹ್ಯಕರವಾದ ಮಾತುಗಳನ್ನು ಹೇಳುತ್ತಿದ್ದಾರೆ ಅಂದರೆ ಏನರ್ಥ? ಅವರ ಸುತ್ತಲಿನ ಜನರು ಅವರ ಮಾತನ್ನು ಕೇಳಿ ನಗುತ್ತಿದ್ದಾರೆ. ಅವರಿಗೆ ನಾಚಿಕೆಯಾಗಬೇಕು. ಶೋಯೆಬ್ ಅಖ್ತರ್ ಅವರಂತಹ ದೊಡ್ಡ ಆಟಗಾರ ನೀವು ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರೊಂದಿಗೆ ಪಾಕಿಸ್ತಾನದ ಆಟಗಾರರನ್ನು ಹೋಲಿಸುತ್ತಿದ್ದೀರಾ? ವಾಸೀಂ ಅಕ್ರಂ ಅವರೇ ನೀವು ಅಲ್ಲಿ ಕುಳಿತುಕೊಂಡು ಹಣ ಮಾಡುತ್ತಿದ್ದೀರಾ ಅಲ್ಲವೇ? ಮೊದಲು ನಿಮ್ಮ ದೇಶಕ್ಕೆ ಹಿಂತಿರುಗಿ ಮತ್ತು ಅಲ್ಲಿ ಶಿಬಿರವನ್ನು ನಡೆಸಿ. ನಿಮ್ಮಲ್ಲಿ ಯಾವೆಲ್ಲಾ ದಿಗ್ಗಜರು ಪಾಕಿಸ್ತಾನಕ್ಕೆ ವಿಶ್ವಕಪ್ ಗೆಲ್ಲಲು ಸಹಾಯ ಮಾಡಬಹುದು ಎನ್ನುವುದನ್ನು ನೋಡಲು ಬಯಸುತ್ತೇನೆ. ಇಲ್ಲದಿದ್ದರೇ ಆ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಸ್ಪೋರ್ಟ್ಸ್‌ನೆಕ್ಸ್ಟ್‌ಗೆ ನೀಡಿದ ಸಂದರ್ಶನದಲ್ಲಿ ಯೋಗರಾಜ್ ಸಿಂಗ್ ಹೇಳಿದ್ದಾರೆ.
ಕಾಮೆಂಟ್ರಿ ಬಾಕ್ಸ್‌ನಲ್ಲಿ ಕುಳಿತು ಮಾತನಾಡುವುದು ಸುಲಭ, ಆದರೆ ಮೈದಾನಕ್ಕಿಳಿದು ಸಮಸ್ಯೆಗೆ ಪರಿಹಾರ ಹುಡುಕುವುದು ಸುಲಭವಲ್ಲ ಎಂದು ಯೋಗರಾಜ್ ಸಿಂಗ್ ಹೇಳಿದ್ದಾರೆ. ನಾನು ಒಂದು ವೇಳೆ ಪಾಕಿಸ್ತಾನಕ್ಕೆ ಹೋದರೆ, ಒಂದೇ ವರ್ಷದಲ್ಲಿ ವಿಶ್ವಶ್ರೇಷ್ಠ ತಂಡವನ್ನು ಕಟ್ಟುತ್ತೇನೆ. ನೀವೆಲ್ಲದರೂ ಅದನ್ನು ನೆನಪಿನಲ್ಲಿಟ್ಟುಕೊಳ್ಳುತ್ತೀರ. ಅದಕ್ಕೆ ಬದ್ಧತೆ ಬೇಕು ಎಂದು ಯೋಗರಾಜ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ಭಾರತ ಎದುರು ಪಾಕ್ ಆಟಗಾರರ 'ಹುಮ್ಮಸ್ಸು' ಪ್ರಶ್ನಿಸಿದ ಜಾವೇದ್ ಮಿಯಾಂದಾದ್!
ಬರೋಬ್ಬರಿ 29 ವರ್ಷಗಳ ಬಳಿಕ ಪಾಕಿಸ್ತಾನ ಐಸಿಸಿಯ ಮಹತ್ವದ ಟೂರ್ನಿಗೆ ಆತಿಥ್ಯ ವಹಿಸಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಆಗಿರುವ ಪಾಕಿಸ್ತಾನ ತಂಡವು ತಾನಾಡಿದ ಮೊದಲೆರಡು ಪಂದ್ಯಗಳಲ್ಲಿ ನ್ಯೂಜಿಲೆಂಡ್ ಹಾಗೂ ಭಾರತ ಎದುರು ಮುಗ್ಗರಿಸುವ ಮೂಲಕ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದಲೇ ಹೊರಬಿದ್ದಿದೆ. ಮೊಹಮ್ಮದ್ ರಿಜ್ವಾನ್ ನೇತೃತ್ವದ ಪಾಕಿಸ್ತಾನ ತಂಡವು ಗ್ರೂಪ್ ಹಂತದಲ್ಲೇ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಹೊರಬಿದ್ದ ಬೆನ್ನಲ್ಲೇ ಪಾಕಿಸ್ತಾನ ತಂಡದ ದಿಗ್ಗಜ ಕ್ರಿಕೆಟಿಗರಾದ ಶೋಯೆಬ್ ಅಖ್ತರ್, ವಾಸೀಂ ಅಕ್ರಂ ಸೇರಿದಂತೆ ಹಲವು ಮಾಜಿ ಕ್ರಿಕೆಟಿಗರು ಪಾಕಿಸ್ತಾನ ತಂಡದ ಮೇಲೆ ಕಿಡಿಕಾರಲಾರಂಭಿಸಿದ್ದರು. ಇದಕ್ಕೆ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಕೌಂಟರ್ ನೀಡಿದ್ದಾರೆ.
