ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿನ ಸ್ಟ್ಯಾಂಡ್‌ನಲ್ಲಿ ತಮ್ಮ ಹೆಸರು ಇರುವ ಸ್ಟ್ಯಾಂಡ್ ನಿರೀಕ್ಷಿಸುವುದಾಗಿ ಕನ್ನಡಿಗ ಕೆ ಎಲ್ ರಾಹುಲ್ ಹೇಳಿದ್ದಾರೆ.

ಅಡಿಲೇಡ್‌: ರಾಜ್ಯದ 10 ದಿಗ್ಗಜ ಕ್ರಿಕೆಟಿಗರ ಹೆಸರನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಸ್ಟ್ಯಾಂಡ್‌ಗಳಿಗೆ ಇಡಲು ನಿರ್ಧರಿಸಿರುವ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ)ಯ ನಡೆಯನ್ನು ತಾರಾ ಕ್ರಿಕೆಟಿಗ ಕೆ.ಎಲ್‌.ರಾಹುಲ್‌ ಸ್ವಾಗತಿಸಿದ್ದಾರೆ. ಅಲ್ಲದೆ, ತಮ್ಮ ಹೆಸರಲ್ಲೂ ಕ್ರೀಡಾಂಗಣದಲ್ಲಿ ಸ್ಟ್ಯಾಂಡ್‌ ಹೊಂದುವ ಬಯಕೆ ವ್ಯಕ್ತಪಡಿಸಿದ್ದಾರೆ. 

2ನೇ ಟೆಸ್ಟ್‌ಗೂ ಮುನ್ನ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡ ರಾಹುಲ್‌ಗೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿಮ್ಮ ಹೆಸರಲ್ಲೂ ಸ್ಟ್ಯಾಂಡ್‌ ಇರುವುದರನ್ನು ಬಯಸುವುದಿಲ್ಲವೇ ಎಂದು ಪ್ರಶ್ನಿಸಲಾಗಿದೆ. ಇದಕ್ಕೆ ಉತ್ತರಿಸಿದ ರಾಹುಲ್‌, ‘ನನ್ನ ಹೆಸರಿನ ಸ್ಟ್ಯಾಂಡ್ ಹೊಂದಲು ನಾನು ಇಷ್ಟಪಡುತ್ತೇನೆ. ಆದರೆ ಅದಕ್ಕಾಗಿ ನಾನು ಸಾಕಷ್ಟು ರನ್ ಗಳಿಸಬೇಕಾಗಿದೆ. ನಾನು ಆ ಹಂತಕ್ಕೆ ಇನ್ನೂ ತಲುಪಿಲ್ಲ. ತಲುಪಿದರೆ ಅದನ್ನು ಸಾಧ್ಯವಾಗಿಸಬಹುದು. ದೇಶ ಮತ್ತು ರಾಜ್ಯಕ್ಕಾಗಿ ಆಡಿದ ಕ್ರಿಕೆಟಿಗರನ್ನು ಕೆಎಸ್‌ಸಿಎ ಗೌರವಿಸುಸುತ್ತಿರುವುದು ಉತ್ತಮ ನಡೆ’ ಎಂದಿದ್ದಾರೆ.

ಅಡಿಲೇಡ್‌ ಟೆಸ್ಟ್‌: ಸ್ಪಿನ್ನರ್‌ಗಳಿಗೆ ಪಿಚ್‌ ನೆರವು, ಭಾರತದಿಂದ ಮಹತ್ವದ ಬದಲಾವಣೆ?

ಭಾರತಕ್ಕೆ 10 ವಿಕೆಟ್‌ ಭರ್ಜರಿ ಗೆಲುವು, ಸೆಮಿಫೈನಲ್‌ಗೆ ಲಗ್ಗೆ

ಶಾರ್ಜಾ: 8 ಬಾರಿ ಚಾಂಪಿಯನ್‌ ಭಾರತ ತಂಡ ಈ ಸಲ ಅಂಡರ್‌-19 ಏಷ್ಯಾಕಪ್‌ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದೆ. ಬುಧವಾರ ಭಾರತ ತಂಡ ಗುಂಪು ಹಂತದ ತನ್ನ ಕೊನೆಯ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಯುಎಇ ವಿರುದ್ಧ 10 ವಿಕೆಟ್‌ ಭರ್ಜರಿ ಗೆಲುವು ಸಾಧಿಸಿತು. ಈ ಮೂಲಕ 3 ಪಂದ್ಯಗಳಲ್ಲಿ 2ನೇ ಗೆಲುವು ದಾಖಲಿಸಿದ ಭಾರತ, 4 ಅಂಕಗಳೊಂದಿಗೆ ‘ಎ’ ಗುಂಪಿನಿಂದ 2ನೇ ತಂಡವಾಗಿ ಸೆಮೀಸ್‌ ಪ್ರವೇಶಿಸಿತು. ಪಾಕಿಸ್ತಾನ(6 ಅಂಕ) ಅಗ್ರಸ್ಥಾನಿಯಾಗಿ ಅಂತಿಮ 4ರ ಘಟ್ಟ ಪ್ರವೇಶಿಸಿದೆ.

ಮೊದಲು ಬ್ಯಾಟ್‌ ಮಾಡಿದ ಯುಎಇ, ಭಾರತದ ಮಾರಕ ದಾಳಿಗೆ ತತ್ತರಿಸಿ 44 ಓವರ್‌ಗಳಲ್ಲಿ 137 ರನ್‌ಗೆ ಆಲೌಟಾಯಿತು. ರಯಾನ್‌ ಖಾನ್‌ 35, ಅಕ್ಷತ್‌ ರೈ 26 ರನ್‌ ಗಳಿಸಿದರು. ಯುಧಜಿತ್‌ ಗುಹಾ 3, ಚೇತನ್ ಶರ್ಮಾ ಹಾಗೂ ಕರ್ನಾಟಕದ ಹಾರ್ದಿಕ್‌ ರಾಜ್‌ ತಲಾ 2 ವಿಕೆಟ್‌ ಕಿತ್ತರು.

ಸುಲಭ ಗುರಿಯನ್ನು ಭಾರತ ಕೇವಲ 16.1 ಓವರ್‌ಗಳಲ್ಲಿ ಯಾವುದೇ ವಿಕೆಟ್‌ ನಷ್ಟವಿಲ್ಲದೆ ಬೆನ್ನತ್ತಿ ಜಯಗಳಿಸಿತು. 13 ವರ್ಷದ ವೈಭವ್‌ ಸೂರ್ಯವಂಶಿ ಔಟಾಗದೆ 76, ಆಯುಶ್ ಮಾಟ್ರೆ ಔಟಾಗದೆ 67 ರನ್‌ ಸಿಡಿಸಿ ತಂಡವನ್ನು ಗೆಲ್ಲಿಸಿದರು.

ಸ್ಕೋರ್‌: ಯುಎಇ 44 ಓವರಲ್ಲಿ 137/10 (ರಯಾನ್‌ 35, ಅಕ್ಷತ್‌ 26, ಯುಧಜಿತ್‌ 3-15, ಚೇತನ್‌ 2-27, ಹಾರ್ದಿಕ್‌ 2-28), ಭಾರತ 16.1 ಓವರಲ್ಲಿ 143/0 (ವೈಭವ್‌ 76*, ಆಯುಶ್‌ 67*)

ಪಂದ್ಯಶ್ರೇಷ್ಠ: ಆಯುಶ್‌ ಮಾಟ್ರೆ

ನಾಳೆ ಸೆಮೀಸ್‌ನಲ್ಲಿ ಭಾರತ vs ಶ್ರೀಲಂಕಾ

ಭಾರತ ತಂಡ ಸೆಮಿಫೈನಲ್‌ನಲ್ಲಿ ಶುಕ್ರವಾರ ಶ್ರೀಲಂಕಾ ವಿರುದ್ಧ ಸೆಣಸಾಡಲಿದೆ. ಲಂಕಾ ‘ಬಿ’ ಗುಂಪಿನ ಮೂರು ಪಂದ್ಯಗಳಲ್ಲಿ ಗೆದ್ದು ಅಗ್ರಸ್ಥಾನಿಯಾಗಿತ್ತು. ಶುಕ್ರವಾರವೇ ನಡೆಯಲಿರುವ ಮತ್ತೊಂದು ಸೆಮೀಸ್‌ನಲ್ಲಿ ಹಾಲಿ ಚಾಂಪಿಯನ್‌ ಬಾಂಗ್ಲಾದೇಶ ಹಾಗೂ 2012ರ ಚಾಂಪಿಯನ್‌ ಪಾಕಿಸ್ತಾನ ಸೆಣಸಾಡಲಿವೆ. ಫೈನಲ್‌ ಪಂದ್ಯ ಡಿ.8ಕ್ಕೆ ನಡೆಯಲಿದೆ.