ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೆಮೀಸ್‌ನಲ್ಲೇ ಮುಗ್ಗರಿಸಿದ ಟೀಂ ಇಂಡಿಯಾಹಿರಿಯ ಆಟಗಾರರ ಮೇಲೆ ಆಕ್ರೋಶ ಹೊರಹಾಕಿದ ಮಾಜಿ ಕ್ರಿಕೆಟಿಗರುಮುಂದಿನ ಟಿ20 ವಿಶ್ವಕಪ್ ರೋಹಿತ್ ಶರ್ಮಾ ಆಡೋದು ಅನುಮಾನ ಎಂದ ಜಾಫರ್

ಬೆಂಗಳೂರು(ನ.13): ಐಸಿಸಿ ಟೂರ್ನಿಗಳಲ್ಲಿ ಭಾರತದ ಪ್ರಶಸ್ತಿ ಬರ ಮುಂದುವರೆದಿದೆ. 2022ರ ಐಸಿಸಿ ಟಿ20 ವಿಶ್ವಕಪ್ ಗೆಲ್ಲಬಲ್ಲ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದ್ದ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಸೆಮಿಫೈನಲ್‌ನಲ್ಲೇ ಮುಗ್ಗರಿಸುವ ಮೂಲಕ ಪ್ರಶಸ್ತಿ ಗೆಲ್ಲುವ ಅವಕಾಶ ಕೈಚೆಲ್ಲಿದೆ. ಅಡಿಲೇಡ್ ಓವಲ್ ಮೈದಾನದಲ್ಲಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಎದುರು ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್‌ ತಂಡವು 10 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಫೈನಲ್ ಪ್ರವೇಶಿಸಿದೆ. ಟೀಂ ಇಂಡಿಯಾ ಸೆಮೀಸ್‌ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾದಲ್ಲಿ ಮೇಜರ್‌ ಸರ್ಜರಿಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. 

ಟೂರ್ನಿಯುದ್ದಕ್ಕೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ನಾಯಕ ರೋಹಿತ್ ಶರ್ಮಾ ಅವರ ಸ್ಥಾನದ ಕುರಿತಂತೆ ಪ್ರಶ್ನೆಗಳು ಏಳಲಾರಂಭಿಸಿವೆ. ಇದೀಗ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಾಸೀಂ ಜಾಫರ್ ಕೂಡಾ ಪ್ರತಿಕ್ರಿಯೆ ನೀಡಿದ್ದು, 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಭಾರತ ತಂಡವನ್ನು ಪ್ರತಿನಿಧಿಸುವುದು ಅನುಮಾನ ಎಂದಿದ್ದಾರೆ.

ಟೀಂ ಇಂಡಿಯಾ ಆರಂಭಿಕರು, ಈ ಬಾರಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯುದ್ದಕ್ಕೂ ಉತ್ತಮ ಜತೆಯಾಟ ಒದಗಿಸಿಕೊಡಲು ವಿಫಲವಾಗಿದ್ದರು. ಮತ್ತೋರ್ವ ಆರಂಭಿಕ ಬ್ಯಾಟರ್ ಕೆ ಎಲ್ ರಾಹುಲ್, ಮಹತ್ವದ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಲು ವಿಫಲವಾಗಿದ್ದರು. ಅಗ್ರಕ್ರಮಾಂಕದ ಬ್ಯಾಟಿಂಗ್ ವೈಫಲ್ಯ, ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಮೇಲೆ ಒತ್ತಡ ಬೀರುವಂತೆ ಮಾಡಿತ್ತು. ಇದೀಗ ಟಿ20 ತಂಡದಿಂದ ಹಿರಿಯ ಆಟಗಾರರನ್ನು ಕೈಬಿಡಬೇಕು ಎನ್ನುವ ಆಗ್ರಹ ಜೋರಾಗಿ ಕೇಳಿ ಬರಲಾರಂಭಿಸಿದೆ. 

'ಐಪಿಎಲ್‌ ಆಡ್ತೀರಿ, ಆಗ ವರ್ಕ್‌ಲೋಡ್‌ ಆಗೋದಿಲ್ವಾ?..' ಟೀಮ್‌ ಇಂಡಿಯಾ ಆಟಗಾರರಿಗೆ ಗವಾಸ್ಕರ್‌ ಖಡಕ್‌ ಪ್ರಶ್ನೆ!

ನನ್ನ ಪ್ರಕಾರ ಆ ಪಟ್ಟಿಯಲ್ಲಿ ರೋಹಿತ್ ಶರ್ಮಾ ಹೆಸರಿನಲ್ಲಿದೆ. ಮುಂದಿನ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅವರು ಭಾರತ ತಂಡವನ್ನು ಪ್ರತಿನಿಧಿಸುತ್ತಾರೆ ಎಂದು ನನಗನಿಸುವುದಿಲ್ಲ ಎಂದು ವಾಸೀಂ ಜಾಫರ್ ಹೇಳಿದ್ದಾರೆ.

ವಿಶ್ವಕಪ್‌ ವೈಫಲ್ಯ: ರೋಹಿತ್‌, ಕೊಹ್ಲಿ ಜೊತೆ ಬಿಸಿಸಿಐ ಚರ್ಚೆ

ಮುಂಬೈ: ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ವೈಫಲ್ಯ ಕಂಡ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಬಿಸಿಸಿಐ, ತಂಡದ ನಾಯಕ ರೋಹಿತ್‌ ಶರ್ಮಾ, ಹಿರಿಯ ಆಟಗಾರ ವಿರಾಟ್‌ ಕೊಹ್ಲಿ ಹಾಗೂ ಪ್ರಧಾನ ಕೋಚ್‌ ರಾಹುಲ್‌ ದ್ರಾವಿಡ್‌ರಿಂದ ವಿವರಣೆ ಕೇಳಲಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ತಂಡ ಎಡವಿದ್ದೆಲ್ಲಿ, ಟೂರ್ನಿ ವೇಳೆ ಆದ ಗೊಂದಲಗಳ ಬಗ್ಗೆ ಈ ಮೂವರು ಸಂಪೂರ್ಣ ವಿವರ ಸಲ್ಲಿಸಬೇಕಿದೆ ಎನ್ನಲಾಗಿದೆ. ಇದೇ ವೇಳೆ 2024ರ ಟಿ20 ವಿಶ್ವಕಪ್‌ಗೆ ನೀಲನಕ್ಷೆ ಸಿದ್ಧಪಡಿಸುವ ಬಗ್ಗೆಯೂ ಬಿಸಿಸಿಐ ಇವರೊಂದಿಗೆ ಚರ್ಚಿಸಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.