Asianet Suvarna News Asianet Suvarna News

'ಐಪಿಎಲ್‌ ಆಡ್ತೀರಿ, ಆಗ ವರ್ಕ್‌ಲೋಡ್‌ ಆಗೋದಿಲ್ವಾ?..' ಟೀಮ್‌ ಇಂಡಿಯಾ ಆಟಗಾರರಿಗೆ ಗವಾಸ್ಕರ್‌ ಖಡಕ್‌ ಪ್ರಶ್ನೆ!

ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತದ ಹೀನಾಯ ಸೋಲಿಗೆ ಕಟು ಶಬ್ದಗಳಲ್ಲಿ ಟೀಕೆ ಮಾಡಿರುವ ಸುನೀಲ್‌ ಗವಾಸ್ಕರ್‌, ವರ್ಕ್‌ಲೋಡ್‌ ಮ್ಯಾನೇಜ್‌ಮೆಂಟ್‌ ಅನ್ನೋ ಶಬ್ದಕ್ಕೆ ಕಿಡಿಕಾರಿದ್ದಾರೆ. ಐಪಿಎಲ್‌ ಆಡೋವಾಗ ಪ್ಲೇಯರ್‌ಗಳಿಗೆ ವರ್ಕ್‌ಲೋಡ್‌ ಆಗೋದಿಲ್ವೇ ಎಂದು ಪ್ರಶ್ನೆ ಮಾಡಿದ್ದಾರೆ.
 

Sunil Gavaskar furious at the players I cant remember complain workload in IPL san
Author
First Published Nov 12, 2022, 5:46 PM IST

ನವದೆಹಲಿ (ನ.12): ಆಸ್ಟ್ರೇಲಿಯಾದ ಆತಿಥ್ಯದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನ ಫೈನಲ್‌ ನಾಳೆ ನಡೆಯಲಿದೆ. ಆದರೆ, ಭಾರತ ಹಾಗೂ ಪಾಕಿಸ್ತಾನ ನಡುವೆ ಫೈನಲ್‌ ಆಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದ ಭಾರತೀಯರಿಗೆ ನಿರಾಸೆಯಾಗಿದೆ. ಗುರುವಾರ ನಡೆದ ವಿಶ್ವಕಪ್‌ ಸೆಮಿಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ಅತ್ಯಂತ ಹೀನಾಯ ಸೋಲು ಕಂಡು ಭಾರತ ಹೊರನಡೆದಿದೆ. 6 ವಿಕೆಟ್‌ಗೆ 168 ರನ್‌ಗಳ ಸವಾಲಿನ ಮೊತ್ತ ಬಾರಿಸಿದ್ದ ಭಾರತ ತಂಡ ಬೌಲಿಂಗ್‌ನಲ್ಲಿ ಎಷ್ಟು ದಯನೀಯ ನಿರ್ವಹಣೆ ನೀಡಿತೆಂದರೆ, ಜೋಸ್‌ ಬಟ್ಲರ್‌ ಹಾಗೂ ಅಲೆಕ್ಸ್‌ ಹ್ಯಾಲ್ಸ್‌ ಆರಂಭಿಕ ಜೋಡಿ ಇಷ್ಟೂ ಮೊತ್ತವನ್ನು ಬಾರಿಸಿದರು. ಮೊದಲ ವಿಕೆಟ್‌ಗೆ ಅಜೇಯ 170 ರನ್‌ ಜೊತೆಯಾಟವಾಡುವ ಮೂಲಕ ಇನ್ನೂ 24 ಎಸೆತಗಳು ಇರುವಂತೆಯೇ ತಂಡಕ್ಕೆ ಗೆಲುವು ನೀಡಿದರು. ಭಾರತದ ನಿರಾಶಾದಾಯಕ ಪ್ರದರ್ಶನದ ಬಳಿಕ ಟೀಮ್‌ ಇಂಡಿಯಾದ ಆಟಕ್ಕೆ ಭಾರತದ ಮಾಜಿ ಆಟಗಾರರೇ ಕಟು ಶಬ್ದಗಳಲ್ಲಿ ಟೀಕೆ ಮಾಡಿದ್ದಾರೆ. ಭಾರತದ ದಿಗ್ಗಜ ಬ್ಯಾಟ್ಸ್‌ ಮನ್‌ ಹಾಗೂ ಮಾಜಿ ನಾಯಕ ಸುನೀಲ್‌ ಗಾವಸ್ಕರ್‌, ವರ್ಕ್‌ಲೋಡ್‌ ಮ್ಯಾನೇಜ್‌ಮೆಂಟ್‌ ಪದ್ದತಿಗೆ ಕಿಡಿಕಾರಿದ್ದಾರೆ. ಟೀಮ್‌ ಇಂಡಿಯಾದಲ್ಲಿ ವರ್ಕ್‌ಲೋಡ್‌ ಮ್ಯಾನೇಜ್‌ಮೆಂಟ್‌ ಅನ್ನೋ ಪದ್ಧತಿ ಇರಲೇಬಾರದು ಎಂದು ಅವರು ಹೇಳಿದ್ದಾರೆ.

ವರ್ಕ್‌ಲೋಡ್‌ ಮ್ಯಾನೇಜ್‌ಮೆಂಟ್‌ ಅನ್ನೋ ವಿಚಾರದಿಂದ ಭಾರತೀಯ ಕ್ರಿಕೆಟ್‌ ಮುಂದೆ ಹೋಗಬೇಕು. ಟೀಮ್‌ ಇಂಡಿಯಾದಲ್ಲಿ ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ಆಡೋದು ಕಷ್ಟ ಎನ್ನುತ್ತಾರೆ. ಆದರೆ, ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಇಡೀ ಋತುವಿನಲ್ಲಿ ಆಡಲು ಅವರಿಗೆ ಯಾವುದೇ ಸಮಸ್ಯೆ ಆಗೋದಿಲ್ಲ ಎಂದು ಗವಾಸ್ಕರ್‌ ಹೇಳಿದ್ದಾರೆ.

'ಸೆಮಿಫೈನಲ್‌ ಸೋಲಿನಿಂದ ಖಂಡಿತವಾಗಿ ಟೀಮ್‌ ಇಂಡಿಯಾದಲ್ಲಿ ಕೆಲವೊಂದು ಬದಲಾವಣೆ ಆಗಲಿದೆ. ವಿಶ್ವಕಪ್‌ ಗೆಲ್ಲೋಕೆ ಅಗಿಲ್ಲ ಅನ್ನೋದಾದರೆ ಖಂಡಿತವಾಗಿ ಬದಲಾವಣೆ ಆಗಬೇಕು. ಈಗಾಗಲೇ ನ್ಯೂಜಿಲೆಂಡ್‌ಗೆ ಹೋಗುತ್ತಿರುವ ತಂಡದಲ್ಲಿ ಬದಲಾವಣೆ ಆಗಿದನ್ನನ್ನು ಗಮನಿಸಿದ್ದೇವೆ. ಅವರು ವರ್ಕ್‌ ಲೋಡ್‌, ವರ್ಕ್‌ಲೋಡ್‌ ಎನ್ನುವ ಮಾತನ್ನು ಹೇಳುತ್ತಾರೆ. ಕೀರ್ತಿ ಆಜಾದ್‌ ಹಾಗೂ ಮದನ್‌ ಲಾಲ್‌ ಕೂಡ ಇದೇ ವಿಚಾರವಾಗಿ ಮಾತನಾಡಿದ್ದಾರೆ. ಭಾರತದ ಪರವಾಗಿ ಆಡುವಾಗ ಮಾತ್ರವೇ ಇವರಿಗೆ ವರ್ಕ್‌ಲೋಡ್‌ ವಿಚಾರ ಬರುತ್ತದೆಯೇ ಎಂದು ಸುನೀಲ್‌ ಗವಾಸ್ಕರ್‌ ಪ್ರಶ್ನೆ ಮಾಡಿದ್ದಾರೆ.

ಆಟಗಾರರಿಗೆ ಮುದ್ದು ಮಾಡಬೇಡಿ: ಐಪಿಎಲ್‌ನಲ್ಲಿ ಇಡೀ ಋತುವಿನಲ್ಲಿ ಈ ಆಟಗಾರರು ಆಡುತ್ತಾರೆ. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುತ್ತಲೇ ಇರುತ್ತಾರೆ. ಈ ವೇಳೆ ನಿಮಗೆ ಸುಸ್ತಾಗೋದಿಲ್ಲವೇ? ಆಗ ವರ್ಕ್‌ಲೋಡ್‌ ಇರೋದಿಲ್ಲವೇ? ಭಾರತದ ಪರವಾಗಿ ಆಡುವಾಗ ಮಾತ್ರ ಇವೆಲ್ಲ ವಿಚಾರಗಳು ಬರುತ್ತವೆಯೇ? ಗ್ಲಾಮರಸ್‌ ಇಲ್ಲದೇ ಇರೋ ದೇಶಗಳಲ್ಲಿ ಮಾತ್ರವೇ ನಿಮಗೆ ವರ್ಕ್‌ಲೋಡ್‌ ನಿಮಗೆ ನೆನಪಾಗುತ್ತದೆಯೇ? ನಿಜಕ್ಕೂ ಇದು ತಪ್ಪು ಎಂದು ಹೇಳಿದ್ದಾರೆ. ಅದರೊಂದಿಗೆ ವಿಶ್ವಕಪ್‌ನಲ್ಲಿ ಸೋಲು ಕಂಡಿರುವ ಆಟಗಾರರಿಗೆ ಅತಿಯಾಗಿ ಮುದ್ದಿಸುವ ಗೋಜಿಗೆ ಹೋಗಬೇಡಿ ಎಂದಿರುವ ಗವಾಸ್ಕರ್‌, ಕ್ರಿಕೆಟರ್‌ಗಳಿಗೆ ಕಠಿಣ ಸಂದೇಶ ನೀಡುವ ಸಮಯ ಬಂದಿದೆ ಎಂದಿದ್ದಾರೆ.

ನೀವು ಫಿಟ್‌ ಆಗಿದ್ದರೇ ವರ್ಕ್‌ಲೋಡ್‌ ಅನ್ನೋ ವಿಚಾರ ಯಾಕೆ ಬರುತ್ತದೆ? ಆಟಗಾರರನ್ನು ಮುದ್ದಿಸುವ ಪ್ರಯತ್ನ ಮಾಡಬೇಡಿ. ನೀವು ಅವರನ್ನು ತಂಡಕ್ಕೆ ಆಯ್ಕೆ ಮಾಡಿದ್ದೀರಿ. ಅವರಿಗ ರಿಟೇನರ್‌ ಶುಲ್ಕ ಕೂಡ ನೀಡಿದ್ದೀರಿ. ವರ್ಕ್‌ಲೋಡ್‌ ಕಾರಣಕ್ಕಾಗಿ ಪಂದ್ಯ ಆಡಲು ಸಾಧ್ಯವಾಗದೇ ಇದ್ದರೆ ರಿಟೇನರ್‌ ಫೀ ಕೂಡ ಕಡಿತ ಮಾಡಿ ಎಂದು ಖಡಕ್‌ ಆಗಿ ಮಾತನಾಡಿದ್ದಾರೆ. ನೀವು ಆಟವಾಡದೇ ಇದ್ದಲ್ಲಿ, ರಿಟೇನರ್‌ ಫೀ ಕಡಿತ ಮಾಡುತ್ತೇವೆ ಎಂದು ಹೇಳಿ ನೋಡಿ, ಆಗ ಆಟಗಾರರಿಗೆ ವರ್ಕ್‌ಲೋಡ್‌ ಎಲ್ಲಾ ಮರೆತುಹೋಗುತ್ತದೆ. ಆಡಲು ಬರುತ್ತಾರೆ. ಎಫ್‌ಐಸಿಎ ಕೂಡ ಇದೇ ಇಚಾರವನ್ನು ಹೇಳಿದೆ. ಐಪಿಎಲ್‌ ಬಂದಾಗ ಎಲ್ಲರೂ ವರ್ಕ್‌ಲೋಡ್‌ ಮರೆಯುತ್ತಾರೆ. ಆದರೆ, ಇದನ್ನು ಆಯ್ಕೆ ಸಮಿತಿ ನಿರ್ಧಾರ ಮಾಡಬೇಕು. ಆಟಗಾರರಿಗೆ ಕಠಿಣ ಸಂದೇಶ ನೀಡಬೇಕು ಎಂದಿದ್ದಾರೆ.
 

Follow Us:
Download App:
  • android
  • ios